ಯೋಗರಾಜ್ ಭಟ್ಟರು (Yogaraj Bhatta) ಇದೇ ಮೊದಲ ಬಾರಿಗೆ ದರ್ಶನ್ (Darshan) ಅವರಂತಹ ಮಾಸ್ ಹೀರೋಗೆ ಆಕ್ಷನ್ ಕಟ್ ಹೇಳಿದ್ಧಾರೆ. ಹಾಗಂತ ದರ್ಶನ್ ಈ ಚಿತ್ರದ ಹೀರೋ ಅಲ್ಲ. ಗೆಸ್ಟ್ ರೋಲ್ ಅಷ್ಟೇ. ಆದರೆ ಗರಡಿ ಸಿನಿಮಾ (Garadi movie) ಹುಟ್ಟಿದ್ದೇ ದರ್ಶನ್ ಅವರಿಂದ ಅನ್ನೋದನ್ನ ಭಟ್ಟರು, ಪಾಟೀಲರು ಮತ್ತು ಸೂರ್ಯ ಎಲ್ಲರೂ ಹೇಳಿಕೊಂಡಿದ್ಧಾರೆ. ಭಟ್ಟರಿಗೆ ಸ್ಟಾರ್ ಸಿನಿಮಾ ಹೊಸದಲ್ಲ.
ಸುದೀಪ್ ಅವರ ಸಿನಿಮಾ ಮಾಡಿದಾಗ ಸುದೀಪ್ (kiccha sudeep) ಅವರಿನ್ನೂ ಉದಯೋನ್ಮುಖ ನಟ. ಪುನೀತ್ (power star puneeth) ಸ್ಟಾರ್ ಆಗಿದ್ದರೂ, ಅವರಿಗೆ ಸಿನಿಮಾ ಮಾಡುವುದು ದೊಡ್ಡ ಚಾಲೆಂಜ್ ಆಗಿರಲಿಲ್ಲ. ಯಶ್ (Rocking star yash) ಅವರೂ ಅಷ್ಟೆ, ಡ್ರಾಮಾ ನಂತರವೇ ಸ್ಟಾರ್ ಆದ ಹೀರೋ. ಇನ್ನು ಭಟ್ಟರು ಹೆಚ್ಚು ಸಿನಿಮಾ ಮಾಡಿದ್ದು ಗಣೇಶ್ (Golden star Ganesh) ಜೊತೆ. ಅವರನ್ನು ಬಿಟ್ಟರೆ ದಿಗಂತ್, ದುನಿಯಾ ವಿಜಯ್ (duniya vijiy) ಅಂತಹವರ ಜೊತೆ. ಆದರೆ ದರ್ಶನ್ ಅವರಂತಹ ಮಾಸ್ ಹೀರೋಗೆ ಆಕ್ಷನ್ ಕಟ್ ಹೇಳಿದ್ದು ಇದೇ ಮೊದಲು. ಇನ್ನು ಗರಡಿ ವಿಷಯಕ್ಕೆ ಬಂದರೆ, ಗರಡಿ. ಪ್ರೇಕ್ಷಕರಿಗೆ ಇಷ್ಟವಾಗಿದೆ.
ಮೊದಲ ದಿನ ಸಿನಿಮಾ ನೋಡಿದವರು ಯೋಗರಾಜ್ ಭಟ್ಟರಿಗೆ ಉಘೇ ಉಘೇ ಎಂದಿದ್ದಾರೆ. ಉತ್ತರ ಕರ್ನಾಟಕದ ದೇಸಿ ಕಥೆಯಂತೂ ನೋಡಿದವರಿಗೆಲ್ಲ ಇಷ್ಟವಾಗಿದೆ. ಹಾಗಂತ ಈಗಿನ ಕಾಲದ ಯುವ ಮನಸ್ಸುಗಳಿಗೆ ಬೇಸರವೇನೂ ಇಲ್ಲ. ಈಗಿನ ಟ್ರೆಂಡ್ ಮತ್ತು ಹಳೆಯ ದೇಸಿ ಕಥೆಯನ್ನು ಹದವಾಗಿ ಬೆರೆಸಿದ ಭಟ್ಟರು, ಕಮರ್ಷಿಯಲ್ ಪ್ರೇಕ್ಷಕರಿಗೂ ಮೆಚ್ಚುಗೆಯಾಗಿದ್ದಾರೆ. ದೇಸಿ ಸೊಗಡಿನ ಕಥೆಯವರಿಗೂ ಮೆಚ್ಚುಗೆಯಾಗಿದ್ಧಾರೆ. ಆಕ್ಷನ್ ಪ್ರಿಯರಿಗೆ ಅಪ್ಪಟ ಕುಸ್ತಿ, ತುಂಟಾಟ ಪ್ರಿಯರಿಗೆ ತುಂಟತನದ ಪ್ರೇಮಕಥೆಯೂ ಇದೆ.
