ನಿಮಗೆ ಭಾರತದ ಕ್ರಿಕೆಟರ್‌ಗಳ ಹೆಸರು ಗೊತ್ತಿದೆ. ಕ್ರಿಕೆಟ್ ಪ್ರೇಮಿಗಳು ಸಾಮಾನ್ಯವಾಗಿ ಒಂದು ಪಂದ್ಯ ಗೆಲ್ಲಿಸಿಕೊಟ್ಟವರನ್ನೂ ಮರೆಯೋದಿಲ್ಲ. ಅಂತಹ ಸ್ಟಾರ್ ಕ್ರಿಕೆಟ್ ಆಟಗಾರರಲ್ಲೊಬ್ಬ ಸಂಜಯ್ ಬಂಗಾರ್. ಪೂರ್ತಿ ಹೆಸರು ಸಂಜಯ್ ಬಾಪುಸಾಹೇಬ್ ಬಂಗಾರ್. ಭಾರತದ ಪರ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಪಂದ್ಯಗಳನ್ನಾಡಿದ್ದ ಆಲ್ ರೌಂಡರ್. ರೈಟ್ ಹ್ಯಾಂಡ್ ಬ್ಯಾಟ್ಸ್‌ಮನ್ ಹಾಗೂ ಮೀಡಿಯಂ ಫಾಸ್ಟ್ ಬೌಲರ್ ಆಗಿದ್ದವರು.
ರಣಜಿಯಲ್ಲಿ ರೈಲ್ವೇಸ್ ಪರ ಆಡುತ್ತಿದ್ದ ಸಂಜಯ್ ಬಂಗಾರ್, 2001-2004ರಲ್ಲಿ ಭಾರತದ ಪರ ಆಡುತ್ತಿದ್ದವರು. ಆಡಿದ ಎರಡನೇ ಪಂದ್ಯದಲ್ಲೇ ಶತಕ ದಾಖಲಿಸಿದ್ದ ಸಂಜಯ್ ಬಂಗಾರ್, ಅದೇ ಫಾರ್ಮ್‌ನ್ನು ಸುದೀರ್ಘ ಕಾಲ ಕಾಯ್ದುಕೊಳ್ಳಲಿಲ್ಲ. 2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ʻಗೆ ನಿವೃತ್ತಿ ಘೋಷಿಸಿದ ಸಂಜಯ್ ಬಂಗಾರ್, ನಂತರ ಕೋಚ್ ಆಗಿ ಯಶಸ್ಸು ಕಂಡವರು. ರಾಹುಲ್ ದ್ರಾವಿಡ್ ಜೊತೆ ಬ್ಯಾಟಿಂಗ್ ಕೋಚ್ ಆಗಿದ್ದ ಸಂಜಯ ಬಂಗಾರ್, ಐಪಿಎಲ್ ಟೂರ್ನಿಯಲ್ಲಿ ಡೆಕ್ಕನ್ ಚಾರ್ಜರ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ಕೋಚ್ ಆಗಿದ್ದವರು. ಇದೀಗ ಅವರ ಪುತ್ರ ಲಿಂಗವನ್ನೇ ಬದಲಿಸಿ ಸುದ್ದಿಯಾಗಿದ್ದಾರೆ.
ಆರ್ಯನ್ ಬಂಗಾರ್ ಕೂಡ ತನ್ನ ತಂದೆಯಂತೆ ಕ್ರಿಕೆಟಿಗನಾಗಬೇಕೆಂದು ಕನಸು ಕಂಡಿದ್ದರು. ಅದರಂತೆ, ಅವರು ಚಿಕ್ಕ ವಯಸ್ಸಿನಿಂದಲೇ ಕ್ರಿಕೆಟ್ ಅಭ್ಯಾಸ ಮಾಡಲು ಪ್ರಾರಂಭಿಸಿದರು. ಎಡಗೈ ಬ್ಯಾಟ್ಸ್‌ಮನ್ ಆಗಿದ್ದ ಆರ್ಯನ್, ಲೀಸೆಸ್ಟರ್‌ಶೈರ್‌ನಲ್ಲಿರುವ ಹಿಂಕ್ಲೆ ಕ್ರಿಕೆಟ್ ಕ್ಲಬ್ ಪರ ಆಡಿದ್ದರು. ಅದರ ನಂತರ, ಅವರು ಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾದರು. ಇದರೊಂದಿಗೆ, ಆರ್ಯನ್ ಆಗಿದ್ದ ಸಂಜಯ್ ಬಂಗಾರ್ ಅವರ ಮಗ ಈಗ ಅನಯಾ ಆಗಿ ಬದಲಾಗಿದ್ದಾರೆ.
