ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಳೆದೊಂದು ವರ್ಷದಿಂದ ಕಟ್ಟಿಕೊಂಡಿದ್ದ ಇಂಡಿಯಾ ಒಕ್ಕೂಟ ಮೈತ್ರಿಯಲ್ಲಿ ಭೂಕಂಪ ಎದ್ದಿದೆ. ಬಿಜೆಪಿ ಸೋಲಿಸಲು ಸತತ ಸಭೆಗಳನ್ನು ನಡೆಸಿದ್ದ ಒಕ್ಕೂಟದಿಂದ ಎರಡು ಪ್ರಮುಖ ಪಕ್ಷಗಳು ಹೊರಬಿದ್ದಿವೆ. ಬಿಜೆಪಿ ಸೋಲಿಸಲು ವೈರತ್ವ ಬದಿಗಿಟ್ಟು ಒಗ್ಗಟ್ಟಿನ ಮಂತ್ರ ಪಠಿಸಿದ್ದ ಪಕ್ಷಗಳಲ್ಲಿಯೇ ಹೊಂದಾಣಿಕೆ ಇಲ್ಲವಾಗಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಬಿಕ್ಕಟ್ಟು ಮನಸ್ತಾಪ ಹೆಚ್ಚಾಗಿದೆ. ಇಂಡಿಯಾ ಒಕ್ಕೂಟದ ಪ್ರಮುಖ ಪಕ್ಷ ತೃಣಮೂಲ ಕಾಂಗ್ರೆಸ್ ಈಗಾಗಲೇ ಮೈತ್ರಿ ಮುರಿದುಕೊಂಡು ಏಕಾಂಗಿ ಹೋರಾಟದ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಮೈತ್ರಿ ಮಾಡಿಕೊಳ್ಳಲ್ಲ, ಏಕಾಂಗಿಯಾಗಿ ಹೋರಾಟ ಮಾಡಲಿದೆ ಎಂದು ಹೇಳಿದ್ಧಾರೆ.
ಪ.ಬಂಗಾಳದಲ್ಲಿ ಮೈತ್ರಿ ಇಲ್ಲ. ಹೊರಗೆ ಒಟ್ಟಾಗಿದ್ದೇವೆ :
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅಧಿಕೃತ ಘೋಷಣೆ ಮಾಡಿದ್ದಾರೆ. ತೃಣಮೂಲ ಕಾಂಗ್ರೆಸ್ ಏಕಾಂಗಿಯಾಗಿ ಹೋರಾಡಲಿದೆ. ಇಲ್ಲಿ ಇಂಡಿಯಾ ಒಕ್ಕೂಟದ ಯಾವುದೇ ಮೈತ್ರಿ ಇಲ್ಲ. ಬಿಜೆಪಿಯನ್ನು ಟಿಎಂಸಿ ಏಕಾಂಗಿಯಾಗಿ ಸೋಲಿಸಿದೆ. ಈ ಬಾರಿಯೂ ಇದೇ ರೀತಿ ಸೋಲಿಸುವ ವಿಶ್ವಾಸವಿದೆ. ಹೀಗಾಗಿ ಬಂಗಾಳದಲ್ಲಿ ಮೈತ್ರಿ ಅವಶ್ಯಕತೆ ಇಲ್ಲ ಎಂದಿದ್ದಾರೆ. ಇತ್ತ ಟಿಎಂಸಿ ಇತರ ರಾಜ್ಯಗಳಲ್ಲೂ ಮೈತ್ರಿ ಮಾಡಿಕೊಂಡು ಅಖಾಡಕ್ಕೆ ಇಳಿಯುವುದಿಲ್ಲ. ಟಿಎಂಸಿ ಏಕಾಂಗಿಯಾಗಿ ಹೋರಾಟ ಮಾಡಲಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಆದರೆ ಪ.ಬಂಗಾಳದ ಹೊರಗೆ ಇಂಡಿಯಾ ಒಕ್ಕೂಟದ ಭಾಗವಾಗಿಯೇ ಇರುತ್ತೇವೆ ಎಂದಿದ್ದಾರೆ ಮಮತಾ ಬ್ಯಾನರ್ಜಿ.
ಜೈರಾಮ್ ರಮೇಶ್, ಕಾಂಗ್ರೆಸ್ ಹಿರಿಯ ನಾಯಕ : ಮಮತಾ ಬ್ಯಾನರ್ಜಿ ಏಕಾಂಗಿಯಾಗಿ ಬಿಜೆಪಿ ಸೋಲಿಸಲು ಸಜ್ಜಾಗಿದ್ದಾರೆ. ಮಮತಾ ಬ್ಯಾನರ್ಜಿ ಜೊತೆ ನಾವು ಚರ್ಚೆ ಮಾಡುತ್ತೇವೆ. ಅತೀ ದೊಡ್ಡ ಪಯಣದಲ್ಲಿ ಸ್ಪೀಡ್ ಬ್ರೇಕ್ ಸಹಜ. ಆದರೆ ಯಾವುದೇ ಮನಸ್ತಾಪವಿಲ್ಲ. ಇಂತಹ ಘಟನೆಗಳೆಲ್ಲ ಸಹಜ. ಸರಿ ಹೋಗುತ್ತದೆ ಎಂದಿದ್ಧಾರೆ.
