ಬರೋಬ್ಬರಿ 11 ದಿನ. ಮಹಾರಾಷ್ಟ್ರದ ನಾಸಿಕ್ʻನ ಕಾಳಾರಾಮ್ ಮಂದಿರದಲ್ಲಿ ದೇವಸ್ಥಾನವನ್ನು ಸ್ವಚ್ಚ ಮಾಡಿದ ಮೋದಿ ಅಂದಿನಿಂದಲೇ ಅನುಷ್ಠಾನ ಕೈಗೊಂಡರು. ಇದೀಗ ಅನುಷ್ಠಾನ ಸಮಾಪ್ತಿಯಾಗಲು ಕೆಲವೇ ಕೆಲವು ದಿನಗಳಿವೆ. ಸತತ 11 ದಿನಗಳ ಅನುಷ್ಠಾನ ಹೇಗಿರುತ್ತದೆಂದರೆ ಅದನ್ನು ಮಾಡುವುದಕ್ಕೆ ಮನಸ್ಸಿರಬೇಕು.
ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ನೂತನ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆಗೆ ಯಜಮಾನತ್ವ ವಹಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಅದಕ್ಕಾಗಿ ಶಾಸ್ತ್ರೋಕ್ತವಾದ 11 ದಿನಗಳ ಕಠಿಣ ವ್ರತಾಚರಣೆಯಲ್ಲಿ ತೊಡಗಿದ್ದಾರೆ. ಪ್ರಾಣಪ್ರತಿಷ್ಠೆಗಾಗಿ ಮೋದಿ ‘ಯಮ ನಿಯಮ’ ವ್ರತಾಚರಣೆಯನ್ನು ಮಾಡುತ್ತಿದ್ದು, ಅದರ ಅಂಗವಾಗಿ ಜ.12ರಿಂದ ನೆಲದ ಮೇಲೆ ಮಲಗುತ್ತಾ, ಕೇವಲ ಎಳನೀರು ಸೇವಿಸಿ ಉಪವಾಸ ಮಾಡುತ್ತಿದ್ದಾರೆ .
ಶ್ರೀರಾಮನ ಪ್ರಾಣಪ್ರತಿಷ್ಠೆಯ ಐತಿಹಾಸಿಕ ಹಾಗೂ ಪವಿತ್ರ ಸಂದರ್ಭದಲ್ಲಿ ಪಾಲ್ಗೊಳ್ಳಲು ನಾನು ಅದೃಷ್ಟ ಮಾಡಿದ್ದೇನೆ. ಇದಕ್ಕಾಗಿ ದೇವರೇ ನನ್ನನ್ನು ಆಯ್ಕೆ ಮಾಡಿದ್ದಾನೆ ಎಂದು ಭಾವಿಸಿದ್ದೇನೆ. ಹೀಗಾಗಿ ಶಾಸ್ತ್ರಬದ್ಧವಾಗಿ ವ್ರತಾಚರಣೆ ಮಾಡುತ್ತೇನೆ ಎಂದು ಜ.12ರಂದೇ ಮೋದಿ ಪ್ರಕಟಿಸಿದ್ದರು. ಆದರೆ ಅದು ಯಾವ ವ್ರತ ಎಂಬುದನ್ನು ಹೇಳಿರಲಿಲ್ಲ. ಪ್ರಧಾನಿ ಕಚೇರಿಯ ಮೂಲಗಳ ಪ್ರಕಾರ ಅವರು ‘ಯಮ ನಿಯಮ’ ವ್ರತದಲ್ಲಿ ತೊಡಗಿದ್ದಾರೆ. ಅದರ ಅಂಗವಾಗಿ ಕೇವಲ ಎಳನೀರು ಬಿಟ್ಟರೆ ಇನ್ನಾವುದೇ ಆಹಾರ ಸೇವಿಸುತ್ತಿಲ್ಲ. ನಿತ್ಯ ರಾತ್ರಿ ನೆಲದ ಮೇಲೆ ಮಲಗುತ್ತಿದ್ದಾರೆ.
ಯಮ ನಿಯಮ ವ್ರತದಲ್ಲಿ ಹಲವಾರು ಕ್ರಮಗಳನ್ನು ಹೇಳಲಾಗಿದೆ. ಯೋಗ, ಧ್ಯಾನ ಹಾಗೂ ಬೇರೆ ಬೇರೆ ಕ್ರಿಯೆಗಳಲ್ಲಿ ಶಿಸ್ತು ಪಾಲಿಸುವುದು ಪ್ರಮುಖ. ಮೋದಿ ಪ್ರತಿದಿನ ಸೂರ್ಯೋದಯಕ್ಕೂ ಮೊದಲೇ ಏಳುವುದು, ಧ್ಯಾನ ಮಾಡುವುದು, ಸಾತ್ವಿಕ ಆಹಾರ ಮಾತ್ರ ಸೇವಿಸುವುದು ಮುಂತಾದ ನಿಯಮಗಳನ್ನು ಸಾಮಾನ್ಯ ದಿನಗಳಲ್ಲೂ ಪಾಲಿಸುತ್ತಾರೆ. ಈಗ ಶ್ರೀರಾಮನ ಪ್ರಾಣ ಪ್ರತಿಷ್ಠೆಗಾಗಿ ಉಪವಾಸ ಹಾಗೂ ನೆಲದ ಮೇಲೆ ಮಲಗುವ ವ್ರತದಲ್ಲೂ ತೊಡಗಿದ್ದಾರೆ.
ಅಯೋಧ್ಯೆ ಪ್ರಾಣ ಪ್ರತಿಷ್ಠಾಪನೆಗೆ ಸಜ್ಜಾಗಿರುವ ಮೋದಿ ದೇಗುಲಗಳನ್ನು ಸುತ್ತುತ್ತಿದ್ಧಾರೆ. ಕಾಲಾರಾಂ, ಲೇಪಾಕ್ಷಿಯ ವೀರಭದ್ರ ಸ್ವಾಮಿ ದೇಗುಲ, ಕೇರಳದ ಗುರುವಾಯೂರು ದೇವಸ್ಥಾನ.. ಹೀಗೆ ಪ್ರತಿದಿನವೂ ದೇವರ ಪೂಜೆಯೇ. ಪ್ರಾಣ ಪ್ರತಿಷ್ಠಾಪನೆಗೆ ಮುನ್ನಾ ದಿನವೇ ಅಯೋಧ್ಯೆಗೆ ಬರಲಿರುವ ಮೋದಿ ಸರಯೂ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ರಾಮಲಲ್ಲನಿಗೆ ಅಭಿಷೇಕದ ನೀರು ತರಲಿದ್ದಾರೆ. ಆನಂತರ ಪ್ರಾಣ ಪ್ರತಿಷ್ಠಾಪನೆಯೂ ನಡೆಯಲಿದೆ.



