ಪ್ರಜ್ವಲ್ ರೇವಣ್ಣ ವಿಡಿಯೋಗಳ ಕೇಸಿನಲ್ಲಿ ಇದ್ದಕ್ಕಿದ್ದಂತೆ ರಣರೋಚಕ ತಿರುವು ಸಿಗುತ್ತಿವೆ. ಮೊದಲನೆಯದ್ದು ವೈರಲ್ ಆಗಿರುವ ವಿಡಿಯೋವೊಂದರಲ್ಲಿ ರೇವಣ್ಣ ಅವರಿಂದ ಕಿಡ್ನಾಪ್ ಆಗಿದ್ದರು ಎನ್ನಲಾದ ಮಹಿಳೆ.. ತಮ್ಮ ಮಗ ತಪ್ಪು ತಿಳುವಳಿಕೆಯಿಂದ ಹೇಳಿಕೆ ಕೊಟ್ಟಿದ್ಧಾನೆ. ನಾನು ಕಿಡ್ನಾಪ್ ಆಗಿಲ್ಲ ಎನ್ನುತ್ತಿದ್ಧಾರೆ. ವಿಡಿಯೋದ ಸತ್ಯಾಸತ್ಯತೆ ಪರಿಶೀಲನೆ ಮಾಡಬೇಕಿದೆ.
ಎ. ಮಂಜು ಕೈವಾಡ ಆರೋಪ :
ಈ ನಡುವೆ.. ವಿಡಿಯೋ ಹಂಚಿದ್ದರ ಹಿಂದೆ ಎ.ಮಂಜು ಕೈವಾಡ ಇದೆ ಎಂಬ ಆರೋಪ ಇದೆ. ಈ ಮಾತು ಹೇಳಿರುವುದು ನವೀನ್ ಗೌಡ. ಫೇಸ್ʻಬುಕ್ ಪೇಜಿನಲ್ಲಿ ನನಗೆ ಸಿಕ್ಕ ಪೆನ್ ಡ್ರೈವ್ ಅನ್ನು ಅರಕಲಗೂಡು ಶಾಸಕ ಎ.ಮಂಜು ಅವರಿಗೆ ಕೊಟ್ಟಿದ್ದೇನೆ ಎಂದು ಪೋಸ್ಟ್ ಹಾಕಿರುವ ನವೀನ್ ಗೌಡ ನನಗೆ ಏ.20 ರಂದು ಸಿಕ್ಕಿದೆ. ಏ.21 ರಂದು ಅರಕಲಗೂಡು ಮಾರುತಿ ಕಲ್ಯಾಣಮಂಟಪದಲ್ಲಿ ಶಾಸಕ ಎ ಮಂಜುಗೆ ನೀಡಿದ್ದೇನೆ. ಕುಮಾರಸ್ವಾಮಿ ಹೇಳಿದ ಹಾಗೆ ವಿಡಿಯೋ ವೈರಲ್ ಹಿಂದೆ ಮಹಾನಾಯಕ ಅರಕಲಗೂಡು ಶಾಸಕರೇ ಇರಬಹುದು ಎಂದು ಪೋಸ್ಟ್ ಮಾಡಿದ್ದಾನೆ.
ನವೀನ್ ಗೌಡ ಯಾರೋ ನನಗೆ ಗೊತ್ತಿಲ್ಲ : ಎ.ಮಂಜು
ಎ. ಮಂಜು, ಈಗ ಜೆಡಿಎಸ್ ಶಾಸಕ. ಆದರೆ.. ಮಂಜು ತಮ್ಮ ರಾಜಕೀಯ ಜೀವನದಲ್ಲಿ ಸುದೀರ್ಘ ಹೋರಾಟ ನಡೆಸಿದ್ದೇ ದೇವೇಗೌಡ ಮತ್ತವರ ಕುಟುಂಬದ ವಿರುದ್ಧ. ಬದಲಾದ ರಾಜಕೀಯ ಸ್ಥಿತಿಗತಿಗಳಲ್ಲಿ ಮಂಜು ಈಗ ಜೆಡಿಎಸ್ ಸೇರಿ ಶಾಸಕರಾಗಿದ್ಧಾರೆ. ರಾಜಕೀಯದ ಕೊನೆಗಾಲದಲ್ಲಿ ನನ್ನ ಕೈಹಿಡಿದವರು ದೇವೇಗೌಡರು. ಅವರ ಕುಟುಂಬಕ್ಕೆ ದ್ರೋಹ ಮಾಡುವ ಕೆಲಸ ನಾನು ಮಾಡೋದಿಲ್ಲ. ಪೆನ್‌ಡ್ರೈವ್ ಪ್ರಕರಣದಿಂದ ದೇವೇಗೌಡರು ಬಹಳ ನೊಂದಿದ್ದಾರೆ. ಅವರನ್ನು ಮೊನ್ನೆ ಭೇಟಿ ಮಾಡಿದಾಗ ಈ ವಿಚಾರದ ಬಗ್ಗೆ ನನಗೆ ಯಾಕೆ ಮೊದಲೇ ಹೇಳಲಿಲ್ಲ ಎಂದು