ಕಾಂಟ್ರವರ್ಸಿ ಇರುವ ಚಿತ್ರಗಳೆಂದರೆ ಹಬ್ಬ ಮಾಡುತ್ತಾರೆ. ಅದರಲ್ಲೂ ಒಟಿಟಿಗಳಲ್ಲಿ ಕಾಂಟ್ರವರ್ಸಿ ಚಿತ್ರಗಳಿಗೆ ಸಖತ್ ಡಿಮ್ಯಾಂಡ್. ಪಠಾಣ್, ಆದಿಪುರುಷ್, ಜೈಭೀಮ್, ಬ್ರಹ್ಮಾಸ್ತ್ರ, ಲಾಲ್ ಸಿಂಗ್ ಚಡ್ಡಾ, ಗಾಂಡು, ಲಿಪ್`ಸ್ಟಿಕ್ ಅಂಡರ್ ಮೈ ಬುರ್ಕಾ, ತಾಷ್ಕೆಂಟ್ ಫೈಲ್ಸ್, ಕಾಶ್ಮೀರ್ ಫೈಲ್ಸ್, ಪದ್ಮಾವತ್.. ಹೀಗೆ ಹಲವು ಚಿತ್ರಗಳು ವಿವಾದಗಳಿಂದಲೇ ಸುದ್ದಿಯಾಗಿವೆ. ಹೀಗಾಗಿಯೇ ಈ ಎಲ್ಲ ಚಿತ್ರಗಳಿಗೂ ಒಟಿಟಿಯಲ್ಲಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ವೆಬ್ ಸಿರೀಸ್`ಗಳೂ ಅಷ್ಟೆ, ತಾಂಡವ್, ಮಿರ್ಜಾಪುರ್…ಹೀಗೆ ಹಲವು ಸಿರೀಸ್`ಗಳುವಿವಾದಗಳಿಂದಾಗಿಯೇ ವೀಕ್ಷಕರ ಸಂಖ್ಯೆ ಹೆಚ್ಚಿಸಿಕೊಂಡವು. ವಿವಾದಗಳನ್ನು ಒಟಿಟಿ ಸಂಸ್ಥೆಗಳೂ ಸ್ವಾಗತಿಸುತ್ತವೆ. ವಿವಾದಗಳು ಹೆಚ್ಚಿದಷ್ಟೂ ಪ್ರಸಾರ ಹೆಚ್ಚ ಹೆಚ್ಚು ಆಗುತ್ತದೆ ಎನ್ನುವುದೇ ಇದಕ್ಕೆ ಕಾರಣ.
ಕೇರಳ ಸ್ಟೋರಿ. ಈ ವರ್ಷದ ಸೂಪರ್ ಹಿಟ್ ಸಿನಿಮಾ. ಕಡಿಮೆ ಬಜೆಟ್ಟಿನಲ್ಲಿ ನೂರಾರು ಕೋಟಿ ಬಿಸಿನೆಸ್ ಮಾಡಿದ ಸಿನಿಮಾ. ಕೇರಳದಲ್ಲಿ ಐಸಿಸ್`ನವರು ಹಿಂದೂ-ಕ್ರೈಸ್ತ ಹೆಣ್ಣು ಮಕ್ಕಳಿಗೆ ಗಾಳ ಹಾಕಿ, ಐಸಿಸ್‍ನವರಿಗೆ ಮಾರಾಟ ಮಾಡುವ ಕಥೆಯನ್ನು ಹೊಂದಿರುವ ಸಿನಿಮಾ. ನೈಜಕಥೆ. ಸಿನಿಮಾ ಸೂಪರ್ ಹಿಟ್ ಆಗಿದ್ದರೂ, ಒಟಿಟಿಯಲ್ಲಿ ಮಾತ್ರ ಸಿನಿಮಾವನ್ನು ಕೊಳ್ಳುವವರೇ ಇಲ್ಲವಂತೆ. ಚಿತ್ರದಲ್ಲಿ ವಿವಾದಿತ ಅಂಶಗಳು ಇರುವ ಹಿನ್ನೆಲೆಯಲ್ಲಿ ಓಟಿಟಿ ಸಂಸ್ಥೆಗಳು ಹಿಂದೇಟು ಹಾಕುತ್ತಿವೆ ಎನ್ನಲಾಗುತ್ತಿದೆ. ಈ ಕುರಿತು ಬಿ-ಟೌನ್ನಲ್ಲಿ ಭಾರಿ ಸುದ್ದಿಯಾಗುತ್ತಿದೆ. ರಾಜಕೀಯ ವಿವಾದದ ಕಂಟೆಂಟ್ ಇರುವ ಕಾರಣ ಈ ಚಿತ್ರವನ್ನು ಖರೀದಿಗೆ ಯಾರೂ ಮುಂದೆ ಬರುತ್ತಿಲ್ಲ ಎನ್ನಲಾಗಿದೆ.
