ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಬಿಂದಾಸ್ ಲೈಫು ನಡೆಸುತ್ತಿರುವುದು ಫೋಟೋ ಮತ್ತು ವಿಡಿಯೋಗಳ ಮೂಲಕ ಬಹಿರಂಗವಾಗಿದೆ. ದುಡ್ಡು ಕೊಟ್ಟರೆ ಬೇಕಾದ್ದು ಸಿಗತೈತಿ.. ಈ ಜಗದೊಳು ಕಾಣೋ.. ಎಂಬ ಹಾಡು ಮತ್ತೊಮ್ಮೆ ನೆನಪಾಗುತ್ತಿದೆ.
ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾಗಿದೆ. ಜೈಲಲ್ಲಿ ಊಟ ಸೇರುತ್ತಿಲ್ಲ, ಅಡ್ಜಸ್ಟ್ ಆಗುತ್ತಿಲ್ಲ ಎಂದು ಅರ್ಜಿಯನ್ನೂ ಹಾಕಲಾಗಿದೆ. ಆದರೆ, ಜೈಲಿನಲ್ಲಿ ದರ್ಶನ್ ಜೀವನ ನಿಜಕ್ಕೂ ಹೇಗಿದೆ ಎಂದರೆ.. ಅಲ್ಲಿ ಎಲ್ಲವೂ ಸಿಗುತ್ತಿದೆ. ವೈರಲ್ ಆಗಿರೋ ಫೋಟೋ ನೋಡಿದರೆ ಸಾಕು.. ಕಾಫಿ ಕುಡಿಯುತ್ತಿರುವ ಕಾಫಿ ಮಗ್ ನೋಡಿದರೆ, ಅದು ಜೈಲಿನದ್ದಲ್ಲ ಎಂದು ಪಕ್ಕಾ ಹೇಳುವಂತಿದೆ. ಕೈಲಿ ಸಿಗರೇಟು ಇರುವ ಫೋಟೋ ವೈರಲ್ ಆಗಿದೆ. ಅಷ್ಟೇ ಅಲ್ಲ, ರೌಡಿ ಧರ್ಮ ಎಂಬುವವನ ಜೊತೆ ವಿಡಿಯೋ ಕಾಲ್ʻನಲ್ಲಿ ಮಾತನಾಡಿರುವುದೂ ಸಾಕ್ಷಿ ಸಮೇತ ಬೆಳಕಿಗೆ ಬಂದಿದೆ. ಹಾಗಾದರೆ, ದರ್ಶನ್ ಅವರನ್ನು ಜೈಲಿನಲ್ಲಿ ಇಡೋದು ಯಾಕೆ..? ಆ ರೀತಿ ಜೈಲಿನಲ್ಲಿ ಇಡುವ ಬದಲಿಗೆ ಆತ ಹೊರಗೇ ಇರಲಿ ಬಿಡಿ, ಶಿಕ್ಷೆ, ಜೈಲು ಅಂತಾ ನಾಟಕ ಮಾಡೋದು ಯಾಕೆ ಎಂದು ಸಾರ್ವಜನಿಕರು ಸರ್ಕಾರ ಮತ್ತು ಜೈಲು ಅಧಿಕಾರಿಗಳನ್ ಪ್ರಶ್ನೆ ಮಾಡ್ತಿದ್ದಾರೆ.
ಈ ಫೋಟೋ ವೈರಲ್ ಆಗಿರುವುದು ಜೈಲಿನಲ್ಲಿಯೇ ಇರುವ ಖೈದಿಯೊಬ್ಬರಿಂದ ಎನ್ನಲಾಗಿದೆ. ಆ ಖೈದಿಗೆ ಜೈಲಿನಲ್ಲಿ ಮೊಬೈಲ್ ಮತ್ತು ಇಂಟರ್ʻನೆಟ್ ಸೌಲಭ್ಯ ಸಿಕ್ಕಿದ್ದು ಹೇಗೆ..? ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳೇ ಉತ್ತರಿಸಬೇಕು. ವ್ಯಕ್ತಿಯೊಬ್ಬರ ಜೊತೆ ದರ್ಶನ್ ಅವರು ವಿಡಿಯೋ ಕಾಲ್ನಲ್ಲಿ ಮಾತನಾಡಿದ್ದಾರೆ. ಜೈಲಿನಲ್ಲಿ ಇರುವ ಬೇರೊಬ್ಬ ಖೈದಿಯ ಮೊಬೈಲ್ ಬಳಸಿ ವಿಡಿಯೋ ಕಾಲ್ ಮಾಡಿರುವ ಸಾಧ್ಯತೆ ಇದೆ. ಆಪ್ತರೊಬ್ಬರ ಜೊತೆ ವಿಡಿಯೋ ಕಾಲ್ನಲ್ಲಿ ದರ್ಶನ್ ಅವರು ಮಾತನಾಡಿದ್ದಾರೆ. ‘ಊಟ ಆಯ್ತಾ? ನಾನು ಆರಾಮಾಗಿದ್ದೀನಿ’ ಎಂದು ಮಾತುಕತೆ ಮಾಡಲಾಗಿದೆ. ರೆಡ್ಡಿ ಎಂಬಾತನ ಸ್ಟೇಟಸ್ನಲ್ಲಿ ವಿಡಿಯೋ ಹರಿದಾಡಿದೆ.
