ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಮೈತ್ರಿಯಾಗಿದೆ. ಆದರೆ, ಹೋರಾಟ ಪ್ರತ್ಯೇಕವಾಗಿವೆ. ಈ ಸಮಯದಲ್ಲಿಯೇ ಇದ್ದಕ್ಕಿದ್ದಂತೆ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರೆಯುತ್ತಾ.. ಬ್ರೇಕ್ ಬೀಳುತ್ತಾ ಅನ್ನೋ ವಿಚಾರ ಚರ್ಚೆಯಾಗುತ್ತಿದೆ. ಅದಕ್ಕೆ ಕಾರಣವೂ ಇದೆ. ಸ್ಥಳೀಯ ಸಂಸ್ಥೆ ಚುನಾವಣೆಗಳು ಹತ್ತಿರದಲ್ಲಿವೆ. ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆ ಮುಗಿಯುತ್ತಿದ್ದಂತೆ, ಬಿಬಿಎಂಪಿ ಎಲೆಕ್ಷನ್ ಕೂಡಾ ಇದೆ. ಅದೂ ಈ ಬಾರಿ ಗ್ರೇಟರ್ ಬೆಂಗಳೂರು ಎಲೆಕ್ಷನ್ ನಡೆಯಲಿದೆ. ಹೀಗಿರುವಾಗಲೇ.. ಮೈತ್ರಿ ಬಿರುಕು ಮೂಡಿರುವುದು ಏಕೆ..?
ನೇರವಾಗಿ ಹೇಳಬೇಕೆಂದರೆ ಬಿಜೆಪಿ ಪಕ್ಷದಲ್ಲಿರುವ ಒಕ್ಕಲಿಗ ಸಮುದಾಯದ ನಾಯಕರಾದ ಅಶ್ವತ್ಥ ನಾರಾಯಣ, ಸಿಟಿ ರವಿ , ಆರ್ ಅಶೋಕ್ ಸೇರಿದಂತೆ ಇತರರಿಗೆ ಮೈತ್ರಿಯ ಬಗ್ಗೆ ಒಪ್ಪಿಗೆ ಇಲ್ಲ. ಮೈತ್ರಿಯ ಅಗತ್ಯ ಏನಿದೆ ಎಂಬ ಬಗ್ಗೆ ಆಂತರಿಕವಾಗಿ ಈ ನಾಯಕರು ಪ್ರಶ್ನಿಸಿದ್ದರು. ಹಾಸನದ ಪ್ರೀತಮ್ ಗೌಡ ಅವರಂತೂ ಮೈತ್ರಿಗೆ ಸುತಾರಾಂ ಒಪ್ಪಿಲ್ಲ. ಅತ್ತ ಜೆಡಿಎಸ್ ನಾಯಕರಲ್ಲಿಯೂ ಮೈತ್ರಿ ಬಗ್ಗೆ ತೃಪ್ತಿ ಇಲ್ಲ. ಕುಂದಕೂರ, ಕರೆಮ್ಮ ಮೊದಲಾದವರು ಪಕ್ಷದಿಂದಲೇ ಅಂತರ ಕಾಯ್ದುಕೊಂಡಿದ್ದಾರೆ. ಆದರೆ, ಇದೆಲ್ಲವೂ ಆರಂಭದಲ್ಲೇ ಆಗಿತ್ತು. ಆದರೆ ಈಗ ಮೈತ್ರಿ ಅಪಸ್ವರಕ್ಕೆ ಕೇಳಿ ಬರುತ್ತಿರುವ ಕಾರಣ ಎಂದರೆ.. ಮೈತ್ರಿಯಾದರೆ ಬಿಜೆಪಿ, ಅರ್ಧಕ್ಕರ್ಧ ರಾಜ್ಯವನ್ನೇ ಬಿಟ್ಟುಕೊಡಬೇಕಾಗಬಹುದು ಎನ್ನವುದು.
