ಭಾರತದಲ್ಲಿ ಹುಟ್ಟಿದ ಎಲ್ಲರೂ ಭಾರತೀಯರೇ. ಎಲ್ಲರಿಗೂ ಸಮಾನ ಹಕ್ಕುಗಳಿವೆ. ಕರ್ತವ್ಯಗಳಿವೆ. ಆದರೆ.. ಹಿಂದೂ, ಮುಸ್ಲಿಂ, ಕ್ರೈಸ್ತ, ಪಾರ್ಸಿ ಮೊದಲಾದ ಧರ್ಮಗಳು ವಿವಾಹ, ವಿಚ್ಛೇದನ, ಉತ್ತರದಾಯಿತ್ವ, ಆಸ್ತಿ ಹಕ್ಕು ಮೊದಲಾದ ವಿಷಯದಲ್ಲಿ ತಮ್ಮದೇ ಆದ ಪ್ರತ್ಯೇಕ ಕಾನೂನುಗಳನ್ನು ಹೊಂದಿವೆ. ಇವು ಮಹಿಳೆಯರಿಗೆ ಹಲವು ವಿಷಯಗಳಲ್ಲಿ ಸಮಾನ ಹಕ್ಕು ಕಲ್ಪಿಸಿಲ್ಲ. ಜೊತೆಗೆ ಧಾರ್ಮಿಕ ಕಾಯ್ದೆಗಳು ದೇಶದ ನ್ಯಾಯಾಂಗ ವ್ಯವಸ್ಥೆಗೆ ಪರ್ಯಾಯವಾಗಿವೆ ಎಂಬ ಅಭಿಪ್ರಾಯ ಇದೆ. ಈ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಜಾತಿ, ಧರ್ಮದವರಿಗೂ ಎಲ್ಲಾ ವಿಷಯದಲ್ಲಿ ಒಂದೇ ರೀತಿಯ ಕಾನೂನು ರೂಪಿಸುವುದೇ ಏಕರೂಪ ನಾಗರಿಕ ಸಂಹಿತೆ. ಹಲವು ವರ್ಷಗಳಿಂದ ಕೇಳಿ ಬರುತ್ತಿದ್ದ ಈ ವಾದಕ್ಕೆ ಈಗ ಮನ್ನಣೆ ಸಿಗುವ ಕಾಲ ಹತ್ತಿರ ಬಂದಿದೆ.
ಉತ್ತರಾಖಂಡ ಸರ್ಕಾರದಲ್ಲಿ ಏಕರೂಪ ನಾಗರಿಕ ನೀತಿ ಸಂಹಿತೆ ಜಾರಿಯ ಹಂತದಲ್ಲಿದೆ. ಇದು ಜಾರಿಯಾದರೆ, ಮೊದಲ ರಾಜ್ಯವೂ ಉತ್ತರಾಖಂಡವೇ ಆಗಲಿದೆ. ಈ ಕುರಿತು ಬುಧವಾರ ಪ್ರಕಟಣೆ ಹೊರಡಿಸಿರುವ ಕೇಂದ್ರ ಕಾನೂನು ಆಯೋಗವು, ಆಸಕ್ತರು ಪ್ರಕಟಣೆ ಹೊರಡಿಸಿದ 30 ದಿನಗಳಲ್ಲಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಬಹುದು ಎಂದು ಮಾಹಿತಿ ನೀಡಿದೆ. ಈ ಹಿಂದೆ 21ನೇ ಕಾನೂನು ಆಯೋಗ ಕೂಡ ಈ ವಿಷಯವನ್ನು ಪರಿಶೀಲನೆ ಮಾಡಿ, ಎರಡು ಬಾರಿ ಸಾರ್ವಜನಿಕರು ಮತ್ತು ಧಾರ್ಮಿಕ ಸಂಘಟನೆಗಳಿಂದ ಅಭಿಪ್ರಾಯ ಆಹ್ವಾನಿಸಿತ್ತು. 2018ರಲ್ಲಿ ಆಯೋಗದ ಅವಧಿ ಮುಕ್ತಾಯದ ವೇಳೆ ‘ಕೌಟುಂಬಿಕ ಕಾನೂನಿನಲ್ಲಿ ಸುಧಾರಣೆ’ ಹೆಸರಲ್ಲಿ ಅದು ಸಮಾಲೋಚನಾ ವರದಿ ಪ್ರಕಟಿಸಿತ್ತು.
ಕಾಯಿದೆ ಪರ ಇರುವವರ ವಾದ.
– ದೇಶದ ಎಲ್ಲ ಪ್ರಜೆಗಳನ್ನೂ ಒಂದೇ ಕಾನೂನಿನ ಚೌಕಟ್ಟಿನಲ್ಲಿ ತರುವುದು
– ಜಾತಿ, ಧರ್ಮಗಳ ನಿರ್ಬಂಧ ಇರುವುದಿಲ್ಲ. ಎಲ್ಲರಿಗೂ ಒಂದೇ ಕಾನೂನು
– ಧರ್ಮದ ಹೆಸರಿನಲ್ಲಿ ನಡೆಯುವ ವೋಟ್ ಬ್ಯಾಂಕ್ ರಾಜಕೀಯಕ್ಕೆ ಮುಕ್ತಿ
– ವೈಯಕ್ತಿಕ ಧಾರ್ಮಿಕ ಕಾನೂನುಗಳ ಎದುರು ದೇಶದ ಸಾಂವಿಧಾನಾತ್ಮಕ ಕಾನೂನುಗಳು ಪರ್ಯಾಯವಾಗಿವೆ. ಇದು ಒಳ್ಳೆಯದಲ್ಲ.
– ಎಲ್ಲ ಧರ್ಮದ ಮಹಿಳೆಯರಿಗೆ ಸಮಾನ ಹಕ್ಕು, ಗೌರವ ಸಿಗುತ್ತದೆ
– ನಿಜವಾದ ಜಾತ್ಯತೀತ ಭಾವನೆ ಬೆಳೆಯುತ್ತದೆ.
ಕಾಯ್ದೆ ವಿರೋಧಿಸುವವರ ವಾದ ಏನು?
– ವಿವಾಹ, ವಿಚ್ಛೇದನ, ಆಸ್ತಿ ಹಕ್ಕು, ಧಾರ್ಮಿಕ ಹಕ್ಕು ವಿಚಾರದಲ್ಲಿ ನ್ಯಾಯಾಂಗದ ಮಧ್ಯಪ್ರವೇಶ ಸರಿಯಲ್ಲ.
– ಸಂವಿಧಾನ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ನೀಡಿದೆ. ಏಕರೂಪ ನಾಗರಿಕ ಸಂಹಿತೆ ಇದನ್ನು ಉಲ್ಲಂಘಿಸುತ್ತದೆ.
– ಧಾರ್ಮಿಕವಾಗಿ ವೈವಿಧ್ಯತೆ ಹೊಂದಿರುವ ಭಾರತದಂಥ ದೇಶಗಳಿಗೆ ಇಂಥ ಕಾಯ್ದೆ ಸೂಕ್ತವಲ್ಲ.
– ಇದು ಅಲ್ಪಸಂಖ್ಯಾತರ ಮೇಲೆ ಬಹುಸಂಖ್ಯಾತರ ವಾದವನ್ನು ಹೇರುವ ಯತ್ನ ಎಂಬ ವಾದವೂ ಇದೆ



