ಡಾ.ರಾಜ್ ಕುಮಾರ್ ಅವರು ರಾಷ್ಟ್ರಪ್ರಶಸ್ತಿ ವಿಜೇತ ಗಾಯಕ. ಈ ನಟಸಾರ್ವಭೌಮನಿಗೆ ಕಲಾವಿದನಾಗಿ ಒಲಿಯದ ರಾಷ್ಟ್ರಪ್ರಶಸ್ತಿ, ಗಾಯನಕ್ಕಾಗಿ ಒಲಿಯಿತು ಎನ್ನುವುದೇ ವಿಶೇಷ ಹಾಗೂ ವಿಚಿತ್ರ. ಅಂತಹ ಗಾಯಕ ಸಿನಿಮಾ ರಂಗಕ್ಕೆ ಬಂದಾಗ ಹಾಡುಗಾರರಾಗಿಯೂ ಪ್ರವೇಶ ಮಾಡಿದ್ದರು. ಆದರೆ ಓಹಿಲೇಶ್ವರ ಸೇರಿದಂತೆ ಒಂದೆರಡು ಚಿತ್ರಗಳಲ್ಲಿ ಹಾಡಿದ್ದು ಬಿಟ್ಟರೆ, ಹಾಡುವುದನ್ನು ಮರೆತೇಬಿಟ್ಟಿದ್ದರು. ಹಾಗೆ ಹಾಡುವುದನ್ನೇ ಬಿಟ್ಟಿದ್ದ ಡಾ.ರಾಜ್ ಅವರನ್ನು ಮತ್ತೆ ಗಾಯಕರಾಗುವಂತೆ ಮಾಡಿದ್ದು ಸಂಪತ್ತಿಗೆ ಸವಾಲ್ ಚಿತ್ರ.
ಯಾರೇ ಕೂಗಾಡಲಿ.. ಊರೇ ಹೋರಾಡಲಿ.. ಹಾಡನ್ನು ಎಷ್ಟೋ ಜನ ಇವತ್ತಿಗೂ ಡಾ.ರಾಜ್ ಸಿನಿಮಾದಲ್ಲಿ ಹಾಡಿದ ಮೊದಲ ಹಾಡು ಇದೇ ಎಂದು ಕೊಂಡಿದ್ದಾರೆ. ಅದು ಅವರು ಸಿನಿಮಾಗಳಿಗೆ ಹಾಡಿದ ಮೊದಲ ಹಾಡೇನೂ ಅಲ್ಲವಾದರೂ, ಗಾಯಕನಾಗಿ ಸ್ಟಾರ್ ಮಾಡಿದ ಗೀತೆಯಂತೂ ಹೌದು. ಆ ಹಾಡಿನ ಹಿಂದಿನ ಕಥೆ ಹೇಳಿದ್ದಾರೆ ಇಳಯರಾಜ. ಯುವ ದಸರಾ ಕಾರ್ಯಕ್ರಮದಲ್ಲಿ.