ಅಂದರೆ ಮೈಸೂರು ಭಾಗದಲ್ಲಿ ಬಿಜೆಪಿ ಬಲ ಹೆಚ್ಚುತ್ತಿದೆ. ಬಿಜೆಪಿ, ತನ್ನ ಶಕ್ತಿ ಹೆಚ್ಚಿಸಿಕೊಂಡು ಜೆಡಿಎಸ್ ಗೆಲ್ಲಿಸಬೇಕೇ ಎನ್ನವುದು ಬಿಜೆಪಿ ನಾಯಕರ ಪ್ರಶ್ನೆ. ಅಷ್ಟೇ ಅಲ್ಲ, ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ಗೆ ಶಕ್ತಿಯೂ ಇಲ್ಲ. ಅಲ್ಲಿ ಏಕಾಂಗಿಯಾಗಿಯೇ ಹೋರಾಡಬೇಕು. ಅಂದರೆ ಮೈತ್ರಿಯಿಂದ ಜೆಡಿಎಸ್‌ಗೆ ಲಾಭವೇ ಹೊರತು, ಬಿಜೆಪಿಗೆ ಅಲ್ಲ ಎನ್ನುವುದು ಬಿಜೆಪಿ ನಾಯಕರ ವಾದ.
ಅಲ್ಲದೆ ಇತ್ತೀಚೆಗೆ ಕೇಂದ್ರದಲ್ಲಿ ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ದಿನೇ ದಿನೇ ಹತ್ತಿರವಾಗುತ್ತಿದ್ದಾರೆ ಇದೂ ಕೂಡಾ ರಾಜ್ಯ ಬಿಜೆಪಿ ನಾಯಕರ ಕಣ್ಣು ಕೆಂಪಗಾಗಿಸಿದೆ. ಹೀಗೇ ಮುಂದುವರೆದರೆ ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಕಾಲಲ್ಲಿ ಇಟ್ಟಂತಾಗುತ್ತದೆ ಎನ್ನವುದು ಬಿಜೆಪಿ ನಾಯಕರ ವಾದ.
ಆದರೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳುವುದೇ ಬೇರೆ. ರಾಷ್ಟ್ರೀಯ ನಾಯಕರ ಅಪೇಕ್ಷೆಯಂತೆ ರಾಜ್ಯದಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಮುಂದುವರಿಯುತ್ತದೆ ಎಂದಿದ್ದಾರೆ. ಸ್ಥಳೀಯ ಹಾಗೂ ಗ್ರಾಮ ಮಟ್ಟದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಒಗ್ಗಟ್ಟು ಇಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬಿಜೆಪಿ ರಾಷ್ಟ್ರೀಯ ನಾಯಕರು, ಅಧ್ಯಕ್ಷರ ತೀರ್ಮಾನದಂತೆ ಮುಂದೆ ಯಾವ ರೀತಿ ಹೋಗಬೇಕು ಅದರಂತೆ ನಡೆಯುತ್ತೇವೆ ಎಂದರು.
ಇದೇ ವೇಳೆ ಪಕ್ಷವನ್ನು ಬಿಟ್ಟು ಹೋಗುವವರೆಲ್ಲ ಹೋಗಲಿ, ಚಿಂತೆ ಇಲ್ಲ. ಈಗ 62 ಆಗಿದೆ. ಯಾರ್ಯಾರು ಬೇಕು ಎಲ್ಲರನ್ನು ಕಾಂಗ್ರೆಸ್‌ನವರು ಕರೆದುಕೊಂಡು ಹೋಗಲಿ. ಇನ್ನೂ ಕಡಿಮೆಯಾದರೂ ಯಾವುದೇ ಬೇಸರವಿಲ್ಲ. ವಿಧಾನಸಭಾ ಚುನಾವಣೆ ಇನ್ನೂ ಮೂರು ವರ್ಷವಿದೆ. ನಮ್ಮ ಗುರಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಬೇಕು. . ಮಂಡ್ಯ ಜಿಲ್ಲೆಯಲ್ಲಿಯೂ 3 ರಿಂದ 4 ಸ್ಥಾನ ಗೆಲ್ಲಬೇಕು ಎಂದಿದ್ದಾರೆ.
ಮಂಡ್ಯದಲ್ಲಿ ಬಿಜೆಪಿ 3 ಸ್ಥಾನ ಗೆಲ್ಲುವುದು ಎಂದಾದರೆ, ಅದರ ಅರ್ಥ, ಮೈಸೂರು ಕರ್ನಾಟಕ ಭಾಗದಲ್ಲಿಯೂ ದೊಡ್ಡ ಮಟ್ಟದಲ್ಲಿ ಕ್ಷೇತ್ರಗಳಿಗೆ ಡಿಮ್ಯಾಂಡ್ ಇಡುತ್ತದೆ ಎನ್ನುವುದೇ. ಅದಕ್ಕೆ ಜೆಡಿಎಸ್ ಒಪ್ಪಿಕೊಳ್ಳುತ್ತಾ.. ಸಮಯ ಉತ್ತರ ನೀಡಲಿದೆ.



