ವಲಸಿಗರು ಅಂದರೆ ಕಾಂಗ್ರೆಸ್ಸಿಗರು ಬಂದ ಮೇಲೆ ಬಿಜೆಪಿಯಲ್ಲಿ ಶಿಸ್ತು ತಪ್ಪಿದೆ. ನಾವು ನಾಲ್ವರೇ ಇದ್ದಾಗ ಶಿಸ್ತು ಜಾಸ್ತಿಯಿತ್ತು. ಇದೀಗ ಅವರೆಲ್ಲ ಬಂದ ಮೇಲೆ ಶಿಸ್ತು ದೂರವಾಗಿದೆ. ನಮ್ಮದೀಗ ಜಗತ್ತಿನಲ್ಲೇ ಅತಿ ದೊಡ್ಡ ರಾಜಕೀಯ ಪಕ್ಷ. ಹೀಗಾಗಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಈ ಅಶಿಸ್ತನ್ನೂ ಪಕ್ಷದ ಹೈಕಮಾಂಡ್ ರಿಪೇರಿ ಮಾಡುತ್ತೆ. ಹೀಗೆಂದು ಈಶ್ವರಪ್ಪ ಹೇಳಿದ್ದಾರೆ.
ನೋಡಿದವರಿಗೆ ಹೌದೌದು ಎನಿಸಬೇಕು. ಆದರೆ ಬಿಜೆಪಿಯೊಳಗಿನ ಶಿಸ್ತು ತಪ್ಪಿದ್ದು ಯಾರಿಂದ.. ಎಲ್ಲಿಂದ.. ಯಾರಿಂದ ಶುರುವಾಯ್ತು ಎಂದು ಹುಡುಕಹೋದರೆ ಸಿಗುವ ಉತ್ತರವೇ ಬೇರೆ. ಏಕೆಂದರೆ ಖುದ್ದು ಇಂತಹ ಅಶಿಸ್ತನ್ನು ಶುರು ಮಾಡಿದವರು ಈಗ ಶಿಸ್ತಿನ ಪಾಠ ಹೇಳುತ್ತಿರುವ ಈಶ್ವರಪ್ಪನವರೇ. 2018ರಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಚುನಾವಣೆಗೆ ಹೊರಟಾಗ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಶುರು ಮಾಡಿ ಚಾಲೆಂಜ್ ಹಾಕಿದ್ದವರು ಇದೇ ಈಶ್ವರಪ್ಪ. ಬಿಜೆಪಿಯಲ್ಲಿಯೇ ಇದ್ದ ಈಶ್ವರಪ್ಪ ಅವರಿಗೆ, ಬಿಜೆಪಿಯ ಕೆಲವು ನಾಯಕರು `ಸಂತೋಷ’ದಿಂದಲೇ ಬೆಂಬಲ ಕೊಟ್ಟಿದ್ದರು. ಈಶ್ವರಪ್ಪ ಅವರನ್ನು ಸುಮ್ಮನಾಗಿಸುವಷ್ಟರಲ್ಲಿ ಯಡಿಯೂರಪ್ಪ ಅವರಿಗೆ ಸಾಕುಬೇಕಾಗಿತ್ತು.


ಈಶ್ವರಪ್ಪ ಅವರಿಗೆ ಹೈಕಮಾಂಡ್ ಬೆಂಬಲವೂ ಇತ್ತು ಎನ್ನುವುದು ರಹಸ್ಯವೇನಲ್ಲ.
