ಅಜಿತ್ ಪವಾರ್ ಅಕಾಲಿಕ ಮೃತ್ಯುವಿಗೆ ಗುರಿಯಾಗಿದ್ದಾರೆ. ತಮ್ಮ ಸ್ವಕ್ಷೇತ್ರ ಬಾರಾಮತಿಯಲ್ಲೇ ಮೃತಪಟ್ಟಿರುವ ಅಜಿತ್, ಪ್ರತಿಷ್ಠೆಗೆ ಕಟ್ಟುಬಿದ್ದು ಮೃತಪಟ್ಟಿದ್ದಾರೆ ಎನ್ನುವುದಕ್ಕೆ ಕಾರಣಗಳಿವೆ. ಏಕೆಂದರೆ ಹವಾಮಾನ ಸರಿ ಇಲ್ಲದೇ ಇರುವಾಗಲೂ, ಕೇವಲ 150 ಕಿ.ಮೀ. ಪ್ರಯಾಣಕ್ಕೆ ವಿಮಾನ ಏಕೆ ಬೇಕಿತ್ತು.. ಕಾರ್‌ನಲ್ಲಿ ಹೋಗಿದ್ದರೂ ಸ್ವಲ್ಪ ಹೆಚ್ಚೂ ಕಡಿಮೆ ಅಷ್ಟೇ ಸಮಯವಾಗುತ್ತಿತ್ತು. ಹೆಲಿಕಾಪ್ಟರ್ ಬಳಸಬಹುದಿತ್ತು.. ಅದಾಗಿದ್ದರೆ ಎಲ್ಲಿ ಬೇಕಾದರೂ ಇಳಿಸಬಹುದು ಎಂಬ ವಾದಗಳೂ ಇವೆ. ಅದು ಮುಗಿದು ಹೋದ ಅಧ್ಯಾಯ. ಅಜಿತ್ ಪವಾರ್ ಮೃತರಾಗುತ್ತಿದ್ದಂತೆ ಹೊಸ ಹೊಸ ಥಿಯರಿಗಳು ಹೊರಬರುತ್ತಿವೆ.
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ತನಿಖೆ ನಡೆಸಬೇಕು. ನಾವು ಸುಪ್ರೀಂ ಕೋರ್ಟ್ ಮೇಲೆ ಮಾತ್ರ ನಂಬಿಕೆ ಇಟ್ಟಿದ್ದೇವೆ. ಉಳಿದ ಎಲ್ಲಾ ತನಿಖಾ ಸಂಸ್ಥೆಗಳು ಸಂಪೂರ್ಣವಾಗಿ ರಾಜಿ ಮಾಡಿಕೊಂಡಿವೆ.ಎರಡು ದಿನಗಳ ಹಿಂದೆಯಷ್ಟೇ ಪವಾರ್ ಬಿಜೆಪಿ ತೊರೆಯಲು ಸಿದ್ಧರಿದ್ದಾರೆ ಎಂಬ ವರದಿಗಳು ಬಂದವು ಮತ್ತು ನಂತರ ಅಪಘಾತ ಸಂಭವಿಸಿದೆ ವಿರೋಧ ಪಕ್ಷಗಳ ಭವಿಷ್ಯ ಏನಾಗಿದೆಯೋ ನನಗೆ ತಿಳಿದಿಲ್ಲ ಆದರೆ ಎರಡು ದಿನಗಳ ಹಿಂದೆ, ಪವಾರ್ ಬಿಜೆಪಿ ತೊರೆಯಲು ಸಿದ್ಧರಿದ್ದಾರೆ ಎಂದು ಬೇರೆ ಪಕ್ಷದ ಯಾರೋ ಹೇಳಿಕೆ ನೀಡಿದ್ದಾರೆ ಎಂದು ನನಗೆ ತಿಳಿದುಬಂದಿತು, ಮತ್ತು ಈಗ ಅದು ಇಂದು ಸಂಭವಿಸಿದೆ ಎಂದು ಹೇಳಿದ್ದಾರೆ ಮಮತಾ ಬ್ಯಾನರ್ಜಿ. ಅಷ್ಟೇ ಅಲ್ಲ, ಇದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ.
