ತಿರುಪತಿ ತಿಮ್ಮಪ್ಪನ ಲಡ್ಡುವಿನಲ್ಲಿ ದನದ ಮಾಂಸ, ಹಂದಿಯ ಮಾಂಸದ ಕೊಬ್ಬು ಬಳಸಲಾಗಿದೆ. ಈ ಮೂಲಕ ಹಿಂದಿನ ಸಿಎಂ ಜಗನ್ ರೆಡ್ಡಿ ಭಕ್ತರನ್ನು ಅಪವಿತ್ರಗೊಳಿಸಿದ್ದಾರೆ. ಭಕ್ತರ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಖುದ್ದು ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಆರೋಪಿಸಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಲ್ಯಾಬ್ ವರದಿಯನ್ನೂ ಬಿಡುಗಡೆ ಮಾಡಿದ್ದರು. ಇಡೀ ದೇಶ ಜಗನ್ ರೆಡ್ಡಿಯವರನ್ನು ತರಾಟೆಗೆ ತೆಗೆದುಕೊಂಡಿತ್ತು. ಸಮರ್ಥಿಸಿಕೊಳ್ಳಲು ಜಗನ್ ಪರದಾಡಿದ್ದಂತೂ ಹೌದು. ಇದೀಗ ಕಹಾನೀ ಮೇ ಟ್ವಿಸ್ಟ್ ಸಿಕ್ಕಿದೆ.
ಇದೀಗ ಈ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್, ಸಿಎಂ ಚಂದ್ರಬಾಬು ನಾಯ್ಡು ಅವರಿಗೇ ಛೀಮಾರಿ ಹಾಕಿದೆ. ಪ್ರಾಣಿಗಳ ಕೊಬ್ಬು ಬಳಸಲಾಗಿದೆಯೇ ಇಲ್ಲವೇ ಎಂಬ ಬಗ್ಗೆ ಲ್ಯಾಬ್ ವರದಿಯೇ ಸ್ಪಷ್ಟವಾಗಿಲ್ಲ. ಸೂಕ್ತ ಪರಿಶೀಲನೆ ಆಗಿಲ್ಲ. ಜುಲೈನಲ್ಲಿ ನಡೆದಿದೆ ಎನ್ನಲಾದ ಈ ಘಟನೆ ಕುರಿತು ಸೆಪ್ಟೆಂಬರ್‌ನಲ್ಲಿ ಪ್ರಶ್ನಿಸಲಾಗಿದೆ. ದೂರು ನೀಡುವ ಮೊದಲೇ ಮಾಧ್ಯಮದ ಎದುರು ಪ್ರಶ್ನಿಸಿದ್ದು ಯಾಕೆ ಎಂಬ ಕೆಲ ಮಹತ್ವದ ವಿಚಾರಗಳನ್ನು ನಾಯ್ಡು ಅವರನ್ನು ಕೋರ್ಟ್ ಪ್ರಶ್ನಿಸಿದೆ. ದೇವರನ್ನು ನಿಮ್ಮ ಕೆಟ್ಟ ರಾಜಕೀಯದಿಂದ ದೂರವಿಡಿ ಎಂದು ಸುಪ್ರೀಂ ಕೋರ್ಟ್ ಖಡಕ್ ಸಂದೇಶ ನೀಡಿದೆ. ಆಂಧ್ರ ಪ್ರದೇಶದ ಪ್ರಸಿದ್ಧ ತಿರುಪತಿ ಶ್ರೀ ವೆಂಕಟೇಶ್ವರ ದೇವಸ್ಥಾನದ ಲಡ್ಡು ಪ್ರಸಾದ ವಿವಾದವು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿರುವ ಬಗ್ಗೆಯೂ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ತಿರುಪತಿ ಲಡ್ಡು ಪ್ರಸಾದಲ್ಲಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಪಾವಿತ್ರ್ಯತೆ ಕಾಪಾಡಿಕೊಳ್ಳುವ ಬದಲು ಹಾಳುಗೆಡವಿತ್ತು. ಲಡ್ಡು ಪ್ರಸಾದದಲ್ಲಿ ದನದ, ಹಂದಿಯ ಕೊಬ್ಬು ಹಾಗೂ ಮೀನಿನ ಎಣ್ಣೆ ಬಳಸಲಾಗಿತ್ತ. ಹೀಗಂತ ಗಂಭೀರ ಆರೋಪ ಸಿಎಂ ಚಂದ್ರಬಾಬು ನಾಯ್ದು ಅವರೇ ಮಾಡಿದ್ದರು. ಮಾಧ್ಯಮಗಳ ಮುಂದೆ ಚಂದ್ರಬಾಬು ನಾಯ್ಡು ಲ್ಯಾಬ್ ವರದಿಯನ್ನು ಬಹಿರಂಗಪಡಿಸಿದ್ದ ಹಿನ್ನೆಲೆಯಲ್ಲಿ ಇದು ಕೋಲಾಹಲವನ್ನೇ ಸೃಷ್ಟಿಸಿತ್ತು.
ಸುಪ್ರೀಂಕೋರ್ಟ್ ಪ್ರಶ್ನೆಗಳೇನು..?
1. ಲ್ಯಾಬ್ ವರದಿ ಜುಲೈನಲ್ಲಿ ಬಂದಿದೆ. ನಿಮ್ಮ ಹೇಳಿಕೆ ಸೆಪ್ಟೆಂಬರ್‌ನಲ್ಲಿ ಬಂದಿದೆ. ಹಾಗೆಯೇ ವರದಿಯು ಸ್ಪಷ್ಟವಾಗಿಯೂ ಇಲ್ಲ.
