ಸುಜಾತಾ ಭಟ್. ಧರ್ಮಸ್ಥಳದಲ್ಲಿ ಹೆಣ ಹೂತ ಪ್ರಕರಣಗಳು ಭುಗಿಲೆದ್ದಾಗ ಕೇಳಿ ಬಂದ ಇನ್ನೊಂದು ಹೆಸರು. ಈಕೆ ತಮ್ಮ ಮಗಳು ಅನನ್ಯಾ ಭಟ್, ಮಣಿಪಾಲ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಓದುತ್ತಿದ್ದಳು. ಧರ್ಮಸ್ಥಳಕ್ಕೆ ಗೆಳತಿಯರ ಜೊತೆ ಬಂದಿದ್ದಾಗ.. ಇದ್ದಕ್ಕಿದ್ದಂತೆ ನಾಪತ್ತೆಯಾದಳು. ಕಂಪ್ಲೇಂಟ್ ಕೊಡಲು ಹೋದಾಗ ಬೆಳ್ತಂಗಡಿ ಪೊಲೀಸರು ದೂರು ತೆಗೆದುಕೊಳ್ಳಲಿಲ್ಲ. ನಂತರ ಧರ್ಮಸ್ಥಳದ ಕೆಲವರು ನನಗೆ ಹೊಡೆದು ಕೋಮಾಗೆ ಹೋಗುವಂತೆ ಮಾಡಿದ್ದರು. ಅದಾದ ಮೇಲೆ ನನಗೆ ಧೈರ್ಯ ಬರಲಿಲ್ಲ ಎಂದಿದ್ದರು. ಅನಾಮಿಕ.. ತಾನೂ ಧರ್ಮಸ್ಥಳದಲ್ಲಿ ನೂರಾರು ಹೆಣ ಹೂತಿದ್ದೇನೆ ಎಂದು ಬಂದಾಗ ಧೈರ್ಯ ಬಂತು. ನನ್ನ ಮಗಳ ಅಸ್ಥಿಪಂಜರವೂ ಸಿಕ್ಕರೆ ನಾನು ಅದನ್ನು ಶಾಸ್ತ್ರೋಕ್ತವಾಗಿ ಸಂಸ್ಕಾರ ಮಾಡುತ್ತೇನೆ, ಅಸ್ಥಿಪಂಜರ ಹುಡುಕಿ ಕೊಡಿ ಎಂದು ದೂರು ಕೊಟ್ಟಿದ್ದರು. ಈಗ ಇಡೀ ಕೇಸ್ ಉಲ್ಟಾ ತಿರುಗುತ್ತಿದೆ.
ಅನುಮಾನಗಳು ಅಂದೂ ಇದ್ದವು..!
ದೂರು ಕೊಟ್ಟ ಸುಜಾತಾ ಭಟ್, ತಾನು ಸಿಬಿಐನಲ್ಲಿ ಸ್ಟೆನೋಗ್ರಾಫರ್ ಆಗಿದ್ದೆ. ಕೋಲ್ಕತ್ತಾದಲ್ಲಿ ಕೆಲಸ ಮಾಡ್ತಿದ್ದೆ ಎಂದು ಹೇಳಿಕೊಂಡಿದ್ದರು. ಸಿಬಿಐನಲ್ಲಿ ಕೆಲಸ ಮಾಡ್ತಿದ್ದ ಹೆಣ್ಣು ಮಗಳಿಗೆ ದೇಶದ ಎಲ್ಲಿಯಾದರೂ ದೂರು ಕೊಡಬಹುದು ಎಂಬ ಸಾಮಾನ್ಯ ಜ್ಞಾನವೂ ಇರಲಿಲ್ಲವಾ.. ತನ್ನ ಮಗಳು ನಾಪತ್ತೆಯಾಗಿದ್ದನ್ನು ಅಷ್ಟು ಸುಲಭವಾಗಿ ಬಿಟ್ಟು ಬಿಟ್ಟರಾ ಎಂಬ ಪ್ರಶ್ನೆಗಳಿದ್ದವು.
ನಿಗೂಢವಾಗಿದ್ದ ಕೇಸ್.. ತರಲೆ ಕೇಸ್ ಆಯ್ತಾ..?
