ವಿಜಯೇಂದ್ರ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ. ಇದೊಂದೇ ಘೋಷಣೆಯೊಂದಿಗೆ ವೀರಶೈವ ಲಿಂಗಾಯತ ಸಮುದಾಯದ ಮಹಾಸಂಗಮ ಹೆಸರಿನಲ್ಲಿ ಸಭೆ ನಡೆದಿದೆ. ಚಿಕ್ಕಮಗಳೂರಿನಲ್ಲಿ. ರಾಜ್ಯ ಬಿಜೆಪಿಯಲ್ಲಿ ವಿಜಯೇಂದ್ರ ವರ್ಸಸ್ ಯತ್ನಾಳ್ ನಡುವಿನ ಸಮರ ದಿನದಿಂದ ದಿನಕ್ಕೆ ಜೋರಾಗಿದೆ. ವಿಜಯೇಂದ್ರ ಪರವಾಗಿ ಈಗಾಗಲೇ ಬ್ಯಾಟಿಂಗ್ ಮಾಡುತ್ತಿರುವ ರೇಣುಕಾಚಾರ್ಯ ಟೀಂ ಒಂದು ಸ್ಪೆಷಲ್ ಸಂದೇಶ ರವಾನಿಸಿದ್ದಾರೆ.
ಸಭೆ ನೇತೃತ್ವ ವಹಿಸಿರುವುದು ರೇಣುಕಾಚಾರ್ಯ. ಸಾಥ್ ಕೊಟ್ಟಿರುವುದು ಬಿಸಿ ಪಾಟೀಲ್ ಹಾಗೂ ವಿವಿಧ ಮಠಾಧೀಶರು. ಸಭೆಯಲ್ಲಿ ಯಳನಾಡು ಸಿದ್ದರಾಮೇಶ್ವರ ಸ್ವಾಮೀಜಿ, ಶಂಕರದೇವರು ಮಠದ ಸ್ವಾಮೀಜಿ, ಹುಲಿಕೆರೆ ಸ್ವಾಮೀಜಿ, ಬೇರುಗಂಡಿ ಮಠದ ಸ್ವಾಮೀಜಿ ಸೇರಿದಂತೆ ವಿವಿಧ ಮಠದ ಸ್ವಾಮೀಜಿಗಳು ಸೇರಿದಂತೆ ತರೀಕೆರೆ ತಾಲೂಕಿನ ಮಾಜಿ ಶಾಸಕರಾದ ಸುರೇಶ್ , ನಾಗರಾಜ್ ಸೇರಿದಂತೆ ಸ್ಥಳೀಯ ಕಾಂಗ್ರೆಸ್, ಬಿಜೆಪಿ ಪಕ್ಷದ ಮುಖಂಡರು ಭಾಗಿಯಾಗಿದ್ದರು. ಒಟ್ಟಿನಲ್ಲಿ ಯತ್ನಾಳ್ ವರ್ಸಸ್ ವಿಜಯೇಂದ್ರ ನಡುವಿನ ಸಮರದಲ್ಲಿ ವೀರಶೈವ ಲಿಂಗಾಯತರು ನಮ್ಮ ಬೆಂಬಲ ಯಡಿಯೂರಪ್ಪ ಕುಟುಂಬಕ್ಕೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಈ ಸಭೆಯ ಮಹತ್ವ ಏನೆಂದರೆ ಇದು ನಡೆದಿದ್ದು, ಅಮಿತ್ ಶಾ ಅವರು ಬೆಂಗಳೂರಿಗೆ ಬಂದು ಹೋದ ಮೇಲೆ. ಹೀಗಾಗಿಯೇ ಸಭೆ, ಸಮಾವೇಶಗಳಿಗೆ ಬ್ರೇಕ್ ಹಾಕುವ ಯಾವುದೇ ಪ್ರಯತ್ನವನ್ನು ಶಾ ಮಾಡಿಲ್ಲ ಎಂಬುದಂತೂ ಸ್ಪಷ್ಟವಾಗಿದೆ.
ನಿನ್ನದು ನಾಲಗೆಯೋ.. ಎಕ್ಕಡವೋ.. : ಯತ್ನಾಳ್‌ಗೆ ರೇಣುಕಾಚಾರ್ಯ..!
