ರಾಜ್ಯದಲ್ಲಿ ಸದ್ಯಕ್ಕೆ ನಾಯಕತ್ವ ಬದಲಾವಣೆ ಇಲ್ಲ ಎಂದು ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ. ಯತೀಂದ್ರ ಸಿದ್ದರಾಮಯ್ಯ ಈ ಒಂದು ಹೇಳಿಕೆ ಕೊಡ್ತಾ ಇದ್ದಂತೆಯೇ ಉಲ್ಟಾ ತಿರುಗುತ್ತಿದೆ. ಅದನ್ನು ಯತೀಂದ್ರ ಅವರಷ್ಟೇ ಅಲ್ಲ, ಸಿದ್ದರಾಮಯ್ಯ ಕೂಡಾ ನಿರೀಕ್ಷೆ ಮಾಡಿರಲಿಲ್ಲವೇನೋ.. ಬೂಮ್ ರಾಂಗ್ ಆಗುವ ಸಾಧ್ಯತೆ ದಟ್ಟವಾಗಿ ಗೋಚರಿಸುತ್ತಿದೆ.
ʻʻರಾಜ್ಯದಲ್ಲಿ ಸದ್ಯಕ್ಕೆ ನಾಯಕತ್ವ ಬದಲಾವಣೆ ಇಲ್ಲ ಎಂದು ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ. ಎಲ್ಲವನ್ನೂ ಹೈಕಮಾಂಡ್ ಕ್ಲಿಯರ್ ಮಾಡಿದೆ. ಸಿದ್ದರಾಮಯ್ಯ ಅವರು 5 ವರ್ಷ ಪೂರ್ತಿ ಅಧಿಕಾರದ್ಲಲಿರ್ತಾರೆʼʼ ಯತೀಂದ್ರ ಈ ಹೇಳಿಕೆ ನೀಡುವವರೆಗೂ ಒಂದಿಷ್ಟು ತಣ್ಣಗೆ ಇದ್ದ ಡಿಕೆ ಬಣದ ಶಾಸಕರು ಬಹಿರಂಗವಾಗಿ ತಿರುಗಿಬಿದ್ದಿದ್ದಾರೆ. ಅದನ್ನು ಯತೀಂದ್ರ ಅವರು ನಿರೀಕ್ಷೆ ಮಾಡಿರಲಿಲ್ಲ. ಸಿಎಂ ಪುತ್ರ, ಹೈಕಮಾಂಡ್ ಭಯ, ಡಿಕೆ ಶಿವಕುಮಾರ್ ತಟಸ್ಥ ಧೋರಣೆಗಳೆಲ್ಲವೂ ತಮಗೆ ವರವಾಗಿ ಬರುತ್ತವೆ ಎಂಬ ನಿರೀಕ್ಷೆಯಲ್ಲಿದ್ದ ಯತೀಂದ್ರ ಅವರಿಗೆ ಈ ಬಾರಿ ಡಿಕೆ ಟೀಂನ ಕೆಲವು ಶಾಸಕರು ಕೊಟ್ಟಿರುವ ಉತ್ತರ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದೆ.
ಇಕ್ಬಾಲ್ ಹುಸೇನ್ ಮಾತನ್ನು ನೋಡಿ.. ‘ನಾವು ಮಾತನಾಡಿದರೆ ನೋಟಿಸ್ ನೀಡುತ್ತಾರೆ. ಅವರು ಮಾತನಾಡಿದರೆ ಏನೂ ಮಾಡುವುದಿಲ್ಲ. ಅವರು ಮಾತನಾಡಿದರೆ ಚಮತ್ಕಾರ, ನಾವು ಮಾತನಾಡಿದರೆ ಬಲಾತ್ಕಾರವಾ ಎಂದು ಪ್ರಶ್ನೆ ಮಾಡಿದ್ದಾರೆ. ಮೀಡಿಯಾಗಳ ಎದುರು ಈ ಮಾತನ್ನು ಹಿಂದಿಯಲ್ಲಿ ಹೇಳಿರುವುದರ ಅರ್ಥ ಏನು.. ಅದು ಯಾರಿಗೆ ತಲುಪಬೇಕು ಎಂಬುದು ಇಕ್ಬಾಲ್ ಹುಸೇನ್ ಅವರಿಗೆ ಚೆನ್ನಾಗಿ ಗೊತ್ತಿದೆ.
