ಶಿವಣ್ಣ ಅಭಿನಯದ ಉತ್ತರಕಾಂಡ ಚಿತ್ರ ನಿಂತೇ ಹೋಯ್ತಂತೆ. ಚಿತ್ರ ಈಗ ಎಷ್ಟು ಶೂಟಿಂಗ್ ಆಗಿದ್ಯೋ.. ಅಷ್ಟೇ. ಮತ್ತೆ ಶೂಟಿಂಗ್ ಮಾಡೋದಿಲ್ವಂತೆ. ಚಿತ್ರ ಅರ್ಧಕ್ಕೇ ನಿಂತ ಚಿತ್ರ. ಇಂತಾದ್ದೊಂದು ಸುದ್ದಿ ಕಳೆದ ಕೆಲವು ದಿನಗಳಿಂದ ಓಡಾಡುತ್ತಲೇ ಇದೆ. ಅದಕ್ಕೆ ತಕ್ಕಂತೆ ಉತ್ತರಕಾಂಡ ಚಿತ್ರದ ಚಿತ್ರೀಕರಣದ ಅಪ್‌ಡೇಟ್ ಕೂಡಾ ಇಲ್ಲ. ಒಂದಷ್ಟು ದಿನ ಚಿತ್ರತಂಡಕ್ಕೆ ಶಿವಣ್ಣ ಎಂಟ್ರಿ ಕೊಟ್ಟಿದ್ದು, ಡಾಲಿ ಧನಂಜಯ್, ಐಶ್ವರ್ಯಾ ರಾಜೇಶ್, ಭಾವನಾ, ದಿಗಂತ್, ಚೈತ್ರಾ ಬಿ ಆಚಾರ್, ಯೋಗರಾಜ್ ಭಟ್, ರಂಗಾಯಣ ರಘು, ಉಮಾಶ್ರೀ, ವಿಜಯ್ ಬಾಬು, ಗೋಪಾಲ ಕೃಷ್ಣ ದೇಶಪಾಂಡೆ.. ಹೀಗೆ ಘಟಾನುಘಟಿಗಳೇ ತಂಡದಲ್ಲಿದ್ದರು. ಒಬ್ಬೊಬ್ಬರ ಎಂಟ್ರಿಯನ್ನೂ ವಿಶೇಷವಾಗಿ ಘೋಷಿಸಿದ್ದ ಚಿತ್ರತಂಡ ಇದ್ದಕ್ಕಿದ್ದಂತೆ ಸೈಲೆಂಟ್ ಆಗಿತ್ತು. ಬಹುಶಃ ಉತ್ತರಕಾಂಡ ಸೈಡಿಗೆ ಹೋಗಿದೆ ಎಂಬ ಸುದ್ದಿ ಇದೇ ಕಾರಣಕ್ಕಾಗಿ ಹಬ್ಬಿತ್ತು.
ಅದರ ಜೊತೆಗೆ ಉತ್ತರಕಾಂಡ ಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶಕ ರೋಹಿತ್ ಪದಕಿ ಯಾವಾಗ ಯುವರಾಜ್ ಕುಮಾರ್ ಸಿನಿಮಾ ಘೋಷಿಸಿದರೋ, ಆಗ ಉತ್ತರಕಾಂಡ ಸ್ಥಗಿತಗೊಂಡಿದೆ ಎಂಬ ಸುದ್ದಿಗೆ ಇನ್ನಷ್ಟು ರೆಕ್ಕೆ ಪುಕ್ಕ ಬಂತು.
ಇದೀಗ ಆ ಎಲ್ಲ ಸುದ್ದಿಗಳಿಗೆ ನಿರ್ಮಾಪಕರಲ್ಲಿ ಒಬ್ಬರಾದ ಕಾರ್ತಿಕ್ ಗೌಡ ಬ್ರೇಕ್ ಹಾಕಿದ್ದಾರೆ.
