ಕೆಲವರಿಗೆ ಊಟ ಮಾಡುವಾಗ, ತಿಂಡಿ ತಿನ್ನುವಾಗ ಕೂದಲು ಸಿಗುವುದು ಸಾಮಾನ್ಯ. ಮುದ್ದೆ ಸಾರು, ಮಾಂಸದೂಟ ಬಿಡಿ, ಇಡ್ಲಿ, ದೋಸೆ, ಚಪಾತಿಯಲ್ಲೂ ಕೂದಲು ಸಿಗುತ್ತವೆ. ಮಜ್ಜಿಗೆ, ಪಾನಕದಲ್ಲೂ ಪದೇ ಪದೇ ಕೂದಲು ಸಿಗುತ್ತವೆ. ಕುಡಿಯುವ ನೀರಿನಲ್ಲೂ ಕೂದಲು ಕಾಣಿಸಿಕೊಳ್ಳುತ್ತದೆ. ಇಂತಹ ಘಟನೆಗಳು ಪದೇ ಪದೇ ಎದುರಾಗುತ್ತಿದ್ದರೆ, ಅದು ಆಕಸ್ಮಿಕ ಅಲ್ಲ. ಅದೊಂದು ಮುನ್ಸೂಚನೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.
ನೆಗೆಟಿವ್ ಎನರ್ಜಿ ವೈಬ್ಸ್ :
ಊಟದಲ್ಲಿ ಪದೇ ಪದೇ ಕೂದಲುಗಳು ಸಿಗುತ್ತಿದ್ದರೆ ಶಾಸ್ತ್ರದಲ್ಲಿ, ನಂಬಿಕೆಯಲ್ಲಿ ಅದರದ್ದೇ ಆದ ಅರ್ಥವಿದೆ. ಊಟದಲ್ಲಿ ಯಾವಾಗಲೂ ಕೂದಲು ಸಿಗುತ್ತಿದ್ದರೆ ಅದು ನಿಮ್ಮ ಜೀವನದಲ್ಲಿ ನಕಾರಾತ್ಮಕ ಶಕ್ತಿಗಳು ತಾಂಡವವಾಡುತ್ತಿದೆ ಎಂಬುದರ ಸಂಕೇತ. ಲಕ್ಷ್ಮಿದೇವಿ ಮನೆಯನ್ನು ತೊರೆಯುವ ಹಂತದಲ್ಲಿರಬಹುದು ಎನ್ನುತ್ತದೆ ಶಾಸ್ತ್ರ. ಮನೆಗಳಲ್ಲಿ ಮಹಿಳೆಯರು ಕೂದಲನ್ನು ಕಟ್ಟಿಕೊಳ್ಳದೇ ಅಡುಗೆ ಮನೆಯಲ್ಲಿ ಇದ್ದರೆ ಅಡುಗೆಯಲ್ಲಿ ಕೂದಲುಗಳು ಕಾಣಿಸಿಕೊಳ್ಳುವುದು ಸಹಜ. ಅಂತಹ ಸಂದರ್ಭದಲ್ಲಿ ನಾವು ನಮ್ಮನ್ನು ಸರಿ ಮಾಡಿಕೊಳ್ಳಬೇಕು. ಕೂದಲು ಆಹಾರದಲ್ಲಿ ಬೀಳದಂತೆ ನಾವು ಏನು ಮಾಡಬೇಕೋ ಅದನ್ನು ಮಾಡಿದರೆ ಉತ್ತಮ. ಒಂದು ವೇಳೆ ಈ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡ ನಂತರವೂ ನಿಮಗೆ ಊಟದಲ್ಲಿ ಪದೇ ಪದೇ ಕೂದಲುಗಳು ಸಿಗುತ್ತಿದ್ದರೆ, ಅದು ದಾರಿದ್ರ್ಯ ವಕ್ಕರಿಸುವ ಮುನ್ಸೂಚನೆ ಎನ್ನುತ್ತದೆ ಶಾಸ್ತ್ರ.
ಪಿತೃ ದೋಷವೂ ಕಾರಣ ಇರಬಹುದು..!
