ಕೊಲೆ ಕೇಸಿನಲ್ಲಿ ಅರೆಸ್ಟ್ ಆಗಿರುವ ದರ್ಶನ್ ಬೇಕೋ ಬೇಕಿಲ್ಲದೆಯೋ ಸಮಸ್ಯೆ ಸೃಷ್ಟಿಸಿಕೊಳ್ತಿದ್ದಾರೆ. ದರ್ಶನ್ ವಿರುದ್ಧದ ಕೊಲೆ ಕೇಸಿನಲ್ಲಿ ಸಾಕ್ಷಿಗಳು ಬಿಗಿಯಾಗುತ್ತಿವೆ. ಆದರೆ ದರ್ಶನ್ ಪ್ರಕರಣವನ್ನು ಮತ್ತೆ ಮತ್ತೆ ಗಂಭೀರ ಮಾಡಿಕೊಳ್ಳುತ್ತಿದ್ದಾರೆ. ದರ್ಶನ್ ವಿರುದ್ಧ ಚಾರ್ಜ್‌ಶೀಟ್ ಹಾಕುವ ಸಮಯ ಹತ್ತಿರವಾಗುತ್ತಿದೆ. ಚಾರ್ಜ್‌ಶೀಟ್ ಹಾಕಿದ ನಂತರ ಜಾಮೀನಿಗೆ ಅರ್ಜಿ ಸಲ್ಲಿಸುವ ಅವಕಾಶ ದೊರೆಯಲಿದೆ. ಆದರೆ, ಅದಕ್ಕೂ ಕಲ್ಲು ಹಾಕುವ ಕೆಲಸವೊಂದು ಜೈಲಿನ ಹೊರಗೆ ನಡೆದಿದೆ.
ದರ್ಶನ್ ಸಮಸ್ಯೆ ನಂ.1 : ಸಾಕ್ಷಿಗೆ ಬೆದರಿಕೆ
ಈ ಹೊತ್ತಿನಲ್ಲೇ ದರ್ಶನ್ ಗ್ಯಾಂಗಿನವರಿಂದ ಸಾಕ್ಷಿಗಳಿಗೆ ಬೆದರಿಕೆ ಹಾಕುತ್ತಿರುವ ಆರೋಪವೂ ಕೇಳಿ ಬಂದಿದೆ. ಸಾಕ್ಷಿಯೊಬ್ಬರಿಗೆ ಪೊಲೀಸರ ಮುಂದೆ ಸಾಕ್ಷಿ ಹೇಳದಂತೆ ದರ್ಶನ್ ಗ್ಯಾಂಗ್ ಬೆದರಿಕೆ ಹಾಕಿದೆ ಎನ್ನಲಾಗಿದ್ದು, ಆ ಸಾಕ್ಷಿ ಈಗ ಪೊಲೀಸರ ಮೊರೆ ಹೋಗಿದ್ದಾರೆ. ದರ್ಶನ್ ಮಾಜಿ ಬಾಡಿಗಾರ್ಡ್ ಕಡೆಯಿಂದ ಸಾಕ್ಷಿಗೆ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ. ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ NCR ದಾಖಲಾಗಿದ್ದು, ಪೊಲೀಸರು ದೂರುದಾರನಿಗೆ ಧೈರ್ಯ ಹೇಳಿ ಕಳಿಸಿದ್ದಾರೆ. ಆದರೆ, ಎಫ್ಐಆರ್ ಆಗಿಲ್ಲ.
ಜೈಲಿನಲ್ಲಿದ್ದುಕೊಂಡೇ ಸಾಕ್ಷಿಗೆ ಬೆದರಿಕೆ ಹಾಕಿರುವುದು ಗಂಭೀರ ಆರೋಪವಾಗಿದ್ದು, ಇದರಿಂದ ಚಾರ್ಜ್ಶೀಟ್ ಸಲ್ಲಿಸಿದ ನಂತರವೂ ಜಾಮೀನು ಕಷ್ಟವಾಗಲಿದೆ.
