ಇತ್ತೀಚೆಗೆ ಸಂತೋಷ್ ಎಂಬ ಆರ್ಕಿಟೆಕ್ಟ್ ಮನೆ ಮೇಲೆ ಐಟಿ ರೇಡ್ ಆಗಿತ್ತು. ಆ ವೇಳೆ ಸಂತೋಷ್ ಮನೆಯಲ್ಲಿ 45 ಕೋಟಿ ಕ್ಯಾಷ್ ಸಿಕ್ಕಿತ್ತು. ಈ ಹಣ ಯತೀಂದ್ರ ಸಿದ್ದರಾಮಯ್ಯ ಅವರ ಕಲೆಕ್ಷನ್ ಮಾಡಿದ್ದ ಹಣ ಎಂದು ಪರೋಕ್ಷವಾಗಿ ಆರೋಪಿಸಿದ್ದಾರೆ ಹೆಚ್.ಡಿ.ಕುಮಾರಸ್ವಾಮಿ.
ಈ ಹಿಂದೆ ಸಂತೋಷ್ ಎಂಬುವವರ ಮನೆ ಮೇಲೆ ರೇಡ್ ಆದಾಗ ಸಿಕ್ಕಿದ್ದ 45 ಕೋಟಿ ಹಣ ಯತೀಂದ್ರ ಸಿದ್ದರಾಮಯ್ಯ ಅವರ ಕಲೆಕ್ಷನ್ ಹಣ ತಾನೇ. ಅದು ಅವನು ಸಂಪಾದನೆ ಮಾಡಿದ್ದ ಹಣವಾ.. ನಿಮ್ಮ ಮಗನ ಕಲೆಕ್ಷನ್ ತಾನೇ.. ಎಂದು ನೇರವಾಗಿ ಪ್ರಶ್ನಿಸಿದ್ದಾರೆ ಕುಮಾರಸ್ವಾಮಿ.
ಸಿದ್ದರಾಮಯ್ಯ ತಮ್ಮ ಕೈಯಾರೆ ಹಣ ಮುಟ್ಟಲ್ಲ. ಅದಕ್ಕೆಂದೇ ಅವರ ಮಗನನ್ನು ಬಿಟ್ಟಿದ್ದಾರೆ ಎಂದು ಕಟುಕಿರುವ ಕುಮಾರಸ್ವಾಮಿ, ಅವರ ಕಚೇರಿಯೊಳಗೆ ಅಧಿಕಾರಿಗಳನ್ನು ಬಿಟ್ಟಿರುವುದಾದರೂ ಏತಕ್ಕೆ ಎಂದು ಪ್ರಶ್ನೆ ಮಾಡಿದ್ಧಾರೆ. ಸಿದ್ದರಾಮಯ್ಯನವರೇ.. ನೀವು ಹಣ ಮುಟ್ಟಲ್ಲ ನಿಜ. ಅದಕ್ಕೆಂದೆ ನಿಮ್ಮ ಹಿಂದೆ ಮುಂದೆ ಇರುವವರನ್ನು ಬಿಟ್ಟಿದ್ದೀರಾ ಎಂದಿದ್ದಾರೆ ಕುಮಾರಸ್ವಾಮಿ.
