ಸಿಎಂ ಸಿದ್ದರಾಮಯ್ಯ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ನಡುವಿನ ಜಗಳ, ವಾಕ್ಸಮರ ಮುಗಿಯುವಂತೆ ಕಾಣುತ್ತಿಲ್ಲ. ಇತ್ತೀಚೆಗೆ ಹೈಕೋರ್ಟ್ ಕುಮಾರಸ್ವಾಮಿ ಅವರಿಂದ ಒತ್ತುವರಿಗೆ ಆಗಿದೆ ಎನ್ನಲಾಗಿರುವ ಜಮೀನನ್ನು ಸರ್ವೆ ಮಾಡಿ ತೆರವು ಮಾಡಿ ಎಂದು ಕಟ್ಟುನಿಟ್ಟಿನ ಆದೇಶ ಕೊಟ್ಟಿತ್ತು. ಕಂದಾಯ ಇಲಾಖೆ ಅಧಿಕಾರಿಗಳು ಕೋರ್ಟಿನಲ್ಲಿ ಸರಿಯಾಗಿ ಉಗಿಸಿಕೊಂಡಿದ್ದರು. ಇದೀಗ ಆ ಪ್ರಕರಣದ ಬಗ್ಗೆ ಕುಮಾರಸ್ವಾಮಿ ಇನ್ನೊಂದು ಗಂಭೀರ ಆರೋಪ ಮಾಡಿದ್ದಾರೆ.
ಕುಮಾರಸ್ವಾಮಿ ಹೇಳಿದ ಆ ಮಹಿಳೆಯ ಕಥೆ :
ʻʻಸಿದ್ದರಾಮಯ್ಯ ಮೊದಲ ಬಾರಿಗೆ ಸಿಎಂ ಆಗಿದ್ದಾಗ 2011ರ ಬ್ಯಾಚಿನ 370 ಅಭ್ಯರ್ಥಿಗಳು ಕೆಪಿಎಸ್ಸಿ ಪರೀಕ್ಷೆ ಬರೆದಿದ್ದರು. ನ್ಯಾಯಯುತವಾಗಿ ಆಯ್ಕೆಯಾದ ಅವರೆಲ್ಲರನ್ನೂ ಆಯ್ಕೆ ಪಟ್ಟಿಯನ್ನೇ ರದ್ದು ಮಾಡಿ ಬೀದಿಗೆ ನಿಲ್ಲಿಸಿದರು. ಆಗ, ನಾನು ಅವರ ಪರವಾಗಿ ಹೋರಾಟ ನಡೆಸಿದೆ. ಆಗ ಕೇವಲ ಒಬ್ಬ ಮಹಿಳಾ ಅಭ್ಯರ್ಥಿಗಾಗಿ ಆ ಪಟ್ಟಿ ರದ್ದು ಮಾಡಿದ್ದರು. ಆಕೆ ಯಾರು? ರಾಮನಗರದಲ್ಲಿ ಎಸಿ ಆಗಿದ್ದ ಸಿದ್ದಪ್ಪ ಎನ್ನುವ ಅಧಿಕಾರಿಯ ಮಗಳು. ಈಗ ಈಕೆಗೆ ಇವರು ಕೆಲಸವನ್ನು ಕೊಟ್ಟು ಬಿಟ್ಟಿದ್ದಾರೆ. ಆ ಸಿದ್ಧಪ್ಪ ಎನ್ನುವ ಅಧಿಕಾರಿಯ ಚರಿತ್ರೆ ಗೊತ್ತಿಲ್ಲವೇ ಇವರಿಗೆ? ಅಷ್ಟು ಅಭ್ಯರ್ಥಿಗಳ ಪರ ಹೋರಾಟ ಮಾಡಿದ್ದಕ್ಕೆ ನನ್ನ ಮಗಳಿಗೆ ಅನ್ಯಾಯ ಆಯಿತು ಎಂದು ಆ ವ್ಯಕ್ತಿ ಸುಳ್ಳಿನ ಕಂತೆ ಸೃಷ್ಟಿಸಿದ. ಅದನ್ನು ಇಟ್ಟುಕೊಂಡು ಇವರು ಆಟ ಆಡುತ್ತಿದ್ದಾರೆʼʼ
ಸರ್ವೆ ಮಾಡುವುದಕ್ಕೆ ಯಾರು ಬೇಕಾದರೂ ಬರಲಿ :