‘ಸಂಪತ್ತಿಗೆ ಸವಾಲ್’ ಸಿನಿಮಾದ “ಯಾರೇ ಕೂಗಾಡಲಿ..” ಹಾಡು ಡಾ.ರಾಜ್‌ಕುಮಾರ್ ಹಾಡಿದ ಮೊದಲ ಹಾಡು. ರಾಜ್‌ಕುಮಾರ್ ಅವರೇ ಹಾಡಿದರೆ ಚೆನ್ನಾಗಿರುತ್ತದೆ ಎಂದು ಮೊದಲು ಹೇಳಿದ್ದೇ ನಾನು. ನಾನಾಗ ಜಿಕೆ ವೆಂಕಟೇಶ್ ಅವರ ಬಳಿ ಸಹಾಯಕನಾಗಿದ್ದೆ. ‘ಸಂಪತ್ತಿಗೆ ಸವಾಲ್’ ಸಿನಿಮಾಗೆ ಜಿ.ಕೆ. ವೆಂಕಟೇಶ್ “ಯಾರೇ ಕೂಗಾಡಲಿ..” ಅಂತ ಟ್ಯೂನ್ ಹಾಕಿದ್ದರು. ಈ ವೇಳೆ ಈ ಹಾಡನ್ನು ಪಿಬಿಎಸ್ ಅವರಿಗಿಂತ ಬೇರೆಯವರ ಬಳಿ ಹಾಡಿದರೆ ಚೆನ್ನಾಗಿರುತ್ತದೆ. ಹಾಡಿನಲ್ಲಿ ಆ ಉತ್ಸಾಹ ಇದೆ ಎಂದು ಹೇಳಿದೆ. ಎಸ್‌ಪಿಬಿ ಸೇರಿದಂತೆ ಹಲವರ ಹೆಸರು ಚರ್ಚೆಯಾಯಿತು. ಕೊನೆಗೆ ಡಾ.ರಾಜ್ ಅವರ ಹೆಸರನ್ನು ನಾನೇ ಹೇಳಿದೆ.
ನನಗೆ ಪಿಬಿ ಶ್ರೀನಿವಾಸ್ ಅವರಿಂದ ಹಾಡಿಸಬಾರದು ಎಂಬ ಉದ್ದೇಶವೇನೂ ಇರಲಿಲ್ಲ. ಆದರೆ ಇದು ಹೈಪಿಚ್ ಹಾಡಾಗಿದ್ದರಿಂದ ಡಾ.ರಾಜ್ ಅವರಿಂದಲೇ ಹಾಡಿಸುವ ಮನಸ್ಸು ಮಾಡಲಾಯಿತು. ಡಾ.ರಾಜ್ ಕುಮಾರ್ ಅವರು ನಾಟಕಗಳಿಂದ ಬಂದವರು. ಹಾಡುವುದು ಗೊತ್ತು ಎಂದು ವೆಂಕಟೇಶ್ ಅವರಲ್ಲಿ ಹೇಳಿದೆ. ಮೊದಲು ಅದಕ್ಕೆ ರಾಜಣ್ಣನವರು ಒಪ್ಪಲಿಲ್ಲ. ಅವರ ಲೈಫ್ ನಡೀತಾ ಇದೆ. ಕಿತ್ಕೊಳ್ಳೋದ್ಯಾಕೆ ಎಂದರು. ಅದು ಅವರ ಒಳ್ಳೆಯ ಮನಸ್ಸು. ಕೊನೆಗೆ ಟ್ಯೂನ್ ಕೇಳಿಸಿ ನೀವೇ ಡಿಸೈಡ್ ಮಾಡಿ ಎಂದು ಹೇಳಿದೆ. ಜಿ ಕೆ ವೆಂಕಟೇಶ್ ಅವರು ಹಾಡಿ ತೋರಿಸು ಅಂದರು. ನಾನು ಯಾರೇ ಕೂಗಾಡಲಿ ಅಂತ ಹಾಡಿದೆ. ಚೆನ್ನಾಗಿದೆಯಲ್ಲ ನಾನೇ ಹಾಡುತ್ತೇನೆ ಎಂದರು. ಹಾಗಾಗಿ ಫಸ್ಟ್ ರಾಜ್‌ಕುಮಾರ್ ಅಣ್ಣನನ್ನು ಹಾಡಿಸಿದ್ದು ನಾನೇ. ಅವರ ಸಿನಿಮಾ ಮ್ಯೂಸಿಕ್ ಮಾಡುವಾಗ ಹಾಡಿದ ಮೊದಲ ಹಾಡು ನನ್ನ ನೀನು ಗೆಲ್ಲಲಾರೆ ಎಂದು ನೆನಪು ಹಂಚಿಕೊಂಡಿದ್ದಾರೆ ಇಳಯರಾಜ.



