ಇದು ಆಶ್ಚರ್ಯವಾದರೂ ನಿಜ ಎನ್ನುತ್ತಿವೆ ಕಾಂಗ್ರೆಸ್ ಮೂಲಗಳು. ರಾಜ್ಯದಲ್ಲೀಗ ಕೆಎನ್ ರಾಜಣ್ಣ ಅವರ ಅಕ್ಟೋಬರ್ ಕ್ರಾಂತಿಯದ್ದೇ ಮಾತು. ಅಕ್ಟೋಬರ್ʻನಲ್ಲಿ ಏನೋ ಆಗುತ್ತಂತೆ. ಸಿಎಂ ಪಟ್ಟ ಸೇಫ್ ಅಲ್ವಂತೆ ಎಂದೆಲ್ಲ ಮಾತುಕತೆ ನಡೆಯುತ್ತಿದೆ. ಈ ನಡುವೆಯೇ ಸಿದ್ಧರಾಮಯ್ಯ ಸುಮ್ಮನೆ ಕೂರುವುದಕ್ಕೆ ಸಿದ್ಧರಿಲ್ಲ. ಹೀಗಾಗಿ ಈ ಬಾರಿ ಸಿದ್ದು ಬಣದ ಶಾಸಕರು, ನಾಯಕರು ಯಡಿಯೂರಪ್ಪ ಅಸ್ತ್ರ ಪ್ರಯೋಗಿಸಿದ್ದಾರೆ.
ಏನಿದು ಯಡಿಯೂರಪ್ಪ ಅಸ್ತ್ರ..?
ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡುವುದಕ್ಕೆ ಸಿದ್ಧರಾಮಯ್ಯ ರಾಜೀನಾಮೆ ಕೊಡಬೇಕು ಎಂದಾದರೆ.. ಹೈಕಮಾಂಡ್ ಮೊದಲು ಯಡಿಯೂರಪ್ಪ ಅವರ ಪ್ರಕರಣವನ್ನು ನೆನಪಿನಲ್ಲಿಟ್ಕೋಬೇಕು. ಏನಂದ್ರೆ.. ಯಡಿಯೂರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್, ಅಧಿಕಾರ ಪೂರೈಸುವುದಕ್ಕೆ ಅವಕಾಶ ಕೊಡಲಿಲ್ಲ. ಯಡಿಯೂರಪ್ಪ ಅವರನ್ನು ಬಲವಂತವಾಗಿ ಸಿಎಂ ಪಟ್ಟದಿಂದ ಕೆಳಗಿಳಿಸಿತು. ತಾವಾಗಿಯೇ ಕೆಳಗೆ ಇಳಿದ್ರೂ.. ಇದು ಹೈಕಮಾಂಡ್ ಸುಗ್ರೀವಾಜ್ಞೆ ಎಂದು ಪ್ರತಿಯೊಬ್ಬರಿಗೂ ಅರ್ಥವಾಗಿತ್ತು. ಇದಾದ ನಂತರ ಯಡಿಯೂರಪ್ಪ ಅವರ ಲಿಂಗಾಯತ ಸಮುದಾಯದ ಬಸವರಾಜ ಬೊಮ್ಮಾಯಿ ಅವರನ್ನೇ ಸಿಎಂ ಮಾಡಿದರೂ.. ಬಿಜೆಪಿಗೆ ಉಪಯೋಗವಾಗಲಿಲ್ಲ. ಬಿಜೆಪಿ ಹೀನಾಯ ಸ್ಥಿತಿಗೆ ತಲುಪಿ, ಕೇವಲ 66 ಸ್ಥಾನಗಳಿಗೆ ಕುಸಿಯಿತು. ಸಿದ್ದು ಟೀಂ ಹೇಳ್ತಾ ಇರೋದು ಇದೇ ಲೆಕ್ಕಾಚಾರವನ್ನ.