ಪಿತೃಗಳು ನಿಮ್ಮ ಮೇಲೆ ಅಸಮಾಧಾನಗೊಂಡಿದ್ದರೆ ಅಥವಾ ನಿಮ್ಮ ಕೆಲಸಗಳಿಂದಾಗಿ ಪಿತೃಗಳು ನಿಮ್ಮ ಮೇಲೆ ಕೋಪಿಸಿಕೊಂಡಿದ್ದರೆ ಅಂತಹ ಸಂದರ್ಭದಲ್ಲಿಯೂ ಕೂದಲು ಕಾಣಿಸಿಕೊಳ್ಳುತ್ತದೆ ಎನ್ನುವ ನಂಬಿಕೆಯೂ ಇದೆ. ಅದರಲ್ಲೂ ಪಿತೃ ಪಕ್ಷದ ಸಮಯದಲ್ಲಿ ಈ ಘಟನೆಯು ಸಂಭವಿಸಿದರೆ ಅದು ಖಂಡಿತವಾಗಿಯೂ ಪಿತೃ ದೋಷದಿಂದಾಗಿರುತ್ತದೆ. ಆ ಸಂದರ್ಭದಲ್ಲಿ ಪಿತೃಪಕ್ಷದ ಪೂಜೆಯನ್ನು ಯಶಸ್ವಿಯಾಗಿ ಮುಗಿಸಿಕೊಂಡು ಬಿಡಿ.
ವಾಮಾಚಾರದ ಸುಳಿವು..!
ಆಹಾರದಲ್ಲಿ ಪದೇ ಪದೇ ಅದರಲ್ಲೂ ನಿಮ್ಮಲ್ಲಿ ಅನುಮಾನವನ್ನು ಮೂಡಿಸುವಷ್ಟು ಕೂದಲು ನಿಮಗೆ ಸಿಗುತ್ತಿದ್ದರೆ ಅದನ್ನು ಕಡೆಗಣಿಸಬೇಡಿ. ಇದು ನಿಮ್ಮ ಮೇಲೆ ಯಾರೋ ಮಾಟ, ಮಂತ್ರ ಅಥವಾ ವಾಮಾಚಾರ ಮಾಡಿರುವ ಸೂಚನೆಯಾಗಿರಬಹುದು. ಯಾರೋ ನಿಮ್ಮ ಮೇಲೆ ವಾಮಾಚಾರ ಮಾಡಿದಾಗ ಮಾತ್ರ ಇಂತಹ ಘಟನೆಗಳು ಅತಿಯಾಗಿ ಎದುರಾಗುತ್ತದೆ.
ಪರಿಹಾರಕ್ಕೆ ಏನು ಮಾಡಬೇಕು..?
ಮೊದಲು ಅಡುಗೆ ಮನೆಯಲ್ಲಿ ತಲೆ ಕೂದಲನ್ನು ಭದ್ರವಾಗಿ ಕಟ್ಟಿಕೊಂಡು ಕೆಲಸ ಮಾಡಿ. ಹೀಗಾಗಿಯೂ ಕೂದಲು ಸಿಗುತ್ತಿದ್ದರೆ.. ಅಡುಗೆ ಮನೆಯಲ್ಲಿ ಅನ್ನಪೂರ್ಣೇಶ್ವರಿ ದೇವರ ವಿಗ್ರಹ ಇಟ್ಟುಕೊಳ್ಳಿ. ಪೂಜೆ ಮಾಡಿ. ಆಹಾರ ತಯಾರಿಸುವ ಮೊದಲು ಗಂಗಾಜಲವನ್ನು ಸಿಂಪಡಿಸಿ. ನಾಯಿಗಳಿಗೆ ಆಹಾರ ನೀಡಿ. ವಿಶೇಷವಾಗಿ ಶನಿವಾರದ ದಿನದಂದು ಆಹಾರ ನೀಡಿ. ಅಡುಗೆ ಮನೆಯಲ್ಲಿ ಒಂದು ಇಡೀ ನಿಂಬೆ ಹಣ್ಣನ್ನು ಇರಿಸಿ. ನಿಂಬೆ ಹಣ್ಣು ಒಣಗುತ್ತಿದ್ದರೆ ಅಥವಾ ಹಾಳಾಗುತ್ತಿದ್ದರೆ ಅದನ್ನು ಬದಲಾಯಿಸಿ. ಪದೇ ಪದೇ ಈ ರೀತಿ ಆಗುವುದು ಒಳ್ಳೆಯದಲ್ಲ.