ಬಿಜೆಪಿಯಲ್ಲಿ ಆಗುತ್ತಿರುವ ಬಣಬಡಿದಾಟಕ್ಕೆ ಬಿಜೆಪಿ ಶಾಸಕ ಪ್ರಭು ಚೌಹಾಣ್ ಕಿಡಿಕಾರಿದ್ದಾರೆ. ಬೆಂಬಲಕ್ಕೆ ಮತ್ತೊಬ್ಬ ಶಾಸಕ ಬಂದಿದ್ದು, ಯತ್ನಾಳ್, ಸುಧಾಕರ್ ಬಣಕ್ಕೆ ಚಾಲೆಂಜ್ ಹಾಕಿದ್ದಾರೆ. ಹೀಗಾಗಿಯೇ ಯತ್ನಾಳ್ ಬಣ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದು, ದೆಹಲಿಯಲ್ಲಿಯೇ ತಮ್ಮ ಬಣದ ಅಧ್ಯಕ್ಷ ಯಾರು ಎಂದು ಘೋಷಿಸಲು ಮುಂದಾಗಿದೆ. ಇದೆಲ್ಲದರ ಮದ್ಯೆ ಅರವಿಂದ ಲಿಂಬಾವಳಿ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ತಮ್ಮ ʻಹುಟ್ಟುಹಬ್ಬʼದ ನೆಪದಲ್ಲಿ ರಾಜಕೀಯ ನಾಯಕರ ಭೇಟಿಗೆ ಮುಂದಾಗಿದ್ಧಾರೆ.
ʻವಿಜಯೇಂದ್ರ ರಾಜ್ಯಾಧ್ಯಕ್ಷರಾದ ಮೇಲೆ ಬಿಜೆಪಿಗೆ ಚೈತನ್ಯ ಬಂದಿದೆ. ಪಕ್ಷ ದೊಡ್ಡದಾಗಿದೆ, ಮನೆಯಲ್ಲಿ ಜಗಳ ಆದಂತೆ ಜಗಳ ಆಗ್ತಿದೆ ಒಪ್ಪುತ್ತೇನೆ. ಆರೋಪದಲ್ಲಿ ಯಾವುದೇ ಸತ್ಯ ಇಲ್ಲ, ಇದು ಅವರಿಗೆ ಗೊತ್ತಿಲ್ಲ. ವಿಜಯೇಂದ್ರ ಅಧ್ಯಕ್ಷರಾದ್ಮೇಲೆ ಪಕ್ಷ ಗಟ್ಟಿಯಾಗಿದೆ, ಎಲ್ಲರೂ ನಮ್ಮ ನಾಯಕರೇ ಈ ರೀತಿ ಮಾಡಬಾರದು ಎಂದು ವಿಜಯೇಂದ್ರ ಪರ ಬ್ಯಾಟ್ ಬೀಸಿದ್ದಾರೆ.
ಬೀದರ್‌ನಲ್ಲಿ ಮಾತನಾಡಿರುವ ಅವರು ʻʻನಮಗೆ ಸಿಟ್ಟು ಬರ್ತಿದೆ, ತಾಯಿಯಂತೆ ಪಕ್ಷವನ್ನು ಕಾಣುತ್ತೇವೆ. ವಿಜಯೇಂದ್ರ ರಾಜ್ಯಾಧ್ಯಕ್ಷರಾದ್ಮೇಲೆ ರಾಜ್ಯದಲ್ಲಿ ಪಕ್ಷಕ್ಕೆ ಚೈತನ್ಯ ಬಂದಿದೆ. ಸರ್ಕಾರಕ್ಕೆ ಭಯ ಉಂಟಾಗಿದೆ, ವಿಜಯೇಂದ್ರ ಯುವಕರಿಗೆ ಪ್ರೋತ್ಸಾಹ ಕೊಡ್ತಿದ್ದಾರೆ. ಇದನ್ನ ನಮ್ಮ ನಾಯಕರು ಸರಿಪಡಿಸುತ್ತಿಲ್ಲ, ನಮಗೆ ನೋವಿದೆ. ನಾನು ಯಾರ ಹೆಸರು ಹೇಳಲ್ಲ, ನಮ್ಮ ನಾಯಕರು ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಯಾರ ಹೆಸರನ್ನೂ ಹೇಳದೆ ಪಕ್ಷದ ಹಿರಿಯ ನಾಯಕರೇ ಗೊಂದಲ ಮುಂದುವರೆಸ್ತಿದ್ದಾರೆ ಎಂದು ಹೇಳಿದ್ದಾರೆ ಪ್ರಭು ಚವ್ಹಾಣ್. ವಿಜಯೇಂದ್ರ ಒಳ್ಳೆಯ ವ್ಯಕ್ತಿ, ಉತ್ತಮ ಕೆಲಸ ಮಾಡುತ್ತಿದ್ದಾರೆ. ನಾನು 19 ವರ್ಷದವನಿದ್ದಾಗಲೇ ಪಕ್ಷವನ್ನ ಸೇರಿದ್ದೇನೆ. ಯಡಿಯೂರಪ್ಪ, ಅನಂತಕುಮಾರ್, ಪ್ರಲ್ಹಾದ್ ಜೋಶಿಯವರು ಪಕ್ಷ ಕಟ್ಟಿದ್ದಾರೆ. ಸುಧಾಕರ್ ಬಂದು ನಾಲ್ಕು ವರ್ಷವಾಯ್ತು. ಇಂತಹ ಆರೋಪಗಳನ್ನ ಮಾಡಬಾರದು, ಅದರಲ್ಲಿ ಹುರುಳಿಲ್ಲ. ವಿಜಯೇಂದ್ರ ಅವರಿಂದಲೇ ಸುಧಾಕರ್ ಎಂಪಿ ಆಗಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತ್ರು. ವಿಜಯೇಂದ್ರ, ಯಡಿಯೂರಪ್ಪ ನೇತೃತ್ವದಲ್ಲಿ ಪಕ್ಷ ಟಿಕೆಟ್ ಕೊಟ್ಟಿದೆ ಎಂಪಿ ಆಗಿದ್ದಾರೆ ಎಂದು ಹೇಳಿದ್ದಾರೆ.
