ಬಿಜೆಪಿಯೇ ಬೇರೆ. ಜೆಡಿಎಸ್ಸೇ ಬೇರೆ. ಜೆಡಿಎಸ್, ಮಿತ್ರ ಪಕ್ಷವಾಗಿರುವ ಕಾರಣಕ್ಕೆ ಕೇಂದ್ರದಲ್ಲಿ ಸಚಿವರಾಗಿದ್ದಾರೆ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕುಮಾರಸ್ವಾಮಿ. ಆದರೆ, ರಾಜ್ಯ ಬಿಜೆಪಿ ನಾಯಕರ ಪಾಲಿಗೆ ಕುಮಾರಸ್ವಾಮಿಯೇ ಪವರ್ ಹೌಸ್ ಆಗಿದ್ದಾರಾ.. ಇಂಥಾದ್ದೊಂದು ಪ್ರಶ್ನೆ ಮೂಡುತ್ತಿರುವುದಕ್ಕೆ ಕಾರಣಗಳೂ ಇವೆ. ಇದು ಸುಖಾಸುಮ್ಮನೆ ಸೃಷ್ಟಿಯಾದ ಊಹಾಪೋಹವಲ್ಲ. ಒಂದು ಅಥವಾ ಎರಡು ದಿನದ ಬೆಳವಣಿಗೆ ನೋಡಿ ಸೃಷ್ಟಿಯಾದ ಕಥೆಯೂ ಅಲ್ಲ.
ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದರೂ, ಅಖಾಡಕ್ಕೆ ಇಳಿದರೆ ಅದರ ಗತ್ತೇ ಬೇರೆ. ರಾಜಕೀಯವಾಗಿ ಕುಮಾರಸ್ವಾಮಿ ಅವರಿಗೆ ಯಾವ ಪಾಯಿಂಟ್ ರೈಸ್ ಮಾಡಬೇಕು ಎನ್ನುವುದು ಗೊತ್ತು. ಆ ವಿಷಯದಲ್ಲಿ ಬಿಜೆಪಿಯ ವಿಜಯೇಂದ್ರ ಅವರಾಗಲೀ, ಆರ್ ಅಶೋಕ್ ಆಗಲೀ, ಛಲವಾದಿ ನಾರಾಯಣ ಸ್ವಾಮಿ ಅವರಾಗಲೀ ಪೈಪೋಟಿಗೂ ನಿಲ್ಲುವುದಿಲ್ಲ. ಜನಾರ್ದನ ರೆಡ್ಡಿ ವಿಚಾರವನ್ನೇ ತೆಗೆದುಕೊಂಡರೆ ಪೋಸ್ಟ್ ಮಾರ್ಟಂ ವಿಚಾರವನ್ನು ಎತ್ತಿದ್ದು, ಎಫ್‌ಐಆರ್ ಗೊಂದಲವನ್ನು ಪ್ರಸ್ತಾಪ ಮಾಡಿದ್ದು ಕುಮಾರಸ್ವಾಮಿಯವರೇ. ಈ ವಿಷಯ ಬಿಜೆಪಿ ನಾಯಕರಿಗೆ ಅರ್ಥವೇ ಆಗಿರಲಿಲ್ಲ ಎನ್ನುವುದು ವಾಸ್ತವ. ಟೀಕೆ ಮಾಡುವಾಗ ಟು ದಿ ಪಾಯಿಂಟ್ ಇದ್ದರೆ ಸಹಜವಾಗಿಯೇ ಟೀಕೆಯ ಮೌಲ್ಯವೂ ಹೆಚ್ಚುತ್ತದೆ. ಇಂತಹ ಹತ್ತಾರು ಉದಾಹರಣೆ ಕೊಡಬಹುದಾದರೂ, ಅದು ಬೇರೆ. ಪವರ್ ಹೌಸ್ ಅಥವಾ ಪವರ್ ಸೆಂಟರ್ ಎನ್ನುವುದು ಬೇರೆ.
