ಯಾವುದೇ ದೇವಸ್ಥಾನಕ್ಕೆ ಹೋಗಿ.. ನೀವು ಹಿಂದೂನಾ.. ಹಿಂದೂ ಆದರೆ ಯಾವ ಜಾತಿ ಎಂದು ಕೇಳಿದರೆ.. ಎಂತಹವರಿಗಾದರೂ ಕೋಪ ಆಕ್ರೋಶ ಬರುವುದು ಸಹಜ. ಶತಶತಮಾನಗಳಿಂದ ಜಾತಿ, ಶೋಷಣೆಯಿಂದ ನಲುಗಿ ಹೋಗಿದ್ದವರು, ಜಾತಿ ಕೇಳಿ ಹೊರಗೆ ಹಾಕಿದರೆ.. ಅದಕ್ಕಿಂತ ಅವಮಾನ ಇನ್ನೊಂದಿಲ್ಲ. ಈಗ ನಟಿ ನಮಿತಾ ಅವರು ಮಧುರೈ ದೇವಸ್ಥಾನದ ಕುರಿತಂತೆ ಇಂತಹುದೇ ಆರೋಪ ಮಾಡಿದ್ದಾರೆ. ಆದರೆ.. ನೈಜ ಕಥೆಯೇ ಬೇರೆ ಇದೆ.
ನಟಿ ನಮಿತಾ ಆರೋಪ ಏನು..?
ʻ ನಾನು ಹಿಂದೂ ಎಂದು ಸಾಬೀತುಪಡಿಸಲು ಸರ್ಟಿಫಿಕೇಟ್ ಕೇಳಿದರು. ನನ್ನ ಜಾತಿ ಪ್ರಮಾಣಪತ್ರವನ್ನು ಸಹ ಕೇಳಿದರು. ದೇಶದಲ್ಲಿ ಭೇಟಿ ನೀಡಿದ ಯಾವುದೇ ದೇವಾಲಯದಲ್ಲಿ ಇಂತಹ ಅಗ್ನಿಪರೀಕ್ಷೆಗೆ ಒಳಗಾಗಿರಲಿಲ್ಲ. ನಾನು ಹಿಂದೂವಾಗಿ ಹುಟ್ಟಿದ್ದು, ನನ್ನ ಮದುವೆ ತಿರುಪತಿಯಲ್ಲಿ ಅದ್ಧೂರಿಯಾಗಿ ನೆರವೇರಿದ್ದು, ಮಗನಿಗೆ ಶ್ರೀಕೃಷ್ಣನ ಹೆಸರಿಡಲಾಗಿದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಈ ಸಂದರ್ಭದಲ್ಲಿ ದೇವಾಲಯದ ಸಿಬ್ಬಂದಿ ಅಸಭ್ಯವಾಗಿ ಮತ್ತು ದುರಹಂಕಾರದಿಂದ ಮಾತನಾಡಿದರು. ನನ್ನ ಜಾತಿ ಮತ್ತು ನನ್ನ ಧರ್ಮವನ್ನು ತೋರಿಸಲು ಪ್ರಮಾಣಪತ್ರವನ್ನು ಕೇಳಿದರುʼʼ ಎಂದು ಆರೋಪಿಸಿದ್ದಾರೆ.
ಮಧುರೈ ದೇವಸ್ಥಾನದವರು ಹೇಳೋದೇನು..?
ದೇವಾಲಯದ ಸಿಬ್ಬಂದಿ ಹೇಳೋದೇನೆಂದರೆ.. ನಮಿತಾ ಮತ್ತು ಅವರ ಪತಿ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದರು. ನಮಿತಾ ಹಣೆಯಲ್ಲಿ ಕುಂಕುಮವೂ ಇರಲಿಲ್ಲ. ನಮ್ಮ ನಿಯಮಗಳ ಪ್ರಕಾರ ನೀವು ಹಿಂದೂವೇ ಎಂದು ಕೇಳಿದ್ದಾರೆ. ಹೌದು ಎಂದು ಹೇಳಿದ ಮೇಲೆ ಹಣೆಗೆ ಕುಂಕುಮ ಹಚ್ಚಿ ಒಳಗೆ ಕಳಿಸಿಕೊಟ್ಟಿದ್ದಾರೆ. ನಂತರ ನಮಿತಾ ಅವರು ಕುಟುಂಬ ಸಮೇತರಾಗಿ ದೇವರ ದರ್ಶನ ಮಾಡಿದ್ದಾರೆʼ ಎಂದಿದ್ದಾರೆ.
ಮಧುರೈ ದೇವಸ್ಥಾನದ ನಿಯಮಗಳೇನಿವೆ..?