ಮಾರಿಹಬ್ಬದಲ್ಲಿ ಪ್ರಾಣಿಗಳನ್ನು ಬಲಿಕೊಡುವಾಗ ಕುಂಕುಮ ಹಚ್ಚಿ ನೀರು ಹಾಕುತ್ತಾರಲ್ಲ ಅದೇ ರೀತಿ ನಿನ್ನನ್ನು (ಯತ್ನಾಳ್‌ಗೆ) ಬಲಿ ಪಶು ಮಾಡುತ್ತಾರೆ. ಎಲುಬಿಲ್ಲದ ನಾಲಿಗೆ ರೀತಿಯಲ್ಲಿ ಯತ್ನಾಳ್ ಮಾತನಾಡುತ್ತಿದ್ದಾನೆ, ಮಿಸ್ಟರ್ ಯತ್ನಾಳ್ ನಿನಗೆ ನಾಚಿಕೆ ಆಗಬೇಕು, ಮಠಾಧೀಶರ ಬಗ್ಗೆ ಅಪಮಾನ ಆಗೋ ರೀತಿಯಲ್ಲಿ ಮಾತನಾಡಿದ ನಿಮಗೆ ಜನ ಪಾಠ ಕಲಿಸುತ್ತಾರೆ, ನಿಮ್ಮದು ನಾಲಿಗೆಯೋ ಅಥವಾ ಎಕ್ಕಡವೋ ಎಂದು ಈ ಸಂದರ್ಭದಲ್ಲಿ ಎಚ್ಚರಿಕೆ ಕೊಡಬೇಕಾಗುತ್ತದೆ ಎಂದಿದ್ದಾರೆ ರೇಣುಕಾಚಾರ್ಯ. ಕೆಲ ದಿನಗಳ ಹಿಂದಷ್ಟೇ ಯತ್ನಾಳ್ʻರನ್ನು ಹಂದಿ, ನಾಯಿಗೆ ಹೋಲಿಸಿದ್ದ ರೇಣುಕಾಚಾರ್ಯ.. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.
ಯಡಿಯೂರಪ್ಪರನ್ನು ಟಾರ್ಗೆ ಮಾಡಿದರೆ..
ಅನಿವಾರ್ಯ ಕಾರಣಗಳಿಂದ ಯಡಿಯ್ಯೂರಪ್ಪನವರು ಕೆಜೆಪಿ ಕಟ್ಟುವ ಪರಿಸ್ಥಿತಿ ನಿರ್ಮಾಣವಾಯಿತು.ಯಡಿಯೂರಪ್ಪನವರ ಕಣ್ಣೀರಿನಲ್ಲಿ ಬಿಜೆಪಿ ಕೊಚ್ಚಿ ಹೋಗುತ್ತೆ ಅಂತ ಸ್ವಾಮೀಜಿಗಳು ಹೇಳಿದ್ರು.ವೀರಶೈವ, ಲಿಂಗಾಯತ ಸಮುದಾಯದ ನಮ್ಮ ಮುಖಂಡರಾದ ವಿಜಯೇಂದ್ರ ಅವರಿಗೆ ನಮ್ಮ ಬೆಂಬಲವಿದೆಯಡಿಯೂರಪ್ಪನವರಿಗೆ ವಿಜಯೇಂದ್ರ ಅವರಿಗೆ ತೊಂದರೆಯಾದಾಗ ನಾವು ಸುಮ್ಮನೇ ಇರಬೇಕಾ, ಈ ಹಿನ್ನೆಲೆ ನಾವು ಸಭೆ ನಡೆಸಿ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದೇವೆ ಎಂದು ಉತ್ತರ ಕೊಟ್ಟಿದ್ದಾರೆ ರೇಣುಕಾಚಾರ್ಯ.
ಮುಂದಿನ ಚುನಾವಣೆ ನೇತೃತ್ವ ವಿಜಯೇಂದ್ರರದ್ದು : ಬಿಸಿ ಪಾಟೀಲ್
ಯತ್ನಾಳ್ ರಾಜ್ಯದ್ಯಕ್ಷ ವಿಜಯೇಂದ್ರ ವಿರುದ್ಧ ಎಷ್ಟೇ ಮಾತಾಡಿದ್ರು ವಿಜಯೇಂದ್ರ ಅವರ ಹೇಳಿಕೆಗೆ ಪ್ರತಿ ಹೇಳಿಕೆ ಕೊಡುತ್ತಿಲ್ಲ, ಹೇಳಿಕೆಗೆ ಪ್ರತಿ ಹೇಳಿಕೆ ಕೊಡುವ ವ್ಯಕ್ತಿತ್ವವೂ ವಿಜಯೇಂದ್ರದಲ್ಲ. ಪಕ್ಷದಲ್ಲಿ ಎಲ್ಲರನ್ನ ಸಮಾನವಾಗಿ ತೆಗೆದುಕೊಂಡು ಹೋಗಲು ವಿಜಯೇಂದ್ರ ಪ್ರಯತ್ನಿಸುತ್ತಿದ್ದಾರೆ ಮುಂದೆ ವಿಜಯೇಂದ್ರ ಎತ್ತರದ ಸ್ಥಾನಕ್ಕೆ ಬೆಳೆಯುವ ಅವಕಾಶವಿದೆ , ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆಯನ್ನು ಎದುರಿಸಿ , ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎನ್ನುವ ಮೂಲಕ ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ ಎಂಬ ಸ್ಪಷ್ಟ ಸೂಚನೆ ರವಾನಿಸಿದರು.