ಇಲ್ಲಿನ ಭೂಮಾಪಕರಿಗೆ ನನ್ನ ಭೂಮಿಯನ್ನು ಸರ್ವೇ ಮಾಡುವುದಕ್ಕೆ ಆಗುವುದಿಲ್ಲ ಎಂದು ಕಾಣುತ್ತದೆ. ಅಂತಾರಾಷ್ಟ್ರೀಯ ಮಟ್ಟದ ಭೂಮಾಪಕರನ್ನು ಕರೆ ತನ್ನಿ. ನಾನು ಅದಕ್ಕೂ ತಯಾರಿದ್ದೇನೆ. ಎಷ್ಟು ದಿನ ಈ ರೀತಿ ಆಟ ಆಡುತ್ತೀರಿ? ಐದು ಅಧಿಕಾರಿಗಳ ಎಸ್ ಐಟಿ!! ಒಬ್ಬ ಪ್ರಾದೇಶಿಕ ಆಯುಕ್ತ, ಸಹಾಯಕ ಆಯುಕ್ತರ ಮಟ್ಟದ ನಾಲ್ಕು ಜನ ಅಧಿಕಾರಿಗಳು… ಸರ್ವೇ ಮಾಡಿಕೊಳ್ಳಿ. ಅಲ್ಲಿ ಯಾವುದಾದರೂ ಕಾನೂನು ಬಾಹಿರವಾಗಿ ಒತ್ತುವರಿ ಆಗಿದ್ದರೆ ತೆಗೆದುಕೊಂಡು ಹೋಗಿ. ಸರ್ವೇ ಮಾಡಿಕೊಂಡು ಒತ್ತುವರಿ ಆಗಿದ್ದರೆ ಆ ಭೂಮಿ ವಾಪಸ್ ಪಡೆದುಕೊಳ್ಳಲು ನನ್ನದೇನೂ ತಕರಾರು ಇಲ್ಲ. ಆದರೆ ಈ ದೇಶದಲ್ಲಿ ಕಾನೂನು, ಸಂವಿಧಾನ ಎನ್ನುವುದು ಇದೆ. ಅದು ಎಲ್ಲರಿಗೂ ಸಮಾನ ಅಲ್ಲವೇ? ಅಂತಹ ಸಾಂವಿಧಾನಿಕ ವ್ಯವಸ್ಥೆಗಳಿಗೆ ನನ್ನ ಮನವಿ ಇಷ್ಟೇ. ನೀವು ಕೆಲ ಅಭಿಪ್ರಾಯಗಳನ್ನು ವ್ಯಕ್ತ ಮಾಡುವ ಸಂದರ್ಭದಲ್ಲಿ ಸತ್ಯಾತ್ಯತೆಯನ್ನು ಗಮನಿಸಿ. ದಾಖಲೆಗಳನ್ನು ನೋಡಿ
ನಾನು ಕಷ್ಟಪಟ್ಟು ದುಡಿದು ಖರೀದಿಸಿದ ಜಮೀನು :
“ನೋಡಿ, ಇದು ಸರ್ಕಾರಿ ಜಾಮೀನು ಅಲ್ಲ. ನನ್ನ ಸ್ವಂತ ಜಮೀನು. ನನಗೆ ನೋಟಿಸನ್ನೇ ನೀಡದೇ ಹೇಗೆ ಬರುತ್ತೀರಿ? ನಲವತ್ತು ವರ್ಷಗಳ ಹಿಂದೆ ಭೂಮಿಯನ್ನು ಖರೀದಿ ಮಾಡಿದ್ದೇನೆ. ನೀವು ಬಂದು ಸರ್ವೇ ಮಾಡುವುದಾದರೆ ಆ ಭೂಮಿಯ ಮಾಲೀಕನಾದ ನನಗೆ ಮೊದಲು ನೋಟಿಸ್ ಕೊಡಿ. ಆ ಭೂಮಿಯನ್ನು ನಾನು ಕಷ್ಟಪಟ್ಟು ಸಂಪಾದಿಸಿದ್ದೇನೆ. ಅದರಲ್ಲಿ ಒತ್ತುವರಿ ಆಗಿದೆ ಎಂದು ಸಿದ್ದರಾಮಯ್ಯ ಸರಕಾರ ಐದು ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆ ಮಾಡಿ ನನ್ನ ಮೇಲೆ ದಾಳಿಗೆ ಬಿಟ್ಟಿದೆ”
ಇದು ಕುಮಾರಸ್ವಾಮಿ ಹೇಳುತ್ತಿರುವ ಕಥೆ. ಈ ಕಥೆಯಲ್ಲಿ ಎಷ್ಟು ಸತ್ಯ.. ಎಷ್ಟು ಸುಳ್ಳು.. ಎನ್ನುವುದು ಕುಮಾರಸ್ವಾಮಿ ಅವರಿಗೆ ಮಾತ್ರ ಗೊತ್ತು.



