ರಿಷಬ್ ಶೆಟ್ಟಿ. ಈಗ ಕನ್ನಡಿಗರ ಪಾಲಿಗೆ ಡಿವೈನ್ ಸ್ಟಾರ್. ಕಾಂತಾರ ಅನ್ನೋ ಒಂದು ಸಿನಿಮಾದಿಂದ ರಿಷಬ್ ಇಡೀ ಭಾರತಕ್ಕೇ ಗೊತ್ತಾದರು. ಅದರ ಜೊತೆ ಅವರಿಗೆ ಇನ್ನೂ ಒಂದು ಪಟ್ಟವೂ ಸಿಕ್ಕಿತು. ಕನ್ನಡದ ಕೀರ್ತಿಪತಾಕೆಯನ್ನು ಭಾರತದಲ್ಲಿ ಹಾರಿಸಿದರು, ಕನ್ನಡವನ್ನು ಕರ್ನಾಟಕದ ಗಡಿ ದಾಟಿಸಿದರು, ಚಿತ್ರರಂಗವನ್ನು ಎಲ್ಲಿಗೋ ತೆಗೆದುಕೊಂಡು ಹೋದರು ಎಂಬ ಕೀರ್ತಿ. ಅಷ್ಟೆಲ್ಲ ಹೊಗಳಿಕೆ ಅಗತ್ಯವಿದೆಯೋ.. ಇಲ್ಲವೋ.. ಹೊಗಳಿಕೆಯ ಹೊನ್ನ ಶೂಲಕ್ಕೆ ಏರಿಸಿದ್ದಂತೂ ಆಯ್ತು. ಆದರೆ ರಿಷಬ್ ಶೆಟ್ಟಿ ನಟನೆ, ನಿರ್ದೇಶನ ಅಷ್ಟೇ ಅಲ್ಲ, ತೂಕದ ಮಾತುಗಳಿಗೂ ಹೆಸರುವಾಸಿ. ಈ ಬಾರಿಯೂ ಅಷ್ಟೆ..
ರಿಷಬ್ ಶೆಟ್ಟಿಯವರ ಒಂದು ವಿಡಿಯೋ ಕನ್ನಡವನ್ನು ಭಾರತದಲ್ಲಿ ಕರ್ನಾಟಕದ ಗಡಿ ದಾಟಿಸಿದ ಬಗ್ಗೆ ಎದುರಾಗಿದೆ. ರಿಷಬ್ ಶೆಟ್ಟಿ ಅವರಿಂದ ಕನ್ನಡ ಸಿನಿಮಾಗಳು ಗಡಿ ದಾಟಿ ಯಶಸ್ಸು ಕಂಡಿವೆ ಎಂಬ ಅಭಿಪ್ರಾಯಕ್ಕೆ ರಿಷಬ್ ಶೆಟ್ಟಿ ಹೇಳಿರುವ ಮಾತು ʻನಾನು ಕನ್ನಡ ಚಿತ್ರರಂಗದ ಹಲವು ಸಾಧಕರ ಸಾಧನೆಗೆ ಹೋಲಿಸಿದರೆ ದೂಳಿಗೆ ಸಮಾನ. ಹಲವರು ಚಿತ್ರರಂಗವನ್ನು ಬೆಳೆಸಿದ್ದಾರೆ. ಡಾ.ರಾಜ್ ಕುಮಾರ್ ಅಂತಹವರಿಂದ ಕನ್ನಡ ಚಿತ್ರರಂಗ ಬೆಳೆದಿದೆʼ ಎಂದು ಹೇಳಿದ್ದಾರೆ.
ನಾನು ಇಂಡಸ್ಟ್ರಿನ ಎಲ್ಲಿಗೂ ತಗೊಂಡು ಹೋಗಿಲ್ಲ, ನಾನು ಉಗುರಿನಲ್ಲಿ ಸಿಗುವ ಧೂಳಿನ ಒಂದು ಕಣಕ್ಕೆ ಸಮಾನ. ಕನ್ನಡ ಇಂಡಸ್ಟ್ರಿಯನ್ನು ಬೆಳೆಸಲು ಅಣ್ಣಾವ್ರು ದಶಕಗಳಿಂದ ಶ್ರಮ ಪಟ್ಟಿದ್ದಾರೆ.
ಸಹಜವಾಗಿಯೇ ಎನಗಿಂತ ಕಿರಿಯರಿಲ್ಲ ಎಂಬ ಮನೋಭಾವ ಜನರಿಗೆ ಇಷ್ಟವಾಗುತ್ತದೆ. ಹೀಗಾಗಿ ರಿಷಬ್ ಶೆಟ್ಟಿ ವಿಡಿಯೋ ವೈರಲ್ ಆಗುತ್ತಿದೆ.
