ರಾಮಮಂದಿರ ಪ್ರತಿಷ್ಠಾಪನೆಗೆ ದೇಶದಾದ್ಯಂತ ಸುಮಾರು ೮ ಸಾವಿರ ವಿಶೇಷ ಅತಿಥಿಗಳು ಹೋಗುತ್ತಿದ್ಧಾರೆ. ರಾಜ್ಯದ ಸಿಎಂ, ಡಿಸಿಎಂ ಸೇರಿದಂತೆ ಯಾರಿಗೂ ಆಹ್ವಾನ ಸಿಕ್ಕಿಲ್ಲ. ಇನ್ನು ದೇಶದ ಹಲವು ತಾರೆಯರಿಗೆ ಆಹ್ವಾನ ಸಿಕ್ಕಿದೆ. ಹಾಗೆ ಆಹ್ವಾನ ಪಡೆದವರಲ್ಲಿ ರಜನಿಕಾಂತ್, ಅಮಿತಾಬ್ ಬಚ್ಚನ್, ಚಿರಂಜೀವಿ ಮೊದಲಾದವರಿದ್ದಾರೆ. ಆದರೆ ಕನ್ನಡದಲ್ಲಿ ರಾಮಮಂದಿರ ಪ್ರತಿಷ್ಠಾಪನೆಗೆ ಆಹ್ವಾನ ಪಡೆದಿರುವ ಚಿತ್ರರಂಗದವರ ಪೈಕಿ ಇದುವರೆಗೆ ಗೊತ್ತಾಗಿರುವುದು ಮೂರು ಜನರ ಹೆಸರು. ಮೂರನೇ ಹೆಸರೇ ನಿಖಿಲ್ ಕುಮಾರಸ್ವಾಮಿ.
ಅಯೋಧ್ಯೆ ಆಮಂತ್ರಣ ಪಡೆದ ಕೆಲವೇ ಕೆಲವು ನಟರ ಸಾಲಿಗೆ ಈಗ ನಿಖಿಲ್ ಕುಮಾರಸ್ವಾಮಿ ಕೂಡಾ ಸೇರಿದ್ಧಾರೆ. ರಿಷಬ್ ಶೆಟ್ಟಿ ಮತ್ತು ಯಶ್ ಅವರ ನಂತರ ಆಹ್ವಾನ ಪತ್ರಿಕೆ ಪಡೆದಿರುವ ನಿಖಿಲ್ ಕುಮಾರಸ್ವಾಮಿ ಅವರಿಗೆ ಈ ಆಹ್ವಾನವೂ ವಿಶೇಷವೇ. ಏಕೆಂದರೆ ಜನವರಿ ೨೨ ನಿಖಿಲ್ ಅವರ ಜನ್ಮದಿನವೂ ಹೌದು.
ರಾಮ ಜನ್ಮಭೂಮಿ ಟ್ರಸ್ಟ್ ವತಿಯಿಂದ ನಿಖಿಲ್ ಅವರಿಗೆ ಆಹ್ವಾನ ಪತ್ರಿಕೆ ನೀಡಲಾಗಿದ್ದು, ಫೋಟೋಗಳು ವೈರಲ್ ಆಗಿವೆ. ಜನವರಿ ೨೨ರಂದು ನಿಖಿಲ್ ಅಯೋಧ್ಯೆಗೆ ತೆರಳಲಿದ್ಧಾರೆ. ಕುಮಾರಸ್ವಾಮಿ ಹಾಗೂ ದೇವೇಗೌಡರಿಗೂ ಆಹ್ವಾನ ಇದ್ದು, ಒಟ್ಟಾರೆ ಇಡೀ ಕುಟುಂಬವೇ ರಾಮ ಮಂದಿರ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಳ್ಳಲಿದೆ.
ಜೆಡಿಎಸ್ ಅಧ್ಯಕ್ಷರು ಎಂಬ ಕಾರಣಕ್ಕೆ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಂಬ ಕಾರಣಕ್ಕೆ ಹೆಚ್.ಡಿ.ದೇವೇಗೌಡ ಹಾಗೂ ಚಿತ್ರನಟ ಎಂಬ ಕಾರಣಕ್ಕೆ ನಿಖಿಲ್ ಕುಮಾರಸ್ವಾಮಿ ಅವರಿಗೆ ಆಹ್ವಾನ ಸಿಕ್ಕಿದೆ. ಆದರೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರಿಗೆ ಆಹ್ವಾನ ಕೊಟ್ಟಾಗ ಬಹುತೇಕರು ಒಪ್ಪಿಕೊಂಡಿದ್ದರು. ಆದರೆ ನಿಖಿಲ್ ಅವರಿಗೆ ವಿಶೇಷ ಆಹ್ವಾನ ಪತ್ರಿಕೆ ಕೊಟ್ಟಿರುವುದು ವಿರೋಧವನ್ನೂ ಹುಟ್ಟು ಹಾಕಿದೆ. ಏಕೆಂದರೆ ಕನ್ನಡ ಚಿತ್ರರಂಗದ ವಿಷಯದಲ್ಲೇ ನಿಖಿಲ್ ಅವರು ಇನ್ನೂ ಉದಯೋನ್ಮುಖ ನಟ. ಚಿತ್ರರಂಗದ ಖ್ಯಾತ ಪ್ರಖ್ಯಾತರನ್ನೇ ಕಡೆಗಣಿಸಿ ನಿಖಿಲ್ ಅವರಿಗೆ ಆಹ್ವಾನ ಕೊಟ್ಟಿರುವುದು ಅಸಮಾಧಾನಕ್ಕೂ ಕಾರಣವಾಗಿದೆ.



