ಕರ್ನಾಟಕದಲ್ಲಿ RSS BAN ಮಾಡ್ತಾರಂತೆ ಎಂಬ ಸುದ್ದಿಗೆ ದಿಢೀರನೆ ಮನ್ನಣೆ ಸಿಕ್ಕಿದೆ. ವಾಸ್ತವದಲ್ಲಿ ರಸ್ತೆ ಗುಂಡಿ, ಉತ್ತರ ಕರ್ನಾಟಕದಲ್ಲಿನ ಪ್ರವಾಹದಂತಹ ಗಂಭೀರ ಸಮಸ್ಯೆಗಳು ಹಿನ್ನೆಲೆಗೆ ಸರಿದಿವೆ. ಈ ನಡುವೆ ʻʻಸರ್ಕಾರಿ ಜಾಗಗಳಲ್ಲಿ ಯಾವುದೇ ಖಾಸಗಿ ಸಂಘಟನೆ, ಆರ್‌ಎಸ್‌ಎಸ್ ಸೇರಿದಂತೆ, ಯಾವುದೇ ಸಭೆ, ಸಮಾರಂಭ ಅಥವಾ ಚಳುವಳಿಗಳಿಗೆ ಪೊಲೀಸ್ ಅನುಮತಿ ಮತ್ತು ಸಂಬಂಧಿತ ಇಲಾಖೆಯ ಅಧಿಕಾರಿಗಳಿಂದ ಪೂರ್ವಾನುಮತಿ ಕಡ್ಡಾಯʼʼ ಎಂಬ ನಿರ್ಧಾರ ಹೊರಬಿದ್ದಿದೆ. ಈ ನಿಯಮವು ಆರ್‌ಎಸ್‌ಎಸ್‌ಗೆ ಮಾತ್ರವಲ್ಲ, ಎಲ್ಲ ಖಾಸಗಿ ಸಂಘ ಸಂಸ್ಥೆಗಳಿಗೂ ಅನ್ವಯವಾಗಲಿದೆ. ವಿಶೇಷವಾಗಿ, ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಯಾವುದೇ ಚಟುವಟಿಕೆಗೆ ಇನ್ಮುಂದೆ ಅನುಮತಿ ಕಡ್ಡಾಯವಾಗಿದೆ. ಇದರಲ್ಲಿ ಹೊಸತೇನೂ ಇಲ್ಲ. 2013ರಲ್ಲಿ ಬಿಜೆಪಿ ಸರ್ಕಾರವೇ ತಂದಿದ್ದ ಆದೇಶದ ಪುನರಾವರ್ತನೆಯಷ್ಟೇ. ಆದರೆ ಚರ್ಚೆಯಾಗುತ್ತಿರುವುದು ಮಾತ್ರ RSS BAN.
ಈಗ ಈ ವಿಷಯ ಚರ್ಚೆ ಮಾಡುವುದಕ್ಕೆ ಹೋದರೆ.. ಇದು ಬಿಜೆಪಿಯೇ ತಂದಿದ್ದ ಆದೇಶ ಎಂದು ಹೇಳಿ, ಬಿಜೆಪಿಯನ್ನು ವಿಲನ್ ಮಾಡುವುದು ಎರಡನೆಯದಾಗಿ RSS BAN ಕುರಿತ ಚರ್ಚೆ ಜಾರಿಯಲ್ಲಿರುವಂತೆ ನೋಡಿಕೊಳ್ಳುವುದು. ಇದು ಮೊದಲು ಅರ್ಥವಾಗಿದ್ದು RSS ನಾಯಕರಿಗೆ. ಹೀಗಾಗಿಯೇ ಅವರು ಬಿಜೆಪಿಯಲ್ಲಿರುವ ನಾಯಕರಿಗೆ ಗಪ್ ಚುಪ್ ಆಗಿರಿ ಎಂಬ ಸಂದೇಶ ರವಾನೆ ಮಾಡಿದ್ದಾರೆ. ಇಷ್ಟೆಲ್ಲ ಆಗಿ RSS BAN ಸಾಧ್ಯವೇ ಎಂದು ನೋಡಿದರೆ.. ಅದು ಅಸಾಧ್ಯ.
