ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾರಥ್ಯದ ಎನ್‌ಡಿಎ 3.0 ಸರ್ಕಾರವನ್ನು ಅಸ್ಥಿರಗೊಳಿಸಲು ಅಮೆರಿಕ ಸಂಚು ನಡೆಸಿದೆ. ಹೀಗೆಂದು ವರದಿ ಮಾಡಿರುವುದು ರಷ್ಯಾದ ಸರ್ಕಾರಿ ಮಾಧ್ಯಮ ಸ್ಪುಟ್ನಿಕ್. ಸ್ಫುಟ್ನಿಕ್ ವರದಿ ಪ್ರಕಾರ ʻಅಮೆರಿಕದ ಗೂಢಚರ ಸಂಸ್ಥೆ ಸಿಐಎ ಆಂಧ್ರ ಪ್ರದೇಶದ ಬ್ಯಾಪ್ಟಿಸ್ಟ್ ಚರ್ಚ್ ನೆರವಿನಿಂದ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಸಂಪರ್ಕಿಸಲು ಯತ್ನಿಸುತ್ತಿದೆ. ಮೋದಿ ಸರ್ಕಾರಕ್ಕೆ ಟಿಡಿಪಿ ಬೆಂಬಲ ಹಿಂತೆಗೆದುಕೊಳ್ಳುವಂತೆ ನಾಯ್ಡು ಅವರನ್ನು ಸೆಳೆಯುತ್ತಿದೆʼ.
ಭಾರತದ ಪ್ರತಿ ಪಕ್ಷ ನಾಯಕರನ್ನೂ ಅಮೆರಿಕ ಸಂಪರ್ಕ ಮಾಡುತ್ತಿದ್ದು, ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವಂತೆ ಪ್ರಚೋದಿಸುತ್ತಿದೆ. ಈ ಮೂಲಕ ಸರ್ಕಾರ ಉರುಳಿಸಿ ಭಾರತದಲ್ಲಿ ರಾಜಕೀಯ ಅಸ್ಥಿರತೆಯ ವಾತಾವರಣ ಸೃಷ್ಟಿಸಲು ಅಮೆರಿಕ ಸಂಚು ರೂಪಿಸುತ್ತಿದೆ ಎಂದು ಸ್ಪುಟ್ನಿಕ್ ಪ್ರಕಟಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಮೆರಿಕದ ವಿದೇಶಾಂಗ ಇಲಾಖೆ ಸಿಬ್ಬಂದಿ ಭಾರತದ ವಿರೋಧ ಪಕ್ಷಗಳ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ಇದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಸ್ಫುಟ್ನಿಕ್ ಭಾರತದ ಆಂತರಿಕ ಸ್ಥಿರತೆ ಹಾಗೂ ರಾಜಕೀಯ ಸ್ಥಿರತೆಗೆ ಧಕ್ಕೆ ತರಲು ಅಮೆರಿಕ ಯತ್ನಿಸುತ್ತಿದೆ ಎಂದು ಆಪಾದಿಸಿತ್ತು. ಮೋದಿ ಸರಕಾರ ಮೂರನೇ ಅವಧಿಗೆ ಅಧಿಕಾರ ಹಿಡಿದಿದೆ. ದೇಶದ ಪ್ರಗತಿ ಕಾಣುತ್ತಿದೆ. ಪ್ರಧಾನಿ ಮೋದಿ ಅವರು ತಮ್ಮ ‘ಸಾಫ್ಟ್ ಪವರ್’ ಬಳಸಿಕೊಂಡು ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸು ವೃದ್ಧಿಗೆ ಕಾರಣರಾಗಿದ್ದಾರೆ. ಆದರೆ, ಈ ಸನ್ನಿವೇಶವನ್ನು ಬದಲಿಸಲು ಅಮೆರಿಕ ಸಂಚು ರೂಪಿಸಿದೆ ಎಂದು ಸ್ಪುಟ್ನಿಕ್ ಹೇಳಿತ್ತು. ಅಷ್ಟೇ ಅಲ್ಲ, ಅದಕ್ಕೆ ಪೂರಕವಾದ ಕಾರಣಗಳನ್ನೂ ಸ್ಫುಟ್ನಿಕ್ ನೀಡಿದೆ.