ಬೇಳೂರು ಗೋಪಾಲಕೃಷ್ಣ ಅವರಂತೂ ಬಾಯಿ ಮುಚ್ಚಿಕೊಂಡಿದ್ದರೆ ಉತ್ತಮ. ಅಧಿವೇಶನದ ಮುಗಿದ ಮೇಲೆ ಚಟ ತೀರಿಸಿಕೊಳ್ಳಿ ಎಂದಿದ್ದಾರೆ. ಬಾಯಿ ಮುಚ್ಚಿಕೊಂಡು ಮತ್ತು ಚಟ ತೀರಿಸಿಕೊಳ್ಳುವುದು ಎಂಬ ಎರಡು ಪದಗಳಲ್ಲಿಯೇ ಆಕ್ರೋಶ ಹೇಗಿದೆ ಎನ್ನುವುದು ಗೊತ್ತಾಗುತ್ತಿದೆ.
ಕುಣಿಗಲ್ ರಂಗನಾಥ್ ಅವರು ಮೀಡಿಯಾಗಳಿಗೆ ಮಾತನಾಡಲ್ಲ ಎನ್ನುತ್ತಲೇ ಆಕ್ರೋಶ ಹೊರಹಾಕಿದ್ದಾರೆ. ಅವರು ಡಿಕೆ ಪರ ಇರುವ ಶಾಸಕರಷ್ಟೇ ಅಲ್ಲ, ಡಿಕೆ ಬ್ರದರ್ಸ್ ಸಂಬಂಧಿಯೂ ಹೌದು. ಹೀಗಾಗಿ ಕೈ ಕಟ್ಟಿ ಹಾಕಿದಂತೆ ಕಾಣುತ್ತದೆ.
ಯತೀಂದ್ರ ಅವರ ಲೆಕ್ಕಾಚಾರವೇ ಬೇರೆ ಇತ್ತು. ಈ ಹೇಳಿಕೆ ಬಗ್ಗೆ ಮಂಗಳವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆಯಾಗಬೇಕು ಎಂದು ಯತೀಂದ್ರ ಬಯಸಿದ್ದರು. ಆದರೆ ಹಾಗಾಗಲಿಲ್ಲ. ಹೀಗಾಗಿ ಮಾಧ್ಯಮಗಳ ಎದುರು ಬಂದು ಮತ್ತೊಮ್ಮೆ ಅದೇ ಹೇಳಿಕೆ ನೀಡಿದ್ದಾರೆ. ಯತೀಂದ್ರ ಅವರು ಪಳಗಿದ ರಾಜಕಾರಣಿ ಅಲ್ಲ. ಅಚಾನಕ್ ಆಗಿ ಬಂದು ಶಾಸಕರಾಗಿರುವವರು. ಹೀಗಾಗಿ ಯತೀಂದ್ರ ಅವರ ಹಿಂದೆ ಗೈಡ್ ಬೇರೆಯೇ ಇದ್ದಾರೆ ಎಂಬುದಂತೂ ಅರ್ಥವಾಗುತ್ತಿದೆ.
ಕೌಂಟರ್ ಕೊಟ್ಟಿರುವ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅವರಿಗೆ ಉತ್ತರ ನೀಡುತ್ತಾರೆ ಎಂದುಕೊಂಡಿದ್ದೇನೆ ಎನ್ನುವ ಮೂಲಕ ಸಂಪೂರ್ಣ ಹೊಣೆಗಾರಿಕೆಯನ್ನು ಸಿದ್ದರಾಮಯ್ಯ ಅವರಿಗೇ ದಾಟಿಸಿದ್ದಾರೆ.
ವಿಚಿತ್ರ ಅಂದ್ರೆ, ಯತೀಂದ್ರ ಅವರ ಈ ಹೇಳಿಕೆ ನಂತರ 20ರ ಆಸುಪಾಸಿನಲ್ಲಷ್ಟೇ ಇದ್ದ ಡಿಕೆ ಬಣದಲ್ಲಿ ಗುರುತಿಸಿಕೊಳ್ಳುವ ಶಾಸಕರ ಸಂಖ್ಯೆ 40ಕ್ಕೆ ಏರಿದೆ. ಬೂಮ್ ರಾಂಗ್ ಎಂದಿದ್ದು ಇದೇ ಕಾರಣಕ್ಕೆ.