2. ನೀವು ಎಸ್‌ಐಟಿ ತನಿಖೆಗೆ ಆದೇಶಿಸಿದ್ದೀರಿ. ಅದರ ಫಲಿತಾಂಶ ಹೊರಬರುವ ಮೊದಲೇ ಮಾಧ್ಯಮಗಳ ಎದುರು ಹೋಗುತ್ತೀರಿ. ಇದರ ಅಗತ್ಯ ಏನಿತ್ತು..?
3. ಕಲಬೆರಕೆ ಕುರಿತು ನಿಮಗೆ ಸ್ಪಷ್ಟತೆ ಇಲ್ಲದೆ ಇರುವಾಗ, ನೀವು ಸಾರ್ವಜನಿಕರ ಮುಂದೆ ಹೇಗೆ ಹೋಗುತ್ತೀರಿ? ಹಾಗಿದ್ದರೆ ತನಿಖೆ ನಡೆಸುವುದರ ಉದ್ದೇಶವೇನು?
4. ಮಾನದಂಡಕ್ಕೆ ಪೂರಕವಾಗಿಲ್ಲದ ತುಪ್ಪವನ್ನು ಪ್ರಸಾದಕ್ಕೆ ಬಳಸಲಾಗಿದೆಯೇ? ಇದಕ್ಕೆ ಸಾಕ್ಷಿಗಳಿವೆಯೇ..? ದೇವಸ್ಥಾನದ ಲಡ್ಡುಪ್ರಸಾದದಲ್ಲಿ ದನದ ಕೊಬ್ಬು, ಮೀನನ ಎಣ್ಣೆ ಬಳಕೆಯಾಗಿದೆ ಅನ್ನೋದಕ್ಕೆ ಸ್ಪಷ್ಟ ಸಾಕ್ಷ್ಯಗಳಿಲ್ಲ.
ಎಂದು ಪ್ರಶ್ನೆ ಮಾಡಿರುವ ಸುಪ್ರೀಂಕೋರ್ಟ್ ನೀವು (ಚಂದ್ರಬಾಬು ನಾಯ್ಡು) ಸಾಂವಿಧಾನಿಕ ಕಚೇರಿ ಹೊಂದಿರುವಾಗ, ನೀವು ದೇವರನ್ನು ರಾಜಕಾರಣದಿಂದ ದೂರ ಇರಿಸುತ್ತೀರಿ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಹೇಳಿದೆ.
ಅಷ್ಟೇ ಅಲ್ಲದೆ ನ್ಯಾಯಮೂರ್ತಿಗಳಾದ ಗವಾಯಿ ಮತ್ತು ಕೆವಿ ವಿಶ್ವನಾಥನ್ ಚಂದ್ರಬಾಬು ನಾಯ್ಡು ಅವರ ಪರವಾಗಿ ಹಾಜರಾದ ರೋಹಟಗಿ ಅವರನ್ನೂ ತರಾಟೆಗೆ ತೆಗೆದುಕೊಂಡಿದೆ. ನೀವು ಯಾವಾಗಲೂ ಇಂತಹ ವಿಚಾರಗಳಿಗೇ ಹಾಜರಾಗುತ್ತೀರಿ. ಇದು ಎರಡನೇ ಸಲ ಎಂದು ಹೇಳಿದೆ.
“ವಿಭಿನ್ನ ರುಚಿ ಹೊಂದಿದ್ದ ಲಡ್ಡುಗಳನ್ನು, ಅದರಲ್ಲಿ ಕಲಬೆರಕೆ ಮಾಡಿದ ಸಾಮಗ್ರಿಗಳನ್ನು ಬಳಸಲಾಗಿದೆ ಎಂಬುದನ್ನು ತಿಳಿದುಕೊಳ್ಳಲು ಲ್ಯಾಬ್‌ಗೆ ಕಳುಹಿಸಲಾಗಿದೆಯೇ? ಎಂದು ಪ್ರಶ್ನೆ ಮಾಡಿರುವ ನ್ಯಾಯಾಲಯ, ಅನಗತ್ಯವಾಗಿ ಭಕ್ತರಲ್ಲಿ ಆತಂಕ ಮೂಡಿಸುವುದು ಎಂಬ ಸಂದೇಶವನ್ನಂತೂ ನೀಡಿದೆ. ಸುಪ್ರೀಂಕೋರ್ಟ್ ಒಟ್ಟಾರೆ ಅಭಿಪ್ರಾಯ ಇಷ್ಟೇ. ಸತ್ಯ ಏನು ಎಂದು ಗೊತ್ತಾಗುವ ಮೊದಲೇ, ಇದೇ ಸತ್ಯ ಎಂದು ಹೇಳಿ ಭಕ್ತರಲ್ಲಿ ಆತಂಕ ಹುಟ್ಟಿಸಿದ್ದು ತಪ್ಪು ಎನ್ನುವುದು.
ಇದೀಗ ಚಂದ್ರಬಾಬು ನಾಯ್ಡು ಹಾಗೂ ಹಿಂದೂ ಸಂಘಟನೆಗಳು, ಜಗನ್ ರೆಡ್ಡಿ ಅವರ ಪರವಾದಿಗಳು ಹಾಗೂ ಎಡಪಂಥೀಯರ ಟೀಕೆಗೆ ಗುರಿಯಾಗಿವೆ.



