ಕರ್ನಾಟಕದ ವಿಧಾನಸಭೆ ಚುನಾವಣೆ ಫಲಿತಾಂಶ ಏನೇ ಇರಲಿ..ಏನೇ ಬರಲಿ.. ಲೋಕಸಭೆಗೆ ಮಾತ್ರ ಬೇರೆಯದೇ ರೀತಿ ವೋಟು ಮಾಡುವ ಕರ್ನಾಕಟದ ಮತದಾರರು, ಆ ಸುಳಿವನ್ನೇ ಮತ್ತೊಮ್ಮೆ ಕೊಟ್ಟಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿಗೇ ಮಣೆ ಹಾಕಲಿದ್ದಾರೆ. 135+1 ಸ್ಥಾನ ಗೆದ್ದಿದ್ದರೂ, ಮಿಷನ್ 20 ಎಂದು ಡಿಕೆ ಶಿವಕುಮಾರ್ ಮುನ್ನುಗ್ಗುತ್ತಿದ್ದರೂ.. ಬಿಜೆಪಿಯೇ ದೊಡ್ಡ ಪಕ್ಷವಾಗಲಿದೆ ಎನ್ನುತ್ತಿದೆ ಟೈಮ್ಸ್ ನೌ (Times Now) ಸಮೀಕ್ಷೆ. ಹಾಗಂತ ಡಿಕೆ ಶಿವಕುಮಾರ್ (DK Shivakumar) ಸಂಪೂರ್ಣ ಸೋತಿದ್ದಾರೆ ಎಂದೂ ಅರ್ಥವಲ್ಲ. ಬಿಜೆಪಿಯ (BJP) ಸ್ಥಾನ ಗಳಿಕೆ ಕಳೆದ ಬಾರಿಗಿಂತ ಕಡಿಮೆಯಾಗಲಿದೆ.
ದೇಶದ ಸಮೀಕ್ಷೆ
ಟೈಮ್ಸ್ ನೌ (Times Now) ಹಾಗೂ ಇಟಿಜಿ (ETG) ಜಂಟಿಯಾಗಿ ನಡೆಸಿದ ಸಮೀಕ್ಷೆ ಪ್ರಕಾರ ಈಗ ಲೋಕಸಭೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್ಡಿಎಗೆ (NDA) 296ರಿಂದ 326 ಸ್ಥಾನ ಬರಲಿವೆ . ಎನ್ಡಿಎ ಅಂಗಪಕ್ಷಗಳನ್ನು ಬದಿಗೆ ಸರಿಸಿದರೆ ಬಿಜೆಪಿಯೊಂದೇ 288ರಿಂದ 314 ಸ್ಥಾನ ಗಳಿಸಲಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಎನ್ಡಿಎಗೆ 353 ಸ್ಥಾನ ಬಂದಿದ್ದವು. ಈಗಿನ ಸಮೀಕ್ಷೆ ಅದಕ್ಕಿಂತ ಕಡಿಮೆ ಸೀಟು ನೀಡಿದ್ದರೂ, ನರೇಂದ್ರ ಮೋದಿ ಹ್ಯಾಟ್ರಿಕ್ ಬಾರಿಸುವುದು ಖಚಿತವಾಗಿದೆ. ಇನ್ನು ಎನ್ಡಿಎ ಶೇ.55, ಇಂಡಿಯಾ, ಶೇ.36 ಹಾಗೂ ಇತರರು ಶೇ.9ರಷ್ಟು ಮತ ಗಳಿಸಲಿದ್ದಾರೆ.
ಆಗಸ್ಟ್ 15ರಂದು ನಡೆದ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಮುಂದಿನ ಬಾರಿಯೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಮತ್ತೆ ನಾವೇ ಧ್ವಜಾರೋಹಣ ಮಾಡುತ್ತೇವೆ ಎಂದಿದ್ದರು ಮೋದಿ(Prime Minister Narendra Modi). ಅದರಂತೆಯೇ (Times Now) ಸಮೀಕ್ಷೆ ಹೇಳುತ್ತಿದೆ. ಮತ್ತೊಮ್ಮೆ ಮೋದಿಗೆ ವರವಾಗುವುದು ಉತ್ತರ ಭಾರತವೇ. ಉತ್ತರ ಭಾರತದಲ್ಲಿ ಮೋದಿಯ ಸ್ಟ್ರೈಕ್ ರೇಟ್ ಶೇ.80ರಷ್ಟಿದೆ. ಹಳೆಯ ಸೀಟುಗಳನ್ನು ಬಹುತೇಕ ಉಳಿಸಿಕೊಳ್ಳಲಿದ್ದಾರೆ. ವಿಶೇಷವೆಂದರೆ ದ.ಭಾರತದಲ್ಲಿ ಬಿಜೆಪಿ ನೆಲಕಚ್ಚಿದ್ದರೂ, ಈ ಬಾರಿ ಪಾಸಿಟಿವ್ ವೋಟ್ ಶೇರ್ ಪಡೆಯಲಿದೆಯಂತೆ. ಆಂಧ್ರ ಮತ್ತು ತೆಲಂಗಾಣ ಹೊರತುಪಡಿಸಿದರೆ ಉಳಿದ ಕಡೆ ಸಮಾಧಾನಕರ ಬಹುಮಾನ ಪಡೆಯಲಿದೆಯತೆ ಬಿಜೆಪಿ.
