ತಮಿಳುನಾಡು ವಿಧಾನಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ ನಡೆಸಿದೆ. ಆದ್ರೆ, ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ, ಬಿಜೆಪಿಗೆ ಅಣ್ಣಾಮಲೈ ಶಾಕ್ ಕೊಟ್ಟಿದ್ದಾರೆ. ತಮಿಳುನಾಡಿನಲ್ಲಿ ಬಿಜೆಪಿ ಫೈರ್ ಬ್ರಾಂಡ್ ಆಗಿ ಗುರುತಿಸಿಕೊಂಡಿರುವ ಅಣ್ಣಾಮಲೈ, ಚುನಾವಣೆ ವೇಳೆ ವಹಿಸಿದ್ದ ಜವಾಬ್ದಾರಿಗಳಿಂದ ಹಿಂದೆ ಸರಿದಿದ್ದಾರೆ. ರಾಜೀನಾಮೆ ನೀಡಿದ್ದಾರೆ.
ತಮಿಳುನಾಡಿನಲ್ಲಿ ಬಿಜೆಪಿಯ ಜನಪ್ರಿಯತೆಯನ್ನು ಹೆಚ್ಚಿಸಿದವರಲ್ಲಿ ಅಣ್ಣಾಮಲೈ ಅವರದ್ದು ದೊಡ್ಡ ಹೆಸರು. ಡಬಲ್ ಡಿಜಿಟ್ ಮತಗಳನ್ನು ಸೆಳೆಯೋಕೂ ಕಷ್ಟಪಡುತ್ತಿದ್ದ ತಮಿಳುನಾಡು ಬಿಜೆಪಿಗೆ, ಲೋಕಸಭೆ ಚುನಾವಣೆಯಲ್ಲಿ ದೊಡ್ಡ ಮಟ್ಟದಲ್ಲಿ ಮತದಾರರನ್ನು ಪಕ್ಷದತ್ತ ಸೆಳೆದುಕೊಂಡು ಬಂದಿದ್ದರು. ಬಿಜೆಪಿಯು ಸ್ವತಂತ್ರವಾಗಿ ಸುಮಾರು 11.24% ಮತಗಳನ್ನು ಪಡೆಯುವ ಮೂಲಕ ರಾಜ್ಯದಲ್ಲಿ ತನ್ನ ಸಾರ್ವಕಾಲಿಕ ಗರಿಷ್ಠ ಮತಪ್ರಮಾಣವನ್ನು ದಾಖಲಿಸಿತ್ತು.ಎನ್‌ಡಿಎ (NDA) ಒಕ್ಕೂಟದ ಒಟ್ಟು ಮತಪ್ರಮಾಣ 18.28% ರಷ್ಟಿತ್ತು. ಇದು ತಮಿಳುನಾಡಿನಲ್ಲಿ ಬಿಜೆಪಿ ಗಳಿಸಿದ್ದ ಅತಿ ದೊಡ್ಡ ಮತಗಳಿಕೆ. 2019ರ ಲೋಕಸಭಾ ಚುನಾವಣೆಯಲ್ಲಿ ಕೇವಲ 3.6% ಇದ್ದ ಮತಪ್ರಮಾಣ, 2024ರಲ್ಲಿ ಎರಡಂಕಿ ದಾಟಿತ್ತು. 2021ರಲ್ಲಿ 3% ಮತಗಳನ್ನು ಪಡೆದು 4 ಕ್ಷೇತ್ರ ಗೆದ್ದಿದ್ದ ಬಿಜೆಪಿ, 2026ರ ಚುನಾವಣೆಯಲ್ಲಿ ದೊಡ್ಡ ನಿರೀಕ್ಷೆಯನ್ನಂತೂ ಇಟ್ಟುಕೊಂಡಿತ್ತು. ಆದರೆ, ಅಣ್ಣಾಮಲೈ ಅವರು ಪಕ್ಷದಿಂದಲೇ ದೂರವಾಗುತ್ತಿದ್ದಾರೆ.
