3 ಗ್ಯಾರಂಟಿ ತಕ್ಷಣ ಜಾರಿ. ಆ.15ರಿಂದ ಗೃಹ ಲಕ್ಷ್ಮೀ. 6 ತಿಂಗಳಲ್ಲಿ ಯುವನಿಧಿ, 11ರಿಂದ ಸರ್ಕಾರಿ ಬಸ್ಗಳಲ್ಲಿ ಸ್ತ್ರೀಯರಿಗೆ ಉಚಿತ ಪ್ರಯಾಣ, 200 ಯುನಿಟ್, 10 ಕೇಜಿ ಧಾನ್ಯ ಜುಲೈನಿಂದ ಲಭ್ಯ, ಆ.15ಕ್ಕೆ ಮಹಿಳೆಯರಿಗೆ .2000 ಭತ್ಯೆ. ಕಠಿಣ ಷರತ್ತಿಲ್ಲದೆ ಗ್ಯಾರಂಟಿ ಜಾರಿಗೊಳಿಸಿದ ಕಾಂಗ್ರೆಸ್. ಘೋಷಣೆ ಬಳಿಕ ನುಡಿದಂತೆ ನಡೆದಿದ್ದೇವೆ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್.
ರಾಜ್ಯದ ಜನತೆಯೂ ಸ್ವಾಗತ ಮಾಡಿದೆ. ಪ್ರತಿಪಕ್ಷಗಳು ಟೀಕೆ ಮಾಡುತ್ತಿವೆ. ಇವೆಲ್ಲದರ ಮಧ್ಯೆ ಈ ಯೋಜನೆಗಳಿಂದ ರಾಜ್ಯ ಸರ್ಕಾರಕ್ಕೆ ಆಗುವ ಹೊರೆಯಷ್ಟೇ ಅಲ್ಲ, ಜನರಿಗೆ ಸಿಗುವ ಲಾಭದ ಲೆಕ್ಕಾಚಾರವೂ ಇರಬೇಕಲ್ಲವೇ. ಆ ಲೆಕ್ಕದ ಪ್ರಕಾರ ಒಂದು ಕುಟುಂಬಕ್ಕೆ ವರ್ಷಕ್ಕೆ ಸರಾಸರಿ 70 ಸಾವಿರದಿಂದ 1 ಲಕ್ಷದವರೆಗೆ ಲಾಭ ಅಥವಾ ಉಳಿತಾಯವಾಗಲಿದೆ.
ಗೃಹ ಜ್ಯೋತಿ : ಗರಿಷ್ಠ 200 ಯುನಿಟ್ವರೆಗೆ ಉಚಿತ ವಿದ್ಯುತ್ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಮಾಸಿಕ 1,550 ರು.ಗಳ ಗರಿಷ್ಠ ವಿದ್ಯುತ್ ಶುಲ್ಕದಿಂದ ವಿನಾಯಿತಿ ಪಡೆಯಬಹುದು. ತನ್ಮೂಲಕ ವರ್ಷಕ್ಕೆ 18,600 ರು.ಗಳಷ್ಟುಗರಿಷ್ಠ ಲಾಭ ಪಡೆಯಬಹುದು.
ಗೃಹ ಲಕ್ಷ್ಮೀ : ಈ ಯೋಜನೆಯಡಿ ಮನೆಯೊಡತಿ ಒಬ್ಬರು ಮಾಸಿಕ 2 ಸಾವಿರ ರು.ಗಳಂತೆ 24 ಸಾವಿರ ರು. ಪಡೆಯಲಿದ್ದಾರೆ.
ಅನ್ನಭಾಗ್ಯ : ಸ್ಕೀಂನಲ್ಲಿ ಪ್ರತಿ ಕುಟುಂಬಕ್ಕೆ ಸರಾಸರಿ 50 ಕೆ.ಜಿ.ಯಂತೆ ವರ್ಷಕ್ಕೆ 600 ಕೆ.ಜಿ. ಆಹಾರ ಧಾನ್ಯ ಪೂರೈಕೆಯಾಗಲಿದೆ. ಪ್ರತಿ ಕೆ.ಜಿಗೆ. 40 ರು.ಗಳಂತೆ 24,000 ರು. ಮೌಲ್ಯದ ಆಹಾರ ಧಾನ್ಯ ನಾಗರಿಕರನ್ನು ತಲುಪಲಿದೆ.