ಕರ್ನಾಟಕದಲ್ಲಿ ಏನಾಗುತ್ತೆ ಬಿಜೆಪಿ?
ಕರ್ನಾಟಕದಲ್ಲಿ (karnataka) ಕಳೆದ ಚುನಾವಣೆಯಲ್ಲಿ 25+1 ಸೀಟು ಗೆದ್ದಿತ್ತು ಬಿಜೆಪಿ. ಇದು ಬಿಜೆಪಿಯ ಸಾರ್ವಕಾಲಿಕ ಶ್ರೇಷ್ಟ ಸಾಧನೆ. ಹಾಗೆ ನೊಡಿದರೆ ಆಗಲೂ ರಾಜ್ಯದಲ್ಲಿ ಇದ್ದದ್ದು ಕಾಂಗ್ರೆಸ್+ಜೆಡಿಎಸ್ ಸರ್ಕಾರವೇ. ಹೀಗಿದ್ದರೂ 25 ಕ್ಷೇತ್ರಗಳನ್ನು ಗೆದ್ದು ಬೀಗಿದ್ದ ಬಿಜೆಪಿ, ಈ ಬಾರಿಯೂ ನಂ.1 ಪಕ್ಷವಾಗಿಯೇ ಇರಲಿದೆ. ಆದರೆ ಕಳೆದ ಬಾರಿಯಂತೆ 25 ಸೀಟು ಗೆಲ್ಲಲ್ಲ. ಆದರೆ 18-20 ಸೀಟು ಗೆಲ್ಲುವ ಚಾನ್ಸ್ ಇದೆ ಎಂದು (Times Now) ಸಮೀಕ್ಷೆ ಹೇಳಿದೆ.
ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟ 8ರಿಂದ 10 ಸ್ಥಾನ ಗಳಿಸಬಹುದು ಎಂದು ಟೈಮ್ಸ್ ನೌ (Times Now) ಸಮೀಕ್ಷೆ ಹೇಳಿದೆ. ಬಿಜೆಪಿಗೆ ಶೇ.44.6 ಹಾಗೂ ಇಂಡಿಯಾ (I.N.D.I.A.) ಕೂಟಕ್ಕೆ ಶೇ.43.3 ಮತಗಳು ಬರಬಹುದು ಎಂದು ಭವಿಷ್ಯ ನುಡಿಯಲಾಗಿದೆ.
ಕಾಂಗ್ರೆಸ್ 20+ (I.N.D.I.A.) ಮಿಷನ್ ಟಾರ್ಗೆಟ್ ಹಾಕಿಕೊಂಡಿದ್ದರೂ, ಲೋಕಸಭೆ ಚುನಾವಣೆ ಹೊತ್ತಿಗೆ ಚಿತ್ರಣ ಬದಲಾಗಲಿದೆ. ಆದರೆ ಕಾಂಗ್ರೆಸ್ ಸ್ಥಾನ ಗಳಿಕೆ ಕಳೆದ ಬಾರಿಯಂತೆ ಕೇವಲ 1 ಸ್ಥಾನವಂತೂ ಇರಲ್ಲ ಎನ್ನುತ್ತಿದೆ ಸಮೀಕ್ಷೆ. ಕಳೆದ ಬಾರಿ ಲೋಕಸಭೆಯಲ್ಲಿ ಗೆದ್ದಿದ್ದವರು ಡಿ.ಕೆ.ಸುರೇಶ್ ಮಾತ್ರ. ಈ ಬಾರಿ ಅವರೇನೋ ನಿಲ್ಲುವ ಉತ್ಸಾಹ ತೋರಿಸುತ್ತಿಲ್ಲ.
ಎಷ್ಟು ಗೆಲ್ಲುತ್ತೆ ಇಂಡಿಯಾ ಒಕ್ಕೂಟ?
ಈಗ ತಾನೇ ರಚನೆಯಾಗಿರುವ ವಿಪಕ್ಷಗಳ ಇಂಡಿಯಾ (I.N.D.I.A.) ಕೂಟಕ್ಕೆ 160ರಿಂದ 190 ಹಾಗೂ ಇತರರು 70-80 ಸ್ಥಾನ ಗಳಿಸಲಿದ್ದಾರೆ ಎಂದು ಅಂದಾಜಿಸಿದೆ. ಎನ್ಡಿಎ ಶೇ.55, ಇಂಡಿಯಾ, ಶೇ.36 ಹಾಗೂ ಇತರರು ಶೇ.9ರಷ್ಟು ಮತ ಗಳಿಸಲಿದ್ದಾರೆ. ಎನ್ಡಿಎ ಅಂಗಪಕ್ಷಗಳನ್ನು ಬದಿಗೆ ಸರಿಸಿದರೆ ಬಿಜೆಪಿಯೊಂದೇ 288ರಿಂದ 314 ಸ್ಥಾನ ಗಳಿಸಲಿದೆ.