ನೀವು ಸಿದ್ಧರಾಮಯ್ಯ ಅವರನ್ನು ಇಳಿಸಿದರೆ.. ಕಾಂಗ್ರೆಸ್ಸಿಗೂ ರಾಜ್ಯ ಬಿಜೆಪಿಗೆ ಆದ ಸ್ಥಿತಿಯೇ ಆಗಲಿದೆ ಎನ್ನುವ ವಾದ ಮುಂದಿಡ್ತಿದ್ದಾರೆ ಕಾಂಗ್ರೆಸ್ ಲೀಡರ್ಸ್. ಅನುಮಾನವೇ ಇಲ್ಲದಂತೆ ಹೇಳ್ಬೇಕಂದ್ರೆ.. ಕಾಂಗ್ರೆಸ್ಸಿನಲ್ಲಿ ಸಿದ್ಧರಾಮಯ್ಯ ಅವರ ಮಾಸ್ ಅಪೀಲಿಗೆ ಸಾಟಿಯಾಗಬಲ್ಲ ಇನ್ನೊಬ್ಬ ನಾಯಕ ಇಲ್ಲ. ಸಿದ್ಧರಾಮಯ್ಯನವರ ಕಠು ವಿರೋಧಿಗಳು ಕೂಡಾ ಒಪ್ಪಿಕೊಳ್ಳಲೇಬೇಕಾದ ಸತ್ಯ ಇದು. ಕಳೆದ ಚುನಾವಣೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಶಾಸಕರು ದುಂಬಾಲು ಬಿದ್ದು, ತಮ್ಮ ತಮ್ಮ ಕ್ಷೇತ್ರಕ್ಕೆ ಸಿದ್ಧರಾಮಯ್ಯ ಅವರನ್ನು ಕರೆದುಕೊಂಡು ಹೋಗಿದ್ದರು. ಈಗಲೂ ಕೂಡಾ ಆ ಶಾಸಕರನ್ನು ಕೇಳಿದರೆ.. ತಮ್ಮ ಗೆಲುವಿನ ಕಾರಣವೇ ಸಿದ್ಧರಾಮಯ್ಯ ಅವರ ಪ್ರಚಾರ ಅಂತಾರೆ. ಹೀಗಿರುವಾಗ ಸಿದ್ಧರಾಮಯ್ಯ ಅವರನ್ನು ಬಲವಂತವಾಗಿ ಕೆಳಗಿಳಿಸಿದರೆ.. ಅನುಮಾನವೇ ಇಲ್ಲ. ಅದು ಕಾಂಗ್ರೆಸ್ಸಿಗೆ ಹೊಡೆಯುವ ಮೊಳೆ ಎನ್ನುತ್ತಿದೆ ಸಿದ್ದು ಟೀಂ.
ಇತ್ತ ಡಿಕೆ ಶಿವಕುಮಾರ್ 2023ರಲ್ಲಿ ಮೇ ತಿಂಗಳಲ್ಲಿ ನಡೆದ ಮಾತುಕತೆಯಂತೆ ಅವಕಾಶ ಕೊಡಿ. ಸಿಎಂ ಸಿದ್ದರಾಮಯ್ಯ ಕೈಯಿಂದ ಅಧಿಕಾರ ಕೊಡ್ಸಿ ಎಂದು ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್ ಹಾಗೂ ಸುರ್ಜೇವಲಾ ಬಳಿ ಒತ್ತಡ ಹೇರುತ್ತಿದ್ದಾರೆ. ಅದಕ್ಕೆ ಮುನ್ನ 138 ಶಾಸಕರಲ್ಲಿ ಕನಿಷ್ಠ 70 ಶಾಸಕರ ಬೆಂಬಲ ಗಿಟ್ಟಿಸಕೊಳ್ಳುವುದಕ್ಕಾಗಿ ಪ್ರಯತ್ನ ಪಡುತ್ತಿದ್ದಾರೆ. ಈಗಾಗಲೇ ಶಾಸಕರನ್ನ ಒಲಿಸಿಕೊಳ್ಳಲು ಪ್ಲಾನ್ ಶುರು ಮಾಡಿರುವ ಡಿಕೆಶಿ, ಅದಕ್ಕಾಗಿ ಪ್ರತಿ ದಿನವೂ ಶಾಸಕರ ಭೇಟಿಗೆ ಸಮಯ ನಿಗಧಿ ಮಾಡಿದ್ದಾರೆ. ಜೊತೆಗೆ ಇಲಾಖೆಯಲ್ಲಿ ಮಾಡಿಕೊಡಬೇಕಾದ ಕೆಲಸ ಹಾಗೂ 2028 ಚುನಾವಣೆ ಟಿಕೆಟ್, 2028ರ ಚುನಾವಣೆಗೆ ಎಲ್ಲ ರೀತಿಯ ಸಹಾಯ ಮಾಡುವ ಭರವಸೆ ನೀಡುತ್ತಿದ್ದಾರೆ.
ಇದರ ಮಧ್ಯೆ ಸಿದ್ಧರಾಮಯ್ಯ ಟೀಂ ಪ್ರಯೋಗಿಸಿರುವ ʻಯಡಿಯೂರಪ್ಪ ಅಸ್ತ್ರʼ ವರ್ಕ್ ಔಟ್ ಆಗುತ್ತಾ.. ಇಲ್ಲವಾ.. ಕಾದು ನೋಡಬೇಕು.



