ಪ್ರಜ್ವಲ್ ರೇವಣ್ಣ ವಿದೇಶದಲ್ಲಿದ್ಧಾರೆ. ಜರ್ಮನಿಯಲ್ಲೇ ಇದ್ಧಾರೆ ಎನ್ನುವುದು ಎಸ್ʻಐಟಿ ಅಧಿಕಾರಿಗಳ ನಂಬಿಕೆ. ಎಚ್.ಡಿ.ಕುಮಾರಸ್ವಾಮಿಯವರಿಗೆ ಮೊದಲ ಬಾರಿ ಸಂಸದನಾಗಿದ್ದಾಗಿನಿಂದಲೂ ಸಂಪರ್ಕದಲ್ಲಿ ಇರಲಿಲ್ಲವಂತೆ. ಇನ್ನು ಅವರಿಗೆ ಮಾಹಿತಿ ಇರೋದು ಡೌಟು. 20 ದಿನಗಳು ಕಳೆದು ಹೋಗಿದ್ದರೂ.. ಪ್ರಜ್ವಲ್ ಭಾರತಕ್ಕೆ ಬಂದಿಲ್ಲ. ಅಧಿಕೃತ ದಾಖಲೆಗಳ ಪ್ರಕಾರ ಆತ ಇನ್ನೂ ನಾಪತ್ತೆ.
ವಿಶೇಷ ಹಾಗೂ ವಿಚಿತ್ರವೇನು ಗೊತ್ತೇ.. ಪ್ರಜ್ವಲ್ ರೇವಣ್ಣನನ್ನು ಹುಡುಕಿ ಕರೆತರೋದಕ್ಕೆ ನಾವು ಬ್ಲೂ ಕಾರ್ನರ್ ನೋಟಿಸ್ ಕೊಟ್ಟಿದ್ದೇವೆ. ರೆಡ್ ಕಾರ್ನರ್ ನೋಟಿಸ್ ಕೊಟ್ಟಿದ್ದೇವೆ. ಕೇಂದ್ರ ಸರ್ಕಾರ ಯಾಕೆ ಅವನ ಪಾಸ್ʻಪೋರ್ಟ್ ರದ್ದು ಮಾಡಿಲ್ಲ. ಬಿಜೆಪಿ ಆತನನ್ನು ರಕ್ಷಣೆ ಮಾಡ್ತಾ ಇದೆ.. ಎಂದೆಲ್ಲ ಟೀಕೆ ಮಾಡುತ್ತಿರುವುದು ಖುದ್ದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಗೃಹ ಸಚಿವ ಪರಮೇಶ್ವರ್, ಸಚಿವರಾದ ಪ್ರಿಯಾಂಕ್ ಖರ್ಗೆ, ಚೆಲುವರಾಯ ಸ್ವಾಮಿ, ಎಂಬಿ ಪಾಟೀಲ್.. ಇತ್ಯಾದಿ ಇತ್ಯಾದಿ..
ಬೇರೆಯವರ ಮಾತು ಬಿಡಿ, ಖುದ್ದು ಗೃಹ ಸಚಿವ ಪರಮೇಶ್ವರ್ ಅವರೇ ಪ್ರಜ್ವಲ್ ರೇವಣ್ಣ ಅವರಿಗೆ ಬ್ಲೂ ಕಾರ್ನರ್ ನೋಟಿಸ್ ಕೊಟ್ಟಿದ್ದೇವೆ ಎಂದು ಹೇಳಿಕೆ ನೀಡಿದ್ಧಾರೆ. ಜರ್ನಲಿಸ್ಟುಗಳೂ ಕನ್ʻಫ್ಯೂಸ್ ಆಗಿ ಹೋಗಿದ್ಧಾರೆ. ವಾಸ್ತವ ಏನು ಗೊತ್ತೇ.. ಬ್ಲೂ ಕಾರ್ನರ್, ರೆಡ್ ಕಾರ್ನರ್ ಸೇರಿದಂತೆ ಯಾವುದೇ ಇಂಟರ್ʻಪೋಲ್ ನೋಟಿಸ್ ಇರಲಿ.. ಅದನ್ನು ಕೊಡಬೇಕಿರುವುದು ಕೇಂದ್ರ ಸರ್ಕಾರ. ಕೇಂದ್ರ ಸರ್ಕಾರದ ಸಿಬಿಐ ಮೂಲಕವೇ ಆಗಬೇಕು. ಸಿಬಿಐನವರು ದಾಖಲೆ, ಪರಿಶೀಲಿಸಿ.. ಕೋರ್ಟ್ ಅನುಮತಿ ಪಡೆದುಕೊಂಡು.. ವಿದೇಶಾಂಗ ಇಲಾಖೆಗೆ ನೀಡಬೇಕು. ವಿದೇಶಾಂಗ ಇಲಾಖೆಗೆ ಶಿಫಾರಸು ಆದ ಮೇಲೆ ಅದು ಜಾರಿಗೆ ಬರುತ್ತದೆ. ಪ್ರಜ್ವಲ್ ರೇವಣ್ಣ ವಿಷಯದಲ್ಲಿ ರಾಜ್ಯ ಸರ್ಕಾರ ತಾನು ಕೊಟ್ಟ ಶಿಫಾರಸನ್ನೇ ನೋಟಿಸ್ ಎನ್ನುತ್ತಿದೆ. ವಾಸ್ತವದಲ್ಲಿ ಅಂಥದ್ದು ಆಗಿಲ್ಲ.
