ಚುನಾವಣಾ ಅಫಿಡವಿಟ್ನ ಅಂಕಿ ಅಂಶದ ಆಧಾರದ ಮೇಲೆ ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಹಾಗೂ ನ್ಯಾಷನಲ್ ಎಲೆಕ್ಷನ್ ವಾಚ್ ಸಂಸ್ಥೆಗಳು ಒಂದು ವರದಿ ಸಿದ್ಧ ಮಾಡಿವೆ. ಆ ವರದಿಯ ಪ್ರಕಾರ ರಾಜ್ಯ ವಿಧಾನಸಭೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿ ಮುಖ್ಯಮಂತ್ರಿಯ ಸರಾಸರಿ ಆಸ್ತಿ 52.59 ಕೋಟಿ ರೂ. ಇದೆ. ದೇಶದ 31 ಮುಖ್ಯಮಂತ್ರಿಗಳ ಒಟ್ಟು ಆಸ್ತಿ ₹1,630 ಕೋಟಿ ರೂ. ಮಾತ್ರ. ಅಂದ್ರೆ ಒಟ್ಟು 31 ಸಿಎಂಗಳ ಒಟ್ಟಾರೆ ಆಸ್ತಿಯ ಲೆಕ್ಕ ಇದು. ಈ 31 ಸಿಎಂಗಳಲ್ಲಿ ನಮ್ಮ ಸಿಎಂ ಸಿದ್ದರಾಮಯ್ಯ ಅವರದ್ದು ೩ನೇ ಶ್ರೀಮಂತ ಮುಖ್ಯಮಂತ್ರಿ ಸ್ಥಾನ. ಸಿದ್ದರಾಮಯ್ಯ ಅವರ ಬಳಿ 51 ಕೋಟಿ ರೂ. ಆಸ್ತಿ ಇದೆ.
ಎರಡು ಬಾರಿ ಸಿಎಂ ಆಗಿರುವ ಸಿದ್ದರಾಮಯ್ಯ, ತಮ್ಮ ರಾಜಕೀಯದಲ್ಲಿ ಬಹುತೇಕ ಅವಧಿಯನ್ನು ಅಧಿಕಾರದಲ್ಲಿದ್ದೇ ಕಳೆದಿದ್ದಾರೆ. ಜನತಾ ದಳದಲ್ಲಿದ್ದಾಗ ಸಚಿವರಾಗಿ, ಡಿಸಿಎಂ ಆಗಿ, ಹಣಕಾಸು ಸಚಿವರಾಗಿದ್ದ ಸಿದ್ದರಾಮಯ್ಯ, ನಂತರ ಕಾಂಗ್ರೆಸ್ಸಿಗೆ ಬಂದು ಪ್ರತಿಪಕ್ಷ ನಾಯಕರಾಗಿ, ಎರಡು ಬಾರಿ ಸಿಎಂ ಆದವರು. ಜೊತೆಗೆ ಸಿಎಂ ಆಗಿ ಉತ್ತಮ ಆಡಳಿತದ ಮೂಲಕ ಜನಮನ ಗೆದ್ದಿರುವ ಸಿದ್ದರಾಮಯ್ಯ, ಸಮಾಜವಾದಿ ನಾಯಕ. ಅಹಿಂದ ನಾಯಕ. ಇದೀಗ ದೇಶದ ಶ್ರೀಮಂತ ಸಿಎಂಗಳ ಪಟ್ಟಿಯಲ್ಲಿಯೂ ಸ್ಥಾನ ಪಡೆದಿದ್ದಾರೆ.
ದೇಶದ ಶ್ರೀಮಂತ ಸಿಎಂಗಳ ಪಟ್ಟಿಯಲ್ಲಿ ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಮೊದಲ ಸ್ಥಾನದಲ್ಲಿದ್ದು, ಇವರ ಆಸ್ತಿ ಮೌಲ್ಯ 931 ಕೋಟಿ.. ಇವರ ಬಳಿಕ ಅರುಣಾಚಲ ಪ್ರದೇಶದ ಸಿಎಂ ಪೇಮಾ ಖಂಡು ಇದ್ದು, 332 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಇನ್ನು 3ನೇ ಸ್ಥಾನದಲ್ಲಿ ನಮ್ಮ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಇದ್ದು, ಇವರ ಆಸ್ತಿ ಮೌಲ್ಯ 51 ಕೋಟಿ ರೂಪಾಯಿ.