ಬಿಕ್ಕಟ್ಟು ಸರಿಪಡಿಸದ ಪಕ್ಷದ ಹಿರಿಯ ನಾಯಕರ ವಿರುದ್ಧ ಪ್ರಭು ಚವ್ಹಾಣ್ ಅಸಮಾಧಾನ ವ್ಯಕ್ತಪಡಿಸಿರುವ ಪ್ರಭು ಚವ್ಹಾಣ್, ಅತ್ತ ಯತ್ನಾಳ್ ಬಣಕ್ಕೆ ಬೆಂಬಲ ನೀಡುತ್ತಿರುವ ಚಿಕ್ಕಬಳ್ಳಾಪುರ ಸಂಸದ ಸುಧಾಕರ್ ಅವರಿಗೆ ಕೌಂಟರ್ ಕೊಟ್ಟಿದ್ದಾರೆ.
ಯತ್ನಾಳ್ ಬಣದವರ ಬಹಿರಂಗ ಹೇಳಿಕೆಗೆ ವಿಜಯೇಂದ್ರ ಬಣದವರಿಂದಲೂ ಕೌಂಟರ್ ಕೊಡಲಾಗುತ್ತಿದ್ದು, ಈಗ ತಟಸ್ಥ ಬಣದಲ್ಲಿರುವ, ಪಕ್ಷ ನಿಷ್ಠ ಶಾಸಕರಿಂದಲೂ ವಿಜಯೇಂದ್ರಗೆ ಜೈಕಾರ ಹಾಕುತ್ತಿರುವುದು ಯತ್ನಾಳ್ ಬಣ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದೆ.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮ ಅಭ್ಯರ್ಥಿ ಕಣಕ್ಕಿಳಿಸುವ ಸಂಬಂಧ ಶೀಘ್ರ ದೆಹಲಿಗೆ ತೆರಳಿ ಸಂಸದರು, ಕೇಂದ್ರ ಸಚಿವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬಣದ ನಾಯಕರು ತೀರ್ಮಾನಿಸಿದ್ದಾರೆ. ಯತ್ನಾಳ್ ಬಣದ ನಾಯಕರು ದೆಹಲಿಗೆ ತೆರಳಿ, ಅಲ್ಲಿಯೇ ಅಭ್ಯರ್ಥಿ ಹೆಸರು ಘೋಷಿಸುವ ಯೋಜನೆಯಲ್ಲಿದ್ದಾರೆ. ಶುಕ್ರವಾರ ನಗರದಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಸಭೆ ನಡೆಸಿರುವ ಯತ್ನಾಳ್ ಬಣದವರ ಸಭೆಯಲ್ಲಿ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಜಿ.ಎಂ.ಸಿದ್ದೇಶ್ವರ್, ಬಿ.ಪಿ.ಹರೀಶ್, ಚಂದ್ರಪ್ಪ, ಬಿ.ವಿ.ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಪಕ್ಷದ ಅನೇಕರ ಬೆಂಬಲ ನಮಗಿದೆ. ನಮ್ಮ ಶಕ್ತಿ ಹೆಚ್ಚಿದೆ. ಎಲ್ಲವನ್ನೂ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ ಎಂದಿರುವ ಯತ್ನಾಳ್ ಯಡಿಯೂರಪ್ಪ ಬಿಟ್ಟರೆ ಬಿಜೆಪಿಯಿಲ್ಲ ಎಂಬ ವಾತಾವರಣ ಸೃಷ್ಟಿಸಲಾಗಿತ್ತು. ಈಗ ಆ ರೀತಿ ಇಲ್ಲ. ಯಡಿಯೂರಪ್ಪ ಕುಟುಂಬ ಬಿಟ್ಟರೂ ರಾಜ್ಯದಲ್ಲಿ ಬಿಜೆಪಿ ಕಟ್ಟಬಹುದು ಎಂಬ ಶಕ್ತಿ ಇದೆ. ಆ ಕಾಲ ಹೋಯಿತು. ಅದೆಲ್ಲ ಹಳೆಯ ಕಥೆ ಎಂದಿದ್ದಾರೆ.
ಇಷ್ಟೆಲ್ಲ ಬೆಳವಣಿಗೆ ಮಧ್ಯೆ ದೆಹಲಿಯಲ್ಲಿ ಅರವಿಂದ ಲಿಂಬಾವಳಿ ಆಕ್ಟಿವ್ ಆಗಿದ್ದಾರೆ. ದೆಹಲಿಯಲ್ಲಿರುವ ಪಕ್ಷದ ನಾಯಕರನ್ನು, ಸಂಸದರನ್ನು ತಮ್ಮ ಬಣದ ಪರ ಒಗ್ಗೂಡಿಸುವ ಯೋಚನೆಯಲ್ಲಿದ್ದಾರೆ. ತಮ್ಮ ಹುಟ್ಟುಹಬ್ಬದ ನೆಪದಲ್ಲಿ ಪಕ್ಷದ ನಾಯಕರನ್ನು ಸಂಪರ್ಕಿಸುವ ಪ್ರಯತ್ನ ಮಾಡ್ತಿದ್ಧಾರೆ.



