ಪ್ರಧಾನಿ ಮೋದಿ ಆಪರೇಷನ್ ಸಿಂದೂರದ ಗೆಲುವಿನ ಬಗ್ಗೆ ಮಾತನಾಡುತ್ತಾ ʻಭಾರತದ ಸ್ವದೇಶಿ ತಂತ್ರಜ್ಞಾನ, ಮೇಡ್ ಇನ್ ಇಂಡಿಯಾʼʼ ಬಗ್ಗೆ ಮಾತನಾಡಿದರಲ್ಲ.. ಅದರ ಇಂಪ್ಯಾಕ್ಟ್ ಏನು ಗೊತ್ತೇ..? ಬಿಸಿನೆಸ್. ವ್ಯಾಪಾರದಲ್ಲೂ ಭಾರತಕ್ಕೆ ಲಾಭವಾಗುತ್ತಿದೆ. ಅರೆ.. ಯುದ್ಧ ಮಾಡಿ ಬಿಸಿನೆಸ್ ಮಾಡೋದಾ.. ಎಂದು ಮೂಗು ಮುರಿಯುವ ಅಗತ್ಯವೇನೂ ಇಲ್ಲ. ವ್ಯಾಪಾರದಲ್ಲಿ ಲಾಭವಾಗುವ ಸೂಚನೆಗಳಂತೂ ಇವೆ.
ಆಗಿದ್ದೇನೆಂದರೆ..
ಪಹಲ್ಗಾಂ ಉಗ್ರ ದಾಳಿಗೆ ಪ್ರತೀಕಾರವಾಗಿ ನಡೆಸಿದ ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಗರ್ವಭಂಗ ಮಾಡಲು ದೇಶೀಯವಾಗಿ ಅಭಿವೃದ್ಧಿಪಡಿಸಿದ ಅನೇಕ ಶಸ್ತ್ರಾಸ್ತ್ರಗಳು ಭಾರತೀಯ ಸೇನೆಗೆ ನೆರವಾದವು. ಪಾಕಿಸ್ತಾನದ ಮಿಲಿಟರಿ ನೆಲೆ, ಉಗ್ರರ ನೆಲೆಗಳನ್ನು ನಾಶ ಮಾಡುವ ಜತೆಗೆ ಗಡಿಯಾಚೆಯಿಂದ ತೂರಿಬಂದ ಎಲ್ಲ ಕ್ಷಿಪಣಿಗಳು, ಡ್ರೋನ್‌ಗಳನ್ನು ಹೊಡೆದುರುಳಿಸಿದವು. ಬ್ರಹ್ಮೋಸ್ ಕ್ಷಿಪಣಿಗಳು, ಆಕಾಶ್ ವಾಯುರಕ್ಷಣಾ ವ್ಯವಸ್ಥೆ, ನಾವಿಕ್ ನೇವಿಗೇಷನ್, ಡಿ4 ಆ್ಯಂಟಿ ಡ್ರೋನ್ ಸಿಸ್ಟಂ, ಎಲ್-70 ಆ್ಯಂಟಿ ಏರ್‌ಕ್ರಾಫ್ಟ್ ಗನ್, ಪಿಎಸ್‌ಡಬ್ಲ್ಯುಎಸ್-ಪ್ರಿಸಿಷನ್ ಸ್ಟ್ರೈಕ್ ವೆಪನ್ ಸಿಸ್ಟಂ, ಎಸ್‌ಎಎಡಬ್ಲ್ಯು ಮಿಸೈಲ್ ಹಾಗೂ ಬರಾಕ್ 8 ಎಂಆರ್‌ಎಸ್‌ಎಎಂ ಸಿಸ್ಟಂಗಳ ಶಕ್ತಿ ಜಗತ್ತಿಗೇ ಗೊತ್ತಾಯ್ತು.
ಭಾರತವನ್ನು ಕಟ್ಟಿಹಾಕಲು ಪಾಕಿಸ್ತಾನಕ್ಕೆ ತನ್ನ ಅತ್ಯಾಧುನಿಕ ಕ್ಷಿಪಣಿ, ವಿಮಾನಗಳನ್ನು ನೀಡಿದ್ದ ಕಮ್ಯುನಿಸ್ಟ್ ದೇಶ ಚೀನಾ, ನಗೆಪಾಟಲಿಗೀಡಾಯ್ತು. ಏಕೆಂದರೆ ಪಾಕಿಸ್ತಾನವು ಬಳಸಿದ ಚೀನಾನಿರ್ಮಿತ ಕ್ಷಿಪಣಿ ಹಾಗೂ ಕೆಲವು ಶಸ್ತ್ರಾಸ್ತ್ರಗಳನ್ನೆಲ್ಲ ಭಾರತ ನಿಖರವಾಗಿ ಹೊಡೆದು ಹಾಕಿತು. ಹೀಗಾಗಿ ವಿಶ್ವದಲ್ಲಿ ಚೀನಾ ನಿರ್ಮಿತ ಶಸ್ತ್ರಾಸ್ತ್ರಗಳಿಗೆ ಬೇಡಿಕೆ ಕುಸಿತದ ಭೀತಿ ಉಂಟಾಗಿದೆ.