ನೋಟಿಸ್ ಕೊಡಬೇಕು ಎಂದರೆ.. ಏನು ಮಾಡಬೇಕು..?
- ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಬೇಕು. ಪ್ರಜ್ವಲ್ ಅವರನ್ನು ನಾಪತ್ತೆಯಾಗಿರುವ ಆರೋಪಿ ಎಂದು ಉಲ್ಲೇಖಿಸಿ, ನ್ಯಾಯಾಲಯದಿಂದ ಬಂಧನದ ವಾರೆಂಟ್ ಪಡೆದು ಸಂಸದರ ವಿರುದ್ಧ ಇಂಟರ್‌ಪೋಲ್ ಮೂಲಕ ರೆಡ್ ಕಾರ್ನರ್ ನೋಟಿಸ್ ಜಾರಿಗೆ ಮುಂದಾಗಬೇಕು. ವಾಸ್ತವದಲ್ಲಿ ರೇವಣ್ಣ ಅವರ ವಿರುದ್ಧದ ಕಿಡ್ನಾಪ್ ಆರೋಪಕ್ಕೇ ಆ ಮಹಿಳೆಯ ಮಗನ ಹೇಳಿಕೆ ಬಿಟ್ಟು, ಬೇರಾವುದೇ ಸಾಕ್ಷಿ ಹೊಂದಿಸಲು ಸಾಧ್ಯವಾಗದೆ ರೇವಣ್ಣಗೆ ಜಾಮೀನು ಸಿಕ್ಕಿದೆ.
- ಲೈಂಗಿಕ ದೌರ್ಜನ್ಯ ಆರೋಪ ಹೊತ್ತು ವಿದೇಶಕ್ಕೆ ಪರಾರಿಯಾಗಿದ್ದಾರೆ ಎನ್ನುವುದನ್ನು ನ್ಯಾಯಾಲಯದ ಗಮನಕ್ಕೆ ತಂದು, ಪ್ರಜ್ವಲ್ ಪಾಸ್ʻಪೋರ್ಟ್ ರದ್ದು ಮಾಡುವಂತೆ ಕೋರುವುದು ಎಸ್ʻಐಟಿ ಮುಂದಿರುವ ಮತ್ತೊಂದು ಆಯ್ಕೆ. ಪಾಸ್‌ಪೋರ್ಟ್ ರದ್ದಾದರೆ ತಾವಾಗಿಯೇ ಸಂಸದರು ಸ್ವದೇಶಕ್ಕೆ ಮರಳಬಹುದು. ಇಲ್ಲದೆ ಹೋದರೆ ವಿದೇಶದಲ್ಲಿ ನೆಲೆಸಲು ಅವರು ಅನ್ಯ ಮಾರ್ಗ ಹುಡುಕಬೇಕಾಗಬಹುದು.ಆದರೆ.. ಪ್ರಜ್ವಲ್ ಬಳಿ ಇರುವುದು ರಾಜತಾಂತ್ರಿಕ ಪಾಸ್ʻಪೋರ್ಟ್. ಜೂನ್ 4ರ ನಂತರ ತಾನಾಗಿಯೇ ಅದು ರದ್ದಾಗುತ್ತದೆ. ಅಕಸ್ಮಾತ್.. ಪ್ರಜ್ವಲ್ ಹಾಸನದಿಂದ ಮತ್ತೊಮ್ಮೆ ಗೆದ್ದರೂ.. ಹೊಸ ದಾಖಲೆ ನೀಡಿ ರಾಜತಾಂತ್ರಿಕ ಪಾಸ್ʻಪೋರ್ಟ್ ನವೀಕರಣ ಮಾಡಿಕೊಡಿಸಿಕೊಳ್ಳಬೇಕು.
