ಸಿದ್ದರಾಮಯ್ಯ ವೀಕ್ ಆಗಿದ್ದಾರೆ ಎಂದು ಹೇಳಿದರೆ ಅಭಿಮಾನಿಗಳು ಕೆರಳಬಹುದು. ಆದರೆ, ವಾಸ್ತವ ನೋಡುತ್ತಿದ್ದರೆ ಹಾಗೆಯೇ ಅನಿಸುತ್ತದೆ. ಇತ್ತೀಚೆಗೆ ನಡೆಯುತ್ತಿರುವ ಯಾವುದೇ ಘಟನೆ, ಪ್ರಕರಣಗಳಲ್ಲೂ ಹಳೆಯ ಸಿದ್ದರಾಮಯ್ಯ ಖದರ್, ಠೇಂಕಾರ ಕಾಣಿಸುತ್ತಿಲ್ಲ. ಸಿದ್ದರಾಮಯ್ಯ ಬಹಿರಂಗವಾಗಿ ಹೇಳುತ್ತಿರುವ ಮಾತುಗಳಿಗೂ, ಅಂತರಂಗದಲ್ಲಿ ಆಗುತ್ತಿರುವ ಬೆಳವಣಿಗೆಗಳಿಗೂ ಒಂದಕ್ಕೊಂದು ಮ್ಯಾಚ್ ಆಗುತ್ತಿಲ್ಲ. ನೀವೇ ನೋಡುತ್ತಾ ಹೋಗಿ..
ಬಳ್ಳಾರಿ ಬುಲೆಟ್ ಗಲಾಟೆಯನ್ನೇ ತಗೊಂಡ್ರೆ, ಸಿದ್ದರಾಮಯ್ಯ ಅವರು ಭರತ್ ರೆಡ್ಡಿ ಮತ್ತವರ ಪಟಾಲಂ ವಿರುದ್ಧವೇ ಇದ್ದರು. ಭರತ್ ರೆಡ್ಡಿ ಇಲ್ಲದ ವಿವಾದವೊಂದನ್ನು ಹುಟ್ಟುಹಾಕಿದ ಸಿಎಂ ಬೇಸರ ಪಟ್ಟುಕೊಂಡಿದ್ದರು. ಏಕೆಂದರೆ ಗಲಾಟೆ ಶುರುವಾದ ತಕ್ಷಣ ಜನಾರ್ದನ ರೆಡ್ಡಿ, ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೂ ವಿಷಯ ತಂದಿದ್ದರು. ಬಳ್ಳಾರಿಯ ಮನೆಯಲ್ಲಿ ಏನೇನಾಯ್ತು ಎಂಬುದು ಅವರಿಗೂ ಗೊತ್ತು. ಸ್ವತಃ ಫೋನಿನಲ್ಲಿಯೂ ಮಾತನಾಡದೇ ಇದ್ದ ಸಿದ್ದರಾಮಯ್ಯ, ಏಕವಚನದಲ್ಲಿಯೇ ಭರತ್ ರೆಡ್ಡಿಗೆ ಕ್ಲಾಸ್ ತಗೊಂಡಿದ್ರು. ಆದರೆ, ಅದಾದ ನಂತರ ಏನಾಯ್ತೋ ಏನೋ. ತೋರಣಗಲ್‌ನ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಶಾಸಕ ಭರತ್ ರೆಡ್ಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಅವರು ಸಿಎಂ ಅವರನ್ನು ಭೇಟಿಯಾದರು. ಫೋನಿನಲ್ಲಿಯೂ ಮಾತನಾಡಲ್ಲ ಎನ್ನುತ್ತಿದ್ದ ಸಿದ್ದರಾಮಯ್ಯ, ಉಚ್ಚಾಟನೆಗೂ ಮನಸ್ಸು ಮಾಡಿದ್ದರಂತೆ. ಆದರೆ ಯಾವಾಗ ಡಿಕೆ ಶಿವಕುಮಾರ್, ಬಹಿರಂಗವಾಗಿ ಭರತ್ ರೆಡ್ಡಿಯ ಬೆಂಬಲಕ್ಕೆ ನಿಂತರೋ, ಸಿದ್ದರಾಮಯ್ಯ ಕೂಡಾ ಸೈಲೆಂಟ್ ಆದರಂತೆ.
ಇದು ಹೊಸ ಘಟನೆ ಅಷ್ಟೇ, ಕೋಗಿಲು ಲೇಔಟ್ ವಿಷಯದಲ್ಲಿಯೂ ಅಷ್ಟೇ, ಸಿದ್ದರಾಮಯ್ಯ ಅವರು ಪಿಣರಾಯಿ ವಿಜಯನ್ ಹೇಳಿಕೆ ನಂತರ ಸಿಂಹದಂತೆಯೇ ಇದ್ದರು. ಘರ್ಜಿಸಿದ್ದರು. ಆದರೆ, ಒಬ್ಬ ವೇಣುಗೋಪಾಲ್ ಹೇಳಿದ ನಂತರ.. ಮೊನ್ನೆಯಷ್ಟೇ ಘರ್ಜಿಸಿದ್ದವರು ಇವರೇನಾ ಎಂದು ಅನುಮಾನ ಪಡುವಂತೆ ಬದಲಾಗಿದ್ದಾರೆ. ಕೋಗಿಲು ಲೇಔಟ್ ವಿಷಯದಲ್ಲಿ ವೇಣುಗೋಪಾಲ್ ಟ್ವೀಟ್‌ಗೆ ಮುನ್ನ ಇದ್ದ ಸಿದ್ದು ಬೇರೆ. ಟ್ವೀಟ್ ನಂತರ ಇರುವ ಸಿದ್ದು ಬೇರೆ.