ಪಾಕಿಸ್ತಾನಕ್ಕೆ ಪ್ರಶ್ನೆ ಮಾಡಿದ್ದೂ ಇದೇ ಕಾರಣಕ್ಕೆ..
ತನ್ನ ಕ್ಷಿಪಣಿ, ವಿಮಾನ ಧ್ವಂಸ ಆಗಿದ್ದು ಮಾತ್ರವೇ ವಿಷಯವಾಗಿದ್ದರೆ ಚೀನಾ ಅಷ್ಟು ತಲೆಕೆಡಿಸಿಕೊಳ್ಳುತ್ತಿರಲಿಲ್ಲ, ಆದರೆ ಇದರಿಂದ ತನ್ನ ರಕ್ಷಣಾ ವ್ಯಾಪಾರಕ್ಕೆ ಭಾರೀ ಹೊಡೆತ ಬೀಳಬಹುದು ಎಂಬ ಆತಂಕ ಅದನ್ನು ಕಾಡುತ್ತಿದೆ. ಹೀಗಾಗಿಯೇ ಭಾರತದ ಮೇಲಿನ ದಾಳಿಗೆ ತನ್ನ ಶಸ್ತ್ರಾಸ್ತ್ರ ಬಳಸಬೇಡಿ ಎಂದು ಸೂಚಿಸಿದ್ದರೂ ಅದನ್ನು ಬಳಸಿದ್ದು ಏಕೆ ಎಂದು ಕಾರಣ ಕೇಳಿ ಪಾಕಿಸ್ತಾನದ ರಾಯಭಾರ ಸಿಬ್ಬಂದಿಗಳಿಗೆ ಚೀನಾ ಸಮನ್ಸ್ ಜಾರಿ ಮಾಡಿದೆ. ಭಾರತದ ಮೇಲಿನ ದಾಳಿಗೆ ಪಾಕ್ ಬಳಸಿದ್ದ ಚೀನಾ ನಿರ್ಮಿತ ಪಿಎಸ್15 ಕ್ಷಿಪಣಿ, ಜೆ17 ಯುದ್ಧ ವಿಮಾನಗಳನ್ನು ಭಾರತ ಹೊಡೆದುರುಳಿಸಿದೆ. ಇದರಿಂದ ಪಾಕ್‌ಗೆ ನಷ್ಟವಾಗಿದೆಯಾದರೂ, ಅಲ್ಲಿ ಮುಖಭಂಗವಾಗಿರುವುದು ಮಾತ್ರ ಚೀನಾಗೆ. ಭಾರತದಿಂದ ಪೆಟ್ಟು ತಿಂದು, ಜಾಗತಿಕ ಮಟ್ಟದಲ್ಲಿ ಚೀನಾದ ಶಸ್ತ್ರಾಸ್ತ್ರಗಳ ಘನತೆಗೆ ಧಕ್ಕೆಯುಂಟಾಗಿದೆ.
ವ್ಯಾಪಾರ ಲಾಭ : ಶಸ್ತ್ರಾಸ್ತ್ರ ಪೂರೈಕೆಯಲ್ಲಿ ಮುಂಚೂಣಿ ದೇಶಗಳ ಪೈಕಿ ಗುರುತಿಸಿಕೊಳ್ಳುವ ಚೀನಾಗೆ, ತನ್ನೊಂದಿಗೆ ಈಗಾಗಲೇ ಖರೀದಿ ಒಪ್ಪಂದ ಮಾಡಿಕೊಂಡಿರುವ ಆಫ್ರಿಕಾ ದೇಶಗಳು ಒಪ್ಪಂದ ಮುಂದುವರಿಸಬೇಕೇ.. ಬೇಡವೇ ಎಂಬ ಬಗ್ಗೆ ಯೋಚನೆ ಮಾಡುತ್ತಿವೆ. ಚೀನಾದಿಂದ ಬಾಂಗ್ಲಾದೇಶ, ಮ್ಯಾನ್ಮಾರ್, ಅಲ್ಜೀರಿಯಾ ಮತ್ತು ಆಫ್ರಿಕಾದ ಹಲವು ದೇಶಗಳು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುತ್ತವೆ. ಇನ್ನೊಂದು ಕಡೆ, ಭಾರತದ ಸ್ವದೇಶಿ ಅಸ್ತ್ರಗಳಿಂದ ಪ್ರಭಾವಿತವಾಗಿರುವ ಕೆಲ ದೇಶಗಳು ಅವುಗಳನ್ನು ಕೊಳ್ಳುವ ಇಂಗಿತ ವ್ಯಕ್ತಪಡಿಸುತ್ತಿವೆ.



