ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಬಿಜೆಪಿಯಿಂದ ಆಚೆ ದಬ್ಬಿಸಿಕೊಂಡಿರುವ ಬಸನಗೌಡ ಪಾಟೀಲ ಯತ್ನಾಳ್ ನಡುವಿನ ಸಮರ ಮುಗಿಯುತ್ತಿಲ್ಲ. ಮುಗಿಯುವ ಲಕ್ಷಣಗಳೂ ಕಾಣಿಸ್ತಿಲ್ಲ. ಯಾವಾಗ ವಿಜಯೇಂದ್ರ ಅವರ ಸ್ಥಾನದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂಬ ಸಂದೇಶ ಸಿಕ್ಕಿತೋ.. ಆಗಿನಿಂದ ಮತ್ತೊಮ್ಮೆ ವಿಜಯೇಂದ್ರ ವಿರುದ್ಧ ಆರ್ಭಟಿಸುತ್ತಿರುವ ಯತ್ನಾಳ್, ಇತ್ತೀಚೆಗೆ ದಾಖಲೆ ಬಿಡುಗಡೆ ಮಾಡುವ ಮಾತನ್ನಾಡಿದ್ದರು. ಅವುಗಳಿಗೆ ವಿಜಯೇಂದ್ರ ಬಹಿರಂಗ ಸವಾಲನ್ನೂ ಹಾಕಿದ್ದರು.
ಯತ್ನಾಳ್ ಆರೋಪಗಳು :
ವಿಜಯೇಂದ್ರ, ಯಡಿಯೂರಪ್ಪ ಸಿಎಂ ಆಗಿದ್ದಾಗ ತಂದೆಯ ಸಹಿಯನ್ನು ನಕಲಿ ಮಾಡಿದ್ದ. ನೂರಾರು ಕೋಟಿ ಭ್ರಷ್ಟಾಚಾರ ಮಾಡಿದ್ದಾನೆ. ನೂರಾರು ಎಕರೆ ಜಮೀನು ಹೊಡೆದಿದ್ದಾನೆ. ಪಕ್ಷದಲ್ಲಿರುವ ಹಿರಿಯ ನಾಯಕರನ್ನ ತುಳಿದಿದ್ದಾನೆ. ಬೇರೆ ಬೇರೆ ಅಕ್ರಮದ ಸಾಕ್ಷಿಗಳಿವೆ. ವಿಡಿಯೋ ಸಾಕ್ಷಿಗಳು ಇವೆ.. ಎಂದು ಪದೇ ಪದೇ ಹೇಳುವ ಯತ್ನಾಳ್, ಸಾಕ್ಷಿ ಬಿಡುಗಡೆ ಮಾಡ್ತೇನೆ ಎಂದು ಹೆದರಿಸುತ್ತಲೇ ಇದ್ದಾರೆ.
ಆದರೆ.. ಅದು ಸೌಜನ್ಯ ಹೋರಾಟಗಾರರಂತೆಯೇ ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ ಎಂಬಂತಾಗಿ ಹೋಗಿದೆ. ಸಾಕ್ಷಿ ಕೊಡಲ್ಲ. ತೋರಿಸಲ್ಲ. ಬೈಯ್ಯೋದು ಬಿಡಲ್ಲ. ಅದರಲ್ಲೂ ಕೆಟ್ಟ ಕೆಟ್ಟದಾಗಿ ಬಯ್ಯುವ ಚಾಳಿಯಂತೂ ಇದೆ.
ಇತ್ತ ವಿಜಯೇಂದ್ರ.. ಯತ್ನಾಳ್ ಹೀಗೆ ಆರೋಪ ಮಾಡಿದಾಗಲೆಲ್ಲ ಬಿಡುಗಡೆ ಮಾಡಿ. ಬಿಡುಗಡೆ ಮಾಡುವುದಕ್ಕೆ ಏನು ಅಡ್ಡಿ ಎಂದು ಸವಾಲ್ ಹಾಕುತ್ತಲೇ ಇದ್ಧಾರೆ. ಆದರೆ.. ಅದೇಕೋ ಏನೋ.. ಯತ್ನಾಳ್ ಬೈಗುಳ ಸುರಿಸಿದಷ್ಟು ಸುಲಭವಾಗಿ ಸಾಕ್ಷಿ ರಿಲೀಸ್ ಮಾಡಲ್ಲ. ತಿಮರೋಡಿ, ಮಟ್ಟಣ್ಣವರ್ ಅವರಂತೆ ಮಾತನಾಡುತ್ತಲೇ ಹೋಗುತ್ತಾರೆ.
ಯತ್ನಾಳ್ ಬಳಿ ಸಾಕ್ಷಿಗಳೇ ಇಲ್ಲವಾ..?