ಇನ್ನು ಯತ್ನಾಳರ ವಿಷಯಕ್ಕೆ ಬಂದರೆ.. ಅವರೂ ಕೂಡಾ ಮೂಲ ಬಿಜೆಪಿಯವರೇ. ಯತ್ನಾಳ್ ವರ್ಸಸ್ ನಿರಾಣಿ, ಯತ್ನಾಳ್ ವರ್ಸಸ್ ಜಿಗಜಿಣಗಿ ಹೋರಾಟಗಳು ವಿಜಯಪುರದ ಮಂದಿ ಮಂದಿಗೂ ಗೊತ್ತು. ಹಿಂದೂಗಳ ಹೃದಯ ಸಾಮ್ರಾಟ ಎಂದು ಕರೆಸಿಕೊಳ್ತಿರೋ ಬಸನಗೌಡ ಪಾಟೀಲ್ ಯತ್ನಾಳ್, ಕೆಲವು ವರ್ಷಗಳ ಹಿಂದೆ ಜೆಡಿಎಸ್`ಗೆ ಹೋಗಿದ್ದರು. ಆಗ ಅವರ ತಲೆಯ ಮೇಲೂ ಸ್ಕಲ್ ಕ್ಯಾಪ್ ಬಂದಿತ್ತು. ಮಸೀದಿಗೆ ಹೋಗಿ ನಮಾಜ್ ಮಾಡಿದ್ದರು ಎಂಬ ನಿರಾಣಿ ಮಾತುಗಳಲ್ಲಿ ಸುಳ್ಳೇನಿಲ್ಲ. ಬೊಮ್ಮಾಯಿ-ಡಿಕೆ, ಬೊಮ್ಮಾಯಿ-ಶಾಮನೂರು, ಬಿಎಸ್`ವೈ-ಡಿಕೆ ಭೇಟಿಯನ್ನು ಹಲ್ಕಟ್ ರಾಜಕೀಯ ಎನ್ನುತ್ತಿರುವ ಯತ್ನಾಳ್ ಕೂಡಾ ಬಿಜೆಪಿಯವರಿಗೆ ಶಿಸ್ತಿನ ಪಾಠ ಮಾಡಿದ್ದಾರೆ. ಇದೇ ಯತ್ನಾಳ್ ಎಲೆಕ್ಷನ್ನಿಗೆ ಮೊದಲು ಹೋದಲ್ಲಿ ಬಂದಲ್ಲಿ ಯಡಿಯೂರಪ್ಪ ವಿರುದ್ಧ ಹಾರಾಡಿ ಚೀರಾಡಿದ್ದವರು. ಈಗ ಶಿಸ್ತಿನ ಪಾಠ ಹೇಳುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕನಿಷ್ಠ ಒಂದು ನೋಟಿಸ್ ಕೊಡುವ ಪ್ರಯತ್ನವನ್ನೂ ಮಾಡಲಿಲ್ಲ. `ಸಂತೋಷ’ದಿಂದಲೇ ಸುಮ್ಮನಿದ್ದರು ಎನ್ನುವುದು ಗುಟ್ಟೇನಲ್ಲ.
ಇನ್ನು ಅಡ್ಜಸ್ಟ್`ಮೆಂಟ್ ರಾಜಕೀಯದ ಆರೋಪ ಮಾಡುತ್ತಿರುವ ಸಿಟಿ ರವಿ ಕೂಡಾ ಶಿಸ್ತಿನ ಬಾರ್ಡರ್ ದಾಟಿ ಪರೋಕ್ಷವಾಗಿ ಯಡಿಯೂರಪ್ಪ ಅವರನ್ನು ಚುಚ್ಚಿದ್ದವರೇ. ಪ್ರತಾಪ್ ಸಿಂಹ ಕೂಡಾ ನೇರಾನೇರ ಎಂಬರ್ಥದಲ್ಲಿ ಯಡಿಯೂರಪ್ಪ ವಿರುದ್ಧ ಪರೋಕ್ಷವಾಗಿ ಗುಡುಗಿದ್ದವರೇ. ಪಕ್ಷದ ಶಾಸಕ ರಾಮದಾಸ್ ಅವರ ವಿರುದ್ಧದ ಪ್ರತಾಪ್ ಸಿಂಹ ಅವರ ಆಕ್ರೋಶದ ನುಡಿಗಳನ್ನು ಬಹುತೇಕ ಎಲ್ಲರೂ ನೋಡಿದ್ದಾರೆ. ಅವರು ಮೂಲತಃ ಬಿಜೆಪಿಯರೇ.