2018ರಲ್ಲಿ 6ನೇ ಸ್ಥಾನದಲ್ಲಿದ್ದ ಸಿದ್ದರಾಮಯ್ಯ : ಹೌದು, 2018ರಲ್ಲೂ ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ದೇಶದ ಶ್ರೀಮಂತ ಸಿಎಂಗಳ ಪಟ್ಟಿ ರಿಲೀಸ್ ಮಾಡಿತ್ತು. ಆಗ ಸಿದ್ದರಾಮಯ್ಯ ಅವರು 6ನೇ ಸ್ಥಾನದಲ್ಲಿ ಇದ್ದರು. ಆಗ ಅವರ ಆಸ್ತಿ 13.61 ಕೋಟಿ ರೂಪಾಯಿ ಆಗಿತ್ತು. ಒಟ್ಟಾರೆಯಾಗಿ 20 ಕೋಟಿಯಷ್ಟು ಆಸ್ತಿ ತೋರಿಸಲಾಗಿತ್ತು. 2018ರಲ್ಲಿ ಕಾಂಗ್ರೆಸ್ ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಸೋತು ಹೋಗಿತ್ತು. ಸಿದ್ದರಾಮಯ್ಯ ಮೊದಲಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದರು (ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯಲ್ಲಿ). ನಂತರ ಪ್ರತಿಪಕ್ಷ ನಾಯಕರಾದರು. ಅದಾದ ನಂತರ 2023ರಲ್ಲಿ ಮತ್ತೆ ಪಕ್ಷವನ್ನು ಗೆಲ್ಲಿಸಿ ಮತ್ತೆ ಸಿಎಂ ಆದರು. ಈ ನಡುವಿನ 5ವರ್ಷಗಳಲ್ಲಿ ಸಿದ್ದರಾಮಯ್ಯ ಅವರ ಆಸ್ತಿ ಸಮಾರು 30 ಕೋಟಿಗಳಷ್ಟು ಹೆಚ್ಚಾಗಿದೆ.
2023ರ ಚುನಾವಣಾ ಅಫಿಡವಿಟ್‌ನಲ್ಲಿ ನಿಯಮದ ಪ್ರಕಾರ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯನವರ ಆಸ್ತಿಯನ್ನೂ ಘೋಷಿಸಿದ್ದಾರೆ. ಪತ್ನಿ ಪಾರ್ವತಿ ಬಳಿ 11.26 ಕೋಟಿ ರೂಪಾಯಿ ಸ್ಥಿರಾಸ್ತಿ, ಅವಿಭಕ್ತ ಕುಟುಂಬದ ಸ್ಥಿರಾಸ್ತಿ 47.3 ಲಕ್ಷ ರೂಪಾಯಿ ಇತ್ತು. ಸಿದ್ದರಾಮಯ್ಯನವರ ಬಳಿ 9.43 ಕೋಟಿ ರೂಪಾಯಿ ಚರಾಸ್ಥಿ, ಪತ್ನಿ ಪಾರ್ವತಿ ಬಳಿ 20.85 ಕೋಟಿ ರೂಪಾಯಿ ಚರಾಸ್ಥಿ ಹಾಗೂ ತಮ್ಮ ಅವಿಭಕ್ತ ಕುಟುಂಬದ ಚರಾಸ್ಥಿ ಆಸ್ತಿ 32 ಲಕ್ಷ ರೂಪಾಯಿ ಇದೆ ಅಂತ ಘೋಷಿಸಿಕೊಂಡಿದ್ದರು.
ಸಾಲದಲ್ಲಿ ಸಿದ್ದರಾಮಯ್ಯ ನಂ.2
ಪೆಮಾ ಖಂಡು ಅವರು 180 ಕೋಟಿ ರು.. ಸಾಲ ಹೊಂದಿದ್ದಾರೆ. ಸಿದ್ದರಾಮಯ್ಯ 23 ಕೋಟಿ ರು. ಹಾಗೂ ನಾಯ್ಡು 10 ಕೋಟಿ ರು. ಸಾಲ ಹೊಂದಿದ್ದಾರೆ ಎಂದು ಎಡಿಆರ್ ವರದಿ ತಿಳಿಸಿದೆ.
ಇನ್ನು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಕೇವಲ 15 ಲಕ್ಷರು. ಆಸ್ತಿಯೊಂದಿಗೆ ‘ಅತ್ಯಂತ ಬಡವ ಸಿಎಂ’ ಎಂಬ ಖ್ಯಾತಿ ಪಡೆದಿದ್ದರೆ, 55 ಲಕ್ಷ ರು. ಆಸ್ತಿ ಹೊಂದಿರುವ ಜಮ್ಮು- ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ 2ನೇ ಸ್ಥಾನದಲ್ಲಿದ್ದಾರೆ. ಒಂದು ಕೋಟಿ ರೂ. ಆಸ್ತಿಯೊಂದಿಗೆ ಕೇರಳದ ಪಿಣರಾಯಿ ವಿಜಯನ್ 3ನೇ ಸ್ಥಾನದಲ್ಲಿದ್ದಾರೆ.
ಇನ್ನು ದೇಶದ 31 ಮುಖ್ಯಮಂತ್ರಿಗಳ ಪೈಕಿ ಇಬ್ಬರು (ಪ.ಬಂಗಾಳದ ಮಮತಾ ಬ್ಯಾನರ್ಜಿ ಮತ್ತು ದೆಹಲಿಯ ಅತಿಶಿ) ಮಾತ್ರ ಇಬ್ಬರು ಮಹಿಳೆಯರಾಗಿದ್ದಾರೆ.