ಕೇಳಿದರು. ಯಾರಿಗೂ ಇಂತಹ ಸ್ಥಿತಿ ನಿರ್ಮಾಣವಾಗಬಾರದು. ನಾನು ಜೈಲಿನಲ್ಲಿ ರೇವಣ್ಣ ಭೇಟಿ ಮಾಡಿ ಸಂತ್ವಾನ ಹೇಳಿದ್ದೇನೆ. ಅವರ ಪ್ರತಿ ಕಷ್ಟ ಕಾಲದಲ್ಲೂ ನಾನು ಇರುತ್ತೇನೆ. ನಾನು ಅವರ ಕುಟುಂಬದ ಜೊತೆಯಲ್ಲಿ ಇದ್ದೇನೆ ಎಂಬ ಕಾರಣಕ್ಕಾಗಿಯೇ ಈಗ ಪ್ರಕರಣದಲ್ಲಿ ನನ್ನ ಹೆಸರು ಸೇರಿಸಲು ಪ್ರಯತ್ನಿಸುತ್ತಿದ್ದಾರೆ. ಪೆನ್‌ಡ್ರೈವ್ ಹಂಚಿಕೆ ಹಿಂದೆ ನವೀನ್ ಗೌಡನ ಮೂಲಕ ಯಾರದ್ದೋ ಕೈವಾಡ ಇದೆ. ಇಷ್ಟೆಲ್ಲ ಆದರೂ ಪೊಲೀಸರು ಅವನನ್ನು ಯಾಕೆ ಬಂಧಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಅವರ ಪ್ರಕಾರ 21ರಂದು ಮದುವೆಗೆ ಹೋಗಿದ್ದೂ ನಿಜ. ಹಲವರು ಭೇಟಿ ಮಾಡಿ ಮಾತನಾಡಿಸಿರ್ತಾರೆ. ಆದರೆ.. ಈ ನವೀನ್ ಗೌಡ ಯಾರು ಅನ್ನೋದು ನನಗೆ ಗೊತ್ತಿಲ್ಲ. ಇವನು ಯಾರು ಎಂಬುದು ಗೊತ್ತಿಲ್ಲ. ನಾನು ಇವತ್ತಿನವರೆಗೆ ಅವನ ಹೆಸರು ಕೇಳಿಲ್ಲ, ಅವನನ್ನು ನೋಡಿಯೇ ಇಲ್ಲ. ಅವನ ಹಿಂದೆ ಯಾರೋ ಪ್ರಬಲರು ಇರುವುದು ಸತ್ಯ, ಆ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.. . ಮೊದಲು ನವೀನ್ ಗೌಡ ಎಂಬುವವನ ಬಂಧನವಾಗಲಿ. ಅವನ ಮೂಲಕವೇ ಪೆನ್‌ಡ್ರೈವ್ ಎಲ್ಲ ಇತಿಹಾಸ ತಿಳಿಯುತ್ತದೆ ಎಂದಿದ್ದಾರೆ ಮಂಜು.
ಪ್ರೀತಂ ಗೌಡ ಆಪ್ತರ ಬಂಧನ :
ಇತ್ತ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದ್ದು, ಅವರಿಬ್ಬರೂ ಪ್ರೀತಂ ಗೌಡ ಆಪ್ತರಂತೆ. ಚೇತನ್ ಮತ್ತು ಲಿಖಿತ್ ಎಂಬುವವರ ಅರೆಸ್ಟ್ ಆಗಿದೆ. ಈ ಇಬ್ಬರು ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಹಾಕಿದ್ದರು. ಈ ಅರ್ಜಿ ವಜಾಗೊಂಡ ಬೆನ್ನಲ್ಲೇ ಇಬ್ಬರನ್ನೂ ತನಿಖಾಧಿಕಾರಿಗಳು ಬಂಧಿಸಿದ್ದಾರೆ.ಸಾಕ್ಷ್ಯ ನಾಶ ಮಾಡುತ್ತಿದ್ಧಾಗಲೇ ಬಂಧಿಸಿದ್ದಾರಂತೆ ಎಸ್‌ಐಟಿ ಪೊಲೀಸರು.