ಒಂದು ಮಾತು ನಿಜ. ಕನ್ನಡವನ್ನು ಇತ್ತೀಚೆಗೆ ಗಡಿ ದಾಟಿಸಿದವರಲ್ಲಿ ಪ್ರಮುಖರು ಹೊಂಬಾಳೆ ಫಿಲಮ್ಸ್. ಕಥೆ, ಸಿನಿಮಾ ಅದೆಷ್ಟೇ ಚೆನ್ನಾಗಿರಲಿ, ಒಂದು ಸಿನಿಮಾವನ್ನು ಪ್ರಮೋಟ್ ಮಾಡುವ ನಿರ್ಮಾಪಕರೂ ಅಷ್ಟೇ ಗಟ್ಟ ಇರಬೇಕು. ಸೂಕ್ತ ಪ್ರತಿಭೆ ಮತ್ತು ಪ್ರಯತ್ನಗಳಿಗೆ ಹಣಕಾಸಿನ ಸಪೋರ್ಟ್ ಸಿಕ್ಕದೇ ಹೋದರೆ ಏನು ಮಾಡಿದರೂ ವ್ಯರ್ಥ. ಹೀಗಾಗಿ ಇತ್ತೀಚೆಗೆ ಗಡಿ ದಾಟಿ ಗೆದ್ದ ಕನ್ನಡ ಚಿತ್ರಗಳಲ್ಲಿ ಹೊಂಬಾಳೆಯವರದ್ದೇ ಸಿಂಹಪಾಲು. ಕೆಜಿಎಫ್ ಇರಲಿ, ಕಾಂತಾರ ಇರಲಿ..ಇದೀಗ ಬರುತ್ತಿರುವ ಸಲಾರ್ ಇರಲಿ.. ಹೊಂಬಾಳೆಯ ವಿಜಯ್ ಕಿರಗಂದೂರು ಅವರ ಪಾತ್ರ ದೊಡ್ಡದು. ಪ್ರಶಾಂತ್ ನೀಲ್, ಯಶ್, ರಿಷಬ್ ಶೆಟ್ಟಿ ಅಂತಹ ಹಾದಿಯಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿದವರು.
ಹಾಗಂತ ಇವರಷ್ಟೇ ಸಿನಿಮಾ ಬೆಳೆಸಿದವರು ಎಂದರೆ ಅಪಚಾರವಾದೀತು. ಏಕೆಂದರೆ ಸುಬ್ಬಯ್ಯ ನಾಯ್ಡು (ಸೃಜನ್ ಲೋಕೇಶ್ ಅವರ ತಾತ, ಲೋಕೇಶ್ ಅವರ ತಂದೆ) ಅವರಿಂದ ಶುರುವಾದ ಚಿತ್ರರಂಗ ಇದು. ಡಾ.ರಾಜ್ ಅವರು ಚಿತ್ರರಂಗವನ್ನು ಕರ್ನಾಟಕಕ್ಕೆ ಕರೆ ತಂದು ಕಟ್ಟಿದವರು. ಕರ್ನಾಟಕ ಮತ್ತು ಕನ್ನಡಕ್ಕೆ ದೊಡ್ಡ ಶಕ್ತಿಯಾದವರು. ಅವರ ಜೊತೆಗೆ ಚಿತ್ರರಂಗವೂ ಬೆಳೆಯಿತು. ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಮಹಿಷಾಸುರ ಮರ್ದಿನಿ. ಅದಾದ ಮೇಲೆ ರವಿಚಂದ್ರನ್, ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಉಪೇಂದ್ರ ಅಂತಹ ಪ್ರಯತ್ನ ಮಾಡಿದರಾದರೂ, ದೊಡ್ಡ ಮಟ್ಟದ ಯಶಸ್ಸು ಕಾಣಲಿಲ್ಲ.
ಆದರೆ ಈಗ ಆ ಮಟ್ಟದ ಗೆಲುವು ಸಿಕ್ಕುತ್ತಿದೆ. ಯಶಸ್ವಿಯಾಗಿ ಬಳಸಿಕೊಂಡರೆ ಚಿತ್ರರಂಗವೂ ಬೆಳೆಯುತ್ತದೆ. ಕನ್ನಡವೂ ಬೆಳೆಯುತ್ತದೆ.