ಮಧುರೈನ ಮೀನಾಕ್ಷಿ ದೇವಸ್ಥಾನಕ್ಕೆ ತನ್ನದೇ ಆದ ಇತಿಹಾಸ, ಪರಂಪರೆ ಇದೆ. ತಮಿಳುನಾಡಿನ ಮಧುರೈ ದೇವಸ್ಥಾನದಲ್ಲಿ ಗಂಡಸರೇ ಆಗಲಿ, ಹೆಂಗಸರೇ ಆಗಲಿ.. ಮೈಮುಚ್ಚುವ ಬಟ್ಟೆ ತೊಟ್ಟಿರಬೇಕು. ಅಲ್ಲದೆ ಹಿಂದೂಗಳಲ್ಲದವರು ದೇವಸ್ಥಾನದ ಒಳಗೆ ಪ್ರವೇಶಿಸಲು ಅವಕಾಶ ಇಲ್ಲ. ಮದ್ರಾಸ್ ಹೈಕೋರ್ಟ್ʻನಲ್ಲಿ ಮಧುರೈ ದೇವಸ್ಥಾನದ ನಿಯಮಗಳಿಗೆ ಗೆಲುವಾಗಿದೆ. ಅದರೆ ದೇವಸ್ಥಾನದ ಒಳಗಿನ ಮೀನಾಕ್ಷಿ ಅಮ್ಮ ಹಾಗೂ ಸುಂದರೇಶ್ವರ ದೇಗುಲಗಳಿಗೆ ಮಾತ್ರವೇ ಈ ನಿರ್ಬಂಧ ಇದೆ. ಉಳಿದಂತೆ 15 ಎಕರೆಯಷ್ಟು ವಿಶಾಲವಾದ ದೇವಸ್ಥಾನದ ಆವರಣದ ಒಳಗೆ ಹಿಂದೂಯೇತರರೂ ಬರಬಹುದು. ಈಗ ನಟಿ ನಮಿತಾ ಅವರು ಆರೋಪ ಮಾಡಿರುವುದು ಇದೇ ದೇಗುಲದ ವಿಷಯಕ್ಕೆ.
ಕೋರ್ಟ್ ಆದೇಶವೂ ಇದೆ..
ಹೌದು, ಡಿ. ಸೆಂಥಿಲ್ ಕುಮಾರ್ ಎಂಬುವವರು ಮದ್ರಾಸ್ ಹೈಕೋರ್ಟಿನಲ್ಲಿ ದಿಂಡಿಗುಲ್ ಜಿಲ್ಲೆಯಲ್ಲಿರುವ ದೇವಸ್ಥಾನದಲ್ಲಿ ಹಿಂದೂಗಳಲ್ಲದವರು ದೇವಸ್ಥಾನಕ್ಕೆ ಬಂದು ನಮ್ಮ ಧರ್ಮ, ಆಚರಣೆಗಳನ್ನು ನಿಂದಿಸುತ್ತಾರೆ. ಇದು ನೋವಾಗುತ್ತದೆ ಎಂದು ಅರ್ಜಿ ಸಲ್ಲಿಸಿದ್ದರು. ಸೆಂಥಿಲ್ ಕುಮಾರ್ ದಿಂಡಿಗುಲ್ ಜಿಲ್ಲೆಯ ದೇವಸ್ಥಾನವೊಂದರ ಹೊರಗಡೆ ಚಪ್ಪಲಿ ಕಾಯುವ ಅಂಗಡಿ ಇಟ್ಟುಕೊಂಡಿದ್ದರು. ಇದಕ್ಕೆ ತಮಿಳುನಾಡು ಸರ್ಕಾರ ದೇವಸ್ಥಾನ ಪ್ರವಾಸಿ ಸ್ಥಳ, ಹಿಂದೂ ಹೌದೋ.. ಅಲ್ಲವೋ ಎಂದು ಕೇಳಲು ಬರುವುದಿಲ್ಲ ಎಂದು ವಾದಿಸಿತ್ತು.
ಆದರೆ ಸರ್ಕಾರದ ವಾದವನ್ನು ತಿರಸ್ಕರಿಸಿದ ಮದ್ರಾಸ್ ಹೈಕೋರ್ಟ್ ದೇವಸ್ಥಾನಗಳು ನಂಬಿಕೆಯ ಕ್ಷೇತ್ರಗಳು. ಪ್ರವಾಸಿ ಸ್ಥಳಗಳಲ್ಲ ಎಂದು ಹೇಳಿತ್ತು. ಅಷ್ಟೇ ಅಲ್ಲ, ಹಿಂದೂಗಳಲ್ಲದವರೂ ಬರಬಹುದು. ಆದರೆ ಹಿಂದೂ ಧಾರ್ಮಿಕ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿತ್ತು. ದೇವರು, ಹಿಂದೂ ಧರ್ಮದಲ್ಲಿ ನಂಬಿಕೆ ಇಲ್ಲದವರಿಗೆ ಅವರು ಇದ್ದಂತೆ ಇರಲು ಅವಕಾಶ ಇದೆ. ಹಾಗೆಯೇ ಹಿಂದೂ ಧರ್ಮದಲ್ಲಿ ನಂಬಿಕೆ ಇರಿಸಿಕೊಂಡವರಿಗೂ ಅಷ್ಟೆ, ಅವರ ಧರ್ಮ, ನಂಬಿಕೆಗಳನ್ನು ಯಾರೂ ನೋಯಿಸಬಾರದು ಎಂದು ಹೇಳಿತ್ತು.
ನಟಿ ನಮಿತಾ ಅವರೂ ಅಷ್ಟೆ, ಹಣೆಯಲ್ಲಿ ಕುಂಕುಮ ಕೂಡಾ ಇಲ್ಲದೇ ಇರುವುದನ್ನು ಪ್ರಶ್ನೆ ಮಾಡಿದ್ದಾರೆ. ಹಿಂದೂ ಹೌದು ಎಂದಾದ ಮೇಲೆ ಹಣೆಗೆ ಕುಂಕುಮ ಇಟ್ಟು ದೇವರ ದರ್ಶನ ಮಾಡಿಸಿದ್ದಾರೆ. ಆಗಿರುವುದು ಇಷ್ಟೆ.