ಯುವ ನಿಧಿ : ಈ ಯೋಜನೆಯಡಿ ಪದವಿ ಪಡೆದವರಿಗೆ ಮಾಸಿಕ 3 ಸಾವಿರ ರು. ಹಾಗೂ ಡಿಪ್ಲೊಮಾ ಪದವಿಧರರಿಗೆ 1,500 ರು. ಮಾಸಿಕ ನಿರುದ್ಯೋಗ ಭತ್ಯೆ ದೊರೆಯಲಿದೆ. ಮಾಸಿಕ 3 ಸಾವಿರ ರು. ಪಡೆಯುವವರಿಗೆ ವಾರ್ಷಿಕ 36,000 ರು. ದೊರೆಯಲಿದೆ. ಈ ನಾಲ್ಕೂ ಯೋಜನೆಗಳಿಂದಲೇ ನಾಲ್ಕು ಯೋಜನೆ ಅನ್ವಯವಾಗುವವರಿಗೆ ಗರಿಷ್ಠ 1.02 ಲಕ್ಷ ರು. ಲಾಭ ಸಿಗಲಿದೆ.
ಶಕ್ತಿ : ಎಲ್ಲಾ ಮಹಿಳೆಯರಿಗೂ ಉಚಿತ ಬಸ್ಸು ಪ್ರಯಾಣ ಸೌಲಭ್ಯ ಕಲ್ಪಿಸಲಾಗಿದ್ದು, ಇದರ ಲಾಭ ಹಣದ ರೂಪದಲ್ಲಿ ಲೆಕ್ಕಾಚಾರ ಕಷ್ಟವಾದರೂ ತಕ್ಕ ಮಟ್ಟಿಗೆ ಲಾಭ ದೊರೆಯಲಿದೆ.
ಈ ಯೋಜನೆ ಅಡಿಯಲ್ಲಿ ಬಿಪಿಎಲ್/ಎಪಿಎಲ್ ಕಾರ್ಡು ಇರುವ ಎಲ್ಲರೂ ಯೋಜನೆಯ ಲಾಭ ಪಡೆಯಲಿದ್ದಾರೆ. ಈ ಯೋಜನೆಯಲ್ಲಿ ಪದವೀಧರರು ಇಲ್ಲದೇ ಇರುವ ಕುಟುಂಬವಾದರೆ ವಾರ್ಷಿಕ 60ರಿಂದ 70 ಸಾವಿರ ರೂ. ಪಡೆಯಲಿದೆ. ಮನೆಯಲ್ಲಿ ಪದವೀಧರ ನಿರುದ್ಯೋಗಿಯೂ ಇದ್ದರೆ, ಆ ಕುಟುಂಬ ವರ್ಷಕ್ಕೆ 1 ಲಕ್ಷಕ್ಕೂ ಹೆಚ್ಚು ಹಣವನ್ನು ಸರ್ಕಾರದಿಂದಲೇ ಪಡೆಯಲಿದೆ.
ಈ ಎಲ್ಲ ಯೋಜನೆಗಳಿಗೆ ಒಟ್ಟಾರೆ 60 ಸಾವಿರ ಕೋಟಿ ರೂ.ಗಿಂತಲೂ ಹೆಚ್ಚು ಹಣ ಬೇಕು. ಆದರೆ ಈ 60,000 ಕೋಟಿ+ ಹಣವನ್ನು ಎಲ್ಲಿಂದ ತರಲಾಗುತ್ತದೆ ಎಂಬ ಬಗ್ಗೆ ಸಿದ್ದರಾಮಯ್ಯ ಆಗಲೀ, ಡಿಕೆಶಿಯಾಗಲೀ ಗ್ಯಾರಂಟಿ ಕೊಟ್ಟಿಲ್ಲ. ಸರ್ಕಾರದ ವಿವಿಧ ಇಲಾಖೆಗಳ ಮಟ್ಟದಲ್ಲಿ ನಡೆದಿರುವ ಅನಗತ್ಯ ಖರ್ಚು, ದುಂದು ವೆಚ್ಚ ಕಡಿವಾಣ ಹಾಗೂ ನಿಷ್ಪ್ರಯೋಜಕವಾದ ಕೆಲ ಸಣ್ಣ ಪುಟ್ಟಯೋಜನೆಗಳನ್ನು ಸ್ಥಗಿತಗೊಳಿಸಿ ಈ ನಷ್ಟ ಭರಿಸಿಕೊಳ್ಳುವ ಸಾಧ್ಯತೆಯಿದೆ. ಆದರೆ ಕೇವಲ ಅಷ್ಟರಿಂದಲೇ ಎಲ್ಲ ಯೋಜನೆಗಳಿಗೂ ಹಣ ಹೊಂದಿಸುವುದು ಅಸಾಧ್ಯ. ಹೀಗಾಗಿ ಹಲವಾರು ಯೋಜನೆಗಳಿಗೆ ಬ್ರೇಕ್ ಬೀಳುವ ಸಾಧ್ಯತೆ ಹೆಚ್ಚು.



