ಕಾಂಗ್ರೆಸ್ ಪಕ್ಷಕ್ಕೆ ಸೇರಿದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಕರ್ನಾಟಕ ಸರ್ಕಾರವು ಸಾರ್ವಜನಿಕ ಜಾಹೀರಾತು ನಿಧಿಯನ್ನು ಅಸಮಾನವಾಗಿ ಹಂಚಿಕೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ವಾಸ್ತವವಾಗಿ ಈ ಪತ್ರಿಕೆ ಭಾಗಶಃ ನಿಷ್ಕ್ರಿಯವಾಗಿದೆ. ಈ ಪತ್ರಿಕೆಗೆ 2023-24ರಲ್ಲಿ 1.90 ಕೋಟಿ, 2024-25ರಲ್ಲಿ 99 ಲಕ್ಷ ರೂ. ಹಂಚಿಕೆ ಮಾಡಲಾಗಿದೆ. ಅದು ಜಾಹೀರಾತಿನ ಲೆಕ್ಕದಲ್ಲಿ. ಇದು ಸರಿಯೇ.. ತಪ್ಪೇ.. ಎಂಬ ವಿವಾದಕ್ಕೆ ಕಾರಣವಾಗಿರುವುದು ಹೌದಾದರೂ, ಸರ್ಕಾರ ಸಮರ್ಥನೆ ಮಾಡಿಕೊಂಡಿದೆ. ಆದರೆ.. ಈ ಪತ್ರಿಕೆ ಪ್ರಸಾರ ಹೇಗಿದೆ..ದಾಖಲೆಗಳು ಏನು ಹೇಳುತ್ತವೆ.. ಎಂದು ನೋಡಿದರೆ..
ವಾಸ್ತವವಾಗಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪ್ರಿಂಟ್ ಆಗುತ್ತಿಲ್ಲ. ಆದರೆ ಅಧಿಕೃತ ದಾಖಲೆಗಳ ಪ್ರಕಾರ ಪ್ರಿಂಟ್ ಆಗುತ್ತಿದೆ. ಬೆಂಗಳೂರಿನಲ್ಲೂ ಇದೆಯಂತೆ. ದೆಹಲಿಯಲ್ಲೂ ಓದುಗರು ಇದ್ದಾರಂತೆ. ಪತ್ರಿಕೆಯಂತೂ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಲಭ್ಯ ಇಲ್ಲ.
ಇನ್ನು ಇ-ಪೇಪರ್ ಕೂಡಾ ರೆಗ್ಯುಲರ್ ಆಗಿ ಲಭ್ಯ ಇಲ್ಲ. ಅಪ್‌ಡೇಟ್ ಆಗುವುದಿಲ್ಲ. ವೆಬ್ ಸೈಟ್ ಇದೆಯಾದರೂ, ಅದೂ ಕೂಡಾ ಒಂದು ರೆಗ್ಯುಲರ್ ಮಾದರಿಯಲ್ಲಿ ಇಲ್ಲ. ಹೀಗಿದ್ದರೂ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ನ್ಯಾಷನಲ್ ನ್ಯೂಸ್ ಪೇಪರ್ ಲಿಸ್ಟಿಗೆ ಸೇರಿಸಿ, ಸುಮಾರು 3 ಕೋಟಿಯಷ್ಟು ಜಾಹೀರಾತು ನೀಡಲಾಗಿದೆ.
ವಿಶೇಷ ಎಂದರೆ, ರಾಷ್ಟ್ರೀಯ ದಿನಪತ್ರಿಕೆಗಳಿಗಿಂತ ನ್ಯಾಷನಲ್ ಹೆರಾಲ್ಡ್‌ಗೆ ನೀಡುತ್ತಿರುವ ಆದ್ಯತೆಯ ಪ್ರಮಾಣ. 2024–25ರಲ್ಲಿ, ಕರ್ನಾಟಕವು ರಾಷ್ಟ್ರೀಯ ಮಟ್ಟದ ಪತ್ರಿಕೆಗಳಲ್ಲಿನ ಜಾಹೀರಾತುಗಳಿಗಾಗಿ 1.42 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಅದರಲ್ಲಿ ಶೇ. 69 ರಷ್ಟು ಪಾಲು ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಹೋಗಿದೆ. ನ್ಯಾಷನಲ್ ಹೆರಾಲ್ಡ್‌ಗಿಂತ ದೊಡ್ಡ ಮಟ್ಟದಲ್ಲಿ ಪ್ರಸಾರ ಹೊಂದಿರುವ ರಾಷ್ಟ್ರೀಯ ಪತ್ರಿಕೆಗಳು ಅರ್ಧದಷ್ಟು ಹಣ ಕೂಡ ಸ್ವೀಕರಿಸಿಲ್ಲ. ಇನ್ನೂ ಕೆಲವು ಪತ್ರಿಕೆಗಳಿಗೆ ಯಾವುದೇ ರೀತಿಯ ಜಾಹೀರಾತುಗಳನ್ನು ಸರ್ಕಾರವೇ ನೀಡಿಲ್ಲ.