ವಾಸ್ತವ ಏನು ಎಂದರೆ.. ಪತನವಾದ ಅದೇ ವಿಮಾನದಲ್ಲಿ ಅಜಿತ್ ಪವಾರ್ ಒಂದು ಸಂದರ್ಶನ ಕೊಟ್ಟಿದ್ದರು. ಸಂದರ್ಶನ ಮಾಡಿದ್ದದ್ದು ಎನ್‌ಡಿಟಿವಿ. ಆ ಸಂದರ್ಶನದಲ್ಲಿ ಅಜಿತ್ ಪವಾರ್ ಮಾತನಾಡುವ ಅಜಿತ್ ಪವಾರ್ ʻಬಿಜೆಪಿ ಮೈತ್ರಿಯಿಂದ ಹೊರಬರುವ ಮಾತೇ ಇಲ್ಲʼ ಎಂದು ಹೇಳಿದ್ದಾರೆ. ಅದನ್ನು ವಿವರಿಸುತ್ತಾ ಹೋಗುವ ಅಜಿತ್ ಪವಾರ್ ʻಸ್ಥಳೀಯ ಸಂಸ್ಥೆ ಚುನಾವಣೆಗಳೇ ಬೇರೆ. ವಿಧಾನಸಭೆ, ಲೋಕಸಭೆ ಚುನಾವಣೆಗಳೇ ಬೇರೆ. ಸ್ಥಳೀಯ ಸಂಸ್ಥೆಯಲ್ಲೂ ಸೀಟು ಹಂಚಿಕೆ ಎಂದು ಕುಳಿತರೆ ಪಕ್ಷದ ಸಂಘಟನೆ ಸಾಧ್ಯವೇ ಇಲ್ಲ. ಕಾರ್ಯಕರ್ತರು ದೂರವಾಗುತ್ತಾರೆ. ಹೀಗಾಗಿ ಮಹಾರಾಷ್ಟ್ರದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದೆವು. ಇದು ಈಗಲ್ಲ, ಈ ಹಿಂದೆ ಕಾಂಗ್ರೆಸ್ ಜೊತೆ ಮೈತ್ರಿಯಿದ್ದಾಗಲೂ ಲೋಕಲ್ ಬಾಡಿ ಎಲೆಕ್ಷನ್‌ಗಳಲ್ಲಿ ಪ್ರತ್ಯೇಕ ಸ್ಪರ್ಧೆ ಇತ್ತು. ಅದರಲ್ಲಿ ವಿಶೇಷವೇನೂ ಇಲ್ಲʼʼ ಎಂದಿದ್ದಾರೆ.
ಇನ್ನು ರಾಹುಲ್ ಗಾಂಧಿ ಅವರ ಬಗ್ಗೆ ಮಾತನಾಡಿರುವ ಅಜಿತ್ ʻʻರಾಹುಲ್ ಗಾಂಧಿ ಅವರನ್ನು ಕಳೆದು ಹತ್ತು ಹದಿನೈದು ವರ್ಷಗಳಿಂದ ನೋಡುತ್ತಿದ್ದೇನೆ. ಅವರಿಗೆ ಸೀರಿಯಸ್ ನೆಸ್ ಇಲ್ಲ. 15 ವರ್ಷಗಳಿಂದ ಸಾಧ್ಯವಾಗದೆ ಇರುವುದನ್ನು ಮುಂದೆ ಸಾಧಿಸುತ್ತಾರೆ ಎಂದು ಹೇಳುವುದು ಮೂರ್ಖತನ ಎಂದಿದ್ದಾರೆ.
ಮೂಲಗಳ ಪ್ರಕಾರ ಚಿಕ್ಕಪ್ಪ ಶರದ್ ಪವಾರ್ ಅವರನ್ನು ಒಪ್ಪಿಸಿ, ಇಬ್ಭಾಗವಾಗಿರುವ ಎನ್‌ಸಿಪಿಯನ್ನು ಒಗ್ಗೂಡಿಸುವ ಪ್ರಯತ್ನ ಮಾಡ್ತಿದ್ದರಂತೆ ಅಜಿತ್. ಅಷ್ಟೇ ಅಲ್ಲ, ಪಕ್ಷ ಒಂದಾದರೆ ಆಗ ಶರದ್ ಪವಾರ್ ಅವರ ಮಗಳು ಸುಪ್ರಿಯಾ ಸುಳೆ ಅವರನ್ನು ಮೋದಿ ಅವರ ಸರ್ಕಾರದಲ್ಲಿ ಮಂತ್ರಿ ಮಾಡುವ ಬಯಕೆ ಇಟ್ಟುಕೊಂಡಿದ್ದರಂತೆ. ಒಂದೆರಡು ಸುತ್ತು ಮಾತುಕತೆಗಳೂ ನಡೆದಿದ್ದವು. ಅದಕ್ಕೆ ಮಧ್ಯಸ್ಥಿಕೆ ವಹಿಸಿದ್ದವರು ಉದ್ಯಮಿ ಗೌತಮ್ ಅದಾನಿ ಎಂಬ ಮಾತುಗಳಿವೆ.
ಇನ್ನು ಮಹಾರಾಷ್ಟ್ರದಲ್ಲಿ ಸರಳ ಬಹುಮತಕ್ಕೆ ಬೇಕಿರುವುದು 145 ಸೀಟು. ಆದರೆ ಎನ್‌ಡಿಎ ಮಹಾಯುತಿಯಲ್ಲಿ ಇರುವುದು 237 ಸೀಟು. ಅಗತ್ಯಕ್ಕಿಂತ ಹೆಚ್ಚು 90+ ಸೀಟುಗಳಿವೆ. ಬಿಜೆಪಿಯೇ ಏಕಾಂಗಿಯಾಗಿ 132 ಸೀಟುಗಳನ್ನು ಹೊಂದಿದೆ. ಅಂದರೆ ಬಹುಮತಕ್ಕೆ ಎನ್‌ಸಿಪಿ, ಏಕನಾಥ ಶಿಂಧೆ ಹೊರಹೋದರೂ.. ಪಕ್ಷೇತರರಿಂದ ಸರ್ಕಾರ ಭದ್ರವಾಗಿರುತ್ತದೆ. ಇಷ್ಟು ಸರಳವಾಗಿರುವ ಲೆಕ್ಕಾಚಾರವನ್ನು ಪ್ರತಿಪಕ್ಷಗಳು ಅದು ಹೇಗೆ ಮರೆತರೋ ಗೊತ್ತಿಲ್ಲ.