ಇದಕ್ಕೆಲ್ಲ ಉತ್ತರ ನೀಡಿರುವ ಸಿದ್ದರಾಮಯ್ಯ ವಿದ್ಯುತ್ ಕಳ್ಳತನ ಮಾಡಿ, ದಂಡ ಬೇರೆ ಕಟ್ಟಿದ್ದಾರೆ. ಅವರಿಗೆ ನೈತಿಕತೆ ಇದೆಯಾ? ನನ್ನ ಬಗ್ಗೆ ಮಾತನಾಡಲು ಅವರ ಬಳಿ ಸಾಕ್ಷಿ ಇದೆಯಾ? ಯತೀಂದ್ರ ಫೋನ್‌ನಲ್ಲಿ ದುಡ್ಡಿನ ವ್ಯವಹಾರ ಮಾತನಾಡಿದ್ದಾರಾ.. ಯತೀಂದ್ರ ಸಿಎಸ್‌ಆರ್ ಫಂಡ್ ಬಗ್ಗೆ ಮಾತನಾಡಿದ್ದಾರೆ. ಕುಮಾರಸ್ವಾಮಿ ತಮ್ಮ ಕಾಲದಲ್ಲಿ ದುಡ್ಡು ಮಾಡಿರುವುದು ಜಗತ್ತಿಗೇ ಗೊತ್ತಿದೆ ಎಂದು ತಿರುಗೇಟು ಕೊಟ್ಟಿದ್ದಾರೆ.
ಕುಮಾರಸ್ವಾಮಿ ಕೊಟ್ಟ ಸಾಕ್ಷಿ :
ಯತೀಂದ್ರ ಮಾತನಾಡಿದ್ದು, ಸಿಎಂ ಅವರ ವರುಣಾ ಕ್ಷೇತ್ರದಲ್ಲಿ ಐದು ಸರ್ಕಾರಿ ಶಾಲೆಗಳ ಅಭಿವೃದ್ಧಿಯ ಬಗ್ಗೆ ಮಾತನಾಡಿದ್ದರೆಂದು ಹೇಳಿದ್ದರು. ಅದಕ್ಕೆ ಪೂರಕ ದಾಖಲೆಯನ್ನೂ ಸಿಎಂ ಬಿಡುಗಡೆ ಮಾಡಿದ್ದರು. ಆದರೆ, ಅದು ಸುಳ್ಳು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕೆಲವಾರು ದಾಖಲೆಗಳನ್ನು ಎಕ್ಸ್ ನಲ್ಲಿ ಅಪ್ಲೋಡ್ ಮಾಡಿ, ಕೆಲವಾರು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಮುಖ್ಯಮಂತ್ರಿಗಳ ಕಚೇರಿಯ ಅಧಿಕಾರಿಗಳ ಕೆಲಸಗಳನ್ನು ಹಂಚಿಕೆ ಮಾಡಿ ಈ ಹಿಂದೆ ಹೊರಡಿಸಲಾಗಿರುವ ಆದೇಶ ಪ್ರತಿಯನ್ನು ಎಕ್ಸ್ ನಲ್ಲಿ (ಟ್ವಿಟರ್ ನಲ್ಲಿ) ಲಗತ್ತಿಸಿರುವ ಎಚ್ ಡಿ ಕುಮಾರಸ್ವಾಮಿ, ಆ ಆದೇಶದ ಪ್ರಕಾರ, ಮಹದೇವ್ ಅವರಿಗೆ ಶಿಕ್ಷಣ ಕ್ಷೇತ್ರದ ಮೇಲುಸ್ತುವಾರಿಯನ್ನು ನೀಡಲಾಗಿಲ್ಲ. ಅವರಿಗೆ ನೀಡಲಾಗಿರುವ ಜವಾಬ್ದಾರಿಗಳಲ್ಲಿ ಅಧಿಕಾರಿಗಳ ನಿಯೋಜನೆಯಿದೆ. ಹಾಗಿರುವಾಗ, ಡಾ. ಯತೀಂದ್ರ ಅವರು ಮಹದೇವ್ ಅವರಿಗೆ ಯಾವ ಲಿಸ್ಟ್ ಅನ್ನು ಸಿಎಂಗೆ ಕೊಡಲು ಹೇಳಿದ್ದರು? ಅದು ವರ್ಗಾವಣೆಗೆ ಸಂಬಂಧಿಸಿದ ಲಿಸ್ಟ್ ಅಲ್ಲದಿದ್ದರೆ ಮತ್ತೇನು? ಎಂದು ಅವರು ಪ್ರಶ್ನಿಸಿದ್ದಾರೆ.