ನೆಹರು, ಇಂದಿರಾ, ಪಿವಿ ನರಸಿಂಹ ರಾವ್ ಎಲ್ಲರೂ ತಲಾ ಒಂದೊಂದು ಬಾರಿ RSS BAN ಮಾಡಿದ್ದಾರೆ. RSS BAN ಆದೇಶವನ್ನು ಕೋರ್ಟಿನಲ್ಲಿ ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಾಗದೆ ಹಿಂದೆ ತೆಗೆದುಕೊಂಡಿದ್ದಾರೆ. ಇನ್ನು ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಯಾವೊಬ್ಬ ಸರ್ಕಾರಿ ನೌಕರರೂ ಆರ್‌ಎಸ್‌ಎಸ್‌ನಲ್ಲಿ ಭಾಗವಹಿಸುವಂತಿಲ್ಲ ಎಂದು ಠರಾವು ಹೊರಡಿಸಿದ್ದರು. ಆ ಆದೇಶಕ್ಕೆ ಮೂರು ಕಾಸಿನ ಬೆಲೆ ಇರಲಿಲ್ಲ. ಮೋದಿ ಅಧಿಕಾರಕ್ಕೆ ಬಂದ ಮೇಲೆ.. ಯಾರೋ ಒಬ್ಬರಿಗೆ ನೆನಪಾಗಿ.. 2024ರಲ್ಲಿ ಆ ಆದೇಶವನ್ನು ರದ್ದು ಮಾಡಿದ್ದರು.
2022ರಲ್ಲಿ ತಮಿಳುನಾಡಿನ ರಾಜ್ಯ ಸರಕಾರವೂ ಕೂಡಾ ಆರಸ್ಸೆಸ್‌ನ ವಿವಿಧ ಕಾರ್ಯಕ್ರಮಗಳನ್ನು ಇದೇ ನೆಪ ಹೇಳಿ ರದ್ದು ಮಾಡಿತ್ತು. ಸಾಮಾಜಿಕ ಶಾಂತಿ-ಸುವ್ಯವಸ್ಥೆಗಳಿಗೆ ತೊಂದರೆಯಾಗುತ್ತದೆ ಎಂದು ಸಾಬೀತು ಪಡಿಸದೇ ಇದ್ದರೆ ನಿಷೇಧ ಹೇರುವಂತೆಯೇ ಇಲ್ಲ ಎಂದು ಹೈಕೋರ್ಟ್, ಸರ್ಕಾರಕ್ಕೆ ಬುದ್ದಿ ಹೇಳಿತ್ತು.
ಆರ್ ಎಸ್ ಎಸ್ ಬ್ಯಾನ್ ಏಕೆ ಸಾಧ್ಯ ಇಲ್ಲ ಎಂದರೆ..
ಒಂದು ಆರ್ಡರ್ ಪಾಸ್ ಮಾಡಿ ಬ್ಯಾನ್ ಎನ್ನುವುದಕ್ಕೆ ಸಾಧ್ಯ ಇಲ್ಲ. ಸಂವಿಧಾನದ ಪ್ರಕಾರ ಅದು ಅಸೆಂಬ್ಲಿ ಅಥವಾ ಪಾರ್ಲಿಮೆಂಟಿನಲ್ಲಿ ಚರ್ಚೆಯಾಗಬೇಕು.