13 ವರ್ಷಗಳ ಹಿಂದೆ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ನಡೆಸಿ ಮೊದಲ ಬಾರಿಗೆ ಜೈಲು ಸೇರಿದ್ದ ದರ್ಶನ್‌ಗೆ ರೌಡಿ ಸೈಕಲ್ ರವಿ ಮತ್ತು ಸಹಚರರು ಜೈಲಿನಲ್ಲಿ ರಾಜಾತಿಥ್ಯ ನೀಡಿದ್ದರು. ಈಗ ರೌಡಿ ಸಿದ್ದಾಪುರ ಮಹೇಶ್ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ರೌಡಿ ವಿಲ್ಸನ್ ಗಾರ್ಡನ್ ನಾಗ ಮತ್ತು ಸಹಚರರು ದರ್ಶನ್‌ಗೆ ವಿಶೇಷ ಸತ್ಕಾರ ನೀಡುತ್ತಿದ್ದಾರೆ.
ರೇಣುಕಾಸ್ವಾಮಿ ತಂದೆಯ ಕಣ್ಣೀರು :
ಆತನಿಗೆ ಜೈಲಿನಲ್ಲಿದ್ದೇನೆ ಎನ್ನುವ ಯಾವ ಸಂಕಟವೂ ಇಲ್ಲ. ನನ್ನ ಮಗ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ದರ್ಶನ್ ಜೈಲಿನಲ್ಲಿದ್ದಾರೋ ಇಲ್ಲ ಹೊರಗೆ ರೆಸಾರ್ಟ್‌ನಲ್ಲಿದ್ದಾರೋ ಗೊತ್ತಾಗುತ್ತಿಲ್ಲ. ಕೊಲೆ ಮಾಡಿದ ತಪ್ಪು ಭಾವನೆ ಅವರ ಮುಖದಲ್ಲಿ ಕಾಣುತ್ತಿಲ್ಲ. ಸಾಮಾನ್ಯ ಕೈದಿಯಂತೆ ಶಿಕ್ಷೆ ಅನುಭವಿಸಿದೇ ರೆಸಾರ್ಟ್‌ನಲ್ಲಿ ಕುಳಿತಂತೆ ಕುಳಿತಿರುವ ಆರೋಪಿಯನ್ನು ಕಂಡು ನನಗೆ ಶಾಕ್ ಆಗಿದೆ ಎಂದು ರೇಣುಕಾಸ್ವಾಮಿ ಅವರ ತಂದೆ ಕಾಶೀನಾಥಯ್ಯ ಶಿವನಗೌಡ್ರು ಕಣ್ಣೀರಿಟ್ಟಿದ್ದಾರೆ.
ಆರಂಭದಿಂದಲೂ ನನಗೆ ಸರ್ಕಾರ ಹಾಗೂ ಪೊಲೀಸ್ ತನಿಖೆ ಸಾಗುತ್ತಿರುವ ಬಗ್ಗೆ ನಂಬಿಕೆ ಇದೆ ಎನ್ನುತ್ತಿದ್ದ ಕಾಶೀನಾಥಯ್ಯನವರೇ ಈಗ ಸಿಬಿಐ ತನಿಖೆ ನಡೆಸಿದರೆ ಶಿಕ್ಷೆ ಸಿಗಬಹುದೇನೋ ಎಂಬ ಆಶಾಭಾವನೆಯಲ್ಲಿದ್ದಾರೆ.
ದರ್ಶನ್ ಜೈಲಿಗೆ ಮನೆಯೂಟ ತರಿಸಿಕೊಳ್ಳಲು ಅನುಮತಿ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ದರ್ಶನ್‌ರ ಈ ಕೋರಿಕೆ ಒಪ್ಪದ ನ್ಯಾಯಾಲಯ ಮನೆಯೂಟಕ್ಕೆ ಅವಕಾಶ ನಿರಾಕರಿಸಿತ್ತು. ಜೈಲಿನ ಅಧಿಕಾರಿಗಳು ಅದಕ್ಕೆಲ್ಲ ಅವಕಾಶ ಕೊಡೋದು ಸಾಧ್ಯವೇ ಇಲ್ಲ, ಕಾನೂನು, ಜೈಲಿನ ನಿಯಮಗಳು ಎಂದೆಲ್ಲ ಕೋರ್ಟಿನಲ್ಲಿ ವಾದಿಸಿದ್ದರು. ಈಗ ನೋಡಿದರೆ.. ಹೊರ ಬಂದಿರುವ ಫೋಟೋಗಳು ಬೇರೆಯದೇ ಕಥೆ ಹೇಳುತ್ತಿವೆ.