ಹಾಗೆ ನೋಡಿದರೆ ಬಿಜೆಪಿಗೆ ಬಂದ 17 ಜನರಲ್ಲಿ ವಿಶ್ವನಾಥ್ ಪಕ್ಷವನ್ನೇ ಬಿಟ್ಟು, ಬೀದಿಯಲ್ಲಿ ಬೈದಾಡಿಕೊಳ್ಳುತ್ತಿದ್ದಾರೆ. ಸಿಪಿ ಯೋಗೀಶ್ವರ್ ಬೀದಿಯಲ್ಲಿ ಬಯ್ಯುತ್ತಿದ್ದಾರೆ ಎಂಬುದು ಬಿಟ್ಟರೆ.. ಉಳಿದಂತೆ ಎಲ್ಲರೂ ತಾಳ್ಮೆ ವಹಿಸಿದ್ದಾರೆ. ಬಿಸಿ ಪಾಟೀಲ್ ಕಿಡಿ ಕಾರಿದ್ದು ತಮ್ಮ ವಿರುದ್ಧ ಆರೋಪ ಬಂದಾಗ. ಮುನಿರತ್ನ, ಸೋಮಶೇಖರ್, ಎಂಟಿಬಿ ನಾಗರಾಜ್, ಬೈರತಿ ಬಸವರಾಜ್, ಸುಧಾಕರ್, ಶಿವರಾಮ್ ಹೆಬ್ಬಾರ್.. ಹೀಗೆ ಯಾರೊಬ್ಬರೂ ಬಹಿರಂಗವಾಗಿ ಆಟವಾಡಿದ್ದಕ್ಕೆ ಸಾಕ್ಷಿಗಳಿಲ್ಲ. ಮುನಿರತ್ನ ವಿರುದ್ಧ ಕೇಸು ಹಾಕಿದ್ದ ತುಳಸಿ ಮುನಿರಾಜು ಗೌಡ ಮೂಲತಃ ಬಿಜೆಪಿಯರೇ.
ಹಲವು ವರ್ಷಗಳ ಹಿಂದೆಯೇ ಬಿಜೆಪಿಗೆ ಬಂದಿದ್ದ ವಿ.ಸೋಮಣ್ಣ, ಈಗ ರಾಜ್ಯಾಧ್ಯಕ್ಷ ಹುದ್ದೆಗೆ ಪ್ರಬಲ ಆಕಾಂಕ್ಷಿಯಾಗಿರುವ ಸೋಮಣ್ಣ ಕೂಡಾ ಯಡಿಯೂರಪ್ಪ ವಿರುದ್ಧ ಹರಿಹಾಯ್ದಿದ್ದವರೇ. ಚುನಾವಣೆಗೂ ಮೊದಲೂ.. ಚುನಾವಣೆ ನಂತರ.. ಪಕ್ಷದ ಶಿಸ್ತಿನ ಗಡಿ ದಾಟಿದ್ದವರೇ. ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಯಡಿಯೂರಪ್ಪ ವಿರುದ್ಧ ಕಿಡಿ ಕಾರುತ್ತಿರುವ ಸೋಮಣ್ಣ ಕೂಡಾ, ಇಡೀ ರಾಜ್ಯ ಬಿಜೆಪಿಯನ್ನು ಒಗ್ಗಟ್ಟಾಗಿ ಕರೆದುಕೊಂಡು ಹೋಗುವ ಹುದ್ದೆಗೆ ಟವೆಲ್ ಹಾಕಿದ್ದಾರೆ. ಶಿಸ್ತು ತಪ್ಪಿದ್ದು ಯಾರು..? ವಲಸಿಗರಾ..? ಮೂಲ ಬಿಜೆಪಿಯವರಾ..?



