ʻʻನಾನೇನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ದುರ್ಬಳಕೆ ಮಾಡಿಕೊಂಡಿಲ್ಲ. ಡಿ.ಕೆ.ಶಿವಕುಮಾರ್ ಎಐಸಿಸಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ನಿಲ್ಲಿಸಲಿ. ಅವರು ಎಐಸಿಸಿ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಆರೋಪವಲ್ಲ, ವಾಸ್ತವʼʼ
ಇದು ಸಚಿವ ಕೆಎನ್ ರಾಜಣ್ಣ ಅವರ ಹೇಳಿಕೆ. ಸಿದ್ದರಾಮಯ್ಯ ಹೆಸರು ದುರ್ಬಳಕೆ ಮಾಡಿಕೊಳ್ಳಬಾರದು ಎಂದಿದ್ದ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತಿಗೆ ಕೆಎನ್ ರಾಜಣ್ಣ ಕೊಟ್ಟಿರುವ ತಿರುಗೇಟು ಇದು. ಎಲ್ಲೋ ಒಂದು ಹಂತದಲ್ಲಿ ಕೆಎನ್ ರಾಜಣ್ಣ, ಕಾಂಗ್ರೆಸ್ ಪಕ್ಷದ ಯತ್ನಾಳ್ ಆಗುತ್ತಿದ್ದಾರಾ ಎಂಬ ಅನುಮಾನ ಮೂಡುತ್ತಿದೆ. ಈ ಮಾತನ್ನು ಕಾಂಗ್ರೆಸ್ಸಿನ ಕಾರ್ಯಕರ್ತರು ಹೇಳ್ತಿರೋದು ವಿಶೇಷ. ಏಕೆಂದರೆ ಈ ನಿಟ್ಟಿನಲ್ಲಿ ಗೃಹ ಸಚಿವ ಪರಮೇಶ್ವರ್, ಸತೀಶ್ ಜಾರಕಿಹೊಳಿ, ಎಚ್‌ಸಿ ಮಹದೇವಪ್ಪ ಅವರೂ ಇದ್ದಾರೆ. ಆದರೆ ಸೌಂಡ್ ಮಾಡುತ್ತಿರುವುದು ಮಾತ್ರ ಕೆಎನ್ ರಾಜಣ್ಣ.
ಕೆಎನ್ ರಾಜಣ್ಣ ಅವರ ಹೇಳಿಕೆ ನೋಡುತ್ತಿದ್ದರೆ ಬಿಜೆಪಿಯಲ್ಲಿನ ಯತ್ನಾಳ್ ಮಾತುಗಳು ನೆನಪಾಗುತ್ತವೆ. ಸುಮ್ಮನೆ ಒಂದ್ಸಲ ಅವರು ಕೊಟ್ಟಿರೋ ಹೇಳಿಕೆಗಳನ್ನೊಮ್ಮೆ ನೋಡಿ.
- ನಾನು ಯಾರಿದಂಲೂ ಶಿಸ್ತಿನ ಪಾಠ ಮಾಡಿಸಿಕೊಳ್ಳಬೇಕಿಲ್ಲ. 50 ವರ್ಷ ಪಕ್ಷಕ್ಕೆ ಕೆಲಸ ಮಾಡಿದ್ದೇನೆ. ನಾನು ಮಾತನಾಡಿದರೆ ಸತ್ಪರಿಣಾಮ ಬೀರುವ ಮಾತನಾಡುತ್ತೇನೆ ಹೊರತು ದುಷ್ಪರಿಣಾಮ ಬೀರುವ ಮಾತನಾಡಲ್ಲ. ಡಿಕೆ ಶಿವಕುಮಾರ್ ಎಐಸಿಸಿ ಹೆಸರು ದುರ್ಬಳಕೆ ಮಾಡುವುದು ಬೇಡ.
