ಶಾಸಕ ಮುನಿರತ್ನ ಅರೆಸ್ಟ್ ಆಗಿದ್ದಾರೆ. ಜಾಮೀನು ಸಿಕ್ಕಿ ಹೊರಬಂದ ತಕ್ಷಣವೇ ಮತ್ತೊಮ್ಮೆ ಅತ್ಯಾಚಾರ ಕೇಸಿನಲ್ಲಿ ಬಂಧಿಸಲಾಗಿದೆ. ಈ ನಡುವೆ ಮುನಿರತ್ನ ವಿರುದ್ಧ ಕಂಡು ಕೇಳರಿಯದಂತಾ ಆರೋಪ ಕೇಳಿ ಬಂದಿದೆ. ಆರೋಪ ಮಾಡಿರುವ ವ್ಯಕ್ತಿ ಸಾಮಾನ್ಯದವರಲ್ಲ. ಮಾಜಿ ಸಂಸದರೂ ಆಗಿರುವ, ಡಿಸಿಎಂ ಡಿಕೆ ಶಿವಕುಮಾರ್ ಅವರ ತಮ್ಮ ಡಿಕೆ ಸುರೇಶ್.
ಮುನಿರತ್ನ ವಿರುದ್ಧ ಆರೋಪ ಏನು..?
ಮುನಿರತ್ನ ತಮ್ಮ ಎದುರಾಳಿಗಳನ್ನ ಹಣಿಯೋಕೆ HIV ಸೋಂಕಿತರನ್ನ ಬಿಡುತ್ತಿದ್ದರು. ಇನ್ಸ್ಪೆಕ್ಟರ್ಗಳು, ಜನಪ್ರತಿನಿಧಿಗಳು, ಕಾರ್ಪೊರೇಟರ್ಗಳಿಗೂ ಮುನಿರತ್ನ ಗಾಳ ಹಾಕುತ್ತಿದ್ದರು. ಹೆಚ್ಐವಿ ದೃಢಪಟ್ಟ ಸೋಂಕಿತರನ್ನೇ ಕಳುಹಿಸುತ್ತಿದ್ದರು. ಹೆಚ್‌ಐವಿ ಸೋಂಕಿತರಿಂದ ಹನಿ ಟ್ರಾಪ್ ಮಾಡಿಸುತ್ತಿದ್ದರು. ಇಂತಾದ್ದೊಂದು ಆರೋಪ ಮಾಡಿರುವುದು ಮುನಿರತ್ನ ವಿರುದ್ಧ ಅತ್ಯಾಚಾರದ ದೂರು ಕೊಟ್ಟಿರುವ ಸಂತ್ರಸ್ತೆ. ಈ ಆರೋಪ ಹೊರ ಬರುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಬೆಂಕಿ ಬಿದ್ದಿದೆ.
ಕಾಂಗ್ರೆಸ್ ಹೇಳಿದ್ದೇನು..?
ಬಿಜೆಪಿ ಶಾಸಕ ಮುನಿರತ್ನ, ಬಿಜೆಪಿ ನಾಯಕರ ವಿರುದ್ಧವೇ ಏಡ್ಸ್ ಅಂಟಿಸೋದಕ್ಕೆ ಯತ್ನಿಸಿದ್ದರು ಎಂದು ಟ್ವೀಟ್ ಮಾಡಿದೆ ಕಾಂಗ್ರೆಸ್. ಅಶೋಕ್ ಅವರಿಗೆ ಏಡ್ಸ್ ಸೋಂಕು ತಗುಲಿಸಲು ಪ್ರಯತ್ನಿಸಿದ್ದರು ಎನ್ನುವುದು ಕಾಂಗ್ರೆಸ್ ಆರೋಪ. ಮುನಿರತ್ನರ ದ್ವೇಷದ ರಾಜಕೀಯಕ್ಕೆ, ಭ್ರಷ್ಟಾಚಾರಕ್ಕೆ ಗುರಿಯಾದವರಲ್ಲಿ ಬಿಜೆಪಿ ನಾಯಕರೂ ಹೊರತಾಗಿಲ್ಲ. ಮಾಧ್ಯಮ ವರದಿಗಳ ಪ್ರಕಾರ ಸ್ವತಃ ಬಿಜೆಪಿ ನಾಯಕ ಅಶೋಕ್ ಅವರಿಗೆ ಏಡ್ಸ್ ಸೋಂಕು ತಗುಲಿಸಲು ಪ್ರಯತ್ನಿಸಿದ್ದ ಅಘಾತಕಾರಿ ಸಂಗತಿ ಹೊರಬಂದಿದೆ. ಇಂತಹ ವಿಕೃತರತ್ನನನ್ನು ತಲೆ ಮೇಲೆ ಹೊತ್ತು ಮೆರೆಸುವ ಬಿಜೆಪಿ ಪಕ್ಷದ ನಾಯಕರು HIV ಪರೀಕ್ಷೆ ಮಾಡಿಸಿಕೊಂಡು ಏಡ್ಸ್ ನಿಯಂತ್ರಣದ ಅಭಿಯಾನಕ್ಕೆ ಸಹಕರಿಸಬೇಕು ಎಂದು ಟ್ವೀಟ್ ಮಾಡಿದೆ.
ಡಿಕೆ ಸುರೇಶ್ ಆರೋಪಗಳೇನು..?