ದರ್ಶನ್ ಸಮಸ್ಯೆ ನಂ.2 : ಮೆಗ್ಗರ್ ಮಷೀನ್ ಡೆಲಿವರಿ
ಮರ್ಡರ್ ಕೇಸಿನಲ್ಲಿ ಒಂದೊಂದು ವಿಷಯವೂ ಬಹುಮುಖ್ಯವಾಗುತ್ತೆ. ದರ್ಶನ್ ಗ್ಯಾಂಗ್ ವಿರುದ್ಧದ ಕೇಸಿನಲ್ಲಿ ಅತಿದೊಡ್ಡ ಪ್ರಬಲ ಸಾಕ್ಷಿಯಾಗಿರುವುದು 699 ರೂ. ಬೆಲೆಯ ಮೆಗ್ಗರ್ ಮೆಷಿನ್. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಯುತ್ತಿದ್ದು, ಹೊಸ ಹೊಸ ಮಾಹಿತಿಗಳು ಹೊರಬರುತ್ತಿವೆ. ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾ ಸ್ವಾಮಿ ಕೊಲೆಗೂ ಮುನ್ನ ರೇಣುಕಾ ಸ್ವಾಮಿಗೆ ಚಿತ್ರಹಿಂಸೆ ನೀಡಲಾಗಿತ್ತು ಎಂಬ ಆರೋಪ ಇದೆ. ಶವದ ಫೋಟೋ ನೋಡಿದರೆ ಕಿಡಿಗೇಡಿಗಳ ಮನಸ್ಥಿತಿ ಎಷ್ಟು ಕ್ರೂರವಾಗಿತ್ತು ಎಂಬುದು ತಿಳಿಯುತ್ತದೆ. ಹಲ್ಲೆ ವೇಳೆ ಪ್ರಜ್ಞೆ ತಪ್ಪಿದ್ದ ರೇಣುಕಾ ಸ್ವಾಮಿಗೆ ಮೆಗ್ಗರ್ನಿಂದ ಎಲೆಕ್ಟ್ರಿಕ್ ಶಾಕ್ ನೀಡಲಾಗಿತ್ತು ಎಂಬ ಮಾಹಿತಿ ಇದೆ.
ಡಿ ಗ್ಯಾಂಗ್ ಸದಸ್ಯರಿಗೆ ಮೆಗ್ಗರ್ ಸಿಕ್ಕಿದ್ದು ಎಲ್ಲಿಂದ ಎಂದು ತನಿಖೆ ಮಾಡಿದಾಗ ಡಿ ಗ್ಯಾಂಗ್ ಆ ಮೆಷಿನ್ನ್ನು ಆನ್ಲೈನ್ ಮೂಲಕ ತರಿಸಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಕೇವಲ 699 ರೂಪಾಯಿಗೆ ಅಮೇಜಾನ್ ಶಾಪಿಂಗ್ನಲ್ಲಿ ಲಭ್ಯವಾಗಿದ್ದ ಈ ವಸ್ತುವನ್ನು ಧನರಾಜ್ ಎಂಬಾತ ತರಿಸಿಕೊಂಡಿದ್ದ. ಡೆಲಿವರಿ ಪಡೆದ ಬಳಿಕ ಸ್ಕ್ಯಾನ್ ಮಾಡಿ ಹಣ ಪಾವತಿಸಿದ್ದ. ಹಾಗಾಗಿ ಸದ್ಯ ಡೆಲಿವರಿ ಬಾಯ್ನನ್ನು ಕೂಡ ಪೊಲೀಸರು ಸಾಕ್ಷಿಯಾಗಿ ಪರಿಗಣಿಸಿದ್ದಾರೆ.
ಸಮಸ್ಯೆ ನಂ.3 : ಆರೋಪಿಗಳ ಮಧ್ಯೆ ಜಗಳ
ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಒಟ್ಟು 17 ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಆ ೧೭ರಲ್ಲಿ ನಾಲ್ವರು ತುಮಕೂರು ಜೈಲಿನಲ್ಲಿದ್ದಾರೆ. ಪವಿತ್ರಾ ಗೌಡ, ದರ್ಶನ್ ಸೇರಿದಂತೆ ಉಳಿದ 14 ಜನ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಲ್ಲಿದ್ಧಾರೆ. ಈ ಮಧ್ಯೆ ತುಮಕೂರು ಜೈಲಿನಲ್ಲಿರುವ ನಾಲ್ವರು ಆರೋಪಿಗಳ ಮಧ್ಯೆ ಮಾತಿನ ಚಕಮಕಿ ನಡೆಯುತ್ತಿದೆ. ಒಬ್ಬೊಬ್ಬರ ಮೇಲೆ ಒಬ್ಬಬ್ಬೊರು ಕಾರಣವೆಂದು ಹೇಳಿಕೊಂಡು ಬೈಗುಳ ಆರಂಭಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸಿನ ಆರೋಪಿಗಳಾದ ರವಿಶಂಕರ್, ನಿಖಿಲ್, ಕಾರ್ತಿಕ್ ಹಾಗೂ ಕೇಶವ ಎಲ್ಲರೂ ಒಂದೇ ಬ್ಯಾರಕ್ ನಲ್ಲಿದ್ದು ನಿನ್ನ ಮಾತು ಕೇಳಿ ನಾನೂ ಸಿಕ್ಕಾಕೊಂಡೆ ಅಂತ ಪರಸ್ಪರ ನಿಂದನೆ ಮಾಡಿಕೊಳ್ಳುತ್ತಿದ್ದಾರೆ. ಪರಸ್ಪರ ಬೈದಾಡಿಕೊಂಡು ಒಬ್ಬರ ಮೇಲೆ ಆರೋಪ ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದಾರೆ.
