ಜಗತ್ತಿಗೆ ಶಾಂತಿ, ಅಹಿಂಸೆ, ಪ್ರೀತಿಯ ಸಂದೇಶ ಸಾರಿದವನು ಬುದ್ಧ. ಅಂತಹ ಬುದ್ದನಿಗೂ.. ಯುದ್ಧಕ್ಕೂ.. ಭಾರತದ ಮೂವರು ಪ್ರಧಾನಿಗಳಿಗೂ ಒಂದು ಸಂಬಂಧ ಇದೆ. ಬುದ್ಧ ಪೂರ್ಣಿಮೆಗೆ ಭಾರತದ ಭದ್ರತಾ ಇತಿಹಾಸದಲ್ಲಿ ಮಹತ್ವದ ಐತಿಹಾಸಿಕ ಸ್ಥಾನಮಾನ ಗೌರವ ಇದೆ. ಸಾಂಪ್ರದಾಯಿಕವಾಗಿ ಬುದ್ಧ ಪೂರ್ಣಿಮೆ ಅಂದರೆ ಶಾಂತಿ ಮತ್ತು ಜ್ಞಾನೋದಯದ ದಿನವೆಂದು ಲೆಕ್ಕ. ಆದರೆ ಭಾರತದ ರಾಷ್ಟ್ರೀಯ ಪವರ್‌ನ ದಿಟ್ಟ ಪ್ರತಿಪಾದನೆಗೂ ಈ ದಿನ ವೇದಿಕೆ. ಬುದ್ಧ ಸ್ಮೈಲ್ಸ್ ಎಗೇನ್. ಮೂವರೂ ಪ್ರಧಾನಿಗಳು..ಅಂದರೆ ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಹಾಗೂ ಹಾಲಿ ಪ್ರಧಾನಿ ನರೇಂದ್ರ ಮೋದಿ ಈ ಮೂವರೂ ಕೂಡಾ ಪಾಕಿಸ್ತಾನಕ್ಕೆ ದಿಟ್ಟ ಸಂದೇಶ ಕೊಟ್ಟಿದ್ದು ಬುದ್ದ ಪೂರ್ಣಿಮೆಯ ದಿನ.
ನರೇಂದ್ರ ಮೋದಿ :
2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ʻಆಪರೇಷನ್ ಸಿಂದೂರʼದ ಯಶಸ್ಸು ಘೋಷಿಸಿದ್ದು ಬುದ್ದ ಪೂರ್ಣಿಮೆಯ ದಿನ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ನಿಖರವಾದ ಮಿಲಿಟರಿ ದಾಳಿಯಾದ ಆಪರೇಷನ್ ಸಿಂದೂರ್ ಅನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದ ನಂತರ ಅವರು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದು ಬುದ್ಧ ಪೂರ್ಣಿಮೆ ದಿನ. ತಮ್ಮ ಭಾಷಣದಲ್ಲಿ : “ಶಾಂತಿ ಕಾ ರಾಸ್ತಾ ಭಿ ಶಕ್ತಿ ಸೇ ಹೋಕರ್ ಹಿ ಜಾತಾ ಹೈ.” (“ಶಾಂತಿಯ ಹಾದಿಯೂ ಸಹ ಶಕ್ತಿಯ ಮೂಲಕವೇ ಸಾಗಬೇಕು.”) ಎನ್ನುವ ಮೂಲಕ ಬುದ್ಧನನ್ನೂ ಸ್ಮರಿಸಿದರು.
ವಾಜಪೇಯಿಗೂ ನಕ್ಕಿದ್ದ ಬುದ್ದ :
1998ರ ಮೇ 11 ಮತ್ತು 13ರಲ್ಲಿ ಬುದ್ಧ ಪೂರ್ಣಿಮೆಯ ದಿನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪರಮಾಣು ಪರೀಕ್ಷೆಗಳನ್ನು ನಡೆಸಿದರು. ಇದನ್ನು ಪ್ರಸಿದ್ಧವಾಗಿ ʼಆಪರೇಷನ್ ಶಕ್ತಿʼ ಎಂದು ಹೆಸರಿಸಲಾಗಿದೆಯಾದರೂ..ಪೋಖ್ರಾನ್ ಟೆಸ್ಟ್ ಇತಿಹಾಸ ಬರೆದಿದೆ. ವಾಜಪೇಯಿಯವರ ದಿನಾಂಕದ ಆಯ್ಕೆಯ ಹಿಂದೆ ಸೈದ್ಧಾಂತಿಕ ಅರ್ಥವೂ ಇತ್ತು. ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್‌ಗೆ ಬರೆದ ಪತ್ರದಲ್ಲಿ ಅವರು ಪಾಕಿಸ್ತಾನ ಮತ್ತು ಚೀನಾದಿಂದ ಭಾರತಕ್ಕೆ ಇರುವ ಬೆದರಿಕೆಯನ್ನು ಉಲ್ಲೇಖಿಸಿದರು. ಬುದ್ಧನ ಬೋಧನೆ ವಾಜಪೇಯಿಯವರ ಸಂದೇಶದಲ್ಲಿ ಸ್ಪಷ್ಟವಾಗಿದ್ದವು: “ನಾವು ಆಕ್ರಮಣಕಾರರಲ್ಲ, ಆದರೆ ನಾವು ಭಯಭೀತರಾಗುವುದಿಲ್ಲ ಎಂದು ಬರೆದಿದ್ದರು. ಆ ದಿನದ ಯಶಸ್ಸಿನ ಮತ್ತೊಬ್ಬ ರೂವಾರಿ ಡಾ.ಎಪಿಜೆ ಅಬ್ದುಲ್ ಕಲಾಂ. ಅಂದಹಾಗೆ ಆ ಪರೀಕ್ಷೆಗೆ ಪತ್ರಿಕೆಗಳು ಕೊಟ್ಟಿದ್ದ ಹೆಡ್ ಲೈನ್ ʻಬುದ್ದ ಮತ್ತೊಮ್ಮೆ ನಕ್ಕʼ
ಇಂದಿರಾ ಗಾಂಧಿ :
ಆಕ್ಚುವಲಿ ಬುದ್ಧ ಪೂರ್ಣಿಮೆಯ ದಿನದಂದು ದೊಡ್ಡ ಸಂದೇಶ ಕೊಟ್ಟಿದ್ದ ಮೊದಲ ಪ್ರಧಾನಿ ಇಂದಿರಾ ಗಾಂಧಿ. ಮೇ 18, 1974ರಂದು, ಜಗತ್ತು ಬುದ್ಧ ಪೂರ್ಣಿಮೆ ಆಚರಿಸುತ್ತಿದ್ದರೆ, ಇಂದಿರಾ ಗಾಂಧಿ ರಾಜಸ್ತಾನದ ಪೋಖ್ರಾನ್ʻನಲ್ಲಿ ʻಸ್ಮೆಲಿಂಗ್ ಬುದ್ಧʼ ಹೆಸರಿನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದರು. ಮೊದಲ ಪರಮಾಣು ಬಾಂಬ್ ಪರೀಕ್ಷೆಯನ್ನು ನಡೆಸಿ ಜಗತ್ತನ್ನು ಬೆರಗುಗೊಳಿಸಿತ್ತು. ಬುದ್ಧ ಪೂರ್ಣಿಮೆಯ ದಿನಾಂಕ ಶಾಂತಿಯನ್ನು ಸಂಕೇತಿಸುತ್ತದೆ, ಆದರೆ ವಿನಾಶದ ಸಾಮರ್ಥ್ಯವನ್ನು ಅನಾವರಣಗೊಳಿಸಿತು. ಅದರೆ, ಭಾರತವು ಶಾಂತಿಯನ್ನು ಬಯಸುತ್ತದೆ, ಆದರೆ ಯುದ್ಧಕ್ಕೆ ಸಿದ್ಧವಾಗಿರುತ್ತದೆ ಎಂಬುದು ಇದರ ಅರ್ಥವಾಗಿತ್ತು. ಈ ಮೂಲಕ ಇಂದಿರಾ ಗಾಂಧಿ ಜಗತ್ತಿಗೆ ಭಾರತದ ಶಕ್ತಿಯೇನು ಎಂದು ತೋರಿಸಿದ್ದರು.
ಮತ್ತೊಮ್ಮೆ ಪರಮಾಣು ಪರೀಕ್ಷೆ ಮಾಡಿದ್ದು ಏಕೆ..?
ಆದರೆ ಭಾರತದ ಮೊದಲ ಅಣ್ವಸ್ತ್ರ ಪರೀಕ್ಷೆಯ ಬಗ್ಗೆ ಹಲವು ಅಂತಾರಾಷ್ಟ್ರೀಯ ಮಾಧ್ಯಮಗಳು ಬೊಗಳೆ ಎಂದು ಕರೆದು, ಪರೀಕ್ಷೆಯ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದವು. ಏಕೆಂದರೆ ಆ ಪರೀಕ್ಷೆಯ ನಂತರ ಭಾರತ ಸುಮಾರು 24 ವರ್ಷ ಮೌನವಾಗಿತ್ತು. ಹೀಗಾಗಿ ನೆರೆಯ ಶತ್ರು ಪಾಕಿಸ್ತಾನ ಮತ್ತು ಜಗತ್ತಿಗೆ ಭಾರತದ ತಾಕತ್ತೇನು ಎಂದು ತೋರಿಸುವುದು ಹಾಗೂ ಅಮೆರಿಕದ ಗುಪ್ತಚರ ಉಪಗ್ರಹಗಳ ಕಣ್ಣು ತಪ್ಪಿಸುವುದು ಹೀಗೆ ಹಲವೂ ಸವಾಲುಗಳನ್ನು ಎದುರಿಸಿಯೇ ಗೆದ್ದೆವು ನೋಡಿ ಎಂದು ತೋರಿಸಿದ್ದರು ಅಟಲ್ ಬಿಹಾರಿ ವಾಜಪೇಯಿ.