ಸಿದ್ದರಾಮಯ್ಯ ಅವರು 2013ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅಲ್ಲ. ಒಮ್ಮೆ ನಿರ್ಧಾರ ತೆಗೆದುಕೊಂಡರೆ ಸರಿಯೋ, ತಪ್ಪೋ.. ತಮ್ಮ ನಿರ್ಧಾರಕ್ಕೆ ಬದ್ಧರಾಗಿರುತ್ತಿದ್ದ ಸಿದ್ದರಾಮಯ್ಯ, ಇತ್ತೀಚೆಗೆ ತಾವೇ ನೀಡಿದ್ದ, ತೆಗೆದುಕೊಂಡಿದ್ದ ನಿರ್ಧಾರಗಳಿಂದ ಪದೇ ಪದೇ ಹಿಂದೆ ಸರಿಯುತ್ತಿದ್ದಾರೆ.
ಇಂತಹ ಘಟನೆಗಳು ಬೇಕಾದಷ್ಟಿವೆ. ಇದೆಲ್ಲದರ ಮಧ್ಯೆಯೇ ರಾಜ್ಯದಲ್ಲಿ ಈವರೆಗೆ ದೀರ್ಘಕಾಲ ಸೇವೆ ಸಿಎಂ ಆಗಿ ಸೇವೆ ಸಲ್ಲಿಸಿರುವ ಖ್ಯಾತಿ ಹೊಂದಿರುವ ದಿ.ದೇವರಾಜ್ ಅರಸ್ ದಾಖಲೆಯನ್ನು ಸಿದ್ದರಾಮಯ್ಯ ಹಿಂದಿಕ್ಕಿದ್ದು, ಇತಿಹಾಸ ಸೃಷ್ಟಿಸಿದ್ದಾರೆ. ರಾಜ್ಯದಲ್ಲಿ ಸಾಮಾಜಿಕ ನ್ಯಾಯದ ನಾಯಕರಾಗಿ ಗುರುತಿಸಿಕೊಂಡಿದ್ದ ದೇವರಾಜ್ ಅರಸ್, 2,789 ದಿನಗಳು ಅಂದರೆ ಏಳು ವರ್ಷ 6 ತಿಂಗಳ ಕಾಲ (ಎರಡು ಅವಧಿಗೆ) ಮುಖ್ಯಮಂತ್ರಿಯಾಗಿದ್ದರು. ಈ ದಾಖಲೆಯನ್ನು 2026ರ ಜನವರಿ 1ರಂದು ಸಿದ್ದರಾಮಯ್ಯ ಮುರಿದಿದ್ದಾರೆ. ಜನವರಿ 2ರಂದು ಸಿದ್ದರಾಮಯ್ಯ 2,791 ದಿನಗಳ ಕಾಲ ಸಿಎಂ ಕಚೇರಿಯಲ್ಲಿ ಆಡಳಿತ ನಡೆಸಿದ್ದಾರೆ.
ಸಿದ್ದರಾಮಯ್ಯ 2013ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನಾಂಕ (2013, ಮೇ 13)ದಿಂದ ಪರಿಗಣಿಸಿದರೆ, ಜನವರಿ 4ರಂದು ಅರಸ್ ಅವರ ದಾಖಲೆ ಮೀರಿಸುತ್ತಾರೆ ಎಂದು ಪಕ್ಷದ ಮೂಲಗಳು ತಿಳಿಸುತ್ತವೆ. ಮುಖ್ಯಮಂತ್ರಿಯ ಅಧಿಕಾರಾವಧಿಯನ್ನು ಲೆಕ್ಕಾಚಾರ ಮಾಡುವಾಗ ನೇಮಕಾತಿಯ ದಿನಾಂಕವನ್ನು ಪರಿಗಣಿಸಲಾಗುತ್ತದೆ ಎಂದು ವಿಧಾನಸಭೆ ಸಚಿವಾಲಯದ ಮೂಲಗಳು ತಿಳಿಸಿವೆ.
ಆದರೆ, ಸಿದ್ದರಾಮಯ್ಯನವರಂತೆ ಮಧ್ಯದಲ್ಲಿ ವಿರಾಮವಿಲ್ಲದೆ ಅರಸ್ ಅವರು 1972ರ ಮಾರ್ಚ್ 23ರಿಂದ 1980 ಜನವರಿ 7ರ ವರೆಗೆ ಸತತವಾಗಿ ಏಳೂವರೆ ವರ್ಷ ಸಿಎಂ ಆಗಿ ಕಾರ್ಯನಿರ್ವಹಿಸಿರುವ ದಾಖಲೆ ಹೊಂದಿದ್ದಾರೆ. ಸಿದ್ದರಾಮಯ್ಯ 2013ರಿಂದ 2018ರ ಅವಧಿಯಲ್ಲಿ ಮೊದಲ ಬಾರಿಗೆ ಸಿಎಂ ಆಗಿದ್ದು, ಎರಡನೇ ಬಾರಿ 2023ರ ಮೇ ಸಿಎಂ ಆಗಿದ್ದಾರೆ.



