ರಾಜ್ಯದಲ್ಲಿ ಈಗ ಸಿಎಂ ಬದಲಾವಣೆ ಹೋರಾಟ ನಡೆಯುತ್ತಿದೆಯಷ್ಟೇ ಅಲ್ಲ.. ಮುಂದಿನ ಚುನಾವಣೆಯ ಪ್ಲಾನ್ ಕೂಡಾ ನಡೀತಾ ಇದೆ. ಕಾಂಗ್ರೆಸ್ಸಿನಲ್ಲಿ ಹೇಗೆ ಸಿದ್ಧರಾಮಯ್ಯ ಮತ್ತು ಡಿಕೆ ಮಧ್ಯೆ ಹೋರಾಟ ಇದೆಯೋ.. ಹಾಗೆಯೇ ಬಿಜೆಪಿಯಲ್ಲಿ ವಿಜಯೇಂದ್ರ ಅವರನ್ನು ಹೇಗಾದರೂ ಕೆಳಗೆ ಇಳಿಸಬೇಕು ಎಂದ ಕಸರತ್ತು ಚಾಲ್ತಿಯಲ್ಲಿದೆ. ಆ ಸಮಸ್ಯೆ ಇಲ್ಲದೇ ಇರುವುದು ಜೆಡಿಎಸ್ಸಿನಲ್ಲಿ ಮಾತ್ರ. ಪರಿಸ್ಥಿತಿ ಹೀಗಿರುವಾಗಲೇ.. ಕಾಂಗ್ರೆಸ್ ಸರ್ಕಾರ ಒಂದು ಆಂತರಿಕ ಸಮೀಕ್ಷೆ ನಡೆಸಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ 2 ವರ್ಷಗಳು ತುಂಬಿದ್ದಾಯ್ತು. ಬೈ ಎಲೆಕ್ಷನ್ ಗೆದ್ದಿದ್ದಾಯ್ತು. ಈಗ ಪಂಚಾಯ್ತಿ ಮೊದಲಾದ ಸ್ಥಳೀಯ ಸಂಸ್ಥೆಗಳ ಚುನಾವಣೆ ಹತ್ತಿರದಲ್ಲಿದೆ. ಬಿಬಿಎಂಪಿ ಚುನಾವಣೆ ಘೋಷಿಸಬೇಕಿದೆ. ಯಾವುದಕ್ಕೂ ಇರಲಿ ಎಂದು ಸಮೀಕ್ಷೆ ಮಾಡಿಸಿದೆ ಕಾಂಗ್ರೆಸ್.
ಕಾಂಗ್ರೆಸ್ ಮೂಲಗಳ ಪ್ರಕಾರ ಪಶ್ಚಿಮ ಬಂಗಾಳ ಮೂಲದ ಸಂಸ್ಥೆಯೊಂದಕ್ಕೆ ಸಮೀಕ್ಷೆಯ ಜವಾಬ್ದಾರಿ ನೀಡಲಾಗಿದ್ದು, ಜನ ಗ್ಯಾರಂಟಿ ಯೋಜನೆಗಳ ಬಗ್ಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆಯಂತೆ. ಈಗಲೇ ಎಲೆಕ್ಷನ್ ಏನಾದರೂ ನಡೆದರೆ.. ಈಗಿರುವ ಶಾಸಕರಲ್ಲಿ ಗೆಲ್ಲೋದು 80-85 ಶಾಸಕರು ಮಾತ್ರ ಎನ್ನುವ ರಿಪೋರ್ಟ್ ಸಿಕ್ಕಿದೆಯಂತೆ.
ABC ಎಂದು ವರ್ಗೀಕರಣ ಮಾಡಿ ಸಮೀಕ್ಷೆ..!
ರಾಜ್ಯದಲ್ಲಿನ ಶಾಸಕರನ್ನು ಮೂರು ವರ್ಗ ಮಾಡಲಾಗಿದೆ. ಎಬಿಸಿ ಎಂದು ವಿಂಗಡಿಸಲಾಗಿದ್ದು, ಎ ವರ್ಗದಲ್ಲಿರುವವರು ನಿರಾಯಾಸವಾಗಿ ಗೆಲ್ತಾರೆ. ಬಿ ಪಟ್ಟಿಯಲ್ಲಿರುವವರು ಬೆವರು ಸುರಿಸಬೇಕು. ಆದರೆ.. ಸಿ ವರ್ಗದಲ್ಲಿರುವವರು ಏನೇ ಮಾಡಿದರೂ ಗೆಲ್ಲೋದಿಲ್ಲ ಎಂದು ರಿಪೋರ್ಟ್ ಹೋಗಿದೆ. ವಿಶೇಷ ಎಂದರೆ.. ಆ ಸಿ ಗ್ರೂಪಿನಲ್ಲಿ ಸಚಿವರ ಸಂಖ್ಯೆಯೇ ಜಾಸ್ತಿ ಇದೆ. ಅವರಿಗೆ ಮತ್ತೆ ಟಿಕೆಟ್ ಕೊಟ್ಟರೆ ಪ್ರಾಬ್ಲಂ ಎಂದು ಹೇಳಲಾಗಿದೆ.
