ಚೈತ್ರಾ ಕುಂದಾಪುರ. ಹಿಂದೂ ಫೈರ್ ಬ್ರಾಂಡ್ ಎಂದೇ ಹೆಸರಾಗಿದ್ದವರು. ಆಮೇಲೆ ಎಂಪಿ ಟಿಕೆಟ್, ಎಂಎಲ್‌ಎ ಟಿಕೆಟ್ ಕೊಡಿಸ್ತೇನೆ ಅಂತಾ ಮೋಸ ಮಾಡಿದ ಆರೋಪ ಹೊತ್ತು, ಜೈಲಿಗೂ ಹೋಗಿ ಬಂದವರು. ಅದಾದ ಮೇಲೆ ಬಿಗ್ ಬಾಸ್ ಶೋಗೂ ಹೋಗಿದ್ದ ಚೈತ್ರಾ ಕುಂದಾಪುರ, ಇತ್ತೀಚೆಗಷ್ಟೇ ಮದುವೆಯಾಗಿದ್ದಾರೆ.
ಈಗ ಚೈತ್ರಾ ಕುಂದಾಪುರ ಅವರನ್ನ ಆಕೆಯ ಹೆತ್ತ ತಂದೆಯೇ ಕಳ್ಳಿ ಅಂದ್ರೆ, ಅಪ್ಪನನ್ನು ಮಗಳು ಕುಡುಕ ಅಂತಾರೆ. ಚೈತ್ರಾ ತಾಯಿ ರೋಹಿಣಿ, ಚೈತ್ರಾ ಬೆನ್ನಿಗೆ ನಿಂತಿದ್ದರೆ, ಚೈತ್ರಾ ತಂದೆ ಬಾಲಕೃಷ್ಣ ನಾಯಕ್ ಪರ ಆವರ ದೊಡ್ಡ ಮಗಳಿದ್ದಾರೆ. ಇನ್ನೊಬ್ಬ ಮಗಳು ಕೂಡಾ ಚೈತ್ರಾ ಕುಂದಾಪುರ ಜೊತೆಯಲ್ಲೇ ಇದ್ದಾರೆ.
ಚೈತ್ರಾ ಕುಂದಾಪುರ ಇತ್ತೀಚೆಗೆ ಅಂದರೆ ಮೇ 09 ರಂದು ಶ್ರೀಕಾಂತ್ ಕಶ್ಯಪ್ ಎಂಬುವವರ ಜೊತೆ ಸಪ್ತಪದಿ ತುಳಿದಿದ್ದಾರೆ. ಇದು ಲವ್ ಮ್ಯಾರೇಜ್. ಮಗಳು ಮದುವೆಯಾಗುತ್ತಿದ್ದಂತೆಯೇ ಚೈತ್ರಾ ಅವರ ತಂದೆ ಬಾಲಕೃಷ್ಣ ನಾಯಕ್ ಮಗಳ ವಿರುದ್ಧ, ಅಳಿಯನ ವಿರುದ್ಧ ಕೆಂಡ ಕಾರುತ್ತಿದ್ದಾರೆ.
ಈ ಮದುವೆಗೆ ಚೈತ್ರಾ ಅವರ ಆಪ್ತ ಬಳಗಕ್ಕೆ ಆಹ್ವಾನವಿತ್ತು. ತಾಯಿಯೂ ಇದ್ದರು. ಆದರೆ ತಂದೆಗೆ ಆಹ್ವಾನ ಇರಲಿಲ್ಲ. ಇಡೀ ವಿವಾದದ ಕೇಂದ್ರ ಬಿಂದುವೇ ಇದು.
ಚೈತ್ರಾ ತಂದೆ ಬಾಲಕೃಷ್ಣ ನಾಯಕ್ ಪ್ರಕಾರ..
