ಬೀದರ್ ಗುತ್ತಿಗೆದಾರ ಸಚಿನ್ ಪಾಂಚಳ್ ಆತ್ಮಹತ್ಯೆ ಪ್ರಕರಣ ದೊಡ್ಡ ರಾಜಕೀಯ ಹೋರಾಟಕ್ಕೆ ವೇದಿಕೆಯಾಗುತ್ತಿದೆ. ಸಿದ್ದರಾಮಯ್ಯ ಸರ್ಕಾರ ಅಸ್ಥಿತ್ವಕ್ಕೆ ಬಂದ ಮೇಲೆ ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತರ ಹೆಸರು ಹೇಳಿ ಒಬ್ಬ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಕ್ಕೂ ಮುನ್ನ ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣ, ದೊಡ್ಡ ಹಗರಣವನ್ನೇ ಬಯಲಿಗೆಳೆದಿತ್ತು. ಅದಕ್ಕಿನ್ನೂ ಅಂತ್ಯ ಸಿಕ್ಕಿಲ್ಲ. ಹೀಗಿರುವಾಗಲೇ ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವುದು ರಾಜಕೀಯ ಹೋರಾಟಕ್ಕೆ ವೇದಿಕೆಯನ್ನಂತೂ ಒದಗಿಸಿದೆ. ಏಕೆಂದರೆ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ಬಿಜೆಪಿ ಅಧಿಕಾರಾವಧಿಯಲ್ಲಿ ಬೇತಾಳದಂತೆ ಬೆನ್ನು ಹತ್ತಿತ್ತು. ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಇದೀಗ ಸಚಿನ್ ಪಾಂಚಳ್ ಆತ್ಮಹತ್ಯೆ ಪ್ರಕರಣವನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವುದು ವಿಜಯೇಂದ್ರ ಅವರ ಆಕಾಂಕ್ಷೆ. ಆದರೆ ವಿಜಯೇಂದ್ರ ಹೋರಾಟಕ್ಕೆ ಅವರ ಪಕ್ಷದಲ್ಲೇ ಬೆಂಬಲ ಸಿಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರತೊಡಗಿವೆ.
ಗುತ್ತಿಗೆದಾರ ಸಚಿನ್ ಪಾಂಚಳ್ ಆತಹತ್ಯೆ ಪ್ರಕರಣ ಸರ್ಕಾರಿ ಪ್ರಾಯೋಜಿತ ಆತಹತ್ಯೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಜವಾದ ಅಹಿಂದ ನಾಯಕರಾಗಿ ತಾವೊಬ್ಬ ಬಲಿಷ್ಠ ಎನ್ನುವಂತಿದ್ದರೆ ಈ ಪ್ರಕರಣದಲ್ಲಿ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ಸಂಪುಟದಿಂದ ಕೈಬಿಡಬೇಕು. ಇಲ್ಲದಿದ್ದರೆ ಮನೆಗೆ ಮುತ್ತಿಗೆ ಹಾಕುವುದಾಗಿ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ. ಇದು ಗಂಭೀರವಾದ ಪ್ರಕರಣವಾಗಿರುವುದರಿಂದ ಪೊಲೀಸರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವೇ ಇಲ್ಲ. ಮುಖ್ಯಮಂತ್ರಿಗಳಿಗೆ ದೇವರು ಬುದ್ದಿ ಕೊಡಬೇಕೆಂದು ಪಾರ್ಥಿಸುತ್ತೇವೆ. ಡಿ.3ರವರೆಗೂ ನಾವು ಕಾಯುತ್ತೇವೆ. ಇಲ್ಲದಿದ್ದರೆ ಡಿ.4ರಂದು ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಮನೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದಾರೆ.
ಆದರೆ ವಿಜಯೇಂದ್ರ ಅವರ ಈ ಹೋರಾಟಕ್ಕೆ ಬಹುತೇಕ ನಾಯಕರಿಂದ ಯಾಕಪ್ಪ ಬೇಕು, ಸಹವಾಸ ಎಂಬ ಪ್ರತಿಕ್ರಿಯೆಯೇ ವ್ಯಕ್ತವಾಗ್ತಿದೆ. ಆರ್. ಅಶೋಕ್ ಒಂದು ಸ್ಟೇಟ್ ಮೆಂಟ್ ಬಿಟ್ಟರೆ ಮತ್ತೇನಿಲ್ಲ. ಯತ್ನಾಳ್ ಅವರದ್ದು ವಕ್ಫ್ ಹೋರಾಟವನ್ನೇ ಕಂಟಿನ್ಯೂ ಮಾಡುತ್ತ, ಎಂದಿನಂತೆ ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಹೂಂಕರಿಸುತ್ತಲೇ ಇದ್ದಾರೆ. ಅವರು ೨ನೇ ಹಂತದ ಪ್ರವಾಸಕ್ಕೆ ಸಿದ್ಧರಾಗಿದ್ದಾರೆ. ಹೀಗಿರುವಾಗ ಜನವರಿ 4ರ ಪ್ರತಿಭಟನೆ ಏನಾಗಬಹುದು ಎಂಬ ನಿರೀಕ್ಷೆ ಎಲ್ಲರದ್ದು. ಹೀಗಾಗಿಯೇ ಕಾಂಗ್ರೆಸ್ ನಾಯಕರು ಓಪನ್ ಚಾಲೆಂಜ್ ಹಾಕುತ್ತಾ ಬನ್ನಿ, ಉಪಚಾರ ಮಾಡಿಸಿ ಕಳಿಸುತ್ತೇವೆ ಎಂದು ಬಹಿರಂಗವಾಗಿಯೇ ಹೇಳುತ್ತಿದ್ದಾರೆ.