ತಮಿಳುನಾಡಿನ ಆರು ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ನೇಮಕಗೊಂಡ ಕೆಲವೇ ದಿನಗಳಲ್ಲಿ ಅಣ್ಣಾಮಲೈ ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ. ನೀಡಿರುವುದು ತಂದೆಯ ಅನಾರೋಗ್ಯ ಎಂಬ ಕಾರಣ. ಚುನಾವಣೆ ಹೊಸ್ತಿಲಲ್ಲೇ ಬಿಜೆಪಿಗೆ ಆರಂಭಿಕ ಆಘಾತವಾದಂತಾಗಿದ್ದು, ಇನ್ನೊಂದೆಡೆ ಅಣ್ಣಾಮಲೈ ಅವರು ಈ ನಿರ್ಧಾರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
ರಾಜೀನಾಮೆ ಕುರಿತು ಸುದ್ದಿಗೋಷ್ಠಿ ನಡೆಸಿದ ಅಣ್ಣಾಮಲೈ, 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 6 ಕ್ಷೇತ್ರಗಳ ಉಸ್ತುವಾರಿ ಜವಾಬ್ದಾರಿಯನ್ನು ಪಕ್ಷ ನೀಡಿದೆ. ಆದರೆ ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಇದಕ್ಕೆ ಮುಖ್ಯ ಕಾರಣ ನನ್ನ ತಂದೆಯ ಅನಾರೋಗ್ಯ. ಹೀಗಾಗಿ ತಂದೆಯ ಆರೈಕೆ, ಆರೋಗ್ಯ ಕಾಳಜಿ ಪ್ರಮುಖ ಆದ್ಯತೆಯಾಗಿರುವ ಕಾರಣ ಕೊಯಂಬತ್ತೂರಿನಲ್ಲಿ ಉಳಿಯಬೇಕಾಗಿದೆ. ಆದ್ದರಿಂದ ನನಗೆ ನೀಡಲಾಗಿದ್ದ 6 ಕ್ಷೇತ್ರಗಳಿಗೆ ಪ್ರವಾಸ ಮಾಡುವುದು, ಅಲ್ಲಿನ ಜವಾಬ್ದಾರಿಗಳನ್ನು ನಿರ್ವಹಿಸುವುದು ಅಸಾಧ್ಯವಾಗಿದೆ. ಈ ಕಾರಣದಿಂದ ರಾಜೀನಾಮೆ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಕಂಡಿರುವ ಅಣ್ಣಾಮಲೈ ಈ ಬಾರಿ ವಿಧಾನಸಭಾ ಚುನಾವಣೆಗೆ ಅಣ್ಣಾಮಲೈ ಸ್ಪರ್ಧಿಸುತ್ತಾರಾ? ಇಲ್ವಾ ಎನ್ನುವ ಬಗ್ಗೆ ಚರ್ಚೆಗಳು ನಡೆದಿದ್ದವು. ಕೆಲವರು ಸ್ಪರ್ಧೆ ಮಾಡುತ್ತಾರೆ, ಇನ್ನೂ ಕೆಲವರು ಸ್ಪರ್ಧೆ ಮಾಡಲ್ಲ ಎನ್ನುವ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ಈ ವಿಷಯದ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲವಂತೆ ಅಣ್ಣಾಮಲೈ. 2024ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಕೊಯಂಬತ್ತೂರು ಜನತೆಗೆ ಯಾವುದ ಮನವಿಗೆ ನಾನು ಸಿಗುವಂತಿರಬೇಕು. ಹೀಗಾಗಿ ಸದ್ಯ ಬಾಡಿಗೆ ಮನೆ ಮಾಡಿದ್ದೇನೆ. ಜನರ ಮನವಿಗಳು, ದೂರುಗಳಿಗೆ ಸ್ಪಂದಿಸಲು ಅನೂಕೂಲವಾಗುವಂತೆ ಬಾಡಿಗೆ ಮನೆ ಮಾಡಿದ್ದೇನೆ. ಪಕ್ಷದ ನಿರ್ಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ತಮಿಳುನಾಡಿನಲ್ಲಿ ಬಿಜೆಪಿಗೆ ಶಕ್ತಿ ತುಂಬಿದ್ದರೂ, ಬಿಜೆಪಿಗೆ ತಮಿಳುನಾಡಿನಲ್ಲಿ ಮಿತ್ರಪಕ್ಷಗಳು ಬೇಕು. ಮಿತ್ರರಾಗಿದ್ದ ಪಕ್ಷಗಳ ನಾಯಕರು ಅಣ್ಣಾಮಲೈ ವಿಷಯಕ್ಕೆ ದೂರು ನೀಡಿದ್ದರು. ಹೀಗಾಗಿ ಈ ಹಿಂದೆ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದ ಬಿಜೆಪಿ, ಮತ್ತೆ ಯಾವುದೇ ಹೊಣೆಗಾರಿಕೆ ನೀಡಿರಲಿಲ್ಲ. ಆದ್ರೆ, ಇದೀಗ 234 ವಿಧಾನಸಭಾ ಕ್ಷೇತ್ರಗಳ ಪೈಕಿ ಕೇವಲ 6 ಕ್ಷೇತ್ರಗಳ ಉಸ್ತುವಾರಿ ನೀಡಿರುವುದು ಅವರಿಗೆ ಬೇಸರ ತರಿಸಿದೆ ಎನ್ನಲಾಗಿದೆ. ಅಲ್ಲದೇ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಬಳಿಕ ಯಾವುದೇ ಜವಾಬ್ದಾರಿ ನೀಡದಿರುವುದು. ಹೀಗೆ ಪಕ್ಷ ತಮ್ಮನ್ನು ನಡೆಸಿಕೊಂಡ ರೀತಿಯಿಂದ ಅಸಮಾಧಾನಗೊಂಡು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡ ನಂತರ, ದಿನದಿಂದ ದಿನಕ್ಕೆ ಅಣ್ಣಾಮಲೈ ಸೈಡ್ಲೈನ್ ಆಗುತ್ತಾ ಬಂದರು ಎನ್ನುವುದು ಬಿಜೆಪಿ ಆಪ್ತ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.ಅಣ್ಣಾಮಲೈ, ಪ್ರಧಾನಿ ಮೋದಿಯವರ ಫೇವರಿಟ್ ಆಗಿದ್ರೂ, ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿ ಮಿತ್ರಪಕ್ಷದ ಮಾತು ಕೇಳಬೇಕಾದ್ದು ಅನಿವಾರ್ಯವಾಗಿತ್ತು.
