ಮೊದಲು ಟೀಕಿಸುವುದು, ನಂತರ ತಾವು ಹೇಳಿದ್ದು ಹಾಗಲ್ಲ, ತಾವು ಟೀಕಿಸಿದ್ದು ಅವರನ್ನಲ್ಲ, ತಾವು ಹೇಳಿದ್ದು ಆ ವಿಷಯದ ಬಗ್ಗೆ, ತಾವು ಮಾತನಾಡಿದ್ದು ಹಂಗಲ್ಲ, ಹಿಂಗೆ.. ಎಂದು ಸ್ಪಷ್ಟೀಕರಣ ನೀಡುವುದು. ಇದು ಹಿಂದೂಗಳ ಬಗ್ಗೆ ರಾಹುಲ್ ಗಾಂಧಿ ಇತ್ತೀಚೆಗೆ ನಡೆದುಕೊಳ್ಳುತ್ತಿರುವ ಧೋರಣೆ. ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯ ವೇಳೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಅದೇ ಧೋರಣೆ ಪ್ರದರ್ಶನ ಮಾಡಿದ್ದಾರೆ.
ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳುವವರು, ಕೇವಲ ಹಿಂಸೆ ಭಾಷೆಯನ್ನು ಮಾತನಾಡುತ್ತಾರೆ..’ ಎಂದಿರುವ ರಾಹುಲ್ ಗಾಂಧಿ ಸದನದಲ್ಲಿ ಈಶ್ವರ, ಜೀಸಸ್, ಗುರು ನಾನಕ್ ಅವರ ಫೋಟೋಗಳ ಪ್ರದರ್ಶನ ಮಾಡಿದ್ದಾರೆ. ಇಸ್ಲಾಂ ಮತ್ತು ಸಿಖ್ ಧರ್ಮ ಸೇರಿದಂತೆ ಎಲ್ಲಾ ಧರ್ಮಗಳು ಧೈರ್ಯ ಮತ್ತು ನಿರ್ಭೀತರಾಗಿರುವುದರ ಮಹತ್ವವನ್ನು ಒತ್ತಿಹೇಳುತ್ತವೆ. ಎಲ್ಲಾ ಧರ್ಮಗಳು ಧೈರ್ಯದ ಬಗ್ಗೆ ಮಾತನಾಡುತ್ತವೆ, ಇಸ್ಲಾಂ, ಕ್ರಿಶ್ಚಿಯನ್ ಧರ್ಮ, ಬೌದ್ಧ, ಜೈನ ಮತ್ತು ಸಿಖ್ ಧರ್ಮಗಳೆಲ್ಲ ನಿರ್ಭಯತೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತವೆ. ಆದರೆ ದಿನದ 24 ಗಂಟೆಯೂ ತಮ್ಮನ್ನು ತಾವು ಹಿಂದೂ ಎಂದು ಹೇಳಿಕೊಳ್ಳುವವರು ಹಿಂಸೆಯ ಬಗ್ಗೆ ಮಾತ್ರ ಮಾತನಾಡುತ್ತಾರೆ ಎಂದು ಟೀಕಿಸಿದ್ದಾರೆ.
ಈಶ್ವರನ ತ್ರಿಶೂಲ ಹಿಂಸೆಯ ಸಂಕೇತ ಎಂದಿರುವ ರಾಹುಲ್ ಗಾಂಧಿ, ಭಾರತದ ಪರಿಕಲ್ಪನೆಯನ್ನೇ ಬಿಜೆಪಿ ಹಾಳುಗೆಡವುತ್ತಿದೆ. ಇದಲ್ಲದೆ, ಸಂವಿಧಾನದ ಮೇಲೆ ದಾಳಿ ನಡೆಸುವವರನ್ನು ನಾವೆಲ್ಲರೂ ಸಹಿಸಿಕೊಂಡಿದ್ದೇವೆ. ನಿಜವಾದ ಹಿಂದೂಗಳು ಭಯ ಅಥವಾ ದ್ವೇಷವನ್ನು ಬಿತ್ತುವುದಿಲ್ಲ. ಆದರೆ, ಹಿಂದುತ್ವವನ್ನೇ ಪ್ರತಿಪಾದಿಸಿಕೊಂಡು ಬಂದಿರುವ ಬಿಜೆಪಿಯು ದಿನದ 24 ಗಂಟೆ ಹಾಗೂ ವಾರದ 7 ದಿನವೂ ಸಮಾಜದಲ್ಲಿ ದ್ವೇಷ ಹಾಗೂ ಭಯದ ವಾತಾವರಣವನ್ನು ಬಿತ್ತುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.
ರಾಹುಲ್ ಗಾಂಧಿಯವರ ಮಾತಿಗೆ ಸದನದಲ್ಲೇ ಆಕ್ಷೇಪ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಈ ದೇಶದ ಸಂವಿಧಾನವು ನಿಮಗೆ ಒಂದು ಗೌರವದ ಸ್ಥಾನ (ಲೋಕಸಭೆಯ ವಿಪಕ್ಷಗಳ ನಾಯಕ ಸ್ಥಾನ) ಕೊಟ್ಟಿದೆ. ಇಂದು ನೀವು ಸಂವಿಧಾನದತ್ತವಾಗಿ ಬಂದಿರುವ ಸ್ಥಾನಕ್ಕೆ ಅಪಮಾನವಾಗುವಂತೆ ನೀವು ನಡೆದುಕೊಳ್ಳುತ್ತಿದ್ದೀರಿ. ಹಿಂದೂಗಳಿಗೆ ಕ್ರೌರ್ಯದ ಬಣ್ಣ ಬಳಿಯಬೇಡಿ ಎಂದರು.