ಈ ರೀತಿಯ ಘಟನೆಗಳು ವಿದೇಶದಲ್ಲಿ ನಡೆಯುತ್ತಿವೆ ಎಂದು ಕೇಳಿದ್ದೆ. ಇದರ ಬಗ್ಗೆ ಸೂಕ್ತ ತನಿಖೆ ಆಗಬೇಕು. ತಪ್ಪಿತಸ್ಥರನ್ನು ಗುರುತಿಸಿ ಶಿಕ್ಷೆ ನೀಡಬೇಕು. ಈ ಜಾಲದಲ್ಲಿ ಯಾರೆಲ್ಲ ಇದ್ದಾರೋ, ಎಲ್ಲರನ್ನೂ ವಿಚಾರಣೆ ನಡೆಸಬೇಕು. ಮುನಿರತ್ನ ಇಂಥಾದ್ದೊಂದು ಬಯೋಲಾಜಿಕಲ್ ವಾರ್ ನಡೆಸುತ್ತಿದ್ದಾರೆ ಎನ್ನುವುದನ್ನು ಅರಗಿಸಿಕೊಳ್ಳೋಕೆ ಆಗುತ್ತಿಲ್ಲ.
ಮಹಮ್ಮದ್ ನಲಪಾಡ್ ಟೀಕೆ ಏನು..?
ರಾಜಕಾರಣ ಮಾಡೋಕೆ ಹೆದರಿಕೆ ಆಗುತ್ತಿದೆ. ಎಲ್ಲದ್ರೂ ಹೋದ್ರೆ ಏಡ್ಸ್ ಪಿನ್ ಚುಚ್ಚಿಬಿಡುತ್ತಾನೋ ಅಂತಾ ಭಯವಾಗ್ತಿದೆ. ನೀವು ಬಯೋಲಾಜಿಕಲ್ ವಾರ್ ಅಂತ ಕೇಳಿದ್ದೀರ? ಮುನಿರತ್ನ ಅದೇ ರೀತಿ ಮಾಡಿದ್ದಾರೆ. ನನ್ನ ಬಗ್ಗೆ ಸಿಟಿ ರವಿ ಅವರು ಮಾತನಾಡಿದ್ರು. ಸಿಟಿ ರವಿಯವರೇ ಹುಷಾರು ಮುನಿರತ್ನ ಪಕ್ಕ ಹೋದ್ರೆ ಏಡ್ಸ್ ಪಿನ್ ಚುಚ್ಚಿಬಿಡ್ತಾನೆ. ನಮ್ಮ ಅಭ್ಯರ್ಥಿ ಕುಸುಮ ಹಾಗೂ ಡಿ.ಕೆ.ಸುರೇಶ್ ಮೇಲೆ ಬಯೋಲಾಜಿಕಲ್ ಟಾರ್ಗೇಟ್ ಮಾಡಿದ್ದಾರೆ ಎಂದು ದೂರಿದ್ದಾರೆ.
ಬಿಜೆಪಿ ನಾಯಕರು ಕೊಟ್ಟ ತಿರುಗೇಟು ಏನು..?
ಕಾಂಗ್ರೆಸ್ ನಾಯಕರ ಆರೋಪಗಳಿಗೆ ಬಿಜೆಪಿ ನಾಯಕರು ತಿರುಗೇಟು ಕೊಟ್ಟಿದ್ದಾರೆ. ಮುನಿರತ್ನ ಪ್ರಕರಣದಿಂದ ಅಂತರ ಕಾಯ್ದುಕೊಂಡೇ ಕಾಂಗ್ರೆಸ್ ವಿರುದ್ಧ ವಾಗ್ಬಾಣ ಬಿಡ್ತಿದ್ದಾರೆ. ಶಾಸಕ ಮುನಿರತ್ನ ಅವರು ಕಾಂಗ್ರೆಸ್ನಲ್ಲಿದ್ದಾಗ ಸತ್ಯ ಹರಿಶ್ಚಂದ್ರರಾ ಎಂದು ಪ್ರಶ್ನೆ ಮಾಡಿರುವ ಆರ್.ಅಶೋಕ್ ಮುನಿರತ್ನ 30 ವರ್ಷ ಕಾಂಗ್ರೆಸ್ ನಲ್ಲಿ ಇದ್ದರು, ರಾಜಕೀಯ ಜೀವನದ 90 ರಷ್ಟು ಭಾಗ ಕಾಂಗ್ರೆಸ್ ನಲ್ಲಿ ಇದ್ದವರು. ಕಾಂಗ್ರೆಸ್ ನಲ್ಲಿ ಇದ್ದಾಗಲೇ ಗುತ್ತಿಗೆದಾರರನಾಗಿದ್ದು, ಕಾರ್ಪೊರೇಟ್, ಶಾಸಕ ಆಗಿದ್ದು. ನಮ್ಮ ಪಕ್ಷಕ್ಕೆ ಬಂದು ಐದು ವರ್ಷ ಆಗಿರಬಹುದು ಅಷ್ಟೇ. ಆಗ ಮುನಿರತ್ನ ಸತ್ಯ ಹರಿಶ್ಚಂದ್ರ ಆಗಿದ್ದರೇ ಎಂದು ಪ್ರಶ್ನಿಸಿದ್ದಾರೆ.