ಕಳೆದ ವಾರ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನೈನಾರ್ ರಾಜೇಂದ್ರನ್, ಅಣ್ಣಾಮಲೈ ಅವರನ್ನು ಕರೈಕುಡಿ, ಸಿಂಗನಲ್ಲೂರು, ಶ್ರೀವೈಕುಂಠಂ, ವಿರುಗಂಬಕ್ಕಂ, ಮಧುರೈ (ದಕ್ಷಿಣ) ಮತ್ತು ಪದ್ಮನಾಭಪುರಂ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಉಸ್ತುವಾರಿಯಾಗಿ ನೇಮಿಸಿದ್ದರು. ಇದು, ಅವರ ಕೋಪಕ್ಕೆ ಕಾರಣವಾಗಿತ್ತು.
ಅಣ್ಣಾಮಲೈ ಅವರು ಬಿಜೆಪಿಯ ಜನಪ್ರಿಯ ಯುವ ನಾಯಕರಾಗಿದ್ದರು. ಬಿಜೆಪಿಯ ಕೇಂದ್ರದ ನಾಯಕರಿಗೆ ಅವರನ್ನು ಯಾವ ರೀತಿ ನಡೆಸಿಕೊಳ್ಳಬೇಕು ಎನ್ನುವುದು ತಿಳಿದಿಲ್ಲ ಎಂದು ಹಿರಿಯ ಬಿಜೆಪಿ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನೊಂದು ಮೂಲಗಳ ಪ್ರಕಾರ, ಅಣ್ಣಾಮಲೈ ಅವರು ಸಿಂಗನಲ್ಲೂರು ಕ್ಷೇತ್ರದಿಂದ NDA ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.
2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸುಮಾರು 12 ಕ್ಷೇತ್ರಗಳಲ್ಲಿ ಎಐಎಡಿಎಂಕೆಯನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಬಂದಿತ್ತು. ನಗರ ಪ್ರದೇಶಗಳಲ್ಲಿ ವಿಶೇಷವಾಗಿ ಚೆನ್ನೈ ಮತ್ತು ಕೊಯಮತ್ತೂರುಗಳಲ್ಲಿ ಬಿಜೆಪಿ ಜನಪ್ರಿಯತೆ ಹೆಚ್ಚುತ್ತಿತ್ತು. ಅಲ್ಲದೆ ಕ್ಷೇತ್ರವಾರು ಜನಪ್ರಿಯತೆಯೂ ಹೆಚ್ಚಿತ್ತು. ಹೀಗೆಯೇ ಮುಂದುವರಿದರೆ ತಮಿಳುನಾಡಿನಲ್ಲಿಯೂ ಬಿಜೆಪಿ ಜನಪ್ರಿಯಗೊಂಡು, ತಮ್ಮ ಪಕ್ಷ ಮೂಲೆಗುಂಪಾಗಬಹುದು ಎಂದು ಭಯಕ್ಕೆ ಬಿದ್ದ ಅಣ್ಣಾಡಿಎಂಕೆ, ಬಿಜೆಪಿ ಮೇಲೆ ಒತ್ತಡ ಹೇರಿತ್ತು. ಇದರಿಂದ ಅಣ್ಣಾಮಲೈ ಬೇಸರಗೊಂಡಿದ್ದಾರೆ ಎನ್ನಲಾಗಿದೆ.