- ಡಿಕೆಶಿ ಸಿಎಂ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ಹೇಳಿಕೆ ಅಷ್ಟೆ ಎಚ್ಚರಿಕೆ ಅಲ್ಲ. ಎಚ್ಚರಿಕೆ ಗಿಚ್ಚರಿಕೆ ಎಲ್ಲಾ ನಡೆಯಲ್ಲ ಎಚ್ಚರಿಕೆ ಎಲ್ಲಾ ಯಾರು ಕೇಳ್ತಾರೆ? ಡಿಸಿಎಂ ಸ್ಥಾನ ಎಂದರೆ ತಲೆ ಮೇಲೆ ಹೆಚ್ಚುವರಿ ಕಿರೀಟ ಇರಲ್ಲ.
- ಈ ಬಾರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಚುನಾವಣೆ ನಡೆದು ಗೆದ್ದಿದ್ದೇವೆ. ಮುಂದಿನ ಬಾರಿ ಅವರೇ ಚುನಾವಣೆ ನಡೆಸಿ, ಗೆದ್ದು ಅಧಿಕಾರಕ್ಕೆ ಬರಲಿ. ಎರಡೂವರೆ ವರ್ಷ ಯಾಕೆ, 5 ವರ್ಷವೂ ಅವರೇ ಸಿಎಂ ಆಗಲಿ.
- ರಾಜ್ಯಕ್ಕೆ ಮೂವರು ಡಿಸಿಎಂ ಇರಬೇಕು. ಒಂದೊಂದು ಸಮುದಾಯಕ್ಕೂ ಒಂದೊಂದು ಡಿಸಿಎಂ ಹುದ್ದೆ ಬೇಕು. ಒಬ್ಬ ದಲಿತ, ಒಬ್ಬ ಲಿಂಗಾಯತ ಅಥವಾ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ತಲಾ ಒಂದು ಡಿಸಿಎಂ ಹುದ್ದೆ ಕೊಡಲಿ.ಇಂತಹ ಹೇಳಿಕೆಗಳ ಮೂಲಕವೇ ಗುರ್ ಎನ್ನುವ ಕೆಎನ್ ರಾಜಣ್ಣ, ಬಿಜೆಪಿಯಲ್ಲಿ ಯತ್ನಾಳ್ ಹೇಗೆ ವಿವಾದ ಸೃಷ್ಟಿಸುತ್ತಾರೋ ಹಾಗೆಯೇ ವಿವಾದ ಸೃಷ್ಟಿಸ್ತಾರೆ. ಇದರ ಹಿಂದೆ ಸಿದ್ದರಾಮಯ್ಯ ಇದ್ದಾರೆ ಎನ್ನುವುದು ಡಿಕೆ ಬೆಂಬಲಿಗರ ಆರೋಪ. ಅದನ್ನು ನಿಜ ಎನ್ನುವುದಕ್ಕೆ ಸಾಕ್ಷಿಗಳಿಲ್ಲ. ಸುಳ್ಳು ಎನ್ನುವುದಕ್ಕೆ ಪುರಾವೆಗಳಿಲ್ಲ. ಇನ್ನು ಡಿಕೆ ಶಿವಕುಮಾರ್, ಡಿಸಿಎಂ ಅಷ್ಟೇ ಅಲ್ಲ, ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಪ್ರಯೋಜನವೇನಿಲ್ಲ.
ಬಿಜೆಪಿಯಲ್ಲಿ ಯತ್ನಾಳ್ ಬಣದ ನಾಯರ ಹುಚ್ಚಾಟಗಳಿಗೆ ವಿಜಯೇಂದ್ರ ಹೇಗೆ ಏನೂ ಮಾಡದಂತೆ ಇದ್ದಾರೋ.. ಅದೇ ರೀತಿಯಲ್ಲಿ ಡಿಕೆ ಶಿವಕುಮಾರ್ ಕೂಡಾ ಇದ್ಧಾರೆ. ಆದರೆ, ಕಾಂಗ್ರೆಸ್ಸಿನ ಒಳಗೆ ನಡೆಯುತ್ತಿರುವ ಹುಚ್ಚಾಟ, ತಿಕ್ಕಲಾಟ ಬಿಜೆಪಿಯ ಲೆವೆಲ್ಲಿನಲ್ಲಿ ಇಲ್ಲ ಎಂಬುದಷ್ಟೇ ಸದ್ಯದ ಮಟ್ಟಿಗೆ ಸಮಾಧಾನ ವಿಷಯ.



