ರಾಜ್ಯದ ಮಾಜಿ ಸಿಎಂ.. ರೈತ ಹೋರಾಟಗಾರ.. ಸದ್ಯಕ್ಕೆ ಸ್ಪರ್ಧಾ ರಾಜಕೀಯದಿಂದ ನಿವೃತ್ತಿಯಾಗಿರುವ ಬಿ.ಎಸ್.ಯಡಿಯೂರಪ್ಪ ಅವರ ಹಿಡಿತ ನಿಧಾನವಾಗಿ ಕರಗುತ್ತಿದೆಯಾ..? ಒಂದು ಕಾಲದಲ್ಲಿ ಯಡಿಯೂರಪ್ಪ ಹೇಳಿದ ಮೇಲೆ.. ಒಬ್ಬರೂ ಒಂದು ಮಾತು ಆಡುತ್ತಿರಲಿಲ್ಲ. ಆದರೆ.. ಈ ಬಾರಿ ಹಾಗಾಗಿಲ್ಲ. ಅವರ ಮಗ ವಿಜಯೇಂದ್ರ ಅಧ್ಯಕ್ಷರಾಗಿದ್ದರೂ.. ಯಡಿಯೂರಪ್ಪ ಪ್ರಬಲವಾಗಿಯೇ ಬಂಡಾಯ, ಸವಾಲು ಎದುರಿಸುತ್ತಿದ್ಧಾರೆ. ನಾಯಕರು ಯಡಿಯೂರಪ್ಪ ಮಾತು ಕೇಳುತ್ತಿಲ್ಲ. ತಮ್ಮ ಸ್ವಕ್ಷೇತ್ರ ಶಿವಮೊಗ್ಗದಲ್ಲೇ ಗೆಳೆಯ ಎಂದು ಕರೆಸಿಕೊಳ್ಳುತ್ತಿದ್ದ ಈಶ್ವರಪ್ಪ ತಿರುಗಿ ಬಿದ್ದಿದ್ದಾರೆ. ಚಾಮರಾಜನಗರದಲ್ಲಿ ಶ್ರೀನಿವಾಸ ಪ್ರಸಾದ್ ಗೌರವ ಕೊಡುತ್ತಿಲ್ಲ. ಇತ್ತ ದಾವಣಗೆರೆ, ತುಮಕೂರಿನಲ್ಲಿ ಯಡಿಯೂರಪ್ಪನವರ ಪ್ರೀತಿ ಪಾತ್ರ ಮಾಧುಸ್ವಾಮಿ, ರೇಣುಕಾಚಾರ್ಯ ಅವರಂತಹವರು ಯಡಿಯೂರಪ್ಪ ಮಾತಿಗೆ ಡೋಂಟ್ ಕೇರ್ ಎನ್ನುತ್ತಿದ್ಧಾರೆ. ಅತ್ತ ಹುಬ್ಬಳ್ಳಿಯಲ್ಲಿ ಲಿಂಗಾಯತ ಸಮುದಾಯದ ದಿಂಗಾಲೇಶ್ವರ ಸ್ವಾಮೀಜಿ ಪಕ್ಷೇತರರಾಗಿ ಕಣಕ್ಕಿಳಿಯುತ್ತಿದ್ಧಾರೆ. ಸಂಥಿಂಗ್ ಈಸ್ ರಾಂಗ್.
ಅಲುಗಾಡುತ್ತಿದೆಯಾ.. ಯಡಿಯೂರಪ್ಪ ಲಿಂಗಾಯತ ನಾಯಕತ್ವ..?