ಈಗ ಒಂದೊಂದೇ ಮಾಹಿತಿಗಳು ಹೊರಬರುತ್ತಿವೆ. ವಾಸ್ತವವಾಗಿ ಅನನ್ಯಾ ಭಟ್ ಎಂಬ ಯುವತಿಯೇ ಇಲ್ಲ ಎಂದು ಮಾಹಿತಿ ಬಹಿರಂಗಪಡಿಸಿರೋದು ಸುವರ್ಣ ನ್ಯೂಸ್. ಸುವರ್ಣ ನ್ಯೂಸ್ ವರದಿಯಲ್ಲಿ ಪೊಲೀಸ್ ತನಿಖೆಯ ಮಾಹಿತಿಗಳೂ ಇವೆ. ಅನನ್ಯಾ ಭಟ್ ಡಾಟರ್ ಆಫ್ ಅನಿಲ್ ಭಟ್ ಎಂಬ ಯುವತಿ, ಮಣಿಪಾಲ್ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನೇ ಮಾಡಿಲ್ಲ. ಕೇವಲ 2003 ಅಲ್ಲ, 1998 ರಿಂದ 2005ರವರೆಗಿನ ಎಲ್ಲ ದಾಖಲೆಗಳನ್ನೂ ಪರಿಶೀಲನೆ ಮಾಡಲಾಗಿದೆ. ಪಕ್ಕದ ಕಸ್ತೂರ್ ಬಾ ಮೆಡಿಕಲ್ ಕಾಲೇಜಿನ ದಾಖಲೆಗಳನ್ನೂ ಪರಿಶೀಲನೆ ಮಾಡಲಾಗಿದೆ.
ಹಾಗಂತ ಅನನ್ಯಾ ಭಟ್ ಹೆಸರಿನ ಯಾರೊಬ್ಬರೂ ಇಲ್ಲವೇ ಎಂಬ ಪ್ರಶ್ನೆಗೂ ಉತ್ತರ ಇದೆ. ಅನನ್ಯಾ ಭಟ್ ಅನ್ನೋ ಹೆಸರಿನವರು ಕೆಲವರಿದ್ದಾರೆ, ಅವರು ಬದುಕಿದ್ದಾನೆ. ಮತ್ತು ಅವರು ಈ ಸುಜಾತಾ ಭಟ್ ಅವರ ಮಗಳು ಅನನ್ಯಾ ಭಟ್ ಅಲ್ಲ.
ಇನ್ನೊಂದು ವಿಷಯ ಎಂದರೆ.. ಈಕೆ ನೇರವಾಗಿಯೇ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ್ತು ಅವರ ತಮ್ಮ ಹರ್ಷೇಂದ್ರ ಜೈನ್ ಬಗ್ಗೆ ನೇರವಾಗಿಯೇ ಆರೋಪ ಮಾಡಿದ್ದರು. ಸುಜಾತಾ ಭಟ್ ಅವರ ಸುದ್ದಿ ರಾಜ್ಯ ಮಟ್ಟದ ನ್ಯೂಸ್ ಚಾನೆಲ್ಲುಗಳಲ್ಲಿ ಬರುವುದಕ್ಕೆ ಮುನ್ನವೇ, ಅಂತಾರಾಷ್ಟ್ರೀಯ ಮಟ್ಟದ ಬಿಬಿಸಿ, ಅಲ್ ಜಜೀರಾ ಚಾನೆಲ್ಲುಗಳಲ್ಲಿ ವರದಿ ಆಗಿತ್ತು. ಈಗ ನೋಡಿದರೆ.. ಅನನ್ಯಾ ಭಟ್ ಎಂಬ ಎಂಬಿಬಿಸ್ ವಿದ್ಯಾರ್ಥಿನಿಯೇ ಇಲ್ಲ ಎಂಬ ಮಾಹಿತಿ ಬರ್ತಾ ಇದೆ.
ಅಂದಹಾಗೆ ಸುಜಾತಾ ಭಟ್ ಅವರು ಪೊಲೀಸರಿಗೆ ಕೊಟ್ಟಿರುವ ದೂರಿನಲ್ಲಿ ಅವರ ಪತಿಯ ಹೆಸರು ಅನಿಲ್ ಭಟ್ ಎಂದು ಇದ್ದರೆ, ಅವರು ಪದ್ಮನಾಭನಗರದಲ್ಲಿ ಇರುವ ಬಾಡಿಗೆ ಮನೆಯ ರೆಂಟಲ್ ಅಗ್ರಿಮೆಂಟಿನಲ್ಲಿ ಪ್ರಭಾಕರ್ ರಾವ್ ಎಂದು ಇದ್ಯಂತೆ.