ಇನ್ನು ದರ್ಶನ್ʻಗೆ ಊಟ ಅಡ್ಜಸ್ಟ್ ಆಗುತ್ತಿಲ್ಲ ಎನ್ನುವುದೆಲ್ಲ ಭ್ರಮೆಯೇ ಹೊರತು ಮತ್ತೇನಲ್ಲ. ಇಷ್ಟೆಲ್ಲ ಸೌಲಭ್ಯ ಕೊಟ್ಟಿರುವ ಜೈಲಿನ ಅಧಿಕಾರಿಗಳು ಊಟದ ವಿಷಯಕ್ಕೆ ಸಮಸ್ಯೆ ಮಾಡ್ತಾರಾ..?
ಘಟನೆಯ ನಂತರ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಗೃಹ ಸಚಿವ ಪರಮೇಶ್ವರ್ ಮಾಲಿನಿ ಕೃಷ್ಣಮೂರ್ತಿ ಜೊತೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ದರ್ಶನ್‌ಗೆ ರಾಜಾತಿಥ್ಯದ ಬಗ್ಗೆ ಪರಮೇಶ್ವರ್ ಗರಂ ಆಗಿದ್ದಾರೆ. ಆಂತರಿಕ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.
ಈ ಟ್ರೀಟ್ʻಮೆಂಟ್ ದರ್ಶನ್ ಒಬ್ಬರಿಗೇ ಅಲ್ಲ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದ A4 ಆರೋಪಿ ರಘು ಜೈಲಿನಿಂದ ವಿಡಿಯೋ ಕರೆ ಮಾಡಿರುವ ಸಂಗತಿ ಇದೀಗ ಬಯಲಾಗಿದೆ. ಆತನ ಸಹೋದರ ಮುರಳಿಯೇ ಈ ಸಂಗತಿ ಬಾಯಿಬಿಟ್ಟಿದ್ದಾರೆ.
ಆದರೆ ಇದೇ ಸೌಲಭ್ಯ ಅನುಕುಮಾರ್ ಅವರಿಗೆ ಇಲ್ಲ. A7 ಆರೋಪಿ ಅನುಕುಮಾರ್ ತಾಯಿ ಜಯಮ್ಮ ಒಬ್ಬರನ್ನು ಹೊಗಳಿದ್ರೆ ನಮಗೆ ಬರೋದು ಏನಿದೆ. ದರ್ಶನ್ ಕರುಣೆ ಇಟ್ಟು ನಮ್ಮ ಮಕ್ಕಳನ್ನು ಬಿಡಿಸಬೇಕು. ನಾನು ಜೈಲಿಗೆ ಹೋಗಿಲ್ಲ, ಮಗನನ್ನು ಭೇಟಿ ಮಾಡಿಲ್ಲ. ನಮ್ಮ ಮಗನನ್ನು ಬಿಡಿಸಿಕೊಂಡು ಬರೋಕೆ ನಮ್ಮ ಕೈಯ್ಯಲ್ಲಿ ಶಕ್ತಿಯಿಲ್ಲ. ದರ್ಶನ್ ಜೊತೆ ಹೋಗಿದಾನೆ. ಹಾಗಾಗಿ ಅವರೇ ಸಹಾಯ ಮಾಡಬೇಕು. ನಮ್ಮ ಹತ್ರ ಹಣ ಕೊಟ್ಟು ಬಿಡಿಸಿಕೊಂಡು ಬರುವಷ್ಟು ಶಕ್ತಿ ಇದ್ಯಾ? ನಮ್ಮ ಪರಿಸ್ಥಿತಿ ಹೀಗಿದೆ. ಒಳಗಿಂದು ಯಾರು ಕಂಡೋರು. ಸೊಸೈಟಿ ರಾಗಿ, ಅಕ್ಕಿ ತಿಂದು ಜೀವನ ಮಾಡ್ತೀವಿ. ಇರೋ ಒಬ್ಬ ಮಗಳಿಗೆ ಕಾಯಿ, ಹಣ ಕೊಡೋ ಶಕ್ತಿಯಿಲ್ಲ. ದರ್ಶನ್‌ಗೆ ಜೈಲಲ್ಲಿ ಎಲ್ಲಾ ಸಿಕ್ತಿದೆ. ಬಡವರ ಮಕ್ಕಳ ಗತಿ ಏನು? ದುಡಿದು ತಿನ್ನೋ ಮಕ್ಕಳು ಜೈಲಿಗೆ ಹೋಗಿ ಕೂತಿದ್ದಾರೆ. ನಮಗೇನು ಜಮೀನು ಇದೆಯಾ, ಇರೋದೊಂದು ಗುಡಿಸಲು. ನಮ್ಮ ಹುಡುಗರು ಜೈಲಿಗೆ ಹೋಗಿ ನೋಡ್ಕೊಂಡು ಬಂದಿದ್ದಾರೆ. ದುಡಿಯೋ ಮಕ್ಕಳನ್ನು ತಂದು ಕೂಡಿ ಹಾಕಿದೀನಿ ಅನ್ನೋದು ಅವರಿಗೂ ಇರಬೇಕು ಎಂದು ಬೇಸರ ಹೊರ ಹಾಕಿದ್ದಾರೆ.