ಹೌದು ಎನ್ನುತ್ತಾರೆ ಯತ್ನಾಳ್ ಅವರನ್ನು ಹತ್ತಿರದಿಂದ ಬಲ್ಲ ನಾಯಕರು. ಯತ್ನಾಳ್ ಅವರು ತಮ್ಮ ವಿರುದ್ಧ ಗುಡುಗಿದವರನ್ನು ಬಾಯಿಗೆ ಬಂದಂತೆ ಹೊಲಸು ಮಾತನಾಡಿ ಸುಮ್ಮನಾಗಿಸುತ್ತಾರೆಯೇ ಹೊರತು, ಬೇರೇನೂ ಮಾಡುವುದಿಲ್ಲ. ಬಹುತೇಕರು ಯತ್ನಾಳ್ ಅವರ ಬಾಯಿಗೆ ಮಾತ್ರ ಹೆದರುತ್ತಾರೆ. ಯತ್ನಾಳ್ ಅವರಿಗೆ ಈಗಾಗಲೇ ಪಂಚಮಸಾಲಿ ಟ್ರಸ್ಟ್‌ನಲ್ಲಿಯೂ ಹಿನ್ನಡೆ ಆಗಿದೆ. ಅಲ್ಲಿಯೂ ಅವರಿಗೆ ಗೌರವ ಸಿಕ್ಕಿಲ್ಲ. ಬಿಜೆಪಿಯಲ್ಲಿಯೂ ಗೌರವ ಸಿಕ್ಕಿಲ್ಲ. ಅವರ ಸುತ್ತಮುತ್ತ ಇರುವ ಕೆಲವು ಬಹುಪರಾಕ್ ಹಾಕುವವರಿಗೆ ಮಾತ್ರ ಅವರು ಹೀರೋ ಎನ್ನುತ್ತಾರೆ. ಯತ್ನಾಳ್ ಬಳಿ ಸಾಕ್ಷಿಗಳಿಲ್ಲ. ಏಕೆಂದರೆ ಅವರಿಗೆ ಅಂತಹ ನೆಟ್ ವರ್ಕ್ ಕೂಡಾ ಇಲ್ಲ. ಸಾಕ್ಷಿ ಇದ್ದಿದ್ದರೆ, ಅದನ್ನು ಹೈಕಮಾಂಡ್ ನಾಯಕರಿಗಾದರೂ ತಲುಪಿಸುತ್ತಿದ್ದರು ಎನ್ನುವುದು ಪ್ರತಿವಾದ.
ಹೈಕಮಾಂಡ್ ನಾಯಕರೂ ಕೂಡಾ ಆರೋಪಗಳಿಗೆ ಸಾಕ್ಷಿ ಕೇಳಿದ್ದರಂತೆ. ಆದರೆ.. ಪ್ರತಿ ಬಾರಿಯೂ ಯತ್ನಾಳ್ ಅವರು ಅವರು ಆಪೋಸ್ ಮಾಡ್ತಾರೆ. ಇವರು ಆಪೋಸ್ ಮಾಡ್ತಾರೆ ಎಂದು ಹೇಳುತ್ತಾ ಬಂದಿದ್ದಾರೆಯೇ ಹೊರತು, ಸಾಕ್ಷಿಗಳನ್ನು ಕೊಟ್ಟಿಲ್ಲ. ವಿಜಯೇಂದ್ರ ಅವರು ಯಡಿಯೂರಪ್ಪ ಅವರ ಸಹಿಯನ್ನು ನಕಲು ಮಾಡಿದ್ದಾರೆ ಎಂಬ ಆರೋಪ ಮಾಡ್ತಾರಲ್ಲ, ಆ ಆರೋಪ ಕುರಿತು ಯಾವ ಫೈಲ್ ಎಂಬ ಮಾಹಿತಿಯೂ ಯತ್ನಾಳ್ ಬಳಿ ಇಲ್ಲ. ಯಾವಾಗ ಯತ್ನಾಳ್ ಕೇವಲ ಕೂಗುಮಾರಿ ಎಂದು ಅರಿವಾಯಿತೋ.. ಆನಂತರವೇ ಎಲ್ಲರೂ ಸೈಲೆಂಟ್ ಆದರು.
ಕೊನೆ ಮಾತು : ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸಿ, ಬೇರೆಯವರಿಗೆ ಪಟ್ಟ ಕಟ್ಟಬೇಕು ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಹೈಕಮಾಂಡ್ ಕೂಡಾ ಇದಕ್ಕೆ ಮನಸ್ಸು ಮಾಡಿದೆಯಂತೆ.