ಚೈತ್ರಾ ಕಳ್ಳಿ. ಅಳಿಯನೂ ಕಳ್ಳ. ಕಳ್ಳರು ಕಳ್ಳರು ಕಳ್ಳರು ಮದುವೆಯಾಗಿದ್ದಾರೆ. ಮದುವೆಗೆ ಯಾಕೆ ಹೋಗಿಲ್ಲ ಅಂದ್ರೆ, ಅವಳು ನನ್ನನ್ನು ಮದುವೆಗೆ ಕರೆದಿಲ್ಲ. ನಾನು ಮದುವೆಗೆ ಹೋಗಿಲ್ಲ. ಈ ಮದುವೆಗೆ ನನ್ನ ಒಪ್ಪಿಗೆ ಇಲ್ಲ ಅನ್ನೋ ಬಾಲಕೃಷ್ಣ ನಾಯಕ್. ನನ್ನ ಹೆಂಡತಿಯೂ ಚೈತ್ರಾ ಬೆಂಬಲಕ್ಕೆ ನಿಂತಿದ್ದಾಳೆ. ಇವರಿಗೆಲ್ಲ ದುಡ್ಡಿನ ಆಸೆ ಎಂದು ಆರೋಪಿಸ್ತಾರೆ. ಅವರೀಗ ಇರೋದು ದೊಡ್ಡ ಮಗಳು ಗಾಯತ್ರಿ ಜೊತೆ.
ಬಾಲಕೃಷ್ಣ ಪ್ರಕಾರ ಚೈತ್ರಾ ಕುಂದಾಪುರ ಅಡ್ಡ ದಾರಿಯಲ್ಲಿ ಮೋಸ ಮಾಡಿ ದುಡ್ಡು ಮಾಡಿದ್ದಾರೆ. ಆದರೆ ಗಾಯತ್ರಿ ಹಾಗಲ್ಲ. ಕಷ್ಟಪಟ್ಟು ಹೊಲಿಗೆ ಕೆಲಸ ಮಾಡಿ ಕಷ್ಟಪಟ್ಟು ದುಡಿಯುತ್ತಿದ್ದಾರೆ. ಹೀಗಾಗಿ ನಾನೀಗ ದೊಡ್ಡ ಮಗಳ ಜೊತೆ ಇದ್ದೇನೆ ಎನ್ನುವ ಬಾಲಕೃಷ್ಣ ನಾನು ಕಟ್ಟಿದ ಮನೆಯಲ್ಲಿ ಈಗ ನಾನೇ ಅನಾಥ. ಆಕೆಗೆ ಯಾರು ದೊಡ್ಡ ಸ್ಥಾನಮಾನ ಕೊಡಬೇಡಿ. ಅವಳಿಗೆ ಮಾನ ಮರ್ಯಾದೆ ಇಲ್ಲ. ನನ್ನ ಕುಟುಂಬದ ಮಾನ ಮರ್ಯಾದೆ ತೆಗೆದರು. ನಾನು ಸತ್ಯ, ನ್ಯಾಯ, ಧರ್ಮದಲ್ಲಿ ಬದುಕುತ್ತಿರುವ ವ್ಯಕ್ತಿ. ನನ್ನ ದೊಡ್ಡ ಮಗಳು ಶಾಲೆ ಕೆಲಸ ಮಾಡಿಕೊಂಡು ಹೊಲಿಗೆ ಮಾಡಿಕೊಂಡು ಗೌರವವಾಗಿ ಬದುಕುತ್ತಿದ್ದಾಳೆ. ಬೇರೆ ಬೇರೆ ಬ್ಯಾಂಕುಗಳಲ್ಲಿ ಪಡ್ಡೆ ಹುಡುಗರ ಹೆಸರಿನಲ್ಲಿ ಡೆಪಾಸಿಟ್ ಮಾಡಿ ಬಾಂಡ್ ಮೇಲೆ ಸಾಲ ಪಡೆದಿದ್ದಳು. ನನ್ನ ಮಗಳು ಎಂದು ಹೇಳಲು ನಾಚಿಕೆಯಾಗುತ್ತದೆ. ತಂದೆ ಇಲ್ಲದ ಮಗಳು ಎಂದು ಎಲ್ಲ ಕಡೆ ಹೇಳ್ಕೊಂಡು ಓಡಾಡ್ತಾಳೆ. ಅಪ್ಪನಿಗೇ ಅನ್ನ ಹಾಕದವಳು ಇನ್ಯಾವ ದೇಶ ಸೇವೆ ಮಾಡುತ್ತಾಳೆ? ನನ್ನ ಹೆಂಡತಿಗೂ ಹಣ ಕೊಟ್ಟಿದ್ದಾಳೆ, ಅವಳಿಗೂ ಗಂಡ ಬೇಡ. ಗಂಡನನ್ನು ಬಿಟ್ಟು ಅಂತಹ ಮಗಳಿಗೇ ಸಪೋರ್ಟ್ ಮಾಡ್ತಾಳೆ ಅಂತಾರೆ.