ವಿವಾದ ಹುಟ್ಟುಹಾಕಿರುವುದು ಇದು. ಪ್ರಿಂಟ್ ಆಗದ, ನಿಷ್ಕ್ರಿಯವಾಗಿರುವ ಪತ್ರಿಕೆಗೆ ಸರ್ಕಾರಿ ಹಣವನ್ನು ಕೋಟಿ ಕೋಟಿ ಹಣದ ಜಾಹೀರಾತು ನೀಡುತ್ತಿರುವುದು ಯಾಕೆ.. ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ಉತ್ತರ ಕೊಟ್ಟಿರುವ ಡಿಸಿಎಂ ಡಿಕೆ ಶಿವಕುಮಾರ್ ʻಹೌದು, ಕೊಡುತ್ತಿದ್ದೇವೆ. ಲೀಗಲ್ ಆಗಿ ಕೊಡುತ್ತಿದ್ದೇವೆ. ಜಾಹೀರಾತು ಕೊಡುವ ಅಧಿಕಾರ ನಮಗೆ ಇದೆʼ ಎಂದಿದ್ದಾರೆ. ಇತ್ತ ಪ್ರಿಯಾಂಕ್ ಖರ್ಗೆ ʻನ್ಯಾಷನಲ್ ಹೆರಾಲ್ಡ್ ಸರ್ಕಾರ, ಕಾರ್ಪೊರೇಟ್ ಸಂಸ್ಥೆಗಳಿಂದ ಜಾಹೀರಾತು ಹಣ ಪಡೆಯುತ್ತದೆ. ತಪ್ಪೇನಿದೆʼ ಎಂದಿದ್ದಾರೆ. ಅಲ್ಲದೆ ಆರ್‌ಎಸ್‌ಎಸ್ ನಡೆಸುವ ಆರ್ಗನೈಸರ್ ಪತ್ರಿಕೆಯ ಆದಾಯ ಮೂಲವನ್ನು ಪ್ರಶ್ನೆ ಮಾಡಿದ್ದಾರೆ. ಬೇಕಾದವರು ಬ್ಯಾಂಕ್ ದಾಖಲೆ ಪರೀಕ್ಷಿಸಿ. ನಾವೇನು ಅಕ್ರಮ ಮಾರ್ಗದಲ್ಲಿ ಹಣ ಕೊಟ್ಟಿಲ್ಲ. ಕಾನೂನು ಪ್ರಕಾರವಾಗಿಯೇ ಸರ್ಕಾರದಿಂದ ಹಣ ನೀಡಿದ್ದೇವೆ ಎಂದಿದ್ದಾರೆ. ಬಿಜೆಪಿ ನಾಯಕರು ಎಂದಿನಂತೆ ಮಾಧ್ಯಮಗಳ ಎದುರು ಬೊಂಬ್ಡಾ ಬಜಾಯಿಸಿ ಸುಮ್ಮನಾಗಿದ್ದಾರೆ. ಆದರೆ ಪತ್ರಿಕೆಗಳಿಗೆ ಜಾಹೀರಾತು ಕೊಡುವುದಕ್ಕೆ ಕೆಲವು ಮಾನದಂಡಗಳಿವೆ. ಆ ಮಾನದಂಡಗಳನ್ನು ನ್ಯಾಷನಲ್ ಹೆರಾಲ್ಡ್ ಪೂರೈಸಿದೆಯಾದರೂ, ಸದ್ಯಕ್ಕೆ ಆ ಪತ್ರಿಕೆಯ ಪ್ರಸಾರ ಸಂಖ್ಯೆ ದೇಶಾದ್ಯಂತ ಲೆಕ್ಕ ಹಾಕಿದರೂ 5 ಸಾವಿರ ದಾಟುವುದಿಲ್ಲ. ರೆಗ್ಯುಲರ್ ಆಗಿ ಡೈಲಿ ಪ್ರಿಂಟ್ ಆಗಲ್ಲ ಎನ್ನವುದಂತೂ ಸತ್ಯ.



