ಗುಜರಾತ್ ಸಿಎಂ ಆಗಿ ಮಾಡಿದ್ದ ಸಾಧನೆಯನ್ನೇ ಪ್ರಧಾನಿಯಾಗಿಯೂ ಪುನರಾವರ್ತನೆ ಮಾಡ್ತಾರಾ ನರೇಂದ್ರ ಮೋದಿ..? (Narendra modi) ಹೀಗೊಂದು ನಿರೀಕ್ಷೆ, ಕುತೂಹಲ ಹೆಚ್ಚಾಗಿದೆ. ಎನ್ಡಿಎ ವಿರುದ್ಧ ಪ್ರತಿಪಕ್ಷಗಳೆಲ್ಲ ಒಗ್ಗೂಡಿ ʻಇಂಡಿಯಾʼ (I N D I A) ಅನ್ನೋ ಮೈತ್ರಿಕೂಟ ರಚಿಸಿಕೊಂಡರೂ ಫಲಿತಾಂಶವೇನೂ ಬದಲಾಗುವ ಸೂಚನೆ ಇಲ್ಲ ಎನ್ನುತ್ತಿವೆ ಸಮೀಕ್ಷೆಗಳು.
ಈಗಾಗಲೇ ಹಲವು ಸಮೀಕ್ಷೆಗಳು ಮೋದಿ ನೇತೃತ್ವದ ಎನ್ಡಿಎಗೆ (NDA) ಬಹುಮತ ನೀಡಿವೆ. ಆದರೆ ಕಳೆದ ಬಾರಿಗಿಂತ ಈ ಬಾರಿ ಸ್ಥಾನಗಳ ಸಂಖ್ಯೆ ಕಡಿಮೆಯಾಗಬಹುದು ಎಂದು ಕೆಲವು ಸಮೀಕ್ಷೆ ಹೇಳಿದರೆ, ಕಳೆದ ಬಾರಿಗಿಂತ ಹೆಚ್ಚಾಗಬಹುದು ಎಂದು ಇನ್ನೂ ಕೆಲವು ಸಮೀಕ್ಷೆಗಳು ಹೇಳುತ್ತಿವೆ. ಇಂಡಿಯಾ ಟುಡೇ (India today), ಇಂಡಿಯಾ ಟಿವಿ (India tv), ಝೀ ನ್ಯೂಸ್ (zee news), ಆಜ್ತಕ್, ಎನ್ಡಿಟಿವಿ (NDTV) ಸೇರಿದಂತೆ ಹಲವು ಸಮೀಕ್ಷೆಗಳು ಎನ್ಡಿಎಗೇ ಬಹುಮತ ಘೋಷಿಸಿವೆ. ಇದೀಗ ಟೈಮ್ಸ್ ನೌ – ಇಟಿಜಿ ರಿಸರ್ಚ್ಸ್ (times now ETG survey) ಸಮೀಕ್ಷಾ ವರದಿ ವಿಪಕ್ಷಗಳ ಇಂಡಿಯಾ ಮೈತ್ರಿಕೂಟ ಪ್ರಬಲ ಸ್ಪರ್ಧೆ ನೀಡಿದರೂ ಅಧಿಕಾರಕ್ಕೆ ಮರಳುವಲ್ಲಿ ವಿಫಲವಾಗಲಿದೆ ಎಂದು ಹೇಳಿದೆ.
ಸಮೀಕ್ಷೆ ಅನ್ವಯ ಎನ್ಡಿಎ ಮೈತ್ರಿಕೂಟ 307 ಸ್ಥಾನ, ವಿಪಕ್ಷಗಳ ಇಂಡಿಯಾ ಮೈತ್ರಿಕೂಟ 175 ಸ್ಥಾನ ಮತ್ತು ಇತರರು 52 ಸ್ಥಾನಗಳಲ್ಲಿ ಜಯ ಗಳಿಸಲಿದ್ದಾರೆ. ಜೊತೆಗೆ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮುನ್ನಡೆ ಗಳಿಸಿಕೊಳ್ಳಲಿದೆ ಎಂದು ಸಮೀಕ್ಷೆ ತಿಳಿಸಿದೆ. ಲೋಕಸಬೆ ಚುನಾವಣೆಗೆ ಬಹುತೇಕ 5 ತಿಂಗಳು ಬಾಕಿ ಇದ್ದು, ಸತತ ಮೂರನೇ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಕೇಂದ್ರದಲ್ಲಿ ಅಧಿಕಾರ ಹಿಡಿಯಲಿರುವುದು ಖಚಿತ ಎಂದೂ ಟೈಮ್ಸ್ ನೌ – ಇಟಿಜಿ ರಿಸರ್ಚ್ಸ್ ಸಮೀಕ್ಷೆ ಹೇಳಿದೆ.
ಕರ್ನಾಟಕದಲ್ಲಿ ಬಿಜೆಪಿಗೆ 18-20 ಸ್ಥಾನ :
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 18 – 20 ಸ್ಥಾನಗಳಲ್ಲಿ ಜಯಗಳಿಸಲಿದೆ. ಕಾಂಗ್ರೆಸ್ 3 ರಿಂದ 9 ಸ್ಥಾನಗಳಲ್ಲಿ ಮತ್ತು ಜೆಡಿಎಸ್ 1 – 2 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ತಿಳಿಸಿದೆ. ಕರ್ನಾಟಕದಲ್ಲಿ ಬಿಜೆಪಿ ಶೇ.46, ಕಾಂಗ್ರೆಸ್ ಶೇ.41 ಹಾಗೂ ಜೆಡಿಎಸ್ ಶೇ.7ರಷ್ಟು ಮತಗಳಿಸಲಿವೆ. ಲೋಕಸಭೆಯಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಕಡಿಮೆ ಸ್ಥಾನ ಗಳಿಸಿದರೂ, ವಿಧಾನಸಭೆ ಫಲಿತಾಂಶಕ್ಕೆ ಹೋಲಿಸಿದರೆ ಭಾರೀ ಲಾಭವನ್ನೇ ಪಡೆಯಲಿದೆ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.