ಶ್ರೀ ಶಿರಹಟ್ಟಿಮಠದ ಶ್ರಿ ಫಕೀರ ದಿಂಗಾಲೇಶ್ವರ ಸ್ವಾಮೀಜಿಗಳು ಪಕ್ಷೇತರವಾಗಿ ಸ್ಪರ್ಧಿಸುವ ದುಸ್ಸಾಹಸಕ್ಕೆ ಕೈ ಹಾಕಬಾರದು ಎಂದು ಹೇಳಿಕೆ ನೀಡಿರುವ ಯಡಿಯೂರಪ್ಪ ಧಾರವಾಡ ಮತ ಕ್ಷೇತ್ರದಲ್ಲಿ ಮತದಾರರು ಬಿಜೆಪಿಯ ಪರವಾಗಿದ್ದಾರೆ. ನೀವು ಪ್ರಹ್ಲಾದ್ ಜೋಶಿ ಅವರ ವಿರುದ್ಧ ಸ್ಪರ್ಧಿಸುವ ದುಸ್ಸಾಹಸಕ್ಕೆ ಕೈ ಹಾಕಬಾರದು. ತಮ್ಮ ರಾಜಕೀಯ ನಿರ್ಧಾರ ಕೈ ಬಿಡಬೇಕು ಎಂದು ಮನವಿಯನ್ನೇನೋ ಮಾಡಿದ್ಧಾರೆ. ಆದರೆ.. ದಿಂಗಾಲೇಶ್ವರ ಸ್ವಾಮೀಜಿ ಡೋಂಟ್ ಕೇರ್ ಎನ್ನುವಂತೆ ವರ್ತಿಸುತ್ತಿದ್ಧಾರೆ. ಯಡಿಯೂರಪ್ಪ ಈಗ ಲಿಂಗಾಯತರ ಪ್ರಶ್ನಾತೀತ ನಾಯಕರಾಗಿ ಉಳಿದಿಲ್ಲ. ಕೋಟೆ ಛಿದ್ರವಾಗುತ್ತಿರುವ ಆರಂಭದ ಸೂಚನೆ ಇದು.
ಅತ್ತ ದಿಂಗಾಲೇಶ್ವರ ಸ್ವಾಮೀಜಿಗಳಿಗೂ ಅಷ್ಟೆ.. ಭಕ್ತರ ಒಂದು ಬಣ ವಿರೋಧ ವ್ಯಕ್ತಪಡಿಸಿದೆ. ನೀವು ಮಠ ಬಿಟ್ಟು ರಾಜಕಾರಣ ಮಾಡಿ. ನಿಮಗೆ ಮಠ ಬೇಕೋ? ರಾಜಕಾರಣ ಬೇಕೋ ಎಂದು ನೀವೇ ನೀರ್ಧರಿಸಿ ಎಂದು ಭಕ್ತರು ಬಹಿರಂಗವಾಗಿಯೇ ಎಚ್ಚರಿಕೆ ಕೊಟ್ಟಿದ್ದಾರೆ.
ಗೆಳೆಯರೇ ದೂರ ದೂರ.. ಶಿಷ್ಯರು ಇನ್ನೂ ದೂರ..!
ಶಿವಮೊಗ್ಗದಲ್ಲಿ ಈಶ್ವರಪ್ಪ ಸವಾಲು ಹಾಕಿದ್ಧಾರೆ. ಯಡಿಯೂರಪ್ಪ ಅವರಿಂದ ದೂರ ಹೋದಾಗ.. ಬಿಜೆಪಿಯಲ್ಲಿದ್ದರೂ.. ಶಿವಮೊಗ್ಗದಲ್ಲೇ ಹೀನಾಯವಾಗಿ ಸೋತಿದ್ದರು ಈಶ್ವರಪ್ಪ. ಆಗಲೂ.. ಅಷ್ಟೆ. ಕೆಜೆಪಿ ಕಟ್ಟಿದ್ದ ಯಡಿಯೂರಪ್ಪ ಅವರನ್ನು ಬಿಜೆಪಿಯ ಯಾವ ನಾಯಕರೂ ಟೀಕಿಸದಷ್ಟು.. ಟೀಕೆ ಮಾಡಿದ್ದರು. ಈಗ ನೇರವಾಗಿ ಯಡಿಯೂರಪ್ಪ, ರಾಘವೇಂದ್ರ ಮತ್ತು ವಿಜಯೇಂದ್ರ ಅವರ ವಿರುದ್ಧ ತಿರುಗಿಬಿದ್ದು.. ಸವಾಲು ಹಾಕುತ್ತಿದ್ಧಾರೆ. ಗೌರವದ ಸಣ್ಣ ಗೆರೆಯನ್ನೂ ದಾಟಿ ಆಗಿದೆ. ಶಿವಮೊಗ್ಗದಲ್ಲಿ ಯಡಿಯೂರಪ್ಪ ಅವರ ಭದ್ರ ಕೋಟೆಯಲ್ಲಿ ಬಿರುಕು ಮೂಡುತ್ತಿದೆ.