ಇತ್ತೀಚೆಗೆ ದೆಹಲಿಗೆ ಹೋಗಿ ಬರುವ ಬಿಜೆಪಿ ನಾಯಕರು ಕುಮಾರಸ್ವಾಮಿ ಅವರನ್ನು ತಪ್ಪದೇ ಭೇಟಿ ಮಾಡಿ ಬರುತ್ತಿದ್ದಾರೆ. ದೆಹಲಿಗೆ ಹೋದರು ಎಂದರೆ ಕುಮಾರಸ್ವಾಮಿ ಭೇಟಿ ಫಿಕ್ಸ್ ಆಯಿತು ಎಂದೇ ಲೆಕ್ಕ. ಅಷ್ಟೇ ಅಲ್ಲ, ಕುಮಾರಸ್ವಾಮಿ ಬೆಂಗಳೂರಿಗೆ ಬಂದಾಗಲೂ ಕೂಡಾ ಬಿಡುವು ಮಾಡಿಕೊಂಡು ಹೋಗಿ ಭೇಟಿ ಮಾಡುತ್ತಾರೆ. ಐದು ನಿಮಿಷವಾದರೂ ಭೇಟಿ ಮಾಡುತ್ತಾರೆ. ಬಹಳಷ್ಟು ನಾಯಕರು ಬಿಜೆಪಿಯ ಕೇಂದ್ರ ಕಚೇರಿಗೂ ಭೇಟಿ ಕೊಡುವುದಿಲ್ಲ. ಆದರೆ ಕುಮಾರಸ್ವಾಮಿ ಭೇಟಿಯನ್ನು ಬಿಡುವುದಿಲ್ಲ.
ಹೀಗೆ ಭೇಟಿ ಮಾಡುವವರಲ್ಲಿ ಮೈಸೂರು ಭಾಗದ, ಒಕ್ಕಲಿಗ ಪ್ರಾಬಲ್ಯದ ಜಿಲ್ಲೆಗಳ ನಾಯಕರೇ ಹೆಚ್ಚಿದೆ ಎನ್ನುವುದು ವಾಸ್ತವ. ಮುಂಬರುವ ಎಲೆಕ್ಷನ್ನಿಗೆ ಈಗಲೇ ಎಲೆ ಹಾಕುತ್ತಿರುವ ನಾಯಕರಿಗೆ ಕುಮಾರಸ್ವಾಮಿ ಅವರ ಪ್ರೀತಿಯೂ ಮುಖ್ಯ ಎಂದು ಅರಿವಾಗಿದೆ.
ಇಂತಹ ಬೆಳವಣಿಗೆ ಹೆಚ್ಚುತ್ತಿರುವ ಕಾರಣದಿಂದಲೆ ಡಿಕೆ ಶಿವಕುಮಾರ್ ಅವರು ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಮುಂದಿನ ಚುನಾವಣೆಗೆ ನಾನಾ ರಣತಂತ್ರ ರೂಪಿಸುತ್ತಿದ್ದಾರೆ. ಇತ್ತ ಶೀಘ್ರವೇ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿದೆ ಎಂದು ಹೇಳಿಕೆ ನೀಡಿದ್ದರು.
ಅದಕ್ಕೆ ಉತ್ತರ ನೀಡಿರುವ ಕುಮಾರಸ್ವಾಮಿ ನಮ್ಮ ವಿಲೀನದ ಚಿಂತೆ ಪಕ್ಕಕ್ಕಿಡಿ. ನನ್ನ, ನಿಮ್ಮ ಆಡಳಿತಾನುಭವದ ಬಗ್ಗೆ ಮಾತನಾಡೋಣ ಎಂದಿದ್ದಾರೆ. ವಿಶೇಷ ಎಂದರೆ ಹೀಗೆ ಮಾತನಾಡುವಾಗಲೂ ಟೆಕ್ನಿಕಲಿ ಡಿಕೆ ಶಿವಕುಮಾರ್ ಮಾಡಿರುವ ತಪ್ಪುಗಳ ಪಟ್ಟಿಯನ್ನೇ ಕೊಟ್ಟಿದ್ದಾರೆ. ಡಿಕೆ ಶಿವಕುಮಾರ್ ಅವರು ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದು ನಿಯಮ ಉಲ್ಲಂಘನೆ, ಅಧಿಕಾರ ವ್ಯಾಪ್ತಿಯನ್ನು ಮೀರಿದ್ದು ಎಂಬ ಪ್ರಶ್ನೆ ಎತ್ತಿದ್ದಾರೆ.