ನನ್ನ ಅಥವಾ ನಮ್ಮ ಪಕ್ಷದ ಸಿದ್ಧಾಂತಕ್ಕೆ ವಿರೋಧ ಇದೆ ಎಂಬ ಮಾತ್ರಕ್ಕೆ ಸಂಘಟನೆಯ ನಿಷೇಧಕ್ಕೆ ಕೈಹಾಕುವುದಕ್ಕೆ ಸಾಂವಿಧಾನಿಕ ಅಧಿಕಾರ ಇಲ್ಲ. ಆದರೆ, ನಿರ್ದಿಷ್ಟ ಶಾಖೆ ಅಥವಾ ವ್ಯಕ್ತಿಗಳ ಕಾರ್ಯಕ್ರಮಕ್ಕೆ ಕ್ರಮ ಕೈಗೊಳ್ಳಬಹುದು. ಇಡೀ ಸಂಘಟನೆಯ ಮೇಲೆ ಕ್ರಮ ಕೈಗೊಳ್ಳುವುದಕ್ಕೆ ಬರುವುದಿಲ್ಲ. ಈ ವಿಷಯದಲ್ಲಿಯೂ ಕೂಡಾ ಸಂಘಟನೆಯಿಂದ ವಿವರ ಪಡೆಯಲೇಬೇಕು.
ಸಂವಿಧಾನದ ಆರ್ಟಿಕಲ್ 14 ಪ್ರಕಾರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಿಯಂತ್ರಣ ಹೇರುವುದಕ್ಕೆ ಬರುವುದಿಲ್ಲ. ಇನ್ನು ನಿಷೇಧ ಮಾಡುವ ಅಧಿಕಾರ, ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಇಲ್ಲ. ಅದು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತದೆ.
ಅಕಸ್ಮಾತ್ ರಾಜ್ಯ ಸರ್ಕಾರ ನಿಷೇಧ ಮಾಡಿದರೆ.. ಅದನ್ನು ಸುಪ್ರೀಂಕೋರ್ಟಿನಲ್ಲಿ ತಕ್ಷಣ ಪ್ರಶ್ನೆ ಮಾಡುವುದಕ್ಕೆ ಸಂವಿಧಾನದ ಆರ್ಟಿಕಲ್ 32 ಮತ್ತು ಆರ್ಟಿಕಲ್ 142 ಅವಕಾಶ ನೀಡಿದೆ. ಆಗ ಸರ್ಕಾರ ಉತ್ತರ ನೀಡಬೇಕು. ನೀಡದೇ ಹೋದರೆ.. ನ್ಯಾಯಾಲಯ ಛೀಮಾರಿ ಹಾಕುತ್ತದೆ. ಬ್ಯಾನ್ ತೆರವಾಗುತ್ತದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯಿಂದ ʻʻಸಾಮಾಜಿಕ ಸಾಮರಸ್ಯ ಕೆಡುತ್ತದೆ, ಸಮಾಜದಲ್ಲಿ ಅಶಾಂತಿ/ದೊಂಬಿಗಳಾಗುತ್ತವೆ. ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಚ್ಯುತಿಯಾಗುತ್ತದೆ. ವ್ಯಕ್ತಿಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆʼ; ಎಂದು ಹೇಳುವುದಲ್ಲ, ಸಾಕ್ಷಿ, ದಾಖಲೆಗಳ ಮೂಲಕ ತೋರಿಸಬೇಕು.
ಈ ಹಿಂದೆ ʻಕೇಸರಿ ಭಯೋತ್ಪಾದನೆʼ ಎಂಬ ಪದದ ಮೂಲಕ ಪರೋಕ್ಷ ನಿಯಂತ್ರಣಕ್ಕೆ ಮುಂದಾಗಿತ್ತು. ಈಗ ಅದೊಂದು ನಿಗೂಢ ಸಂಘಟನೆ, ರಿಜಿಸ್ಟ್ರಾರ್ ಇಲ್ಲದ ಸಂಘಟನೆ, ರಹಸ್ಯವಾಗಿ ಕೆಲಸ ಮಾಡುವ ಸಂಘಟನೆ ಎಂಬ ಪ್ರಚಾರ ಮಾಡಲಾಗುತ್ತಿದೆ. ಅದು ಮಾಧ್ಯಮಗಳಲ್ಲಿ ಸೌಂಡ್ ಮಾಡಬಹುದಷ್ಟೇ.