ಭಾರತದಲ್ಲಿರುವ ಅಮೆರಿಕ ಕಾನ್ಸುಲೇಟ್ ಜನರಲ್ ಜೆನ್ನಿಫರ್ ಲಾರ್ಸನ್ ಅವರು ಹೈದರಾಬಾದ್‌ನಲ್ಲಿ ಅಮೆರಿಕನ್ ಮಿಷನ್ ಮುನ್ನಡೆಸುತ್ತಿದ್ದಾರೆ. ಆಗಸ್ಟ್ 12 ರಂದು ಲಾರ್ಸನ್ ಅವರು ಎಐಎಂಐಎಂ ಪಕ್ಷದ ನಾಯಕ ಅಸಾದುದ್ದೀನ್ ಓವೈಸಿ ಅವರ ಜೊತೆ ಮಾತುಕತೆ ನಡೆಸಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು. ಅದಾದ ಮೇಲೆ ಇದೇ ಲಾರ್ಸನ್ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನೂ ಭೇಟಿ ಮಾಡಿದ್ದರು. ಭಾರತದಲ್ಲಿದ್ದುಕೊಂಡು ಹಿಂದೂ ಹಬ್ಬಗಳು, ಆಚರಣೆಗಳು, ದೇವರುಗಳ ವಿರುದ್ಧ ಮಾತನಾಡುವ, ಭಾರತ ವಿರೋಧಿ ನಿಲುವ ತಳೆದಿರುವ ಆರ್‌ಜೆ ಸಯೇಮಾಗೆ ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿ ಸಮಾನತೆಯ ರಾಯಭಾರಿ ಎಂಬ ಬಿರುದು ನೀಡಿ ಗೌರವಿಸಿತ್ತು. ಅಲ್ಲದೆ ಬ್ಯಾಪ್ಟಿಸ್ಟ್ ಚರ್ಚ್ ಮೂಲಕವೂ ಸಂಚು ನಡೆಯುತ್ತಿದೆ ಎಂಬ ಆರೋಪ ಸ್ಫುಟ್ನಿಕ್ ನಲ್ಲಿದೆ.
ಸ್ಫುಟ್ನಿಕ್ ಮಾಧ್ಯಮದ ವರದಿ ಇದೀಗ ಕೋಲಾಹಲ ಸೃಷ್ಟಿಸಿದೆ. ಬಾಂಗ್ಲಾದೇಶ ಸರ್ಕಾರ ಉರುಳಿಸಿದ ಆರೋಪ ಅಮೆರಿಕ ಮೇಲಿದೆ. ಇದರ ಬೆನ್ನಲ್ಲೇ ಬಿಜೆಪಿ ಸರ್ಕಾರ ಬೀಳಿಸಲು ಅಮೆರಿಕ ಸಿಐಎ ಪ್ರಯತ್ನ ನಡೆಸುತ್ತಿರುವ ಕುರಿತು ಸ್ಫುಟ್ನಿಕ್ ವರದಿ ಮಾಡಿದೆ.
ಮೋದಿ ವಿರುದ್ಧವಿರುವ ನಾಯಕರು, ಸಾಮಾಜಿಕ ಕಾರ್ಯಕರ್ತರು, ಸೋಶಿಯಲ್ ಮೀಡಿಯಾ ಪ್ರವರ್ತಕರು, ಉದ್ಯಮಿಗಳು, ಸೆಲೆಬ್ರೆಟಿಗಳು ಸೇರಿದಂತೆ ಹಲವರನ್ನು ವ್ಯವಸ್ಥಿತವಾಗಿ ಈ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ರಷ್ಯಾ ಹೇಳುತ್ತಿದೆ. 2024ರ ಜುಲೈ ತಿಂಗಳಲ್ಲಿ ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿ ಇನ್‌ಫ್ಲುಯೆನ್ಸ್ ಟು ಇಂಪಾಕ್ಟ್( ಪ್ರಭಾವದ ಪರಿಣಾಮ) ಅನ್ನೋ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪ್ರೋಪಗಾಂಡಗಳನ್ನು ಪ್ರಚಾರ ಮಾಡುವ, ಅರ್ಧ ಸತ್ಯಗಳನ್ನು ಯೂಟ್ಯೂಬ್ ಮೂಲಕ ಹೇಳಿಕೆ ಮೋದಿ ಸರ್ಕಾರದ ವಿರುದ್ಧ ಕಾರ್ಯನಿರ್ವಹಿಸುವ ಅಭಿಷೇಕ್ ಬ್ಯಾನರ್ಜಿಯನ್ನು ಕರೆಸಿತ್ತು ಎಂದು ರಷ್ಯಾದ ಸ್ಫುಟ್ನಿಕ್ ವರದಿ ಮಾಡಿದೆ.



