ಲೋಕಸಭೆಯಲ್ಲಿ ಈ ಬಾರಿ ಅಧಿಕಾರದಲ್ಲಿರುವುದು ಸಮ್ಮಿಶ್ರ ಸರ್ಕಾರ. ಈ ಹಿಂದೆಯೂ ಸಮ್ಮಿಶ್ರ ಸರ್ಕಾರ ಇತ್ತಾದರೂ.. 2014 ಹಾಗೂ 2019ರಲ್ಲಿ ಬಿಜೆಪಿ ಏಕಾಂಗಿಯಾಗಿ ಸರಳ ಬಹುಮತ ಗಳಿಸಿತ್ತು. ಈ ಬಾರಿ ಹಾಗಾಗಿಲ್ಲ. ಬಿಜೆಪಿ 250ರ ಗಡಿಯ ಒಳಗೆ ಕುಸಿದಿದ್ದು, ಎನ್ʻಡಿಎ ಮಿತ್ರಪಕ್ಷಗಳ ಬೆಂಬಲ ಅನಿವಾರ್ಯ. ಹೀಗಾಗಿಯೇ ಈ ಬಾರಿ ಪ್ರಬಲ ಪ್ರತಿಪಕ್ಷವೂ ಇದೆ. 10 ವರ್ಷಗಳ ಬಳಿಕ ಅಧಿಕೃತ ಪ್ರತಿಪಕ್ಷ ಸ್ಥಾನ ಪಡೆದಿರುವ ಕಾಂಗ್ರೆಸ್ʻಗೆ ಈ ಬಾರಿ ರಾಹುಲ್ ಗಾಂಧಿಯ ನೇತೃತ್ವ ಇದೆ. ಆದರೆ.. ಗದ್ದಲ ಮಾಡುವುದು, ಗಲಾಟೆ ಮಾಡುವುದು, ಜೋರಾಗಿ ಕಿರುಚುವುದು, ಘೋಷಣೆ ಕೂಗುವುದು, ಒಟ್ಟಿನಲ್ಲಿ ಉತ್ತರ ಹೇಳದಂತೆ ಮಾಡುವುದೇ ಪ್ರತಿಪಕ್ಷಗಳ ಕೆಲಸವೇ.. ಹೀಗೊಂದು ಪ್ರಶ್ನೆ ಮೂಡಿರುವುದು ಲೋಕಸಭೆ ಅಧಿವೇಶನದಲ್ಲಿ ಮೋದಿ ರಾಷ್ಟ್ರಪತಿಗಳಿಗೆ ಅಭಿನಂದನೆ ಸಲ್ಲಿಸಿ, ರಾಹುಲ್ ಗಾಂಧಿಯವರ ಮಾತುಗಳಿಗೆ ಉತ್ತರ ಕೊಡುತ್ತಿದ್ದಾಗ.
ಮೋದಿ ಮಾತನಾಡುತ್ತಿದ್ದ 134 ನಿಮಿಷಗಳ ಕಾಲವೂ ಒಂದು ಸೆಕೆಂಡ್ ಕೂಡಾ ನಿಲ್ಲದಂತೆ ಘೋಷಣೆ ಕೂಗುತ್ತಲೇ ಇದ್ದ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳ ಸದಸ್ಯರು ಭಾಷಣಕ್ಕೆ ಅಡ್ಡಿ ಪಡಿಸುತ್ತಲೇ ಹೋದರು. ಆರಂಭದಲ್ಲಿ ಕಿವಿಗೆ ಹೆಡ್ ಫೋನ್ ಹಾಕಿಕೊಳ್ಳದೆ ಮಾತನಾಡುತ್ತಿದ್ದ ಮೋದಿ, ಈ ಗಲಾಟೆಯ ಪರಿಣಾಮ ಹೆಡ್ ಫೋನ್ ಹಾಕಿಕೊಂಡು ಮಾತನಾಡಬೇಕಾಯ್ತು. ತಮ್ಮ ಮಾತು ತಮಗೇ ಕೇಳಿದಷ್ಟು ಗದ್ದಲ ಮಾಡುತ್ತಿದ್ದರು ಪ್ರತಿಪಕ್ಷ ಸದಸ್ಯರು. ಏನೋ.. ಅವರ ಸಂವಿಧಾನದಲ್ಲಿ ಇದೇ ಆರೋಗ್ಯಕರ ಪ್ರಜಾಪ್ರಭುತ್ವ ಎಂದು ಬರೆದಿದೆಯೋ ಏನೋ.. ಸ್ಪೀಕರ್ ಎಷ್ಟು ಬುದ್ದಿ ಮಾತು ಹೇಳಿದರೂ ಅವರು ಸುಮ್ಮನಾಗಲಿಲ್ಲ. ಇದರ ಮಧ್ಯೆ ಮೋದಿ 3 ಕಥೆ ಹೇಳಿದರು.
ಮೋದಿ ಹೇಳಿದ ಮೊದಲ ಕಥೆ :
ಇಬ್ಬರು ಗೆಳೆಯರು ಕಾಡಿಗೆ ಬೇಟೆಯಾಡಲು ತಮ್ಮ ವಾಹನದಲ್ಲಿ ಹೋಗುತ್ತಾರೆ, ವಾಹನದಲ್ಲಿ ಬೇಕಾದಷ್ಟು ಬಂದೂಕು, ಗುಂಡುಗಳನ್ನು ಮುಂಜಾಗ್ರತೆಗಾಗಿ ತೆಗೆದುಕೊಂಡು ಹೋಗಿರುತ್ತಾರೆ. ಕಾಡಿನೊಳಗೆ ಹೋದ ನಂತರ ತಮ್ಮ ವಾಹನದಿಂದ ಕೆಳಗಿಳಿದು ಸ್ವಲ್ಪ ದೂರ ನಡೆದುಕೊಂಡು ಹೋದಾಗ, ಹುಲಿ ಎದುರಾಗುತ್ತದೆ..ಬಂದೂಕನ್ನು ತಮ್ಮ ವಾಹನದಲ್ಲೇ ಬಿಟ್ಟಿದ್ದರಿಂದ, ಭಯಭೀತರಾದ ಅವರು ಹುಲಿಗೆ ತಮ್ಮ ಬಂದೂಕು ಲೈಸೆನ್ಸ್ ತೋರಿಸುತ್ತಾರೆ. ಹುಲಿಗೆ ಇದೆಲ್ಲಾ ಅರ್ಥವಾಗುತ್ತಾ..?