ಅಧೀರ್ ರಂಜನ್ ಚೌಧರಿ, ಲೋಕಸಭೆ ಕಾಂಗ್ರೆಸ್ ನಾಯಕ : ನಾವೇನು ಮಮತಾ ಬ್ಯಾನರ್ಜಿ ಅವರ ಭಿಕ್ಷೆ ಕೇಳುತ್ತಿಲ್ಲ. ದಯೆಯಿಂದ ಬದುಕುತ್ತಿಲ್ಲ. ಮಮತಾ ಅವರ ಏಕಾಂಗಿ ಸ್ಪರ್ಧೆಯಿಂದ ಬಿಜೆಪಿಗೇ ಲಾಭ. ಮಮತಾ ಬ್ಯಾನರ್ಜಿ ಬಿಜೆಪಿ ಪರ ಕೆಲಸ ಮಾಡುತ್ತಿದ್ಧಾರೆ.
ಇದು ಹೊಸದೇನಲ್ಲ. ಈ ಮೊದಲೂ ಕೂಡಾ ಕಾಂಗ್ರೆಸ್ಸನ್ನು ಸೋಲಿಸುತ್ತಿದ್ದ ಆಮ್ ಆದ್ಮಿ ಇದೇ ಆರೋಪ ಹೊತ್ತುಕೊಂಡಿತ್ತು. ಅದೀಗ ಇಂಡಿಯಾ ಒಕ್ಕೂಟದ ಅರ್ಧಂಬರ್ಧ ಭಾಗ. ಇನ್ನ ಅಸಾದುದ್ದೀನ್ ಓವೈಸಿಯವರ ಪಕ್ಷಕ್ಕೂ ಇದೇ ಆರೋಪ ಅಂಟಿಕೊಂಡಿದೆ. ಓವೈಸಿ ಪಕ್ಷವನ್ನು ಕಾಂಗ್ರೆಸ್ಸಿಗರು ಬಿಜೆಪಿಯ ಬಿ ಪಾರ್ಟಿ ಅಂತಾನೇ ಕರೀತಾರೆ. ಕರ್ನಾಟಕದಲ್ಲಿ ಜೆಡಿಎಸ್ʻನ್ನೂ ಹಾಗೆಯೇ ಕರೆದು, ಈಗ ಜೆಡಿಎಸ್ ಎನ್ʻಡಿಎ ಮೈತ್ರಿಕೂಟದ ಅಂಗವಾಗಿದ್ಧಾರೆ. ಅತ್ತ ಬಿಹಾರದಲ್ಲಿ ಕೂಡಾ ಒಮ್ಮೊಮ್ಮೆ ಕಾಂಗ್ರೆಸ್ಸಿನ ಜಾತ್ಯತೀತವಾದಿಗಳಾಗಿಯೂ, ಮತ್ತೊಮ್ಮೆ ಬಿಜೆಪಿ ಬೆಂಬಲಿಸಿದಾಗ ಕೋಮುವಾದಿಯಾಗಿಯೂ ಕಾಣಿಸಿಕೊಳ್ಳುತ್ತಾರೆ. ಆದರೆ ಇಡೀ ವಿವಾದದ ಮೂಲ ಶುರುವಾಗಿದ್ದು ಎಲ್ಲಿ ಎಂದು ಹುಡುಕುತ್ತಾ ಹೋದರೆ ಬೇರೆಯದೇ ಕಥೆ ಓಪನ್ ಆಗುತ್ತೆ.
ಆಕ್ಚುವಲಿ ವಿವಾದ ಶುರುವಾಗಿದ್ದು ಸೀಟು ಹಂಚಿಕೆ ವಿವಾದದಿಂದ ಎಂದಾದರೂ, ವಿವಾದ ಅದಲ್ಲ ಎನ್ನಲಾಗ್ತಿದೆ. ಇಂಡಿಯಾ ಒಕ್ಕೂಟಕ್ಕೆ ಹೆಸರು ಕೊಟ್ಟಿದ್ದಷ್ಟೇ ಅಲ್ಲ, ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ಮಮತಾ ವಿಶ್ವಾಸದಿಂದ ಇದ್ದರು. ಮಮತಾ ಪ್ರಪೋಸ್ ಮಾಡಿದ್ದ ಹೆಸರು ಖರ್ಗೆಯವರದ್ದು.
ಮಲ್ಲಿಕಾರ್ಜುನ ಖರ್ಗೆ ಸದ್ಯಕ್ಕೆ ಅಧಿಕೃತವಾಗಿ ಎಐಸಿಸಿ ಅಧ್ಯಕ್ಷ. ವಯಸ್ಸು, ಅನುಭವದಲ್ಲಿ ಬೆರಳು ಮಡಚುವಂತಿಲ್ಲ. ಮಮತಾ ಬ್ಯಾನರ್ಜಿ ಪ್ರಸ್ತಾಪಿಸಿದ ಮಲ್ಲಿಕಾರ್ಜು ಖರ್ಗೆ ಪ್ರಧಾನಿ ಅಬ್ಯರ್ಥಿ ಮಾತಿಗೆ ಸಹಮತ ಸೂಚಿಸಿದ್ದವರು ಆಮ್ ಆದ್ಮಿಯ ಕೇಜ್ರಿವಾಲ್ ಮಾತ್ರ. ಈಗ ಆಮ್ ಆದ್ಮಿ ಪಂಜಾಬ್ʻನಲ್ಲಿ ನಾವೇ ಸ್ಪರ್ಧೆ ಮಾಡ್ತೇವೆ, ನೀವು ನಮಗೆ ಸಪೋರ್ಟ್ ಮಾಡಿ ಸಾಕು ಅಂತಿದೆ. ಮಮತಾ ಕೂಡಾ ಹೇಳ್ತಿರೋದು ಅದನ್ನೇ. ಒಟ್ಟಿನಲ್ಲಿ ವಿವಾದದ ಮೂಲ ಎಲ್ಲಿಯೋ ಇರುತ್ತವೆ. ಎಲ್ಲೆಲ್ಲಿಗೋ ಹೋಗ್ತವೆ.