ಎರಡು ವರ್ಷಗಳ ಹಿಂದೆ ಹಾರ್ಮೋನ್ ಬದಲಿಸುವ ಚಿಕಿತ್ಸೆಗೆ ಒಳಗಾಗುವ ಮೂಲಕ ಸಂಪೂರ್ಣವಾಗಿ ಹುಡುಗಿಯಾಗಿ ಬದಲಾಗಿದ್ದರು. ಶಸ್ತ್ರಚಿಕಿತ್ಸೆಯ ನಂತರ, ಆರ್ಯನ್ ತನ್ನ ಹೆಸರನ್ನು ಅನಯಾ ಎಂದು ಬದಲಾಯಿಸಿಕೊಂಡಿದ್ದಾರೆ. ಈ ಚಿಕಿತ್ಸೆ ನಂತರ ಅನಯಾ ಮೊದಲ ಬಾರಿಗೆ ಭಾರತಕ್ಕೆ ಮರಳುತ್ತಿದ್ದಾರೆ.
ತನ್ನ ನಿರ್ಧಾರದಿಂದ ತಾನು ಕೂಡ ತುಂಬಾ ತೃಪ್ತಳಾಗಿದ್ದೇನೆ ಎಂದು ಅನಯಾ ಹೇಳಿದ್ದಾರೆ. ಈಗ ಹುಡುಗಿಯಾಗಿ ರೂಪಾಂತರಗೊಂಡಿರುವ ಅವರು ಮುಂದಿನ ದಿನಗಳಲ್ಲಿ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಮುಂದುವರಿಸುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ.
ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಸಂಜಯ್ ಬಂಗಾರ್ ಭಾರತ ತಂಡದ ಬ್ಯಾಟಿಂಗ್ ಕೋಚ್ ಆದರು. ಇದರ ಜೊತೆಗೆ, ಅವರು ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳಿಗೆ ತರಬೇತುದಾರರಾಗಿ ಕೆಲಸ ಮಾಡಿದರು. ಅವರು ಭಾರತ ಪರ 12 ಟೆಸ್ಟ್ ಮತ್ತು 15 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಬಂಗಾರ್ ಟೆಸ್ಟ್‌ನಲ್ಲಿ 470 ರನ್ ಗಳಿಸಿದ್ದಾರೆ. ಅವರು ಏಕದಿನ ಪಂದ್ಯಗಳಲ್ಲಿ 180 ರನ್ ಗಳಿಸಿದ್ದಾರೆ.
ಅಪ್ಪನಿಗೆ ಕ್ರಿಕೆಟ್ ಲೋಕದಲ್ಲಿ ದೊಡ್ಡ ಮಟ್ಟದ ಯಶಸ್ಸು ಸಿಗಲಿಲ್ಲ. ಆದರೆ ಕೋಚ್ ಆಗಿ ಯಶಸ್ಸು ಕಂಡರು. ಇನ್ನು ಅವರ ಕುಟುಂಬದಲ್ಲಿ ಇದು ಬಿರುಗಾಳಿಯನ್ನೇ ಎಬ್ಬಿಸಿದ್ದು, ಸಂಜಯ್ ಬಂಗಾರ್ ದೊಡ್ಡ ಸಂಕಟ ಎದುರಿಸುತ್ತಿದ್ದಾರೆ. ಅಂದಹಾಗೆ ಸಂಜಯ್ ಬಂಗಾರ್ ಪುತ್ರ ಅರ್ಥಾತ್ ಪುತ್ರಿಯ ಪ್ರಕರಣ, ರಾಜ್ಯದ ಗೃಹ ಸಚಿವ ಪರಮೇಶ್ವರ್ ಪುತ್ರ/ಪುತ್ರಿಯಾದ ಕಥೆಯನ್ನು ನೆನಪಿಸುತ್ತಿದೆ. ಪರಮೇಶ್ವರ್ ಅವರ ಮಗ ಕೂಡಾ ಲಿಂಗ ಪರಿವರ್ತನೆ ಮಾಡಿಸಿಕೊಂಡು ಹೆಣ್ಣಾಗಿ ಬದಲಾಗಿದ್ದಾರೆ.