ದರ್ಶನ್ ಅಭಿಮಾನಿ ಸಂಘದ ಚಿತ್ರದುರ್ಗ ಜಿಲ್ಲಾಧ್ಯಕ್ಷ ರಾಘವೇಂದ್ರನ ಮಾತು ಕೇಳಿ ನಾವು ಕೊಲೆ ಕೇಸಿನಲ್ಲಿ ಸಿಲುಕಿದ್ದೇವೆ. ನಮಗೆ ಜೈಲೇ ಗಟ್ಟಿಯಾಗುತ್ತದೆ ಎಂಬ ಅನುಮಾನ ಕಾಡುತ್ತಿದೆ. ನಮ್ಮ ಕುಟುಂಬ ಸದಸ್ಯರು ತೀವ್ರ ಬಡವರಾಗಿದ್ದಾರೆ. ಅವರು ಜೀವನ ಮಾಡುವುದೇ ದೊಡ್ಡ ಸಾಹಸವಾಗಿರುವಾಗ, ಈಗ ಜೈಲಿನಲ್ಲಿರುವ ನಮಗೆ ಯಾರು ಸಹಾಯ ಮಾಡ್ತಾರೆ ಎಂದು ಗೋಳಾಡುತ್ತಿದ್ದಾರೆ. ಈಗ ನಮ್ಮೆಲ್ಲರ ಜೀವನ ಸೆಟ್ಲ್ ಆಗುತ್ತೆ ಡೋಂಟ್ ವರಿ ಎಂದಿದ್ದ ರಾಘವೇಂದ್ರ ಕೂಡಾ ಜೈಲಿನಲ್ಲಿದ್ದಾನೆ. ಈಗ ನಮ್ಮ ಗತಿ, ಕುಟುಂಬದ ಪರಿಸ್ಥಿತಿ ಏನು ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಜೈಲಿನ ಅಧಿಕಾರಿಗಳು ನಾಲ್ವರಿಗೂ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಈ ಎಲ್ಲ ಘಟನೆಗಳ ಮಧ್ಯೆ ನ್ಯಾಯಾಂಗ ಬಂಧನದಲ್ಲಿ ಇರುವ ದರ್ಶನ್ ಹಾಗೂ ಸಹಚರರು ಆಗಸ್ಟ್ 14ರವರೆಗೂ ಜೈಲಿನಲ್ಲಿ ಕಾಲ ಕಳೆಯಬೇಕಿದೆ. ಈ ಮಧ್ಯೆ ಕೊಲೆಯಾದ ರೇಣುಕಾಸ್ವಾಮಿ ಕುಟುಂಬ ಸದಸ್ಯರಿಗೆ ಆಮಿಷವೊಡ್ಡುತ್ತಿರುವುದನ್ನು ಪೊಲೀಸರು ರಿಮ್ಯಾಂಡ್ ಕಾಪಿಯಲ್ಲಿ ತಿಳಿಸಿದ್ದಾರೆ. ಮತ್ತೊಂದೆಡೆ ಸಾಕ್ಷಿದಾರರೊಬ್ಬರಿಗೆ ಬೆದರಿಕೆ ಕರೆ ಮಾಡಿದ ಪ್ರಕರಣವೂ ಎನ್ಸಿಆರ್ ಆಗಿದೆ. ಈ ಎಲ್ಲ ಪ್ರಕರಣಗಳೂ ಲಿಂಕ್ ಆಗಿದ್ದು ದರ್ಶನ್ಗೆ ಚಾರ್ಜ್‌ಶೀಟ್ ನಂತರವೂ ಜಾಮೀನು ಸಿಗುವುದು ಕಷ್ಟವಾಗಲಿದೆ.