ಮತ್ತೆ ವಿರೋಧ ಪಕ್ಷವೇ ಗ್ಯಾರಂಟಿ..!
2008 ಹಾಗೂ 2013ರಲ್ಲಿ ಕಾಂಗ್ರೆಸ್ ವಿರೋಧ ಪಕ್ಷವಾಗಿತ್ತು. 2018ರಲ್ಲೂ ಪರಿಸ್ಥಿತಿ ಹೆಚ್ಚೂ ಕಡಿಮೆ ಹಾಗೆಯೇ ಕಂಟಿನ್ಯೂ ಆಗಿತ್ತು. ಈ ಬಾರಿಯ ಪರಿಸ್ಥಿತಿ ಹಿಂದಿನದ್ದಕ್ಕಿಂತ ಕೆಟ್ಟದಾಗಿದೆ. ವಿರೋಧ ಪಕ್ಷವಾಗುವುದಕ್ಕೆ ಸಿದ್ಧರಾಗಿ ಎಂಬ ಸಂದೇಶ ಕೊಟ್ಟಿದೆ ಸಮೀಕ್ಷೆಯ ವರದಿ.
ಗ್ಯಾರಂಟಿ ಬಿಟ್ಟು ಅಭಿವೃದ್ಧಿಯತ್ತ ಗಮನ ಕೊಡಿ..!
ಸಮೀಕ್ಷೆಯಲ್ಲಿ ಜನ ಹೇಳಿರುವುದೂ ಇದನ್ನೇ. ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎನ್ನುವುದನ್ನೇ. ಇನ್ನು ಸರ್ಕಾರದಲ್ಲಿರುವವರ ಸಚಿವರ ಕಾರ್ಯವೈಖರಿ, ವರ್ತನೆ ಹಾಗೂ ಶಾಸಕರ ಕಾರ್ಯವೈಖರಿಯ ಬಗ್ಗೆ ಬಂದಿರುವುದು ಕೂಡಾ ನೆಗೆಟಿವ್ ರಿಪೋರ್ಟ್. ಸಮೀಕ್ಷೆಯಿಂದ ತಿಳಿದು ಬಂದ ಒಟ್ಟು ಸಾರಾಂಶವೇನೆಂದರೆ, ಸರ್ಕಾರ ಕೇವಲ ಗ್ಯಾರಂಟಿಗಳನ್ನು ಮಾತ್ರ ನೆಚ್ಚಿಕೊಳ್ಳದೆ, ಇತರ ಅಭಿವೃದ್ದಿ ಕೆಲಸಗಳತ್ತಲೂ ಹೆಚ್ಚಿನ ಆದ್ಯತೆ ಕೊಡಬೇಕು. ಜನರು ಗುರುತಿಸುವಂತಹ ಕೆಲಸ ಕಾರ್ಯಗಳನ್ನು ಮಾಡಬೇಕು.
ಬೆಚ್ಚಿಬಿದ್ದ ಸಿದ್ಧರಾಮಯ್ಯ..!
ರಿಪೋರ್ಟ್ ಅಂಶಗಳನ್ನು ನೋಡುತ್ತಿದ್ದಂತೆಯೇ ಸಿದ್ಧರಾಮಯ್ಯ ಬೆಚ್ಚಿ ಬಿದ್ದಿದ್ದಾರಂತೆ. ಏಕೆಂದರೆ.. ಸಿದ್ಧರಾಮಯ್ಯ ಅಂದುಕೊಂಡಿದ್ದುದೇ ಬೇರೆ. ಸಮೀಕ್ಷೆ ಫಲಿತಾಂಶ ಬಂದಿದ್ದೇ ಬೇರೆ. ಹೀಗಾಗಿ ವರದಿಯನ್ನು ಕೂಲಂಕುಷವಾಗಿ ಪರಿಶೀಲೆನ ಮಾಡಲಾಯ್ತಂತೆ. ಆಗ ವರದಿಯ ಬೇಸಿಕ್ ರಿಪೋರ್ಟ್ ನೋಡಿ.. ಇನ್ನೂ ಬೆಚ್ಚಿದರಂತೆ. ಕಾರಣ.. ಮೂಲ ಸಮೀಕ್ಷೆಯಲ್ಲಿದ್ದ ಮಾಹಿತಿಗಳನ್ನು ಸ್ವಲ್ಪ ಸಮಾಧಾನಕರವಾಗುವಂತೆ ತಿದ್ದಿ ತೀಡಿ ನೀಡಲಾಗಿತ್ತು. ಮೂಲ ಸಮೀಕ್ಷೆಯ ವರದಿ ಇನ್ನೂ ಭಯಾನಕವಾಗಿದೆ ಎಂದು ಗೊತ್ತಾಗುತ್ತಿದ್ದಂತೆಯೇ ಚಿಂತೆಗೆ ಬಿದ್ದಿದ್ದಾರಂತೆ ಸಿದ್ಧರಾಮಯ್ಯ.