ಮೋದಿ ಹೇಳಿದ 2ನೇ ಕಥೆ :
ಬಾಲಕನೊಬ್ಬ ಸೈಕಲ್ ತುಳಿಯಲು ಶುರು ಮಾಡುತ್ತಾನೆ. ಆದರೆ ಸೈಕಲ್ ತುಳಿಯೋಕೆ ಶುರು ಮಾಡುತ್ತಲೇ ಸ್ವಲ್ಪ ದೂರ ಹೋಗುತ್ತಿದ್ದಂತೆ ಬೀಳುತ್ತಾನೆ. ಅಳಲು ಶುರು ಮಾಡುತ್ತಾನೆ. ಆಗ ಅಲ್ಲಿಗೆ ಬಂದ ಹಿರಿಯರು ಆ ಬಾಲಕನಿಗೆ ಹಲವು ಸುಳ್ಳು ಹೇಳಿ ಸಮಾಧಾನ ಮಾಡುತ್ತಾರೆ. ಆದರೆ.. ಆ ಬಾಲಕ ಸೈಕಲ್ ತುಳಿಯುವುದನ್ನು ಕಲಿಯದೆ.. ಆ ಹಿರಿಯರು ಹೇಳಿದ ಸುಳ್ಳುಗಳನ್ನೇ ನಿಜ ಎಂದುಕೊಂಡು ಸುಮ್ಮನಾಗುತ್ತಾನೆ
ಮೋದಿ ಹೇಳಿದ 3ನೇ ಕಥೆ :
ಬಾಲಕನೊಬ್ಬ 99 ಮಾರ್ಕು ಪಡೆದುಕೊಂಡು ಊರಿಗೆಲ್ಲ ಖುಷಿಯಿಂದ ಹೇಳಿಕೊಂಡು ಬರುತ್ತಿದ್ದ. ಇದನ್ನು ಕೇಳಿದ ಎಲ್ಲರೂ ಖುಷಿಪಟ್ಟರು. 99 ಅಂಕ ಪಡೆದವನನ್ನು ಬೆನ್ನು ತಟ್ಟಿದರು. ಸ್ವೀಟು ಹಂಚಿದರು. ಆಗ ಅಲ್ಲಿಗೆ ಬಂದ ಶಿಕ್ಷಕಿಯೊಬ್ಬರು ನೀವೇಕೆ ಸ್ವೀಟು ಹಂಚುತ್ತಿದ್ದೀರಿ.. ಈಗ 99 ಅಂಕ ಪಡೆದಿರುವುದು 100ಕ್ಕೆ ಅಲ್ಲ, 543ಕ್ಕೆ ಎಂದು ತಿಳಿ ಹೇಳಿದರು.
ಮೋದಿ ಹೇಳಿದ 4ನೇ ಕಥೆ :
ಬಾಲಕನೊಬ್ಬ ಮನೆಗೆ ಬಂದು ಶಾಲೆಯಲ್ಲಿ ತನ್ನನ್ನು ಹೊಡೆದರು ಎಂದು ಅಳುತ್ತಿದ್ದ. ಅಮ್ಮ, ಅಪ್ಪ ಇಬ್ಬರೂ ಕೇಳಿದಾಗಲೂ.. ಆತ ನನಗೆ ಹೊಡೆದರು ಎಂದಷ್ಟೇ ಹೇಳಿ ಅಳುತ್ತಿದ್ದ. ಆದರೆ.. ಅವರು ಹೊಡೆದಿದ್ದು ಏಕೆ ಅನ್ನೋದು ಅವನಿಗೆ ಗೊತ್ತಿತ್ತು. ಇನ್ನೊಬ್ಬ ಬಾಲಕನ ತಾಯಿಗೆ ಬೈದಿದ್ದು, ಮತ್ತೊಬ್ಬನನ್ನು ಕಳ್ಳ ಎಂದು ಕರೆದಿದ್ದು, ಮಗದೊಬ್ಬ ಬಾಲಕನ ಟಿಫಿನ್ ಬಾಕ್ಸ್ ಕದ್ದು ತಿಂದಿದ್ದು.. ಯಾವುದನ್ನೂ ಹೇಳಲಿಲ್ಲ.
ಮೋದಿಯವರು ಹೇಳಿದ ಆ 4 ಕಥೆಗಳನ್ನು ರಾಹುಲ್ ಗಾಂಧಿಗೆ ಉತ್ತರ ಕೊಡುವಾಗ ಹೇಳಿದ್ದು. ಕಥೆ, ಸಂದರ್ಭ, ಸನ್ನಿವೇಶವನ್ನು ಓದುಗರು ಅರ್ಥ ಮಾಡಿಕೊಳ್ಳಿ. ಎಲ್ಲವನ್ನೂ ತಿಳಿಸಿ.. ಬಿಡಿಸಿ ಹೇಳಿದರೆ ಕಥೆಯ ಗಮ್ಮತ್ತು ಗೊತ್ತಾಗುವುದಿಲ್ಲ.



