ಪ್ರಧಾನಿ ಮೋದಿಯವರ ಜಾತಿ ಯಾವುದು? ಈ ಪ್ರಶ್ನೆಯನ್ನ ಹಲವರು ಕೇಳಿಕೊಂಡು ಬರುತ್ತಲೇ ಇದ್ಧಾರೆ. ಮೋದಿ ಗಾಣಿಗ ಮಾದರಿಯಲ್ಲಿರುವ ಗುಜರಾತಿನ ಘಾಂಚಿ ಸಮುದಾಯಕ್ಕೆ ಸೇರಿದ ನಾಯಕ. ಅದು ಒಬಿಸಿ ಪಟ್ಟಿಯಲ್ಲಿದೆ. ಹಿಂದುಳಿದ ವರ್ಗಕ್ಕೆ ಸೇರಿದವರು ನರೇಂದ್ರ ದಾಮೋದರದಾಸ್ ಮೋದಿ. ಆದರೆ.. ಅದು ಸುಳ್ಳು ಅನ್ನೋದು ರಾಹುಲ್ ಗಾಂಧಿ ವಾದ.
ಪ್ರಧಾನಿ ಮೋದಿ ಒಬಿಸಿ ಎಂದು ಸುಳ್ಳು ಹೇಳಿದ್ದಾರೆ. ಮೋದಿ ಗುಜರಾತ್ ಮುಖ್ಯಮಂತ್ರಿಯಾದ ಬಳಿಕ ಮೋದಿ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸಿ ಇದೀಗ ಒಬಿಸಿ ನಾಯಕ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಅಸಲಿಗೆ ಮೋದಿ ಒಬಿಸಿ ಅಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಒಡಿಶಾದ ಜಾರ್ಸುಗುಡದಲ್ಲಿ ನಡೆಯುತ್ತಿದ್ದ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ , ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಹಸಿ ಹಸಿ ಸುಳ್ಳು ಹೇಳಿ ಜಾತಿ ಮರೆ ಮಾಚಿದ್ದಾರೆ ಎಂದಿದ್ದಾರೆ. ಮೋದಿ ಗುಜರಾತ್‌ನಲ್ಲಿರುವ ತೆಲಿ ಜಾತಿಯಲ್ಲಿ ಹುಟ್ಟಿದ್ದಾರೆ. ಅವರು ಒಬಿಸಿ ಜಾತಿಯಲ್ಲಿ ಹುಟ್ಟಿಲ್ಲ. 2000ನೇ ಇಸವಿಯಲ್ಲಿ ಗುಜರಾತ್‌ನ ಬಿಜೆಪಿ ಸರ್ಕಾರ ತೆಲಿ ಸಮುದಾಯಕ್ಕೆ ಒಬಿಸಿ ಜಾತಿ ಪ್ರಮಾಣ ಪತ್ರ ನೀಡಿತು. ಹೀಗಾಗಿ ಖುದ್ದು ಮೋದಿಯೇ ತಮಗೆ ಒಬಿಸಿ ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಎನ್ನುವುದು ರಾಹುಲ್ ಗಾಂಧಿ ವಾದ.
ಘಾಂಚಿ ಸಮುದಾಯಕ್ಕೆ ಒಬಿಸಿ ಸ್ಟೇಟಸ್ ಕೊಟ್ಟಿದ್ದೇ ಕಾಂಗ್ರೆಸ್ : ವಾಸ್ತವ ಏನು?
1999ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಘಾಂಚಿ ಸೇರಿದಂತೆ ಹಲವು ಜಾತಿಗಳನ್ನು ಒಬಿಸಿ ಪಟ್ಟಿಗೆ ಸೇರಿಸಲು ಅಧಿಸೂಚನೆ ಹೊರಡಿಸಿತ್ತು. ಮೋಧ್ ಘನಚಿ ಸೇರಿದಂತೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಗಳಿಗೆ 105 ಜಾತಿಗಳನ್ನು ಒಬಿಸಿ ಪಟ್ಟಿಗೆ ಸೇರಿಸಲು ಕಾಂಗ್ರೆಸ್ ಸರ್ಕಾರ 1999ರ, ಅಕ್ಟೋಬರ್ 27ರಂದು ಅಧಿಸೂಚನೆ ಹೊರಡಿಸಿತ್ತು.೧೯೯೪ರಲ್ಲಿ ಆದ ಶಿಫಾರಸು ಜಾರಿಯಾಗಿದ್ದು 1999ರಲ್ಲಿ. ಆಗ ಪ್ರಧಾನಿ ಮೋದಿ ಸಿಎಂ ಕೂಡಾ ಆಗಿರಲಿಲ್ಲ. ಬಿಜೆಪಿಯ ಸಾಮಾನ್ಯ ಕಾರ್ಯಕರ್ತ ಅಷ್ಟೆ.
ರಾಹುಲ್ ಗಾಂಧಿ ಹಿಂಗ್ಯಾಕೆ?
