ರಾಜ್ಯದಲ್ಲಿ ಖಾಲಿಯಾದ ಮೂರು ವಿಧಾನಸಭಾ ಕ್ಷೇತ್ರಗಳ ಪೈಕಿ ಅತ್ಯಂತ ಕುತೂಹಲ ಹಾಗೂ ಭಾರಿ ಪೈಪೋಟಿಗೆ ಸಜ್ಜಾಗಿ ನಿಂತಿರುವ ಚನ್ನಪಟ್ಟಣದ ವಿಧಾನಸಭಾ ಕ್ಷೇತ್ರದ ಖದರೇ ಬೇರೆ. ಏಕೆಂದರೆ ಇದು ಕುಮಾರಸ್ವಾಮಿ ಪ್ರತಿನಿಧಿಸಿದ್ದ ಕ್ಷೇತ್ರ. ಅವರೀಗ ಸೆಂಟ್ರಲ್ ಮಿನಿಸ್ಟರ್. ಇನ್ನು ಕ್ಷೇತ್ರ ಬರುವುದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜಿಲ್ಲೆಯಲ್ಲಿ. ಹೀಗಾಗಿ ಎಲ್ಲರಿಗೂ ಕ್ಷೇತ್ರದ ಅಭ್ಯರ್ಥಿ ಯಾರು ಅನ್ನೋ ಕುತೂಹಲವಂತೂ ಇದೆ. ಇದರ ನಡುವೆ ದಿಢೀರ್ ಎಂದು ಒಂದು ಸೆನ್ಸೇಷನ್ ಸೃಷ್ಟಿಯಾಗಿದೆ.
ಚನ್ನಪಟ್ಟಣದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ನಾಯಕ ಸಿ.ಪಿ. ಯೋಗೇಶ್ವರ್ ಅವರು ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಜೆಡಿಎಸ್‌ನಿಂದ ಮಾಜಿ ಸಿಎಂ ಕುಮಾರಸ್ವಾಮಿ ಸ್ಪರ್ಧಿಸಿ ಗೆದ್ದಿದ್ದರು. ಇದೀಗ ಲೋಕಸಭೆಯಲ್ಲಿ ಬಿಜೆಪಿ – ಜೆಡಿಸ್ ಮೈತ್ರಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿ ಸಂಸತ್ತಿಗೆ ಹೋಗಿದ್ದರಿಂದ ಚನ್ನಪಟ್ಟಣದ ಮೈತ್ರಿ ಟಿಕೆಟ್ ಅನ್ನು ಯಾರಿಗೆ ನೀಡಬೇಕು ಎಂಬ ಕುತೂಹಲ ಉಂಟಾಗಿದೆ.
ಮೈತ್ರಿ ಸೂತ್ರದ ಪ್ರಕಾರ ಜೆಡಿಎಸ್ ಪಕ್ಷದಿಂದ ಗೆದ್ದ ಕ್ಷೇತ್ರವನ್ನು ಜೆಡಿಎಸ್ಸಿಗೆ ಬಿಟ್ಟುಕೊಡಬೇಕು. ಆದರೆ, ಬಿಜೆಪಿ ನಾಯಕ ಸಿ.ಪಿ. ಯೋಗೇಶ್ವರ ಮೈತ್ರಿ ಟಿಕೆಟ್ ತನಗೇ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ನಡುವೆ ಟಿಕೆಟ್ ವಾರ್‌ಗೆ ಪ್ರತಾಪ್ ಸಿಂಹ ಎಂಟ್ರಿ ಆಗಿದೆ. ಇದೀಗ ಮಾಜಿ ಸಂಸದ ಪ್ರತಾಪ್ ಸಿಂಹಗೆ ಉಪ ಚುನಾವನೆ ಮೈತ್ರಿ ಟಿಕೆಟ್ ನೀಡಲು ನಿರ್ಧರಿಸಲಾಗಿದೆ ಎಂಬ ಸುದ್ದಿಗೆ ಬಲ ಬಂದಿದೆ.
ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ-ಜೆಡಿಸ್ ಮೈತ್ರಿ ಸುಳಿವು ಸಿಗುತ್ತಿದ್ದಂತೆಯೇ ಮೈಸೂರು-ಕೊಡಲು ಲೋಕಸಭಾ ಸಂಸದ ಪ್ರತಾಪ್ ಸಿಂಹ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಬಳಿ ಹೋಗಿ ಆಶೀರ್ವಾದ ಪಡೆದುಕೊಂಡು ಬಂದಿದ್ದರು. ಹೆಚ್.ಡಿ.ದೇವೇಗೌಡರು, ಕುಮಾರಸ್ವಾಮಿ, ಶಾಸಕ ಜಿ.ಟಿ. ದೇವೇಗೌಡ ಸೇರಿದಂತೆ ಹಲವು ಜೆಡಿಎಸ್ ನಾಯಕರೊಂದಿಗೆ ಪ್ರತಾಪ್‌ಸಿಂಹ ಉತ್ತಮ ಒಡನಾಟವನ್ನೂ ಹೊಂದಿದ್ದರು. ಆದರೆ, ಲೋಕಸಭಾ ಚುನಾವಣೆಗೆ ಪ್ರತಾಪ್ ಸಿಂಹ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿ ಮೈಸೂರು ಸಂಸ್ಥಾನದ ರಾಜ ಯದುವೀರ್ ಒಡೆಯರ್‌ಗೆ ಟಿಕೆಟ್ ನೀಡಿತ್ತು. ಆದರೂ ಜೆಡಿಎಸ್‌ನೊಂದಿಗೆ ಪ್ರತಾಪ್‌ಸಿಂಹ ಉತ್ತಮ ಒಡನಾಟವನ್ನೇ ಹೊಂದಿದ್ದಾರೆ. ಇದರ ಫಲವೇ ಇದೀಗ ಚನ್ನಪಟ್ಟಣದ ಮೈತ್ರಿ ಟಿಕೆಟ್ ಪ್ರತಾಪ್ ಸಿಂಹ ಪಾಲಾಗುತ್ತಿದೆ ಎಂಬ ಖಚಿತತೆಯನ್ನು ಹೆಚ್ಚು ಮಾಡುತ್ತಿದೆ.