ಇನ್ನು ಚಿತ್ರ ನೋಡಿದವರಿಗೆ ಯಶಸ್ ಸೂರ್ಯ ಮತ್ತು ಬಿಸಿ ಪಾಟೀಲ್ ನಡುವಿನ ದ್ರೋಣ-ಏಕಲವ್ಯ ಕಥೆಯಂತೂ ಕೋರಾಪಿಟ್ ಪಟ್ಟಿನಂತೆಯೇ ಇಷ್ಟವಾಗಿದೆ. ಸೋನಲ್ ಮಂಥೆರೋ-ಸೂರ್ಯ ಲವ್ ಸ್ಟೋರಿ ಕಚಗುಳಿ ಕೊಡುತ್ತಾ ಹೋಗುತ್ತದೆ. ಇನ್ನು ಫೈನಲ್ಲಾಗಿ ಎಂಟ್ರಿ ಕೊಡೋ ದರ್ಶನ್ ಅವರ ಎಂಟ್ರಿ, ಕೆಲವೇ ನಿಮಿಷಗಳ ಖಡಕ್ ಆಕ್ಟಿಂಗ್ ಪ್ರೇಕ್ಷಕರಿಗೆ ಹಬ್ಬದೂಟವನ್ನೇ ಉಣಿಸಿಬಿಡುತ್ತದೆ.
ನಿಶ್ವಿಕಾ ನಾಯ್ಡು (Nishvika Naidu) ನೋಡಲು ಎರಡು ಕಣ್ಣು ಸಾಲದು ಎಂದು ಹಲಗಿ ಹೊಡೀತಾರೆ ಹುಡುಗರು. ರೆಗ್ಯುಲರ್ ಟ್ರ್ಯಾಕ್ ಬಿಟ್ಟು ಬಂದಿರುವ ಯೋಗರಾಜ್ ಭಟ್, ತರಲೆ ಡೈಲಾಗ್, ಖಡಕ್ ಡೈಲಾಗ್, ಟ್ವಿಸ್ಟುಗಳ ಮೇಲೆ ಟ್ವಿಸ್ಟು ಕೊಡೋ ಕಥೆ, ಚಿತ್ರಕಥೆ ಎಲ್ಲವೂ ಪ್ರೇಕ್ಷಕರನ್ನು ಕುರ್ಚಿಯಲ್ಲಿ ಭದ್ರವಾಗಿ ಕೂರುವಂತೆ ಮಾಡುತ್ತದೆ.
ಹೊಡಿರಲೆ ಹಲಗಿ.. ಹೊಡಿರಲೆ ಹಲಗಿ.. (Hodirale Halagi) ಡಿ ಬಾಸ್ ಎಂಟ್ರಿಗೆ ಹೊಡಿರಲೆ.. ಮುರಿತಲೋ ಹಲಗಿ.. ಎನ್ನುವುದು ಪ್ರೇಕ್ಷಕರೊಬ್ಬರು ಕೊಟ್ಟ ಟೈಟಲ್. ಉತ್ತರ ಕರ್ನಾಟಕ ಭಾಷೆಯಲ್ಲೇ ಹೇಳೋದಾದ್ರೆ ಸಿನಿಮಾ ಅವ..ನ್.. ಕೋರಾಪಿಟ್ ಏಟ್ ಖಡಕ್ ಕೊಟ್ಟಂಗೇ ಐತಿ..