ರಾಹುಲ್ ಗಾಂಧಿ ಇಂತಹ ಎಡವಟ್ಟು ಹೇಳಿಕೆಗಳನ್ನು ಕೊಡುತ್ತಿರುವುದು ಇದೇ ಮೊದಲೇನಲ್ಲ. ಆದರೆ.. ಪ್ರತಿಬಾರಿಯೂ ಇಂತಹ ಎಡವಟ್ಟುಗಳನ್ನು ಸತ್ಯಸ್ಯ ಸತ್ಯ ಎಂಬಂತೆ ಹೇಳಿಬಿಡ್ತಾರೆ. ಕೋರ್ಟಿನ ಮೆಟ್ಟಿಲೇರಿ ಛೀಮಾರಿ ಹಾಕಿಸಿಕೊಂಡಿದ್ದರೂ.. ಸಂಸತ್ ಸದಸ್ಯ ಪಟ್ಟಕ್ಕೇ ಕುತ್ತು ಬಂದು ಹೋಗಿದ್ದರೂ.. ರಾಹುಲ್ ಗಾಂಧಿ ಎಡವಟ್ಟುಗಳನ್ನು ನಿಲ್ಲಿಸಿಲ್ಲ. ಇಂತಹ ಎಡವಟ್ ಹೇಳಿಕೆಗಳಿಂದಾಗಿಯೇ ಎಂಪಿ ಸ್ಥಾನದ ಮೇಲೆ ತೂಗುತ್ತಿರುವ ಕತ್ತಿ ಇನ್ನೂ ನಿಂತಿಲ್ಲ.
ಹಾಗೆ ನೋಡಿದರೆ ಕಾಂಗ್ರೆಸ್ ಕಷ್ಟಪಟ್ಟು ಗಳಿಸಿದ ಜನಬೆಂಬಲವನ್ನು ಒಂದೇ ಒಂದು ಮಾತಿನಲ್ಲಿ ತೆಗೆದು ಹಾಕೋವಷ್ಟು ಬುದ್ದಿವಂತ ರಾಹುಲ್ ಗಾಂಧಿ. ವಯಸ್ಸು ೫೦ ದಾಟಿದ್ದರೂ.. ಇಂತಹ ಎಡವಟ್ಟು ಹೇಳಿಕೆ ಕೊಡೋದ್ರಲ್ಲೇನೂ ಕಡಿಮೆ ಇಲ್ಲ.
ಇದೇ ವೇದಿಕೆಯಲ್ಲಿ ರಾಹುಲ್ ಗಾಂಧಿ ಅದಾನಿ ಬಗ್ಗೆಯೂ ಮಾತನಾಡಿದ್ದಾರೆ. ಅದಾನಿಗೆ ಜನರು ಕಟ್ಟೋ ತೆರಿಗೆ ದುಡ್ಡು ಬಂಡವಾಳವಾಗುತ್ತಿದೆಯಂತೆ. ಆದರೆ.. ಇಂತಹ ಹೇಳಿಕೆಗಳು ಕಾಂಗ್ರೆಸ್ಸಿನ ನಾಯಕರಿಗೆ ಎಷ್ಟು ಇರುಸುಮುರುಸು ಉಂಟು ಮಾಡುತ್ತವೆಂದರೆ.. ಹೇಳೋಕೆ ಆಗಲ್ಲ. ಇತ್ತೀಚೆಗೆ ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರವೇ ಅದಾನಿ ಗ್ರೂಪ್ ಜೊತೆ ಸಾವಿರಾರು ಕೋಟಿ ಒಪ್ಪಂದ ಮಾಡಿಕೊಂಡಿದೆ. ಹಿಂದೆ ರಾಜಸ್ತಾನದಲ್ಲಿ ಹಾಗೂ ಜಾರ್ಖಂಡ್ʻನಲ್ಲಿ ಕಾಂಗ್ರೆಸ್ ಆಡಳಿತವಿದ್ದಾಗಲೂ ಅದಾನಿ ಗ್ರೂಪ್ʻನ್ನು ರತ್ನಗಂಬಳಿ ಹಾಸಿ ಸ್ವಾಗತಿಸಿತ್ತು. ರಾಜ್ಯಮಟ್ಟದ ಕಾಂಗ್ರೆಸ್ ಸರ್ಕಾರಗಳು ಅದಾನಿಯ ಜೊತೆ ವ್ಯವಹಾರ ಮಾಡುತ್ತಿದ್ದರೆ, ರಾಹುಲ್ ಗಾಂಧಿ ಟೀಕೆ ಮಾಡುತ್ತಾ ಹೋಗುತ್ತಾರೆ. ಅದಾನಿ ಜೊತೆ ಕಾಂಗ್ರೆಸ್ ಅಷ್ಟೇ ಅಲ್ಲ ಇಂಡಿಯಾ ಒಕ್ಕೂಟದಲ್ಲಿದ್ದಾಗ ಬಿಹಾರದ ಜೆಡಿಯು, ಈಗಲೂ ಒಕ್ಕೂಟದಲ್ಲಿರುವ ಪ.ಬಂಗಾಳದ ಟಿಎಂಸಿ, ತಮಿಳುನಾಡಿನ ಡಿಎಂಕೆ ನೇತೃತ್ವದ ಸರ್ಕಾರಗಳೂ ಕೂಡಾ ಒಪ್ಪಂದ ಮಾಡಿಕೊಂಡಿವೆ. ಇತ್ತ ರಾಹುಲ್ ಗಾಂಧಿ ಹೀಗೆ ಹೇಳುತ್ತಿದ್ದರೆ, ಸ್ತಳೀಯ ನಾಯಕರು ಉತ್ತರ ಕೊಡೋಕೆ ಆಗದೆ ಪರಿತಪಿಸುವಂತಾಗಿದೆ.