ನಮ್ಮ ಯಶಸ್ಸನ್ನು ಕಂಡು ಕೆಲವರಿಗೆ ಹೊಟ್ಟೆಯುರಿ. ಆ ಕಾರಣಕ್ಕೆ ನಮ್ಮ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ಸಿನಿಮಾದ ಯಶಸ್ಸನ್ನು ಸಹಿಸಿಕೊಳ್ಳಲು ಅನೇಕರಿಗೆ ಸಾಧ್ಯವಾಗಿಲ್ಲ. ಅಂಥವರೆಲ್ಲ ಒಟ್ಟಾಗಿ ಒಟಿಟಿ ಸಂಸ್ಥೆಗಳಿಗೆ ಚಾಡಿ ಹೇಳಿದ್ದಾರೆ. ಹಾಗಾಗಿ ಯಾರೂ ಕೂಡ ಈ ಸಿನಿಮಾವನ್ನು ಖರೀದಿಸಲು ಮುಂದಾಗುತ್ತಿಲ್ಲ ಎನ್ನುವುದು ನಿರ್ದೇಶಕ ಸುದಿಪ್ತೋ ಸೇನ್ ಪ್ರತಿಕ್ರಿಯೆ.
ಈ ಹಿಂದೆ ಒಟಿಟಿಯಲ್ಲಿ ವಿವಾದಿತ ಅಂಶಗಳಿರುವ ಚಿತ್ರಗಳಿಗೆ ವ್ಯಾಪಾರ ದೊಡ್ಡ ಮಟ್ಟದಲ್ಲಿ ನಡೆಯುತ್ತಿತ್ತು. ಹಿಂದಿ ಚಿತ್ರಗಳಂತೂ ಒಂದಲ್ಲ ಒಂದು ವಿವಾದ ಮಾಡಿಕೊಂಡೇ ಬಿಸಿನೆಸ್ ಕುದುರಿಸುತ್ತಿದ್ದವು. ಆದರೆ ಹಿಟ್ ಆದ ಕೇರಳ ಸ್ಟೋರಿಗೆ ಮಾತ್ರ ಹಿಟ್ ಆಗಿದ್ದೇ ಸಮಸ್ಯೆಯಾಗಿದೆ.
ವಾಸ್ತವವೆಂದರೆ ಒಟಿಟಿಗಳು ಕೇವಲ ಭಾರತೀಯ ಪ್ರೇಕ್ಷಕರನ್ನಷ್ಟೇ ಅಲ್ಲ, ಜಗತ್ತಿನೆಲ್ಲೆಡೆಯ ಪ್ರೇಕ್ಷಕರನ್ನೂ ಒಳಗೊಂಡಿರುತ್ತವೆ. ಹೀಗಾಗಿಯೇ ಕೇರಳ ಸ್ಟೋರಿ ಒಟಿಟಿಗೆ ಬಂದರೆ, ಜಗತ್ತಿನಾದ್ಯಂತ ಇರುವ ಮುಸ್ಲಿಂ ದೇಶಗಳು ವಿರುದ್ಧ ನಿಲ್ಲಬಹುದು ಎಂಬ ಆತಂಕವೇ ಇದಕ್ಕೆ ಕಾರಣ ಎನ್ನಲಾಗಿದೆ. ಇನ್ನೊಂದು ಕಡೆ ಹೆಚ್ಚಿನ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಯಾವುದು ಸತ್ಯವೋ.. ಶೀಘ್ರದಲ್ಲೇ ನಿಜ ಬಯಲಾಗಬೇಕಿದೆ.