ಇನ್ನು ತುಮಕೂರು ಮತ್ತು ದಾವಣಗೆರೆಯಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿಗಳಿಗೆ ಚಾಲೆಂಜ್ ಹಾಕಿರುವ ಮಾಧುಸ್ವಾಮಿ ಹಾಗೂ ರೇಣುಕಾಚಾರ್ಯ ಇಬ್ಬರೂ ಯಡಿಯೂರಪ್ಪ ಅವರ ಶಿಷ್ಯರೇ.
ಇನ್ನು ಚಾಮರಾಜನಗರದ ವಿಷಯವಂತೂ ಬಿಡಿ. ಯಾವ ಸಿದ್ದರಾಮಯ್ಯ ಅವರ ವಿರುದ್ಧ ಮುನಿಸಿಕೊಂಡು ಬಿಜೆಪಿ ಸೇರಿ ಮತ್ತೊಮ್ಮೆ ಸಂಸದರಾಗಿದ್ದರೋ.. ಅದೇ ಶ್ರೀನಿವಾಸ ಪ್ರಸಾದ್ ಕೇವಲ 7 ನಿಮಿಷದ ಮಾತುಕತೆಯಲ್ಲಿ ಸಿದ್ದರಾಮಯ್ಯಗೆ ಶರಣಾಗಿದ್ಧಾರೆ. ಅದೇ ಯಡಿಯೂರಪ್ಪ ಅವರನ್ನು ಕ್ಯಾರೇ ಎಂದಿಲ್ಲ. ಮನೆಗೆ ಬಂದಾಗ ಸತ್ಕರಿಸಿ, ಒಳ್ಳೆಯ ಮಾತನ್ನಾಡಿ.. ನಾನು ಬಿಜೆಪಿಯಿಂದ ದೂರ ಹೋಗಿದ್ದೇನೆ ಎಂಬ ಮೆಸೇಜ್ ಕೊಟ್ಟಿದ್ದಾರೆ. ಮೋದಿ ಕಾರ್ಯಕ್ರಮಕ್ಕೂ ಹೋಗಿಲ್ಲ.
ಬಿಜೆಪಿ ಟಿಕೆಟ್ ಕೈತಪ್ಪಿದ ಬಳಿಕ ಯಾವೊಬ್ಬ ನಾಯಕರು ಬಂದು ಮಾತನಾಡಿಸಿಲ್ಲ ಎಂದು ಮುನಿಸಿಕೊಂಡಿರುವ ಶ್ರೀನಿವಾಸ್ ಪ್ರಸಾದ್ ಬಿಜೆಪಿಯಿಂದ ಹಂತ ಹಂತವಾಗಿ ದೂರವ ಆಗಿದ್ಧಾರೆ.
ಇನ್ನು ಬೆಂಗಳೂರಿನಲ್ಲಿ ಎಸ್.ಟಿ.ಸೋಮಶೇಖರ್.. ಅತ್ತ ದ.ಕನ್ನಡದಲ್ಲಿ ಶಿವರಾಮ್ ಹೆಬ್ಬಾರ್.. ಆಗಲೇ ಒಂದು ಕಾಲು ಹೊರಗಿಟ್ಟಾಗಿದೆ. ಅವರೀಗ ಅನಧಿಕೃತವಾಗಿ ಕಾಂಗ್ರೆಸ್ ಶಾಸಕರೇ ಆಗಿದ್ಧಾರೆ. ಒಟ್ಟಿನಲ್ಲಿ ಯಡಿಯೂರಪ್ಪ ಅವರು ತಾವು ಕಟ್ಟಿಕೊಂಡಿದ್ದ ಕೋಟೆಯ ಒಂದೊಂದೇ ಕಲ್ಲು ಬೀಳುತ್ತಿರುವುದನ್ನು ತಾವೇ ಕಣ್ಣಾರೆ ನೋಡುತ್ತಿದ್ದಾರೆ.