ಸುಜಾತಾ ಭಟ್ ಅವರ ಮಾವನ ಪ್ರಕಾರ ಸುಜಾತಾ ಭಟ್ ಅವರಿಗೆ ಮಕ್ಕಳೇ ಇಲ್ವಂತೆ. ಸುಜಾತಾ ಭಟ್ ಅವರ ಬಳಿ ಯಾವುದೇ ದಾಖಲೆಗಳಿಲ್ಲ. ಮನೆಗೆ ಬೆಂಕಿ ಬಿದ್ದು ಸುಟ್ಟು ಹೋಗಿದೆ ಎಂದಿದ್ದಾರೆ. ಅನನ್ಯಾ ಭಟ್ ಅವರ ಎಸ್‌ಎಸ್‌ಎಲ್‌ಸಿ, ಪಿಯುಸಿ ಸೇರಿದಂತೆ ಒಂದೇ ಒಂದು ದಾಖಲೆ ಕೊಟ್ಟಿಲ್ಲ. ಅತ್ತ ಮಣಿಪಾಲ್ ಗ್ರೂಪಿನ ಎರಡೂ ಮೆಡಿಕಲ್ ಕಾಲೇಜುಗಳಲ್ಲಿ ಆ ಹೆಸರಿನ ಸ್ಟೂಡೆಂಟ್ ಇದ್ದ ದಾಖಲೆಗಳು 2003ರ ಹಿಂದೆ.. ಮುಂದೆ ಏಳೆಂಟು ವರ್ಷದ ದಾಖಲೆಗಳಲ್ಲೂ ಸಿಕ್ಕಿಲ್ಲ.
ಇನ್ನು ಸುಜಾತಾ ಭಟ್ ಅವರ ಪ್ರಕಾರ 1983ರಲ್ಲಿ ಮದುವೆ ಆಗಿದೆಯಂತೆ. ಆದರೆ.. ಅವರ ಬಾವನ ಅಂದ್ರೆ ಅವರ ಅಕ್ಕನ ಗಂಡನ ಪ್ರಕಾರ, ಅವರ ಮದುವೆಯಾಗಿದ್ದೇ 1985ರಲ್ಲಿ. ಅಕ್ಕನಿಗಿಂತ ತಂಗಿಗೆ ಮೊದಲು ಮದುವೆಯಾಗಿತ್ತಾ..? ಗೊತ್ತಿಲ್ಲ. ಬಾವನ ಪ್ರಕಾರ ಅದೂ ಸುಳ್ಳು.
ಇನ್ನು ಸುಜಾತಾ ಭಟ್ ಅವರು ಸಿಬಿಐನಲ್ಲಿ ಕೆಲಸ ಮಾಡಿರುವ ಬಗ್ಗೆಯೂ ದಾಖಲೆಗಳು ಸಿಗ್ತಾ ಇಲ್ಲ.
ಒಟ್ಟಿನಲ್ಲಿ ಅಸ್ಥಿತ್ವದಲ್ಲಿ ಇಲ್ಲದೇ ಇರುವ ಅನನ್ಯಾ ಭಟ್ ಎಂಬ ಯುವತಿಯನ್ನು ಯಾರೋ ಅತ್ಯಾಚಾರ ಮಾಡಿ ಕೊಂದು ಹಾಕಿದ್ದಾರೆ ಎಂಬ ಧರ್ಮಸ್ಥಳ ವಿರೋಧಿಗಳ ಗೇಮ್, ದೊಡ್ಡ ಟರ್ನಿಂಗ್ ಪಡೀತಾ ಇದೆ. ಇಲ್ಲದ ಯುವತಿ, ಕಿಡ್ನಾಪ್ ಆಗಿದ್ದು ಹೇಗೆ..? ಎಲ್ಲಿ..? ಪೊಲೀಸರ ಕಿವಿಗೆ ಲಾಲ್ ಬಾಗ್ ಇಟ್ರಾ..? ಇದು ಈಗ ಮೂಡ್ತಿರೋ ಅನುಮಾನ.
ಸುಜಾತಾ ಭಟ್ ಅವರು ಈ ವರದಿ ಪ್ರಸಾರ ಆದ ಬಳಿಕ ವಿಡಿಯೋ ಮಾಡಿದ್ದಾರೆ. ನಾನು ನಾಪತ್ತೆ ಆಗಿಲ್ಲ. ಎಲ್ಲಿರಬೇಕೋ ಅಲ್ಲಿದ್ದೇನೆ. ಸುವರ್ಣ ನ್ಯೂಸ್ ಸುಳ್ ಸುದ್ದಿ ಮಾಡ್ತಿದೆ ಅಂತೆಲ್ಲ ಹೇಳಿದ್ಧಾರೆ. ಆದರೆ.. ಸುವರ್ಣ ನ್ಯೂಸ್ ಹೇಳಿರೋ ಒಂದು ಮಾಹಿತಿಗೂ ಕೂಡಾ.. ಇದು ಸರಿ.. ಇದು ತಪ್ಪು ಎಂಬ ಯಾವ ಉತ್ತರವನ್ನೂ ಕೊಟ್ಟಿಲ್ಲ.