“ನಾನು ಈಗಾಗಲೇ ಹೇಳಿದಂತೆ ಈ ಸಿನಿಮಾದ ಶೂಟಿಂಗ್ ಹಲವು ಶೆಡ್ಯೂಲ್‌ಗಳಲ್ಲಿ ನಡೆಯಬೇಕಿದೆ. ಒಮ್ಮೆ ಅಣ್ಣ (ಶಿವರಾಜ್‌ಕುಮಾರ್) ಬಂದ ಕೂಡಲೇ ನಾವು ಮತ್ತೆ ಶೂಟಿಂಗ್ ಆರಂಭಿಸುತ್ತೇವೆ. ನಾವು ಈಗಾಗಲೇ ಶೇ.30ರಷ್ಟು ಶೂಟಿಂಗ್ ಅನ್ನು ಮುಗಿಸಿದ್ದೇವೆ. ಚಿತ್ರದ ಚಿತ್ರೀಕರಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ, ಅಷ್ಟೇ. ಈಗಾಗಲೇ ಹಲವು ಬಾರಿ ಸ್ಪಷ್ಟಪಡಿಸಿದ್ದೇನೆ. ಉತ್ತರಕಾಂಡ ನಿಂತಿಲ್ಲ. ಒಮ್ಮೆ ಶಿವಣ್ಣ ಸೆಟ್ಟಿಗೆ ಬರುವುದಕ್ಕೆ ಆರಂಭಿಸಿದರೆ, ಮತ್ತೆ ಚಿತ್ರೀಕರಣಕ್ಕೆ ಎಲ್ಲ ಹೊಂದಾಣಿಕೆಯೂ ಆಗುತ್ತದೆ ಎಂದಿದ್ದಾರೆ ಕಾರ್ತಿಕ್ ಗೌಡ.
ಇತ್ತ ಶಿವಣ್ಣ ಕೂಡಾ ಭೈರತಿ ರಣಗಲ್ ಮುಗಿಸಿ, ಅಮೆರಿಕಕ್ಕೆ ಹೋಗಿ ಬಂದ ಮೇಲೆ ಇನ್ನಷ್ಟು ಚಿತ್ರಗಳನ್ನು ಒಪ್ಪಿಕೊಳ್ಳೋ ಚಾನ್ಸ್ ಇದೆ. ಈಗ ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾದಲ್ಲೂ ನಟಿಸುವುದಕ್ಕೆ ಸೈ ಎಂದಿದ್ದಾರೆ. ಇತ್ತೀಚೆಗಷ್ಟೇ ಬೇರೆ ಬೇರೆ ಭಾಷೆಗಳಲ್ಲೂ ಆಕ್ಟಿವ್ ಆಗಿರುವ ಶಿವಣ್ಣ, ಪುಟ್ಟ ಪುಟ್ಟ ಪಾತ್ರಗಳಲ್ಲೇ ಥ್ರಿಲ್ ಕೊಡುತ್ತಿದ್ದಾರೆ.
‘ದಳಪತಿ 69’ ಚಿತ್ರತಂಡವು ಒಂದೊಳ್ಳೆಯ ಪಾತ್ರ ಮಾಡಲು ನನ್ನನ್ನು ಅಪ್ರೋಚ್ ಮಾಡಿದ್ದು ನಿಜ. ಆ ಪಾತ್ರದ ಬಗ್ಗೆ ಕೇಳಿದಾಗ ಇಂಟರೆಸ್ಟಿಂಗ್ ಎಂದೆನಿಸಿತು. ಆದರೆ ಡೇಟ್ಸ್ ಅದೆಷ್ಟರ ಮಟ್ಟಿಗೆ ಹೊಂದಾಣಿಕೆ ಆಗಲಿದೆ ಎಂಬುದು ನನಗೆ ಗೊತ್ತಿಲ್ಲ. ಡೇಟ್ಸ್ ಪ್ಲಾನ್ ಮಾಡಿಕೊಳ್ತೇನೆ ಎಂದು ಹೇಳಿದ್ದಾರೆ ಶಿವಣ್ಣ.
ಇತ್ತ ಭೈರತಿ ರಣಗಲ್ ಇದೇ ವಾರ ರಿಲೀಸ್ ಆಗ್ತಿದೆ. ಗೀತಾ ಪಿಕ್ಚರ್ಸ್ ನಿರ್ಮಾಣದ ೨ನೇ ಸಿನಿಮಾ ಇದು. ಈ ಸಿನಿಮಾ ಪ್ರಚಾರದ ವೇಳೆ ಸಂದರ್ಶನಗಳಲ್ಲಿ ವಿಜಯ್ ಜೊತೆ ನಟಿಸುತ್ತಿರುವ ವಿಷಯವನ್ನೂ ಹಂಚಿಕೊಂಡಿದ್ದಾರೆ ಶಿವಣ್ಣ. ಆದರೆ ಎಲ್ಲವೂ ನಿರ್ಧಾರವಾಗುವುದು ಅಮೆರಿಕಕ್ಕೆ ಹೋಗಿ, ಆಪರೇಷನ್ ಮಾಡಿಸಿಕೊಂಡು ವಾಪಸ್ ಬಂದು, ರಿಕವರಿ ಆದ ಮೇಲೆಯೇ.