ರೆಡ್ ಕಾರ್ನರ್ ನೋಟಿಸ್ ಕೊಟ್ಟ ತಕ್ಷಣ ಅರೆಸ್ಟ್ ಆಗುವುದಿಲ್ಲ :
ವಿದೇಶದಲ್ಲಿ ನೆಲೆಸಿರುವ ಆರೋಪಿಗಳ ಪತ್ತೆಗೆ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲು ಚಾರ್ಜ್‌ಶೀಟ್ ಮುಖ್ಯ. ಆದರೆ.. ಚಾರ್ಜ್ʻಶೀಟ್ ಆದ ಕೂಡಲೇ ಅರೆಸ್ಟ್ ಆಗುವುದಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಳೀಯ ಠಾಣೆಗಳಲ್ಲಿ ದಾಖಲಾಗುವ ಎಫ್‌ಐಆರ್‌ಗಳಿಗೆ ಮಾನ್ಯತೆ ಇಲ್ಲ. ಆರೋಪಿಗಳ ವಿರುದ್ಧ ಸಲ್ಲಿಕೆಯಾಗುವ ಆರೋಪಪಟ್ಟಿಯನ್ನು ಆಯಾ ದೇಶದ ಭಾಷೆಗೆ ತರ್ಜುಮೆಗೊಳಿಸಿ ರೆಡ್ ಕಾರ್ನರ್ ನೋಟಿಸ್‌ಗೆ ಕೋರಿಕೆ ಸಲ್ಲಿಸಬೇಕು. ರೆಡ್ ಕಾರ್ನರ್ ನೋಟಿಸ್ ಜಾರಿಗೆ ಮುನ್ನ ಆರೋಪಿ ಯಾವ ದೇಶದಲ್ಲಿದ್ದಾನೆ ಎಂಬ ಖಚಿತ ಮಾಹಿತಿಯನ್ನು ಎಸ್‌ಐಟಿ ಪತ್ತೆ ಹಚ್ಚಬೇಕು. ಆರೋಪಿಯ ನಿಖರ ಲೊಕೇಷನ್ ಅನ್ನು ಸಂಬಂಧಪಟ್ಟ ದೇಶದ ಜತೆಗೆ ಹಂಚಿಕೊಳ್ಳಬೇಕಿದೆ. ಆಗ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಲಿದೆ. ಅಲ್ಲದೆ ಆರೋಪಿಯ ಹಣಕಾಸು ಮೂಲಗಳು ಬಂದ್ ಆಗಲಿವೆ. ಆಗ ಮಾತ್ರವೇ ಬಂಧನ ಭೀತಿ ಹೆಚ್ಚಾಗಲಿದೆ.
ಈ ಬಗ್ಗೆ ಕಾನೂನು ತಜ್ಞರ ಜೊತೆ ಎಸ್‌ಐಟಿ ಅಧಿಕಾರಿಗಳು ಸಮಾಲೋಚನೆ ಸಹ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿ ಸಿಗದೆ ತನಿಖೆ ಅಪೂರ್ಣವಾಗಲಿದೆ. ಈಗಾಗಲೇ ಸಂಸದರ ವಿರುದ್ಧ ಮೂರು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಆ ಪ್ರಕರಣಗಳಲ್ಲಿ ಸಂತ್ರಸ್ತೆಯರ ವಿಚಾರಣೆ ಸಹ ನಡೆದಿದೆ. ಹೀಗಾಗಿ ಆರೋಪಿ ಪತ್ತೆಗೆ ಕಾನೂನಿನಲ್ಲಿ ಲಭ್ಯವಿರುವ ಎಲ್ಲ ಆಸ್ತ್ರಗಳನ್ನು ಪ್ರಯೋಗಿಸಲು ಎಸ್‌ಐಟಿ ಗಂಭೀರವಾಗಿ ಯೋಜಿಸಿದೆ ಎನ್ನಲಾಗಿದೆ.
ಮಹಿಳಾ ಕೆಲಸದಾಳು ಮೇಲೆ ಲೈಂಗಿಕ ಶೋಷಣೆ ನಡೆಸಿದ ಆರೋಪದ ಮೇರೆಗೆ ಹೊಳೆನರಸೀಪುರ ಟೌನ್ ಠಾಣೆಯಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಅವರ ಪುತ್ರ ಪ್ರಜ್ವಲ್ ರೇವಣ್ಣ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಪ್ರಕರಣದಲ್ಲಿ ತಂದೆ ಮೊದಲ ಆರೋಪಿಯಾಗಿದ್ದರೆ, ಪುತ್ರ ಎರಡನೇ ಆರೋಪಿಯಾಗಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ರೇವಣ್ಣ ಪಾತ್ರದ ಕುರಿತು ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಎಸ್‌ಐಟಿ ಯೋಜಿಸಿದೆ.