ಆದರೆ ಚೈತ್ರಾ ಕುಂದಾಪುರ ಹೇಳುವುದೇ ಬೇರೆ. ಹುಟ್ಟಿಸಿದರೆ ಸಾಕಾ.. ಮಕ್ಕಳನ್ನು ನೋಡಿಕೊಳ್ಳದ ಅಪ್ಪನಾ.. ಎಂಬ ರೀತಿಯಲ್ಲೇ ಪ್ರಶ್ನೆ ಮಾಡ್ತಾರೆ. ಹೆತ್ತ ಮಕ್ಕಳನ್ನ ಸಾಕಲಿಲ್ಲ, ಫೀಸು ಕಟ್ಟಿ ಓದಿಸಲಿಲ್ಲ, ಹೆಣ್ಣುಮಕ್ಕಳ ಜವಾಬ್ದಾರಿ ಹೊತ್ತು ಮದುವೆಯೂ ಮಾಡಲಿಲ್ಲ.. ಕಟ್ಟಿಕೊಂಡ ಹೆಂಡತಿಗೆ ಹೊಡೆದು ಚಿತ್ರ ಹಿಂಸೆ ಮಾಡಿದ್ದು ಬಿಟ್ರೆ ಬೇರೆ ಏನೂ ಇಲ್ಲಾ. ಎಲ್ಲಾ ಮುಗಿದ ಮೇಲೆ ಅಪವಾದ ಹಾಕೋಕೆ ಮಾತ್ರ ತಂದೆ ಎನ್ನುವ ಹೆಸರು… ವಾವ್.. ಎಂದು ವ್ಯಂಗ್ಯವಾಡುವ ಚೈತ್ರಾ ಎರಡು ಕಾಟ್ರು ಕೊಟ್ರೆ ಯಾರನ್ನು ಬೇಕಾದರೂ ದೇವರು ಅಂತಾನೆ ಅಂತಾ ಅಪ್ಪನ ಜನ್ಮ ಜಾಲಾಡುತ್ತಾರೆ.