ಚನ್ನಪಟ್ಟಣ ವಿಧಾನಸಭಾ ಚುನಾವಣೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಹೆಸರನ್ನು ಸೂಚಿಸಿದ್ದು ಬೇರಾರೂ ಅಲ್ಲ, ಸ್ವತಃ ಜೆಡಿಎಸ್‌ನ ನಾಯಕರು. ಮಾಜಿ ಸಚಿವ ಸಾ.ರಾ. ಮಹೇಶ್, ಬಂಡೆಪ್ಪ ಕಾಶೆಂಪುರ್ ಸೇರಿದಂತೆ ಹಲವು ನಾಯಕರು ಪ್ರತಾಪ್ ಸಿಂಹ ಅವರಿಗೆ ಜೆಡಿಎಸ್ ಟಿಕೆಟ್ ಕೊಟ್ಟು ಚನ್ನಪಟ್ಟಣದಿಂದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಎಂದು ಹೇಳಿದ್ದಾರಂತೆ.
ಜೆಡಿಎಸ್‌ನಿಂದ ಸ್ಪರ್ಧೆ ಮಾಡಲು ಪ್ರತಾಪ್ ಸಿಂಹ ಒಪ್ಪುತ್ತಿಲ್ಲ. ಆದರೆ, ಚನ್ನಪಟ್ಟಣವನ್ನು ತಾವು ಸೋಲಿಸಿದ್ದ ಸಿ.ಪಿ. ಯೊಗೇಶ್ವರ ಅವರಿಗೇ ಕೊಡಲು ಕೇಂದ್ರ ಸಚಿವ ಕುಮಾರಸ್ವಾಮಿಗೆ ಮನಸ್ಸಿಲ್ಲ. ಮತ್ತೊಂದೆಡೆ ಡಿಕೆ ಶಿವಕುಮಾರ್ ಸವಾಲಾಗಿ ಸ್ವೀಕರಿಸಿರುವ ಕ್ಷೇತ್ರದಲ್ಲಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕಿಳಿಸಿ ಪ್ರತಿಷ್ಠೆ ಯುದ್ಧ ಮಾಡುವುದಕ್ಕೂ ಇಷ್ಟವಿಲ್ಲ ಅಥವಾ ಧೈರ್ಯ ಸಾಲುತ್ತಿಲ್ಲ.
ಹೀಗಾಗಿ ಒಕ್ಕಲಿಗ ನಾಯಕನಾಗಿ ಬೆಳೆಯುತ್ತಿರುವ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೊಟ್ಟರೆ ಹೇಗೆ ಎಂಬ ಪ್ರಶ್ನೆ ಮೂಡಿದೆ. ಮೈಸೂರು ಲೋಕಸಭಾ ಟಿಕೆಟ್ ಅನ್ನು ಬಿಜೆಪಿ ನಿರಾಕರಿಸಿದ್ದಕ್ಕೆ, ಒಕ್ಕಲಿಗರಿಗೆ ಸಿಂಪತಿಯಿದೆ ಎಂಬ ಆಲೋಚನೆಗಳೂ ಇವೆ. ಆದ್ದರಿಂದ ಇದೀಗ ಪ್ರತಾಪ್ ಸಿಂಹ ಅವರನ್ನು ಕಣಕ್ಕಿಳಿಸಬೇಕೇ? ಎಂಬ ಆಲೋಚನೆಯೂ ಕುಮಾರಸ್ವಾಮಿ ಮನಸ್ಸಿನಲ್ಲಿ ಓಡುತ್ತಿದೆ ಎನ್ನಲಾಗಿದೆ.
ಹಾಲಿ ವಿಧಾನ ಪರಿಷತ್ ಸದಸ್ಯರೂ ಆಗಿರುವ ಸಿ.ಪಿ. ಚನ್ನಪಟ್ಟಣ ಉಪ ಚುನಾವಣೆಗೆ ಮೈತ್ರಿ ಟಿಕೆಟ್ ತನಗೇ ಬೇಕೆಂದು ಪಟ್ಟು ಹಿಡಿದಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಭೇಟಿ ಮಾಡಲು ಮೂರ್ನಾಲ್ಕು ಬಾರಿ ದೆಹಲಿಗೂ ಹೋಗಿ ಬಂದಿದ್ದಾರೆ. ಅಲ್ಲಿ ಜೆ.ಪಿ. ನಡ್ಡಾ, ರಾಜನಾಥ ಸಿಂಗ್, ಅಮಿತ್ ಶಾ ಸೇರಿದಂತೆ ರಾಜ್ಯದ ಹಲವು ಹಿರಿಯ ನಾಯಕರನ್ನು ಭೇಟಿ ಮಾಡಿ ಚರ್ಚಿಸಿ ಟಿಕೆಟ್‌ಗಾಗಿ ಲಾಬಿ ಮಾಡಿದ್ದಾರೆ.