ಅದಕ್ಕೆ ಅಪ್ಪನದ್ದು ಒಂದೇ ಕೌಂಟರ್. ನಾನು ಕುಡುಕ ಅನ್ನೋದೇ ನಿಜವಾದ್ರೆ, ನನ್ನ ರಕ್ತ ಪರೀಕ್ಷೆ ಮಾಡಿಸಲಿ ಅನ್ನೋದು. . ಇವಳು ಮದುವೆಗೆ 5 ಲಕ್ಷ ಕೊಡು ಅಂತ ಕೇಳಿದ್ಲು. ವರ್ಷವಿಡೀ ದುಡಿದರೂ ನನಗೆ 10 ಸಾವಿರ ಸಿಗಲ್ಲ. ಇವಳಿಗೆ ಎಲ್ಲಿಂದ ತರಲಿ. ಕೊನೆಗೆ 50 ಸಾವಿರ ಆದರೂ ಕೊಡು ಎಂದಳು. ಆಗಲ್ಲ ಎಂದೆ. ಹಾಗಾದರೆ ನನಗೆ ಅಪ್ಪ ಇಲ್ಲ ಅಂತ ಹೇಳಿಕೊಂಡು ಮದುವೆ ಆಗುತ್ತೇನೆ ಅಂದಳು. ನಿನಗೆ ಇಷ್ಟ ಬಂದಂತೆ ಮಾಡು, ನಿನ್ನ ಮದುವೆಗೆ ನಾನು ಬರಲ್ಲ ಅಂತ ನಾನು ಹೇಳಿದೆ. ನನಗೆ ಬಹಳ ನೋವಾಗಿದೆ. ಈಗ ಅವಳು ಬಂದರೂ ಕೂಡ ನಾನು ಅವಳನ್ನು ಒಪ್ಪಿಕೊಳ್ಳಲ್ಲ ಅಂತಾರೆ.
ಇನ್ನು ಚೈತ್ರಾ ತಾಯಿ ಅಂದ್ರೆ ಬಾಲಕೃಷ್ಣ ನಾಯಕ್ ಅವರ ಪತ್ನಿ ರೋಹಿಣಿ ಹೇಳೋದಿಷ್ಟು. ಬಾಲಕೃಷ್ಣ ನಾಯಕ್, ಮದುವೆಯಾದ ದಿನದಿಂದಲೂ ಮನೆ ನೋಡಿಕೊಂಡಿಲ್ಲ. ಕಷ್ಟಪಟ್ಟು ಉಳಿಸಿದ ಹಣವನ್ನೂ ಲಪಟಾಯಿಸಿದ್ದಾನೆ. ದೊಡ್ಡ ಮಗಳು ಹೇಳಿದಂತೆ ಕೇಳುತ್ತಾನೆ. ನನ್ನ ದೊಡ್ಡ ಮಗಳು ಆಸ್ತಿ ಗೋಸ್ಕರ ತಂದೆಗೆ ಈ ರೀತಿ ಮಾತನಾಡಲು ಹೇಳಿಕೊಟ್ಟಿದ್ದಾಳೆ. ಅವನಿಗೆ ಆಸ್ತಿ ಬೇಕು. ಅವನೊಬ್ಬ ಮಾನಸಿಕ ಅಸ್ವಸ್ಥ. ಕುಡುಕ. ರಾತೋರಾತ್ರಿ ಮನೆ ಬಿಟ್ಟು ಹೋಗುತ್ತಾರೆ. ಕೆಲವೊಮ್ಮೆ ಏನೆಲ್ಲಾ ಮಾತನಾಡುತ್ತಾರೆ. ದೊಡ್ಡ ಮಗಳ ಮದುವೆಗೂ ಅಷ್ಟೇ.. ಎಲ್ಲೋ ಬಸ್ಸು ಹತ್ತಿ ಕುಳಿತಿದ್ದವನನ್ನು ಎಳೆದುಕೊಂಡು ಮದುವೆ ಮನೆಗೆ ಕರೆತಂದಿದ್ವಿ. ನನ್ನ ಮನೆ ನಿಭಾಯಿಸುತ್ತಿರುವವಳೇ ನನ್ನ ಮಗಳು ಚೈತ್ರಾ. ಆತನ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ ಎಂದಿದ್ದಾರೆ.
ಅಂದಹಾಗೆ ಕೆಲವೇ ವರ್ಷಗಳ ಹಿಂದೆ ಚೈತ್ರಾ ಕುಂದಾಪುರ ಅವರ ಒಂದೊಂದು ಮಾತು ಬೆಂಕಿಯುಂಡೆ ಕಾಣ್ತಾ ಇತ್ತು. ಈಗ ಅವರ ಮನೆಯ ಬೆಂಕಿ ಕಾಣುತ್ತಿದೆ.